ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿರುವ ಪುಟ್ಟ ಊರು ಗುಣವಂತೆ. ನಗರೀಕರಣದ ಯಾವ ಸೆಳವಿಗೂ ಸಿಲುಕದ ಈ ಊರು ಫೆಬ್ರುವರಿ ತಿಂಗಳು ಬಂತೆಂದರೆ ನಾಡಿನ ಗಮನ ಸೆಳೆಯುತ್ತದೆ. ಇದಕ್ಕೆ ಕಾರಣ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ. ಈ ಸಂದರ್ಭದಲ್ಲಿ ರಾಜ್ಯ ಮತ್ತು ದೇಶದ ವಿವಿಧ ಭಾಗಗಳ ಕಲೆಗಳ ಸಂಗಮವಾಗುತ್ತದೆ.
ಈ ಸಲದ ನಾಟ್ಯೋತ್ಸವದಲ್ಲಿ ಭಾರತದ ಪ್ರಾತಿನಿಧಿಕ ಸಾಂಸ್ಕೃತಿಕ ಲೋಕವೇ ಅನಾವರಣಗೊಂಡಿತ್ತು. ದಕ್ಷಿಣದ ತುದಿಯ ‘ಕಥಕ್ಕಳಿ’ ಯಿಂದ ಉತ್ತರದ ಕಥಕ್, ಭರತನಾಟ್ಯದಿಂದ ಹಿಡಿದು ಪೂರ್ವಾಂಚಲದ ‘ಛಾವೂ’ ಎನ್ನುವ ಮುಖವಾಡ ಧರಿಸಿ ನರ್ತಿಸುವ ನೃತ್ಯ ಕಲಾಪ್ರಕಾರ, ಅಮೆರಿಕಾದ ಸಮನ್ವಿತಾರ ಭರತನಾಟ್ಯದಿಂದ ಹಿಡಿದು ಮುಳಬಾಗಿಲಿನ ಅಂಜನಪ್ಪ ಅವರ ಮುಖವೀಣೆಯವರೆಗೆ ಒಂಬತ್ತು ದಿನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಭಾರತೀಯ ಪ್ರದರ್ಶನ ಕಲೆಯ ವಿಶೇಷವೆಂದರೆ ಪಾಶ್ಚಾತ್ಯರಂತೆ ಸಿದ್ಧ ಮಾದರಿಗಳಲ್ಲ; ಪ್ರತೀ ಪ್ರದರ್ಶನವೂ ಕಥನವನ್ನು ಕಟ್ಟಿಕೊಡುವ ರಸಗವಳವಾಗಿರುತ್ತವೆ. ಯಕ್ಷಗಾನದ ಸೋದರ ಸಂಬಂಧಿಯಾಗಿರುವಂತಹ ಕಥಕ್ಕಳಿಯಲ್ಲಿ (ಫೋಕ್‌ಲ್ಯಾಂಡ್, ಕೇರಳ) ಇದು ನಿಚ್ಚಳವಾಗಿ ಕಾಣಿಸಿತು. ‘ಮರಿಂಗೂರು ಶಂಕರನ್ ಪೊಟ್ಟಿ ರಚಿಸಿದ ‘ಕುಚೇಲ ವೃತ್ತಂ’ ದಲ್ಲಿ ಕಥಕ್ಕಳಿಯ ಸಾಂಸ್ಕೃತಿಕ ಪರಂಪರೆಯ ಜೊತೆಗೆ ಭಕ್ತಿ, ಹಸ್ತಭಾವಗಳ ಮೂಲಕ ಸುಧಾಮನ ಬಡತನ ಅದನ್ನು ಕೃಷ್ಣನಿಗೆ ಹೇಳಲು ಅಡ್ಡಬರುವ ಸ್ನೇಹ, ಇವು ನಿಖರವಾದ ಮುದ್ರೆಗಳು ಮತ್ತು ಸೂಕ್ಷ್ಮವಾದ ಮುಖಭಾವಗಳಲ್ಲಿ ಸಂಕಟ, ಕೃಪೆ, ಭಕ್ತಿ ಮತ್ತು ಅನುಗ್ರಹಗಳೆಲ್ಲವನ್ನೂ ಸಹಜವಾಗಿ ಅಭಿವ್ಯಕ್ತಿಸಿದರು.
ಕಲಾವಿದನಿಗೆ ವಯಸ್ಸಾಗಿರಬಹುದು. ಆತನ ಕಲೆಗಲ್ಲ ಎನ್ನುವುದನ್ನು ಸ್ಪಷ್ಟವಾದದು ಕೆ. ಶಿವರಾಮ ಕಾರಂತರ ಮಗಳು 80 ವಯಸ್ಸಿನ ಕ್ಷಮಾ ರಾವ್ ಅವರ ಒಡಿಸ್ಸಿ ನೃತ್ಯ. ವರ್ತಮಾನದ ಕಲಾವಿದರು ನೃತ್ಯದ ಭಾವಗಳಿಗೆ ಒತ್ತುಕೊಡುವುದರತ್ತ ಗಮನ ಹರಿಸಿದರೆ, ಭಾವಾಭಿವ್ಯಕ್ತಿ ಇವರ ಅಭಿನಯದಲ್ಲಿತ್ತು. ಅಭಿಸಾರಿಕೆಯಾಗಿ ಕೃಷ್ಣನನ್ನು ಹುಡುಕಿ ಕೊಂಡು ಹೋಗುವಲ್ಲಿ ಮುಖದಲ್ಲಿ ಪ್ರದರ್ಶಿಸಿದ ಭಾವ ಮತ್ತು ಮುದ್ರೆಗಳು ಇವರ ಇಳಿವಯಸ್ಸನ್ನು ಮರೆಮಾಚಿಸಿದ್ದವು. ಮತ್ತೊಂದು ಗಮನ ಸೆಳೆದಿದ್ದು ಗುಡಿಬಂಡೆಯ ಕಲಾವಿದ ಅಂಜನಪ್ಪ ಅವರ ‘ಮುಖವೀಣೆ’. ಶಹನಾಯಿನ್ನು ಹೋಲುವ ಮುಖವೀಣೆ, ಶ್ರುತಿಗೆ ಸೋರೆಬುರುಡೆ, ಸಂಗಡ ಒತ್ತು ಮುಂತಾದ ಐದು ಸಾಧನ ಬಳಸಿ ಕ್ಲಿಷ್ಟವಾದ ರಾಗಗಳನ್ನೂ, ಸಿನಿಮಾ ಸಂಗೀತವನ್ನು ನುಡಿಸುವ ಏಕೈಕ ಕಲಾವಿದ ಇವರು. ಸಂಗೀತಕ್ಕೆ ಹೇಗೆ ಉತ್ತಮ ಧ್ವನಿ ಅಗತ್ಯವೋ ಅದೇ ರೀತಿ ಇದಕ್ಕೂ ಸುದೀರ್ಘ ಉಸಿರಾಟದೊಂದಿಗೆ ಐದು ಸಾಧನಗಳನ್ನು ಬಾಯಲ್ಲಿಟ್ಟು ನುಡಿಸುವ ಕೌಶಲ ಹಾಗೂ ಗಟ್ಟಿತನ ಬೇಕು. ತಮ್ಮ ಎಂಬತ್ತೈದರ ಹರೆದಲ್ಲಿಯೂ ಕೌರವನ ಜಾಪನ್ನು ರಂಗದಲ್ಲಿ ಗೋಡೆ ನಾರಾಯಣ ಹೆಗಡೆಯವರ ತೋರಿಸಿದರು.
ಮುಖಭಾವವೇ ಕಲೆಯನ್ನು ಅಭಿವ್ಯಕ್ತಿಸುವ ಸಾಧನ ಎನ್ನುವುದನ್ನು ಅಲ್ಲಗೆಳೆಯುವ ‘ಛಾವೂ’ ನೃತ್ಯ ವಿಶಿಷ್ಟವಾಗಿತ್ತು. ಸೆಮಿ ಕ್ಲಾಸಿಕಲ್ ಎನ್ನುವ ಈ ಕಲೆಯ ಕಲಾವಿದರು ಉಪಜೀವನಕ್ಕಾಗಿ ಹಳ್ಳಿಯಲ್ಲಿ ಸಣ್ಣಪುಟ್ಟ ಕೆಲಸ ಮಾಡುತ್ತಾ ಇದನ್ನು ಒಂದು ಆರಾಧನಾ ಕಲೆಯನ್ನಾಗಿ ಅಭಿನಯಿಸುತ್ತಾರೆ. ಜಾರ್ಖಂಡದ ಶುಭಂ ಆಚಾರ್ಯ ಮತ್ತು ಸತೀಶ ಮೋದಕ್ ಅವರು ‘ಸೆರೈಕಲಾ’ ಪದ್ಧತಿಯಲ್ಲಿ ನವಿಲಿನ ಚಲನೆ, ಹಂಸದ ನಡಿಗೆ, ಸಮುದ್ರದ ಅಲೆಗಳ ಏರಿಳಿತವನ್ನು ದೇಹದ ಚಲನೆಯಲ್ಲಿ ಪ್ರದರ್ಶಿಸಿದರು. ಉತ್ತರದ ಕಥಕ್ ನೃತ್ಯಕ್ಕೆ ವಚನಗಳನ್ನು ಸಂಯೋಜಿಸಿದ ಮಧು ನಟರಾಜ್ ಅವರ ಮತ್ತು ಮೈಸೂರು ಮಂಜುನಾಥ, ಸುಮಂತ ಅವರ ವಯಲಿನ್ ಜುಗಲಬಂದಿ, ಅಮೆರಿಕಾದ ಸಮನ್ವಿತಾ ಪ್ರಸನ್ನ ಅವರು ‘ದುರ್ಗಾ ಸೂಕ್ತ’ ವನ್ನು ಸಂಯೋಜಿಸಿದ ಭರತನಾಟ್ಯ, ದತ್ತಾತ್ರೇಯ ವೇಲನಕರ್ ಅವರ ಕೇದಾರ ರಾಗದ ಮೋಡಿ, ತಾಳಮದ್ದಳೆ ಮತ್ತು ಯಕ್ಷಗಾನ ಇವೆಲ್ಲವನ್ನೂ ಮೈಮರೆತು ನೋಡಿ ನಡುರಾತ್ರಿ ಕಳೆಯುವಾಗ ಮನೆಗೆ ಮರಳುವ ಪ್ರೇಕ್ಷಕರು ಮಾರನೆಯ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಅಬ್ರಹಾಂ ಝೋಂಕರ್ (ಮೇಘ ಸಮೀರ್) ಮತ್ತು ಆತನ ಮೊಮ್ಮಗಳು ವೆರೋನಿಕಾ (ದಿಶಾ ರಮೇಶ) ಇವರಿಬ್ಬರ ನಡುವೆ ನಡೆಯುವ ಮುಖಾಮುಖಿ, ಒಬ್ಬರನ್ನೊಬ್ಬರು ಬಿಟ್ಟಿರಲಾರದ ಅಸಹಾಯಕತೆಯನ್ನು ಮೈಸೂರಿನ ನಟನ ಕಲಾವಿದರು ಶ್ರೀಪಾದ ಭಟ್ಟರ ಬಿಗಿಯಾದ ನಿರ್ದೇಶನದಲ್ಲಿ ‘ಮೌನ ಕಣಿವೆಯ ಹಾಡು’ ನಾಟಕದಲ್ಲಿ ಮನಮುಟ್ಟುವಂತೆ ಮಾಡಿದರು.
ಯಕ್ಷಗಾನವನ್ನು ಜಾಗತಿಕ ರಂಗಭೂಮಿಯ ಕಾನ್ವಾಸಿನಲ್ಲಿ ಪ್ರದರ್ಶಿಸಿದ ಶಂಭು ಹೆಗಡೆಯವರ ನೆನಪಿನಲ್ಲಿ ಅವರ ಮಗ ಶಿವಾನಂದ ಹೆಗಡೆ ಈ ನಾಟ್ಯೋತ್ಸವವನ್ನು ಆಯೋಜಿಸುತ್ತಿದ್ದಾರೆ. ಹೆಗ್ಗೋಡು, ಸಾಣೇಹಳ್ಳಿಯಂತೆ ಗುಣವಂತೆ ನಾಟ್ಯೋತ್ಸವದಿಂದಾಗಿ ನೆನಪಿನಾಳದಲ್ಲಿ ಉಳಿದ ಮುಂದಿನ ವರ್ಷಕ್ಕಾಗಿ ಕಾಯುವಂತೆ ಮಾಡುತ್ತದೆ. →v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.