ADVERTISEMENT

ಮನೆ ಅಂಗಳದಲ್ಲಿ ಸುಗ್ಗಿ ಕುಣಿತ ಹಿಗ್ಗು...

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2025, 0:21 IST
Last Updated 30 ಮಾರ್ಚ್ 2025, 0:21 IST
<div class="paragraphs"><p>ಸುಗ್ಗಿ ಕುಣಿತದ ಸಂಭ್ರಮ</p></div>

ಸುಗ್ಗಿ ಕುಣಿತದ ಸಂಭ್ರಮ

   

ಅದು ಚಂದ್ರನ ಬೆಳದಿಂಗಳ ನಡುರಾತ್ರಿ...

ತಲೆ ಮೇಲೆ ಬಣ್ಣ ಬಣ್ಣದ ಗರಿಗಳ ತುರಾಯಿ, ಕಾಲಿಗೆ ಗೆಜ್ಜೆ ಕಟ್ಟಿಕೊಂಡ, ಕೈಯಲ್ಲಿ ಕುಂಚದ ಕೋಲು ಹಿಡಿದುಕೊಂಡ ಹತ್ತು–ಹನ್ನೆರಡು ಜನರ ತಂಡವೊಂದು ‘ಘಲ್ ಘಲ್’ ಸದ್ದಿನೊಂದಿಗೆ ಮನೆಯ ಅಂಗಳದಲ್ಲಿ ‘ಬೋಹೋ... ಸೋಯ್.., ಚೋಹೋಚೋ...ಸೋಹೋಚೋ...’ ಎಂದು ದನಿಗೂಡಿಸುತ್ತಾ ಜನಪದ ಹಾಡಿಗೆ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿತ್ತು. ಅದನ್ನು ನೋಡಲು ನೆರೆದಿದ್ದವರು ಮೈಮರೆತು ನಿಂತಲ್ಲೇ ಹೆಜ್ಜೆ ಹಾಕಿ ಸಂಭ್ರಮಿಸುತ್ತಿದ್ದರು. ಇಂಥ ಮನೋಹರ ದೃಶ್ಯ ಸುಗ್ಗಿ ಕುಣಿತದ ಸೊಬಗನ್ನು ಹೆಚ್ಚಿಸಿತ್ತು.

ADVERTISEMENT

ಎಳೆಯರಿಂದ ಹಿರಿಯರವರೆಗೂ ಎಲ್ಲರನ್ನೂ ಕ್ಷಣಕಾಲ‌ ಮಂತ್ರಮುಗ್ಧರನ್ನಾಗಿಸುವ ಸುಗ್ಗಿ ಕುಣಿತದ ಸೆಳೆತವೇ ಅಂತಹದ್ದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಹೋಳಿ‌ ಹಬ್ಬದ ಸಮಯದಲ್ಲಿ ಎಂಟು ದಿನ ಮಾತ್ರ ಕಾಣ‌ಸಿಗುವ ಈ ಅಪರೂಪದ ಜನಪದ ಕುಣಿತವನ್ನು ಕಣ್ತುಂಬಿಕೊಳ್ಳಲು ಸುತ್ತಮುತ್ತಲಿನ ಕೇರಿಯ ಜನರೆಲ್ಲಾ ನಡುರಾತ್ರಿಯಲ್ಲೂ ಉತ್ಸಾಹದಿಂದ ಕಾಯುತ್ತಾ ಕುಳಿತಿರುತ್ತಾರೆ.‌

ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಣಸಿಗುವ ಸುಗ್ಗಿ ಕುಣಿತ ಹಾಲಕ್ಕಿ‌ ಸಮುದಾಯಕ್ಕೆ ಸೇರಿದ್ದು. ಇದು ಆ ಸಮುದಾಯದವರ ನೃತ್ಯವಾಗಲು ತ್ರಿಮೂರ್ತಿಗಳಲ್ಲಿ‌ ಒಬ್ಬನಾದ ಶಿವನ ವರ ಪ್ರಸಾದವೇ ಕಾರಣ ಎಂಬ ಪ್ರತೀತಿ ಇದೆ. ಹೀಗಾಗಿ ಇಂದಿಗೂ ಹಾಲಕ್ಕಿ ಸಮುದಾಯದವರು ಶಿವನನ್ನು ಪೂಜಿಸುತ್ತಾರೆ. ತಮ್ಮ ಸುಗ್ಗಿ ಕುಣಿತವನ್ನು ದೇವರಿಗೆ ಸೇವೆಯ ರೂಪದಲ್ಲಿ ಒಪ್ಪಿಸುವ ಮೂಲಕ ಹೋಳಿ ಹುಣ್ಣಿಮೆಯ ನಿಮಿತ್ತ ತಿರುಗಾಟವನ್ನು ಪ್ರಾರಂಭಿಸುವ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರುತ್ತಿದ್ದೇವೆ ಎನ್ನುತ್ತಾರೆ ಸುಗ್ಗಿ ಕುಣಿತ ಕಲಾವಿದರು.

ಸುಗ್ಗಿ ಕುಣಿತವನ್ನು ಉತ್ತರ ಕನ್ನಡ ಜಿಲ್ಲೆಯ ಬುಡಕಟ್ಟು ಜನಾಂಗದವರಲ್ಲಿ ಪ್ರಮುಖರಾದ ಹಾಲ, ಗಾಮವೊಕ್ಕಲು (ಒಕ್ಕಲಿಗ) ಗೌಡ, ದೀವರು, ನಾಡವ ನಾಯಕ, ಮುಕ್ರಿ, ಗಾವುಡ, ಮಡಿವಾಳ, ಕುಣಬಿ, ಕುಡಬಿ, ಗಾವುಂಡ, ಗೊಂಡ, ಗುನಗಿ, ಹಳ್ಳೇರ, ಕೋಮಾರಪಂತ, ಬೆಳಂಬಾರ ಸಮುದಾಯದವರು ಪ್ರದರ್ಶಿಸುತ್ತಾ ಬಂದಿದ್ದಾರೆ. ಈ ಸಮುದಾಯದವರು ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಕೆಳಗಿನ ಕಾರವಾರ, ಅಂಕೋಲಾ, ಅರ‍್ಸಾ, ಕುಮಟಾ, ಹೊನ್ನಾವರ, ಭಟ್ಕಳ ತಾಲ್ಲೂಕಿನಲ್ಲಿ ನೆಲೆಸಿದ್ದಾರೆ. ಪ್ರಕೃತಿಯ‌ ಮಡಿಲಿನಲ್ಲಿ ವಾಸಿಸುವ ಇವರ ಜನಸಂಖ್ಯೆ ಕೆಲವೇ ಕೆಲವು ಸಾವಿರದಷ್ಟು. ಆದರೂ ಆಧುನಿಕ ಯುಗದಲ್ಲೂ ಸುಗ್ಗಿ ಕುಣಿತ ಪರಂಪರೆಯನ್ನು ಮುನ್ನಡೆಸಿಕೊಂಡು ಬರುತ್ತಿರುವುದು ವಿಶೇಷ.

ಹಿಗ್ಗು ತುಂಬಿರಲಿ...

ಸುಗ್ಗಿ ಕುಣಿತವನ್ನು ತಮ್ಮ ಕುಲದೇವರ (ಕರಿದೇವರು) ಪೂಜೆಯೊಂದಿಗೆ ಕರಿಅಕ್ಕಿಯನ್ನು ಹಿರಿಯ (ಗುನಗ) ನಿಂದ ಪ್ರಸಾದ‌ರೂಪದಲ್ಲಿ ಪಡೆದು ಗೆಜ್ಜೆಕಟ್ಟುವ ಮೂಲಕ ವೇಷಕ್ಕೆ ಸಿದ್ಧತೆ ನಡೆಸುತ್ತಾರೆ. ವೇಷ ಕಟ್ಟುವವರು ಮಾಂಸಾಹಾರ, ಮದ್ಯಪಾನ‌ ಮಾಡಕೂಡದು. ಜೊತೆಗೆ ಕಾಲಿಗೆ ಚಪ್ಪಲಿಯನ್ನೂ ಧರಿಸಬಾರದು ಎಂಬ ಸಂಪ್ರದಾಯವಿದೆ. ಒಟ್ಟು ಏಳರಿಂದ ಹತ್ತು ದಿನ ತಿರುಗಾಟದಲ್ಲಿ ತಮ್ಮ ಊರಿನ ಎಲ್ಲಾ ಕೇರಿಯ ಮನೆಗಳಿಗೂ ಹೋಗಿ, ಯಜಮಾನರ ಮನೆಯ ಅಂಗಳದಲ್ಲಿ ಸುಗ್ಗಿ ಕುಣಿತವನ್ನು ಪ್ರದರ್ಶಿಸುತ್ತಾರೆ. ಮನೆಯ ಯಜಮಾನ ಕುಣಿತದ ಬಳಿಕ ತಂಡದ ಮುಖ್ಯಸ್ಥನ ಕೈಗೆ ಅಕ್ಕಿ, ತೆಂಗಿನಕಾಯಿ, ಹಣ ನೀಡಿ ಗೌರವಿಸುತ್ತಾನೆ. ಇದಕ್ಕೆ ಪ್ರತಿಯಾಗಿ ಕುಣಿತಕ್ಕೆ ಬಂದವರು ಆ ಮನೆಯಲ್ಲಿ ವರ್ಷಪೂರ್ತಿ ಸುಗ್ಗಿ ಹಿಗ್ಗು ತುಂಬಿರಲಿ ಎಂದು ಪ್ರಾರ್ಥಿಸುತ್ತಾರೆ.

‘ಸುಗ್ಗಿ ಕುಣಿತ ಕೇವಲ ಮನರಂಜನೆಗಾಗಿ ಅಲ್ಲ, ಇದು ಸಾಂಸ್ಕೃತಿಕ ಕಲಾಭಿವ್ಯಕ್ತಿ ಪ್ರದರ್ಶನ ಮತ್ತು ಸಮೃದ್ಧ ಫಸಲಿಗಾಗಿ ದೇವತೆಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಪ್ರದರ್ಶನ’ ಎಂದು ಹಾಲಕ್ಕಿ ಜನಾಂಗದ ಸುಗ್ಗಿ ಕುಣಿತ ಕಲಾವಿದ ಶಂಭು ಗೌಡ ಹೇಳುತ್ತಾರೆ. ಅಷ್ಟೇ ಅಲ್ಲದೇ ಈ ಬಗೆಯ ಸುಗ್ಗಿ ಕುಣಿತ ಪ್ರದರ್ಶಿಸುವುದರಿಂದ ತಮ್ಮ ಕುಟುಂಬಕ್ಕೆ ಒಳಿತಾಗುತ್ತದೆ ಎಂಬುದು ಈ ಜನಾಂಗಗಳ ಅಚಲ ನಂಬಿಕೆ. ಇನ್ನು ಈ ಸುಗ್ಗಿ ಕುಣಿತ ಪ್ರದರ್ಶನವನ್ನು ಮನೆಯಂಗಳದಲ್ಲಿ ಆಡಿಸಿದರೆ ದುಷ್ಟಶಕ್ತಿಗಳು ಕಡಿಮೆ ಆಗುತ್ತವೆ. ತೋಟ ಗದ್ದೆಗಳಲ್ಲಿ ಮುಂದಿನ ವರ್ಷ ಫಸಲು ಹೆಚ್ಚಾಗುತ್ತದೆ ಎಂಬ ನಂಬಿಕೆ ಜನರದು.

ಸುಗ್ಗಿ ಕುಣಿತಕ್ಕೆ ರಂಗು ನೀಡಲು ಕಲಾವಿದರು ಸಾಂಪ್ರದಾಯಿಕ ವಾದ್ಯಗಳಾದ ಗುಮಟೆ ಪಾಂಗ್, ನಗಾರಿ, ಜಾಗಟೆಗಳನ್ನು ಬಳಸಿಕೊಳ್ಳುತ್ತಾರೆ. 

ಬ್ರಿಟಿಷರು ಮೆಚ್ಚಿದ ಕುಣಿತ

ಸುಗ್ಗಿ ಕುಣಿತವನ್ನು ಬ್ರಿಟಿಷರ ಕಾಲದಿಂದಲೂ ಹೋಳಿ ಹಬ್ಬದ ಸಂದರ್ಭದಲ್ಲಿ ಆಚರಿಸಿಕೊಂಡು ಬರುತ್ತಿರುವ ಬಗ್ಗೆ ಹಲವಾರು ದಾಖಲೆಗಳಿವೆ. ಅಂಕೋಲಾ ತಾಲ್ಲೂಕಿನ ಬೆಳಂಬಾರ ಹಾಲಕ್ಕಿ ಸಮಾಜದ ಸುಗ್ಗಿ ಕುಣಿತದವರು‌‌ ಬ್ರಿಟಿಷರ ಕಾಲದಲ್ಲಿ ಸಮಾಜದ ಜ್ವಲಂತ ಸಮಸ್ಯೆಗಳ ಅಣುಕು ಪ್ರದರ್ಶನ ಮಾಡಲು ನೃತ್ಯವನ್ನು ಬಳಸಿಕೊಳ್ಳುತ್ತಿದ್ದರಂತೆ. ಇವರ ಕುಣಿತವನ್ನು ಮೆಚ್ಚಿ ಬ್ರಿಟಿಷ್ ಅಧಿಕಾರಿಗಳು ತಾಮ್ರಪತ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ.‌ ಇದರ ಸವಿನೆನಪಿಗಾಗಿ ಇಂದಿಗೂ ಅಂಕೋಲಾದಲ್ಲಿ ಬೆಳಂಬಾರ ಹಾಲಕ್ಕಿ ಸಮುದಾಯದವರು ತಹಶೀಲ್ದಾರ್ ಕಚೇರಿ ಮುಂದೆ ಸುಗ್ಗಿ‌ ಕುಣಿತವನ್ನು ಪ್ರದರ್ಶಿಸುವುದೇ ಸಾಕ್ಷಿ.

ಕರಾವಳಿ ಭಾಗದಲ್ಲಿ ಈಗ ಹಲವು ಬುಡಕಟ್ಟು ಸಮುದಾಯದವರ ಜನಸಂಖ್ಯೆ ಕ್ಷೀಣಿಸುತ್ತಿದೆ. ಆದರೂ ತಮ್ಮ ಪರಂಪರೆಯನ್ನು ಮುಂದಿನ ತಲೆಮಾರಿನವರಿಗೂ ಹಸ್ತಾಂತರಿಸುವ ನಿಟ್ಟಿನಲ್ಲಿ ತಮ್ಮ ಮಕ್ಕಳಿಗೂ ವೇಷ ಹಾಕಿಸಿ ಕುಣಿತದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದಾರೆ. ಆದರೂ ಇತ್ತೀಚಿಗೆ ಸುಗ್ಗಿ ಕುಣಿತ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಉದ್ಯೋಗಕ್ಕಾಗಿ ವಲಸೆ ಹೋಗುವವರ ಸಂಖ್ಯೆ ಹೆಚ್ಚಾದ ಕಾರಣ ಮಕ್ಕಳು ಸುಗ್ಗಿ ಕುಣಿತ ಮುಂದುವರಿಸಲು ಇಷ್ಟಪಡುತ್ತಿಲ್ಲ. ಹಾಗಾಗಿ ಸುಗ್ಗಿ ಕುಣಿತ ಮಾಡಲು ತಂಡ ರಚಿಸಿಕೊಳ್ಳಲು ಬೇಕಾದಷ್ಟು ಜನರೇ ಈಗ ಸಿಗುತ್ತಿಲ್ಲ ಎನ್ನುವುದು ಆಯಾ ಸಮುದಾಯಗಳ ಅಳಲು.

ಸಮುದಾಯದ ವಿವಿಧ ಹಂತಗಳ ಜನರನ್ನು ಒಟ್ಟುಗೂಡಿಸುತ್ತಾ, ಸಮುದಾಯದಲ್ಲಿ ಮೌಲ್ಯಗಳು, ಸಹೋದರತ್ವ ಪ್ರಜ್ಞೆಯನ್ನು ಬೆಳೆಸುವ ಸುಗ್ಗಿ ಕುಣಿತ ಎನ್ನುವ ಅತ್ಯದ್ಭುತ ಜನಪದ ಕಲೆ ಹಾಗೂ ಸಂಪ್ರದಾಯ ಮುಂದುವರಿದಿದೆ.

ಸುಗ್ಗಿ ಕುಣಿತ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.