ADVERTISEMENT

ಗುರುಮಠಕಲ್‌ನ ಎಲ್ಹೇರಿ ಯುವಕನ ವೀಳ್ಯದೆಲೆ ಕೃಷಿ

ಮಲ್ಲಿಕಾರ್ಜುನ ನಾಲವಾರ
Published 22 ನವೆಂಬರ್ 2025, 23:30 IST
Last Updated 22 ನವೆಂಬರ್ 2025, 23:30 IST
ಯುವ ಕೃಷಿಕ ವಿಶ್ವಶಂಕರ ಶಿವರಾಯ ಅವರ ಪಾಲಿಹೌಸ್‌ನಲ್ಲಿನ ವೀಳ್ಯದೆಲೆಗಳ ಕಟಾವಿನಲ್ಲಿ ತೊಡಗಿರುವ ಕೂಲಿ ಕಾರ್ಮಿಕರು
ಯುವ ಕೃಷಿಕ ವಿಶ್ವಶಂಕರ ಶಿವರಾಯ ಅವರ ಪಾಲಿಹೌಸ್‌ನಲ್ಲಿನ ವೀಳ್ಯದೆಲೆಗಳ ಕಟಾವಿನಲ್ಲಿ ತೊಡಗಿರುವ ಕೂಲಿ ಕಾರ್ಮಿಕರು   

ಶಾಲೆಯಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಷಣ ಮಾಡಿ ಬಂದ ಯುವ ಕೃಷಿಕ ವಿಶ್ವಶಂಕರ ಶಿವರಾಯ ಬಟ್ಟೆ ಬದಲಿಸಿದರು. ಬಳಿಕ ಚೀಲದಲ್ಲಿ ತಿಪ್ಪೆಗೊಬ್ಬರ ತುಂಬಿಕೊಂಡು ಸೀತಾಫಲ ಗಿಡದ ಬುಡದಲ್ಲಿ ನೆಲ ಅಗೆದು ಗೊಬ್ಬರ ಸುರಿದರು. ಲಗುಬಗನೆ ವೀಳ್ಯದೆಲೆಯ ಪಾಲಿಹೌಸ್‌ನತ್ತ ಹೆಜ್ಜೆ ಹಾಕಿದರು. ಅಲ್ಲಿ ಆಗತಾನೆ ಕೂಲಿ ಕಾರ್ಮಿಕರು ಚಿವುಟಿ ಒಪ್ಪವಾಗಿ ಜೋಡಿಸಿ ಇರಿಸಿದ್ದ ವೀಳ್ಯದೆಲೆ ಕಟ್ಟುಗಳನ್ನು ಗಾಡಿಗೆ ಹಾಕಿ ಮಾರುಕಟ್ಟೆಗೆ ಕಳುಹಿಸಿದರು. ಬೆಲ್ಲ, ಕಡಲೆಹಿಟ್ಟು, ಹುತ್ತದ ಮಣ್ಣು, ಸಗಣಿಯನ್ನು ಡ್ರಮ್‌ನಲ್ಲಿದ್ದ ನೀರಿಗೆ ಬೆರಸಿ ಜೀವಾಮೃತ ಸಿದ್ಧಪಡಿಸಿದರು. ನಂತರ ಕುಡುಗೋಲು ಹಿಡಿದು ತೊಗರಿ, ಅವರೆ ಬೆಳೆಗಳ ನಡುವೆ ಬೆಳೆದಿದ್ದ ಕಳೆ ಕೀಳುತ್ತಲೇ ಮಾತಿಗಿಳಿದ ಅವರು, ‘ಬೇಸಾಯ ನಂಬಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದೇನೆ. ನಾನೇ ದುಡಿಯದೆ ಫಸಲು ಹೇಗೆ ಸಿಗುತ್ತದೆ’ ಎಂದು ಪ್ರಶ್ನಿಸಿದರು. ಹಾಗೆಯೇ ಹತ್ತು ಎಕರೆಯಲ್ಲಿರುವ ಬಹು ಬೆಳೆಯ ಯಶೋಗಾಥೆಯನ್ನು ಹೇಳುತ್ತಾ ಹೋದರು.

ಎಂ.ಕಾಂ ಪದವೀಧರ ವಿಶ್ವಶಂಕರ, ಯಾದಗಿರಿ ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನ ಎಲ್ಹೇರಿಯಲ್ಲಿ ‘ನವನಂದಿ ನೈಸರ್ಗಿಕ ಕೃಷಿ ಕೇಂದ್ರ’ವನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲಿ ಹತ್ತಾರು ಬಗೆಯ ಹಣ್ಣಿನ ಗಿಡಗಳಿವೆ. ಅವುಗಳ ನಡುವೆ ಶೇಂಗಾ ಬೆಳೆಯೂ ಹಬ್ಬಿದೆ. ಜವಾರಿ ಕೋಳಿ, ಪಶು ಸಂಪತ್ತಿದೆ. ಪ್ರತಿ ತಿಂಗಳು ಆದಾಯ ತಂದುಕೊಡುವ ವೀಳ್ಯದೆಲೆ ಇದೆ. ಮಹಾಗನಿ ಗಿಡಗಳ ಸಾಲುಗಳ ನಡುವೆ ತೊಗರಿ, ಅವರೆ, ಅಲಸಂದೆ ಹುಲುಸಾಗಿ ಬೆಳೆದಿವೆ. ಜಮೀನಿನ ಸುತ್ತಲೂ ಶ್ರೀಗಂಧ, ಪಾಲಿಹೌಸ್‌ಗೆ ಗಾಳಿಯಿಂದ ರಕ್ಷಿಸುವ ಸರ್ವೆ ಮರಗಳು ಆವರಿಸಿಕೊಂಡಿವೆ.

ಯುವ ಕೃಷಿಕ ವಿಶ್ವಶಂಕರ ಶಿವರಾಯ ಅವರ ಪಾಲಿಹೌಸ್‌ನಲ್ಲಿನ ವೀಳ್ಯದೆಲೆಗಳ ಕಟಾವಿನಲ್ಲಿ ತೊಡಗಿರುವ ಕೂಲಿ ಕಾರ್ಮಿಕರು

‘ಬೇರೆಯವರ ಕೈಕೆಳಗೆ ದುಡಿಯುವುದಕ್ಕಿಂತ ನಾವೇ ಇನ್ನೊಬ್ಬರಿಗೆ ಕೆಲಸ ಕೊಡಬೇಕು’ ಎಂಬ ತಂದೆಯ ಮಾತು ವಿಶ್ವ ಅವರನ್ನು ಪ್ರಭಾವಿಸಿತು. ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರಿಂದ ಕೃಷಿಯನ್ನು ಉದ್ಯಮದ ದೃಷ್ಟಿಕೋನದಲ್ಲಿ ನೋಡಿದರು. ಬೆಳೆಗಳ ಮೇಲೆ ಕಡಿಮೆ ಬಂಡವಾಳ ಹೂಡಿ, ಬಂದ ಲಾಭದಿಂದ ಹೂಡಿಕೆಯನ್ನು ದ್ವಿಗುಣ ಮಾಡಿ ಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಆದಾಯ ತಂದುಕೊಡುವ ಬೆಳೆಗಳನ್ನು ಬೆಳೆಯುವ ಜಾಣ್ಮೆ ತೋರಿದ್ದಾರೆ.

ADVERTISEMENT

ಅರ್ಧ ಎಕರೆಯಲ್ಲಿ ವೀಳ್ಯದೆಲೆ ಬೆಳೆಯಲು ಪಾಲಿಹೌಸ್‌ ನಿರ್ಮಾಣ ಮಾಡಿದ್ದಾರೆ. ಸಸಿಗಳ ನಾಟಿ ಹಾಗೂ ಬೊಂಬುಗಳನ್ನು ನೆಡಲು ಸೇರಿ ₹ 11 ಲಕ್ಷ ಬಂಡವಾಳ ಹೂಡಿದ್ದಾರೆ. ಎಲೆಗಳ ಬಾಳಿಕೆ ಹಾಗೂ ಉತ್ತಮ ಇಳುವರಿಗಾಗಿ ಮಣ್ಣಿನ ಫಲವತ್ತತೆ ವೃದ್ಧಿಸಲು ಜೀವಾಮೃತವನ್ನು ಕೊಡುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ನಾಟಿ ಮಾಡಿದ್ದ ವೀಳ್ಯದೆಲೆ ಎರಡು ವರ್ಷಗಳಿಂದ ಫಲ ಕೊಡುತ್ತಿದೆ. ತಿಂಗಳಲ್ಲಿ ಇಪ್ಪತ್ತು ದಿನ ಇಬ್ಬರು ಕೂಲಿಗಳು ಎಲೆ ಚಿವುಟುತ್ತಾರೆ. ಕಳೆದ ವರ್ಷ ಮಾಸಿಕ ₹ 35 ಸಾವಿರ ನಿವ್ವಳ ಲಾಭ ಬಂದಿತ್ತು. ಈ ವರ್ಷದಿಂದ ಅದು ₹ 42,500ಕ್ಕೆ ಏರಿಕೆಯಾಗಿದೆ. ವರ್ಷದ 365 ದಿನವೂ ಆದಾಯ ಕೊಡುವ ವೀಳ್ಯದೆಲೆ ಕೌಶಲಯುಕ್ತ ಕೂಲಿಕಾರರು ಹಾಗೂ ಮಗುವಿನಂತೆ ಆರೈಕೆ ಬೇಡುತ್ತದೆ ಎನ್ನುತ್ತಾರೆ ವಿಶ್ವ.

ಯುವ ಕೃಷಿಕ ವಿಶ್ವಶಂಕರ ಶಿವರಾಯ ಅವರ ಪಾಲಿಹೌಸ್‌ನಲ್ಲಿನ ವೀಳ್ಯದೆಲೆಗಳ ಜೋಡಣೆಯಲ್ಲಿ ನಿರತವಾಗಿರುವ ಕೂಲಿ ಕಾರ್ಮಿಕರು

ಜವಾರಿ ಕೋಳಿ ಸಾಕಾಣಿಕೆಯು ಅಲ್ಪ ಅವಧಿಯ ಆದಾಯ ತಂದುಕೊಡುತ್ತಿದೆ. ಜಮೀನಿನಲ್ಲಿ ಮುಕ್ತವಾಗಿ ಓಡಾಡುತ್ತಾ ಮೇಯುವ ನೂರಾರು ಕೋಳಿಗಳಿವೆ. ಪ್ರತಿ ಕೆ.ಜಿ. ಕೋಳಿಗೆ ₹ 500, ಬೇಡಿಕೆ ಇದ್ದಾಗ ಆ ಮೊತ್ತ ₹ 600ಕ್ಕೆ ಏರಿಕೆ ಆಗುತ್ತದೆ. ಹಾಲು ಕೊಡುವ ಹಸುಗಳಿದ್ದು, ಅವುಗಳ ಸಗಣಿ ಸಾವಯವ ಗೊಬ್ಬರ, ಜೀವಾಮೃತಕ್ಕೆ ಬಳಕೆ ಆಗುತ್ತಿದೆ.

ದಕ್ಷಿಣ ಕರ್ನಾಟಕದಲ್ಲಿ ಸಾಮಾನ್ಯವಾಗಿ ಕಂಡುಬರುವ ಹಲಸು, ಅಂಜೂರ, ಸ್ಟಾರ್‌ಫ್ರೂಟ್, ರಾಮಫಲ, ಲಕ್ಷ್ಮಣಫಲ, ಗೇರು ಸಸಿಗಳನ್ನು ಪ್ರಾಯೋಗಿಕವಾಗಿ ನೆಡಲಾಗಿತ್ತು. ಈಗ ಸ್ಥಳೀಯ ವಾತಾವರಣಕ್ಕೆ ಹೊಂದಿಕೊಂಡು ಸಮೃದ್ಧವಾಗಿ ಬೆಳೆದು ಕೆಲವು ಫಲ ಸಹ ಬಿಟ್ಟಿವೆ. ಮುಂದಿನ ದಿನಗಳಲ್ಲಿ ಅವುಗಳ ಸಂಖ್ಯೆ ಹೆಚ್ಚಾಗಲಿದೆ.

ಸೀತಾಫಲ, ಸಪೋಟ, ಸೀಬೆ, ಮಾವು, ನೆಲ್ಲೆಕಾಯಿ, ಮೊಸಂಬಿ, ದಾಳಿಂಬೆ, ನೇರಳೆ, ಬಾರೆಹಣ್ಣಿನ ಮರಗಳು ಫಲ ಕೊಟ್ಟು ಆದಾಯವೂ ತಂದು ಕೊಡುತ್ತಿವೆ. ಹಣ್ಣುಗಳಿಗೆ ನೇರವಾಗಿ ಗ್ರಾಹಕರ ಮಾರುಕಟ್ಟೆ ಸೃಜಿಸಿಕೊಂಡು, ಹಂತ–ಹಂತವಾಗಿ ಮರಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡು ಹೋಗುವ ಚಿಂತನೆ ಯುವ ಕೃಷಿಕನದು.

ಮಾರ್ಕೆಟ್‌ ಇಲ್ಲದೆ ಬೇಸಾಯವಿಲ್ಲ

ಪದವೀಧರರು ಬೇಸಾಯದಲ್ಲಿ ತೊಡಗುವ ಮುನ್ನ ಬರೀ ತೊಗರಿ, ಜೋಳ ಬೆಳೆದ ಯಾವೊಬ್ಬ‌ ರೈತನೂ ಶ್ರೀಮಂತನಾಗಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮಾರುಕಟ್ಟೆಯನ್ನು ಅರ್ಥ ಮಾಡಿಕೊಳ್ಳಬೇಕು. ಲಭ್ಯವಿರುವ ಭೂಮಿಯಲ್ಲಿ ಹತ್ತಾರು ಬೆಳೆಗಳನ್ನು ವೈಜ್ಞಾನಿಕವಾಗಿ ಬೆಳೆದು, ಅವುಗಳಿಗೆ ಮೌಲ್ಯವರ್ಧನೆ ಮಾಡಬೇಕು. ಈಗಿರುವ ಮಾರುಕಟ್ಟೆಯಲ್ಲಿ ಬೇರೆ ಉತ್ಪನ್ನಕ್ಕಿಂತ ತಮ್ಮ ಉತ್ಪನ್ನ ಹೇಗೆ ಭಿನ್ನ ಮತ್ತು ನೈಸರ್ಗಿಕವಾಗಿದೆ ಎಂಬುದನ್ನು ಗ್ರಾಹಕರಿಗೆ ಅರ್ಥ ಮಾಡಿಸಬೇಕು. ಮುಖ್ಯವಾಗಿ, ಮಧ್ಯವರ್ತಿಗಳು ಇಲ್ಲದೆ ಮಾರಾಟ ಮಾಡಿದರೆ ರೈತರು ಹೇಳಿದ್ದೇ ಬೆಲೆ ಎನ್ನುತ್ತಾರೆ ವಿಶ್ವಶಂಕರ.

ನೈಸರ್ಗಿಕ ಹಾಗೂ ಸಾವಯವ ಪದ್ಧತಿಯಲ್ಲಿ ಬೆಳೆದ ಬೆಳೆಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ. ನೈಸರ್ಗಿಕ ಕೃಷಿಯಲ್ಲಿ ಕಡಿಮೆ ಬಂಡವಾಳ ಹೂಡಿಕೆ ಮಾಡಬೇಕು. ಬಂದ ಆದಾಯವನ್ನು ಹಂತ– ಹಂತವಾಗಿ ಹೆಚ್ಚಿಸುತ್ತಾ ಹೋಗಬೇಕು. ಸರ್ಕಾರದ ಯೋಜನೆಗಳ ನೆರವು ಇದೆ. ಅದನ್ನು ಚೆನ್ನಾಗಿ ಬಳಸಿಕೊಳ್ಳಬೇಕು ಎನ್ನುವ ಕಿವಿಮಾತನ್ನು ಈ ಯುವ ರೈತ ಹೇಳುತ್ತಾರೆ.

ಕೃಷಿಯಲ್ಲಿ ಪ್ರಯೋಗಗಳನ್ನು ಮಾಡಬೇಕು. ಮಾರುಕಟ್ಟೆಯನ್ನು ಅರ್ಥ ಮಾಡಿಕೊಂಡು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬೇಕು. ಸರ್ಕಾರದ ಸವಲತ್ತುಗಳನ್ನು ಪಡೆದುಕೊಳ್ಳಬೇಕು. ಇಷ್ಟೇ ಅಲ್ಲದೇ ಕೃಷಿ ಕಾರ್ಮಿಕರ ಜೊತೆ ತಾವೂ ಒಬ್ಬರಾಗಿ ದುಡಿಯಬೇಕು. ಆಗ ಮಾತ್ರ ಕೃಷಿಯೂ ಕೈತುಂಬ ಹಣವನ್ನು ತಂದುಕೊಡುತ್ತದೆ ಎನ್ನುವುದಕ್ಕೆ ವಿಶ್ವಶಂಕರ ಶಿವರಾಯ ನಿದರ್ಶನವಾಗಿದ್ದಾರೆ. ⇒v

ಯುವ ಕೃಷಿಕ ವಿಶ್ವಶಂಕರ ಶಿವರಾಯ ಅವರು ಕೃಷಿ ಉಪಕರಣ ಹೊತ್ತು ಸಾಗಿದ ದೃಶ್ಯ

ಎಲ್ಹೇರಿ ಜೋಳಕ್ಕೆ ಎಲ್ಲೆಲ್ಲೂ ಬೇಡಿಕೆ

ಮಂಜಿನಲ್ಲಿ ಸಮೃದ್ಧವಾಗಿ ಬೆಳೆದು ಗೊಬ್ಬರ ರಾಸಾಯನಿಕ ಸಿಂಪರಣೆ ಬೇಡದ ಜೋಳಕ್ಕೆ ಧರ್ಮದ ಬೆಳೆ ಎಂಬ ಹೆಗ್ಗಳಿಕೆ ಇದೆ. ದಪ್ಪ ಬಿಳಿಯಾಗಿರುವ ಎಲ್ಹೇರಿ ಜೋಳಕ್ಕೆ ಬಹು ಬೇಡಿಕೆ. ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಆಂಧ್ರಪ್ರದೇಶ ತೆಲಂಗಾಣ ಹಾಗೂ ತಮಿಳುನಾಡಿನಲ್ಲಿ ಮಾರುಕಟ್ಟೆ ಸೃಷ್ಟಿಯಾಗಿದೆ. ಕಳೆದ ವರ್ಷ ಪ್ರತಿ ಕ್ವಿಂಟಲ್‌ಗೆ ₹ 6000 ದಂತೆ 80 ಕ್ವಿಂಟಲ್ ಮಾರಾಟ ಮಾಡಿದ್ದಾಗಿ ವಿಶ್ವಶಂಕರ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.