ADVERTISEMENT

ಹೆಗಲ ಮೇಲಿನ ಭಾರವಿಳಿಸಿ...

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2019, 20:00 IST
Last Updated 2 ಮಾರ್ಚ್ 2019, 20:00 IST
ಚಿತ್ರ: ಗುರು ನಾವಳ್ಳಿ
ಚಿತ್ರ: ಗುರು ನಾವಳ್ಳಿ   

ಒಲವಿನ ಸಾತು, ಅರ್ಥಾತ್ ಸಾವಿತ್ರಿ,

ನಿನಗೆ ನೆನಪಿರಬಹುದು. ಎಂದಿನಂತೆ ಅಂದು ಸಹ ಮನೆಯಲ್ಲಿ ರಾತ್ರಿ ನಾವಿಬ್ಬರೇ ಇದ್ದೆವು. ನಾನು ಹೃದ್ರೋಗಿಯಾದರೆ ನೀನು ಹತ್ತು ವರ್ಷಗಳಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗದಿಂದ ನರಳುತ್ತಿದ್ದೆ. ಆ ರಾತ್ರಿ 11 ಗಂಟೆ ಸುಮಾರಿಗೆ ಭಾರಿ ಗುಡುಗು, ಸಿಡಿಲಿನೊಂದಿಗೆ ಮಳೆ ಶುರುವಾಯಿತು. ತಕ್ಷಣವೇ ವಿದ್ಯುತ್ ಸರಬರಾಜು ನಿಂತುಹೋಯಿತು.

ವಿದ್ಯುತ್ ಸರಬರಾಜು ನಿಂತುಹೋದರೆ ನಮಗೆ ಅಕ್ಷರಶಃ ಜೀವ ಪುಕಪುಕ ಎನ್ನುತ್ತಿತ್ತು. ಏಕೆಂದರೆ ಉಸಿರಾಟದ ತೊಂದರೆಯಿದ್ದ ನೀನು ದಿನಕ್ಕೆ 18 ರಿಂದ 22 ಗಂಟೆಗಳಷ್ಟು ಹೊತ್ತು ಆಮ್ಲಜನಕವನ್ನು ಒದಗಿಸುತ್ತಿದ್ದ (Oxygen concentrator) ಯಂತ್ರ ಬಳಸುತ್ತಿದ್ದೆ.
ಯು.ಪಿ.ಎಸ್. ನೆರವಿನಿಂದ ಹಾಗೂ ಹೀಗೂ ಮೂರು ಗಂಟೆಗಳಷ್ಟು ಹೊತ್ತು ಸುಧಾರಿಸಬಹುದಿತ್ತು. ಅದಕ್ಕೂ ಮೀರಿದರೆ ನರ್ಸಿಂಗ್ ಹೋಮಿಗೆ ಓಡಬೇಕಿತ್ತು. ಸಮಯ 12.30 ಆದರೂ ಮಳೆಯು ನಿಲ್ಲುವ ಸೂಚನೆಯಾಗಲೀ ವಿದ್ಯುತ್ ಸರಬರಾಜು ಪ್ರಾರಂಭವಾಗುವ ಸೂಚನೆಯಾಗಲೀ ಕಾಣಲಿಲ್ಲ. ಹಾಗಾಗಿ ನಿನ್ನನ್ನು ನರ್ಸಿಂಗ್ ಹೋಮಿಗೆ ಕರೆದೊಯ್ಯಲು ನಿರ್ಧರಿಸಿದೆ. ಆ ಮಳೆಯಲ್ಲಿ ಮನೆಯಿಂದ ಹೊರಗೆ ಹೋಗಲು ನಿನ್ನನ್ನು ಮಾನಸಿಕವಾಗಿ ಸಿದ್ಧಗೊಳಿಸಿದೆ. ದುಡ್ಡುಕಾಸು ಹೊಂದಿಸಿಕೊಂಡು ಸುಮಾರು 12.45ಕ್ಕೆ ಆಂಬುಲೆನ್ಸಿಗೆ (108) ಫೋನ್ ಮಾಡಿ, ಚಾಲಕನಿಗೆ ಮನೆಯ ವಿಳಾಸದ ಜೊತೆಗೆ ಮನೆಯ ಸಮೀಪದ ಬ್ಯಾಂಕ್, ಆಸ್ಪತ್ರೆ, ಬಸ್ ನಿಲ್ದಾಣ ಮುಂತಾದ ಪ್ರಮುಖ ಗುರುತುಗಳನ್ನು ತಿಳಿಸಿದೆ. ಇಷ್ಟೆಲ್ಲಾ ಆಗುವ ಹೊತ್ತಿಗೆ ರಾತ್ರಿ 1 ಗಂಟೆಯಾಗಿತ್ತು. ಒಳಗೆ ನಿನ್ನೊಬ್ಬಳನ್ನೇ ಬಿಟ್ಟು ಹೊರಗಿನಿಂದ ಬೀಗ ಹಾಕಿ ಕತ್ತಲೆ ಕವಿದು ಮಳೆ ಸುರಿಯುತ್ತಿದ್ದ ದಟ್ಟಿರುಳಿನಲ್ಲಿ ಒಬ್ಬನೇ ರಸ್ತೆಗೆ ಇಳಿದೆ. ಮಳೆ ಬಹಳ ಜೋರಾಗಿಯೇ ಬರುತ್ತಿತ್ತು. ಕೆಲವು ನಿಮಿಷಗಳು ಕಳೆಯುತ್ತಿದ್ದಂತೆ ಎಲ್ಲೋ ದೂರದಲ್ಲಿ ಆಂಬುಲೆನ್ಸಿನ ಧ್ವನಿ ಕೇಳಲಾರಂಭಿಸಿತು. ಮತ್ತೆರಡು ನಿಮಿಷಗಳಲ್ಲಿ ನಮ್ಮ ಮನೆಯ ಹತ್ತಿರದಲ್ಲಿದ್ದ ಮುಖ್ಯರಸ್ತೆಗೆ ಆಂಬುಲೆನ್ಸ್ ಬಂದು ನಿಂತಿತು.

ADVERTISEMENT

ಆಂಬುಲೆನ್ಸ್ ಚಾಲಕನನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಅವರು ನನ್ನನ್ನು ಗುರುತಿಸಲು ಅನುವು ಮಾಡಿಕೊಡಲು ಒಂದು ಕೈಯಲ್ಲಿದ್ದ ಮೊಬೈಲ್ ಬೆಳಕಿನಿಂದ ಇನ್ನೊಂದು ಕೈಯಲ್ಲಿ ಹಿಡಿದಿದ್ದ ಬಣ್ಣ ಬಣ್ಣದ ಛತ್ರಿಯನ್ನು ಗುರುತಿಸುವಂತೆ ಹೇಳಿ ನಮ್ಮ ಮನೆ ಇರುವ ರಸ್ತೆಯ ಗುರುತನ್ನು ತಿಳಿಸಿದೆ. ಆದರೆ, ಆ ರಸ್ತೆಯಲ್ಲಿ ನೀರು ನಿಂತಿದ್ದರಿಂದ ಬರಲು ಆಗುವುದಿಲ್ಲವೆಂದು ಚಾಲಕ ಹೇಳಿದಾಗ ನನಗೆ ದಿಗ್ಭ್ರಮೆಯಾಯಿತು. ಹಾಗೇ ಸಾವರಿಸಿಕೊಂಡು ಆ ರಸ್ತೆಯ ಹಿಂದಿನ ಬೀದಿಯ ಮೂಲಕ ಬರಲು ತಿಳಿಸಿದೆ. ಆ ದಾರಿಯ ಮೂಲಕ ಬಂದ ಆಂಬುಲೆನ್ಸಿನಲ್ಲಿ ನಿನ್ನನ್ನು ನಮ್ಮ ಮನೆಯಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿನ ನರ್ಸಿಂಗ್ ಹೋಮಿಗೆ ಕರೆದೊಯ್ದು ಅಲ್ಲಿ ಮಾಮೂಲಿನಂತೆ ಆಕ್ಸಿಜನ್ ಕೊಡಿಸಿ ಬೆಳಿಗ್ಗೆ ಎಂಟು ಗಂಟೆಗೆ ಮನೆಯಲ್ಲಿ ಕರೆಂಟ್ ಇರುವುದನ್ನು ಖಾತ್ರಿಪಡಿಸಿಕೊಂಡು ಬಂದದ್ದು ನಿನಗೂ ನೆನಪಿರಬಹುದು. ವಿದ್ಯುತ್ ಸರಬರಾಜು ನಿಂತಾಗಲೆಲ್ಲ ಈ ರೀತಿ ತೊಂದರೆ ನಮಗೆ ವರ್ಷಕ್ಕೆ ಐದಾರು ಬಾರಿಯಾದರೂ ಆಗುತ್ತಿತ್ತು.

ಇಂದು ಕೂಡ ಮೋಡ ದಟ್ಟೈಸಿಕೊಂಡಿದ್ದು ದೀಪ ಪುಕಪುಕ ಅನ್ನುತ್ತಿದೆ. ಮಹಾಮಳೆಯ ಆ ರಾತ್ರಿಯ ಅನುಭವ ನೆನಪಾಗಿ ಮೈ ನಡುಗುತ್ತಿದೆ. ಆದರೆ, ನೆನಪನ್ನು ಹಂಚಿಕೊಳ್ಳಲು ನೀನು ಮಾತ್ರ ನನ್ನ ಜೊತೆಯಿಲ್ಲ. ಹೌದು. ಈಗ ಒಂಬತ್ತು ತಿಂಗಳುಗಳ ಕೆಳಗೆ ಒಂದು ಮುಂಜಾನೆ ನನ್ನ ಹೆಗಲ ಆಸರೆಯನ್ನು ಪಡೆದು ಬಚ್ಚಲುಮನೆ ಪ್ರವೇಶಿಸಿದ ನೀನು ಅಲ್ಲೇ ಕುಸಿದು ಬಿದ್ದೆ. ಎರಡು ಮೂರು ಬಾರಿ ಹೆಸರು ಹಿಡಿದು ಕೂಗಿದರೂ ಮಾತೇ ಆಡಲಿಲ್ಲ. ತಕ್ಷಣ ನಾಡಿ ಪರೀಕ್ಷಿಸಿದೆ. ನಾಡಿ ಸಿಗಲಿಲ್ಲ. ಮೊಬೈಲ್ ಲೈಟ್ ಬಳಸಿ ಮುಚ್ಚಿದ ಎರಡೂ ಕಣ್ಣುಗಳನ್ನು ಬಿಡಿಸಿ ಬೆಳಕನ್ನು ಬಿಟ್ಟಾಗ ಕಣ್ಣುಗಳು ಸ್ಪಂದಿಸಲಿಲ್ಲ. ನನ್ನ ಹೆಗಲ ಮೇಲಿನ ಭಾರವನ್ನು ಇಳಿಸಿ ಹೃದಯವನ್ನು ಮಣ ಭಾರವಾಗಿಸಿ ಮರಳಿ ಬಾರದ ಲೋಕಕ್ಕೆ ನೀನು ಹೊರಟುಹೋದೆ. ಈಗ ಉಳಿದಿರುವುದು ನೆನಪು ಮಾತ್ರ.

ಸದಾ ನಿನ್ನ ಪ್ರೀತಿಯ ನೆನಪಲ್ಲಿ,

ಗುಂಡೂರಾವ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.