
ಸ್ವಚ್ಛ ಮನೆ; ಸುಂದರ ಮನಸ್ಸು
ಮನೆಯ ಒಳಗೆ ಬರುತ್ತಿದ್ದಂತೆಯೇ ಸೋಫಾದ ಮೇಲೆ ಹರಡಿಕೊಂಡಿರುವ ನ್ಯೂಸ್‌ಪೇಪರ್, ಮೇಜಿನ ಮೇಲೆ ಕುಡಿದ ಕಾಫಿ ಕಪ್, ಕುರ್ಚಿಯ ಮೇಲೆ ಬಟ್ಟೆಗಳ ರಾಶಿ, ರೂಮಿಗೆ ಹೋದರೆ ಹಾಸಿಗೆಯ ಮೇಲೆ ತಲೆದಿಂಬು ಒಂದು ಕಡೆ, ಅಸ್ತವ್ಯಸ್ತವಾದ ಹೊದಿಕೆ, ಬಾತ್‌ರೂಮ್‌ಗೆ ಹೋದರೆ ತೆರೆದಿಟ್ಟ ಶಾಂಪೂ ಬಾಟಲಿಗಳು, ಒಗೆಯಬೇಕಾದ ಬಟ್ಟೆಗಳ ರಾಶಿ, ಅಡುಗೆ ಮನೆಯಂತೂ ಕೇಳಲೇಬೇಡಿ. ಇದೆಲ್ಲವನ್ನೂ ನೋಡುತ್ತಿದ್ದಂತೆ ಕೋಪ ಉಕ್ಕಿ ಬರುತ್ತದೆ. ಮಾನಸಿಕ ಗೊಂದಲ, ಅಶಾಂತಿಯ ಭಾವನೆಗಳು ಸೃಷ್ಟಿಯಾಗುತ್ತವೆ. ಇದು ಬಹುತೇಕ ಮನೆಗಳಲ್ಲಿ ಸೃಷ್ಟಿಯಾಗುವಂತಹ ಪರಿಸ್ಥಿತಿ.
ಅದೇ ಮನೆಯ ಒಳಗೆ ಬಂದಾಗ ಇಡೀ ಮನೆ ಸ್ವಚ್ಛ ಸುಂದರವಾಗಿದ್ದರೆ, ವಸ್ತುಗಳು ತಮ್ಮ ಜಾಗದಲ್ಲಿ ಇದ್ದರೆ ಮಾನಸಿಕ ಉದ್ವೇಗ ಆಗುವುದಿಲ್ಲ, ಅಲ್ಲವೇ? ಇದು ಅಚ್ಚುಕಟ್ಟಾಗಿ ಇರಿಸಿಕೊಂಡ ಮನೆಯು ನಮ್ಮ ಮನಸ್ಸಿನ ಮೇಲೆ ಉಂಟು ಮಾಡುವ ಪರಿಣಾಮಗಳು. ಇದರಿಂದ ಸ್ವಚ್ಛತೆ ಮತ್ತು ಮನಸ್ಸಿಗೆ ನೇರ ಸಂಬಂಧವಿದೆ ಎಂಬುದು ನಮಗೆ ತಿಳಿಯುತ್ತದೆ.
ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಬೇಡದ ವಸ್ತುಗಳನ್ನು ಹೊರಗೆ ಹಾಕುವುದು ಎಲ್ಲ ದೃಷ್ಟಿಯಿಂದಲೂ ಉತ್ತಮ. ಮನಸ್ಸಿನ ನೆಮ್ಮದಿಗೆ ಇದೊಂದು ಥೆರಪಿ ಕೂಡ ಎಂದು ಸಂಶೋಧನೆಗಳು ಹೇಳುತ್ತವೆ. ಇತ್ತೀಚಿನ ದಿನಗಳಲ್ಲಿ ಖಿನ್ನತೆ, ಮಾನಸಿಕ ಒತ್ತಡ ಜಾಸ್ತಿ ಆಗಿರುವುದರಿಂದ, ಇದರಿಂದ ಹೊರಬರಲು ಸ್ವಚ್ಛವಾದ ಮನೆಯು ಒಂದು ಚಿಕಿತ್ಸೆಯ ರೂಪದಲ್ಲಿ ಕೆಲಸ ಮಾಡುತ್ತದೆ ಅನ್ನಬಹುದು.
ಕಸ ಗುಡಿಸುವುದು, ಒರೆಸುವುದು, ದೂಳು ತೆಗೆಯುವುದು, ಫ್ಯಾನ್, ಕಿಟಕಿ ಸ್ವಚ್ಛಗೊಳಿಸುವುದು, ಕಪಾಟನ್ನು ಸ್ವಚ್ಛ ಮಾಡಿ ಸಾಮಾನುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ಇಡುವುದು ಮಾನಸಿಕ ಆರೋಗ್ಯಕ್ಕೆ ಹಿತಕರ ಮಾತ್ರವಲ್ಲದೆ ನಮ್ಮ ದೈಹಿಕ ಆರೋಗ್ಯಕ್ಕೂ ಒಳ್ಳೆಯದು.
ಹೇಗೆ ಸ್ವಚ್ಛ ಮಾಡುವುದು?
ಮನೆಯ ಬೇರೆ ಕೆಲಸದ ಜೊತೆಗೆ ದಿನಾ ಒಂದೊಂದು ಜಾಗವನ್ನು ಸ್ವಚ್ಛಗೊಳಿಸಿ. ಹತ್ತು ಹದಿನೈದು ನಿಮಿಷಗಳ ಟೈಮರ್ ಇಟ್ಟು ಸ್ವಚ್ಛಗೊಳಿಸಬಹುದು ಅಥವಾ ವಾರಕ್ಕೆ ಒಮ್ಮೆಯಾದರೂ ಆಗಬಹುದು. ಮನೆಮಂದಿಯನ್ನು ಈ ಕಾರ್ಯದಲ್ಲಿ ಕೈಜೋಡಿಸುವಂತೆ ಕೇಳಿ. ಆದರೆ ಗಂಟೆಗಟ್ಟಲೆ ಅದನ್ನೇ ಮಾಡುತ್ತಾ ಕೂರಬೇಡಿ. ಮೊದಲೇ ಪ್ಲ್ಯಾನ್ ಮಾಡಿ, ಯಾವ ದಿನ ಯಾವ ಭಾಗವನ್ನು ಸ್ವಚ್ಛಗೊಳಿಸುವುದೆಂದು ನಿರ್ಧರಿಸಿ.
ಅನಗತ್ಯ ವಸ್ತುಗಳನ್ನು ಅಗತ್ಯ ಇರುವವರಿಗೆ ನೀಡಿ. ಹಳೆಯದನ್ನು ಅನೇಕ ರೀತಿ ಮರುಬಳಕೆ ಮಾಡಬಹುದು. ಪ್ರಯೋಜನಕ್ಕೆ ಬಾರದ್ದನ್ನು ಬಿಸಾಡಿ. ಮೂರು ತಿಂಗಳಿಗೊಮ್ಮೆ ಬೇಡದ್ದನ್ನು ಬಿಸಾಡಿ ಹೊಸ ವಸ್ತುಗಳನ್ನು ಅವಶ್ಯಕತೆ ಇದ್ದರೆ ಮಾತ್ರ ಕೊಂಡುಕೊಳ್ಳಿ. ವರ್ಷಕ್ಕೆ ಒಂದು ಅಥವಾ ಎರಡು ದಿನ, ಉದಾಹರಣೆಗೆ, ಹುಟ್ಟುಹಬ್ಬ ಅಥವಾ ವಾರ್ಷಿಕೋತ್ಸವದ ಸಂದರ್ಭಗಳಲ್ಲಿ ಮಾತ್ರ ಹೊಸ ವಸ್ತುಗಳನ್ನು ಖರೀದಿಸಿ.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಾಲ್‌ಗಳು ನಮ್ಮನ್ನು ಆಕರ್ಷಿಸುತ್ತವೆ. ಯೂಟ್ಯೂಬ್ ಇನ್‌ಫ್ಲ್ಯುಯೆನ್ಸರ್‌ಗಳು ತೋರಿಸುವ ವಸ್ತುಗಳನ್ನು ಅಗತ್ಯವಿಲ್ಲದಿದ್ದರೂ ಕೂಡಲೇ ಖರೀದಿಸುವ ಉಮೇದು ನಮ್ಮಲ್ಲಿ ಹಲವರಿಗೆ ಇರುತ್ತದೆ. ಹೀಗಾಗಿ, ಅಂತಹವರ ಬಲೆಗೆ ಬೀಳಬೇಡಿ. ಮನೆಯಲ್ಲಿ ಸಾಮಾನುಗಳು ಕಡಿಮೆ ಇದ್ದಷ್ಟೂ ಸ್ವಚ್ಛ ಮಾಡಲು ಸುಲಭ, ಒತ್ತಡವೂ ಕಮ್ಮಿ.
ಮನಃಶಾಸ್ತ್ರಜ್ಞರು ನಡೆಸಿರುವ ಕೆಲವು ಅಧ್ಯಯನಗಳ ಪ್ರಕಾರ, ಮನೆಯನ್ನು ಸ್ವಚ್ಛ ಹಾಗೂ ವ್ಯವಸ್ಥಿತವಾಗಿ ಇಟ್ಟುಕೊಳ್ಳುವುದರಿಂದ ಸಮಯ ನಿರ್ವಣೆಯನ್ನು ಸಹ ಕಲಿಯುತ್ತೇವೆ. ಕೆಲಸ ಮಾಡುವ ಕೌಶಲ ಹೆಚ್ಚುತ್ತದೆ. ನಮ್ಮ ಜೀವನ ವ್ಯವಸ್ಥಿತವಾಗಿ ಇರುತ್ತದೆ. ನಾವು ಖುಷಿಯಿಂದ ಇರಲು ಸಾಧ್ಯವಾಗುತ್ತದೆ. ಮನೆಮಂದಿ ಸಹ ಖುಷಿಯಾಗಿ ಇರುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.