ADVERTISEMENT

ಮುಳುಗುವ ಬದುಕಿಗೆ ತೇಲುವ ಸೇತುವೆ ಆಸರೆ

ಬಸವರಾಜ ಹವಾಲ್ದಾರ
Published 1 ಡಿಸೆಂಬರ್ 2024, 0:30 IST
Last Updated 1 ಡಿಸೆಂಬರ್ 2024, 0:30 IST
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕಣವಾಡಿ–ಗುಹೇಶ್ವರ ನಡುಗಡ್ಡೆ ನಡುವೆ ನಿರ್ಮಿಸಲಾಗಿರುವ ಸೇತುವೆ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕಣವಾಡಿ–ಗುಹೇಶ್ವರ ನಡುಗಡ್ಡೆ ನಡುವೆ ನಿರ್ಮಿಸಲಾಗಿರುವ ಸೇತುವೆ   

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಪಡಸಲಗಿ ಬಳಿ 1989ರಲ್ಲಿ ರೈತರೇ ತಮ್ಮ ಹಣದಲ್ಲಿ ಬ್ಯಾರೇಜ್‌ ನಿರ್ಮಿಸಿದರು. ರೈತರೇ ನಿರ್ಮಿಸಿದ ದೇಶದ ಮೊದಲ ಬ್ಯಾರೇಜ್‌ ಇದು. ಈಗ ಅದೇ ತಾಲ್ಲೂಕಿನ ಕಂಕಣವಾಡಿ ಗ್ರಾಮಸ್ಥರು ಆಲಮಟ್ಟಿ ಹಿನ್ನೀರಿನಲ್ಲಿ ತೇಲುವ ಸೇತುವೆ ನಿರ್ಮಿಸಿಕೊಂಡು ಉದಾಹರಣೆಯಾಗಿದ್ದಾರೆ.

ನಡುಗಡ್ಡೆಯಲ್ಲಿ ವಾಸಿಸುತ್ತಿದ್ದ ಏಳು ಮಹಿಳೆಯರು ಗಂಗಾಳ (ಹರಿಗೋಲು)ದಲ್ಲಿ ಕೃಷ್ಣಾ ನದಿ ದಾಟುತ್ತಿದ್ದರು. ಅದು ಮುಳುಗಿತು. ಅದರೊಂದಿಗೆ ಅವರ ಬದುಕೂ ಮುಳುಗಿತು. ಈ ದುರಂತ ನಡೆದದ್ದು 1983ರಲ್ಲಿ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಗುಹೇಶ್ವರ ನಡುಗಡ್ಡೆಯ ಈ ಮಹಿಳೆಯರು ಕಂಕಣವಾಡಿಗೆ ಬರುವಾಗ ಗಂಗಾಳ ಮುಳುಗಿತ್ತು. ಈ ದುರಂತದ ನಂತರ ಎಚ್ಚೆತ್ತ ಶಾಸಕ ಜಿ.ಎಸ್‌.ಬಾಗಲಕೋಟ ಅವರು ಹುಟ್ಟು ಬಳಸಿ ಚಲಾಯಿಸುವ ತೆಪ್ಪ ಕೊಡಿಸಿದರು. ಆದರೆ, ಸಮಸ್ಯೆ ಅಲ್ಲಿಗೇ ಮುಗಿಯಲಿಲ್ಲ.

ನಡುಗಡ್ಡೆಯಲ್ಲಿರುವ ತೋಟದ ಮನೆಗಳಿಂದ ಕಂಕಣವಾಡಿಗೆ ಬರಲು, ಮಕ್ಕಳು ಶಾಲೆಗೆ ಹೋಗಲು, ಕಂಕಣವಾಡಿ ಗ್ರಾಮದವರು ಕಬ್ಬಿನ ತೋಟಕ್ಕೆ ಹೋಗಲು, ಕಬ್ಬು ಸಾಗಿಸಲು ಆಲಮಟ್ಟಿ ಹಿನ್ನೀರು ದಾಟಿಕೊಂಡು ಹೋಗಬೇಕಾದ ಸವಾಲನ್ನು ಎದುರಿಸುತ್ತಲೇ ಇದ್ದರು. ಹೀಗಾಗಿ ಹಿನ್ನೀರು ದಾಟಲು ಸೇತುವೆ ನಿರ್ಮಿಸಿಕೊಡುವಂತೆ ಶಾಸಕರಿಗೆ ಮನವಿ ಸಲ್ಲಿಸುತ್ತಲೇ ಇದ್ದರು. ಅವರು ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದರು. ‘ಆಲಮಟ್ಟಿಯ ಜಲಾಶಯದ ಗೇಟಿನ ಎತ್ತರವನ್ನು ಹೆಚ್ಚಿಸಿದಾಗ ನಡುಗಡ್ಡೆಯ ಶೇಕಡ 90 ರಷ್ಟು ಮುಳುಗಡೆಯಾಗುತ್ತದೆ. ಆದ್ದರಿಂದ ಸೇತುವೆ ನಿರ್ಮಿಸಲು ಆಗುವುದಿಲ್ಲ’ ಎಂದು ಅಧಿಕಾರಿಗಳು ಉತ್ತರ ನೀಡಿದರು. ಸರ್ಕಾರ ಅದನ್ನೇ ಹೇಳಿ ಕೈ ತೊಳೆದುಕೊಂಡಿತು.

ADVERTISEMENT
ಜೋಡಿ ಬೋಟ್‌ಗಳ ಮೇಲೆ ಟ್ರ್ಯಾಕ್ಟರ್ ಸಹಿತ ಕಬ್ಬು ಸಾಗಣೆ ಚಿತ್ರಗಳು: ಆರ್.ಎಸ್‌. ಹೊನಗೌಡ

ಮನಸ್ಸಿದ್ದರೆ ಮಾರ್ಗ

ಆನಂತರ ಗ್ರಾಮಸ್ಥರು ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಲು ಸಮಾಲೋಚನೆ ನಡೆಸಿದರು. ಎರಡು ಬೋಟುಗಳನ್ನು ಸೇರಿಸಿದರೆ ಕಬ್ಬು ಸಾಗಿಸಬಹುದು ಎಂದು ಯಾರೋ ಹೇಳಿದರು. ಬೋಟ್‌ ತರಲು ಗ್ರಾಮದ ಕೆಲವರು ಗುಜರಾತ್‌ಗೆ ಹೋದರು. ಆದರೆ, ಅಲ್ಲಿ ಬೇಕಾದ ಬೋಟ್ ಸಿಗಲಿಲ್ಲ. ಕೊನೆಗೆ ಸಮೀಪದ ಜಂಬಗಿಯಲ್ಲಿದ್ದ ಬೋಟ್ ತಂದು ಎರಡು ಬೋಟ್‌ಗಳನ್ನು ಜೋಡಿಸಿ ಅದರಲ್ಲಿ ಲೋಡ್‌ ಆದ ಟ್ರ್ಯಾಕ್ಟರ್‌ ಅನ್ನೇ ಸಾಗಿಸುವ ಪ್ರಯೋಗ ಮಾಡಿದರು. ಅದರಲ್ಲಿ ಯಶಸ್ವಿಯೂ ಆದರು. ಈಗ ಪ್ರತಿ ಟನ್‌ ಕಬ್ಬು ಸಾಗಾಟದ ವೆಚ್ಚ ₹200ಕ್ಕೆ ಇಳಿದಿದೆ. ರೈತರೂ ನಾಲ್ಕು ಕಾಸು ಕಾಣುವಂತಾಗಿದೆ.

‘ಕಬ್ಬು ಸಾಗಿಸಲು ಹರಸಾಹಸ ಪಡಬೇಕಾಗಿತ್ತು. ಕಬ್ಬು ಕಡಿದು ಹಿನ್ನೀರಿನ ಒಂದು ಬದಿಗೆ ತಂದು, ಅಲ್ಲಿಂದ ಹೊತ್ತು ಬೋಟ್‌ಗೆ ಹಾಕಬೇಕಿತ್ತು. ಇನ್ನೊಂದು ದಡಕ್ಕೆ ತಂದು ಸುರಿದು, ನಂತರ ಮತ್ತೆ ಟ್ರ್ಯಾಕ್ಟರ್‌ಗೆ ಲೋಡ್ ಮಾಡಬೇಕಿತ್ತು. ಇದರಲ್ಲಿ ಬಹಳಷ್ಟು ಕಬ್ಬು ಹಾಳಾಗುತ್ತಿತ್ತು. ಒಂದು ಟನ್‌ ಕಬ್ಬು ಸಾಗಿಸಲು ₹700 ರಿಂದ ₹ 800 ಖರ್ಚು ಆಗುತ್ತಿತ್ತು. ಇದರಿಂದ ಕಬ್ಬು ಬೆಳೆದರೂ ಪ್ರಯೋಜನವಿಲ್ಲ ಎನ್ನುವ ಸ್ಥಿತಿ. ಕೆಲ ರೈತರ ಕಬ್ಬು ಸಾಗಿಸಲು ಆಗುತ್ತಲೇ ಇರಲಿಲ್ಲ. ಗಾಣಗಳಿಗೆ ನೀಡಬೇಕಾಗುತ್ತಿತ್ತು. ಕಡಿಮೆ ಬೆಲೆಗೆ ಕೊಟ್ಟು ನಷ್ಟ ಅನುಭವಿಸುತ್ತಿದ್ದೆವು’ ಎಂದು ಈಶ್ವರ ಕರಬಸಣ್ಣವರ ಆ ದಿನಗಳನ್ನು ನೆನಪಿಸಿಕೊಂಡರು.

ಕಬ್ಬು ಸಾಗಾಟ ಸುಗಮವಾಯಿತು. ಆದರೆ, ಜನರ ಸಂಚಾರದ ಪರದಾಟ ಮುಂದುವರಿದೇ ಇತ್ತು. ಗುಹೇಶ್ವರ ಜಾತ್ರೆ ಸಂದರ್ಭದಲ್ಲಿ ಹಿನ್ನೀರಿನಲ್ಲಿ ಬ್ಯಾರೆಲ್‌ಗಳ ಮೇಲೆ ಕಾರಂಜಿ (ತೆಪ್ಪ) ನಿರ್ಮಾಣ ಮಾಡಲಾಗುತ್ತಿತ್ತು. ಅದೇ ರೀತಿ ತೇಲುವ ಸೇತುವೆಯನ್ನು ನಿರ್ಮಾಣ ಮಾಡಿದರೆ ಹೇಗೆ ಎನ್ನುವ ಆಲೋಚನೆ ಗ್ರಾಮಸ್ಥರಿಗೆ ಬಂದಿತು. ಆದರೆ, ಅದಕ್ಕೆ ₹ 30 ಲಕ್ಷ ಬೇಕಿತ್ತು. ಅಷ್ಟು ಹಣ ಹೊಂದಿಸುವುದು ಹೇಗೆ ಎನ್ನುವ ಚಿಂತೆಯಲ್ಲಿದ್ದಾಗ ಸೊಸೈಟಿಯಿಂದ ₹15 ಲಕ್ಷ, ದೇವಸ್ಥಾನದಲ್ಲಿ ಸಂಗ್ರಹವಾದ ₹15 ಲಕ್ಷ ತೆಗೆದುಕೊಂಡು ಸೇತುವೆ ನಿರ್ಮಾಣಕ್ಕೆ ಗ್ರಾಮಸ್ಥರು ಮುಂದಾದರು.

ಕಬ್ಬು ಸಾಗಿಸುತ್ತಿರುವ ದೃಶ್ಯ

ತೇಲುವ ಸೇತುವೆ ಸಿದ್ಧ

ಬ್ಯಾರೆಲ್‌, ಕಬ್ಬಿಣದ ಆ್ಯಂಗಲ್‌ ಪಟ್ಟಿ, ಹಲಗೆಗಳನ್ನು ಬಳಸಿಕೊಂಡು 600 ಅಡಿ ಉದ್ದ, 8 ಅಡಿ ಅಗಲದ ತೇಲುವ ಸೇತುವೆ ನಿರ್ಮಾಣವಾಯಿತು! ಅದರ ಮೇಲೆ ದ್ವಿಚಕ್ರ ವಾಹನ, ಜನರು ಯಾವಾಗ ಬೇಕಾದರೂ ಸಂಚರಿಸಬಹುದು. ಇದರಿಂದಾಗಿ ಮಕ್ಕಳು ಸಮಯಕ್ಕೆ ಸರಿಯಾಗಿ ಶಾಲೆಗೆ ಹೋಗುತ್ತಿದ್ದಾರೆ. ಮಹಿಳೆಯರು ಸರಾಗವಾಗಿ ತೋಟಗಳಿಗೆ ಹೋಗಿ ಬರುತ್ತಾರೆ. ಜಾನುವಾರುಗಳಿಗೆ ಮೇವು ತರುತ್ತಾರೆ. ಡೇರಿಗೆ ಹಾಲು ತರುತ್ತಿದ್ದಾರೆ.

ಕಬ್ಬು ಸಾಗಾಟಕ್ಕೆ ವಿಧಿಸುತ್ತಿದ್ದ ಶುಲ್ಕದಿಂದ ₹20 ಲಕ್ಷ ಸಂಗ್ರಹಿಸಲಾಗಿದೆ. ನಿರ್ವಹಣೆಗಾಗಿ ₹5 ಲಕ್ಷ ಖರ್ಚಾಗಿದೆ. ₹15 ಲಕ್ಷ ಸಾಲ ತೀರಿಸಲಾಗಿದೆ. ಉಳಿದ ಹಣ ತೀರಿಸಲು ಯೋಜಿಸಲಾಗಿದೆ. ಆ ನಂತರ ಪ್ರತಿ ಟನ್‌ ಕಬ್ಬಿಗೆ ₹50 ವಿಧಿಸಲು ನಿರ್ಧರಿಸಲಾಗಿದೆ. ಇದರಿಂದ ರೈತರ ಆದಾಯ ಮತ್ತಷ್ಟು ಹೆಚ್ಚಾಗಲಿದೆ.

‘ತೇಲುವ ಸೇತುವೆ ನಿರ್ಮಾಣದಿಂದ ತಿರುಗಾಡಲು ಅನುಕೂಲವಾಗಿದೆ. ಕಬ್ಬು ಸಾಗಿಸಲು ದೊಡ್ಡ ಬೋಟ್ ವ್ಯವಸ್ಥೆ ಮಾಡಬೇಕು. ಎರಡು ದಶಕಗಳಿಂದ ತೊಂದರೆ ಎದುರಿಸುತ್ತಿದ್ದೇವೆ. ಪರಿಸ್ಥಿತಿ ಅರಿತು ಸರ್ಕಾರ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಮನಸ್ಸು ಮಾಡಬೇಕು’ ಎನ್ನುತ್ತಾರೆ ರೈತ ಸದಾಶಿವ ಕಾಡಗೇರಿ.

ಸೇತುವೆ ಉದ್ಘಾಟನೆ ಸಂದರ್ಭದಲ್ಲಿ ಹಲವಾರು ಜನಪ್ರತಿನಿಧಿಗಳು ಬಂದಿದ್ದರು. ದೊಡ್ಡ ಬೋಟ್ ನೀಡುವಂತೆ ಕೇಳಿದ್ದೆವು. ಕೊಡಿಸುವುದಾಗಿ ಭರವಸೆ ನೀಡಿದ್ದರು. ಇಲ್ಲಿಯವರೆಗೆ ಯಾರೂ ಸ್ಪಂದಿಸಿಲ್ಲ. ಬೋಟ್ ಹಾಳಾದರೆ ಮತ್ತೆ ಸಮಸ್ಯೆ ಮೊದಲಿನಿಂದ ಆರಂಭವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ಸರ್ಕಾರ ಕೈಚೆಲ್ಲಿದಾಗ ಕಂಕಣವಾಡಿ ಗ್ರಾಮಸ್ಥರು ತಾವೇ ಪರ್ಯಾಯ ದಾರಿ ಕಂಡುಕೊಂಡರು. ಇದು ಮಾದರಿ ಕೆಲಸ ಎನ್ನಲು ಅಡ್ಡಿಯಿಲ್ಲ.

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಂಕಣವಾಡಿ–ಗುಹೇಶ್ವರ ನಡುಗಡ್ಡೆ ನಡುವೆ ನಿರ್ಮಿಸಲಾಗಿರುವ ಸೇತುವೆ

ಗುಹೇಶ್ವರ ನಡುಗಡ್ಡೆ ಆಗಿದ್ದು...

ಕೃಷ್ಣಾ ನದಿಯು ಇಲ್ಲಿ ಕವಲೊಡೆದು ಹರಿಯುತ್ತಿರುವುದರಿಂದ ಗುಹೇಶ್ವರ ನಡುಗಡ್ಡೆ ನಿರ್ಮಾಣವಾಗಿದೆ. ಆಲಮಟ್ಟಿ ಜಲಾಶಯ ನಿರ್ಮಾಣಕ್ಕೂ ಮುನ್ನ ಮಳೆಗಾಲದಲ್ಲಿ ನೀರು ಜೋರಾಗಿ ಹರಿಯುತ್ತಿತ್ತು. ಉಳಿದ ದಿನಗಳಲ್ಲಿ ಸಣ್ಣದಾಗಿ ಹರಿಯುತ್ತಿತ್ತು. ಜನರು ಅಲ್ಲಿದ್ದ ಗರ್ಚಿನಿಂದ ನಿರ್ಮಿಸಿದ್ದ ಸಣ್ಣ ಸೇತುವೆ ಮೇಲೆ ಸಂಚರಿಸುತ್ತಿದ್ದರು. 2004ರಲ್ಲಿ ಆಲಮಟ್ಟಿ ಜಲಾಶಯದಲ್ಲಿ ನೀರು ನಿಲ್ಲಿಸತೊಡಗಿದ ಮೇಲೆ ಹಿನ್ನೀರಿನ ಪ್ರಮಾಣ ಹೆಚ್ಚಾಗಿ ಜನರ ಸಂಚಾರ ಹಾಗೂ ಕಬ್ಬು ಸಾಗಾಟಕ್ಕೆ ತೊಂದರೆ ಶುರುವಾಯಿತು.

ಸೇತುವೆ

ವನವಾಸಕ್ಕೆ ಮುಕ್ತಿ

ಕಂಕಣವಾಡಿ ಗ್ರಾಮದವರ 500ಕ್ಕೂ ಹೆಚ್ಚು ಎಕರೆ ಭೂಮಿ ಆಲಮಟ್ಟಿ ಹಿನ್ನೀರಿನಲ್ಲಿ ನಡುಗಡ್ಡೆಯಾಗಿದೆ. ಅಲ್ಲಿ ಕಬ್ಬು, ಮತ್ತಿತರ ಬೆಳೆ ಬೆಳೆಯಲಾಗುತ್ತದೆ. 10 ಸಾವಿರ ಟನ್‌ನಷ್ಟು ಕಬ್ಬು ಉತ್ಪಾದನೆಯಾಗುತ್ತದೆ. ಜೊತೆಗೆ 250ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, 25ಕ್ಕೂ ಹೆಚ್ಚು ಮಕ್ಕಳು ಶಾಲೆಗೆ ಹೋಗುತ್ತಾರೆ. 270ಕ್ಕೂ ಹೆಚ್ಚು ಎಮ್ಮೆಗಳಿದ್ದು, ದಿನಕ್ಕೆ 1,500 ಲೀಟರ್ ಹಾಲು ಉತ್ಪಾದನೆಯಾಗುತ್ತದೆ.

ಜನರು ಹೋಗಿ–ಬರಲು, ಕೃಷಿ ಉತ್ಪನ್ನಗಳನ್ನು ಸಾಗಿಸುವುದು ಸವಾಲಾಗಿತ್ತು. ಜನರ ಸಂಚಾರಕ್ಕೆ ಒಂದು ಸಣ್ಣ ಬೋಟ್‌ ನೀಡಲಾಗಿತ್ತು. ಬೋಟ್‌ ಸಂಜೆ 6ಕ್ಕೆ ಸಂಚರಿಸುವುದು ನಿಲ್ಲಿಸಿ ಬಿಡುತ್ತಿತ್ತು. ನಡುಗಡ್ಡೆಯಲ್ಲಿರುವ ಜನರು ಎಲ್ಲಿಗೇ ಹೋಗಲಿ, ಸಂಜೆ 7ರ ವೇಳೆಗೆ ವಾಪಸ್ ಬಂದು ಬಿಡಬೇಕಾಗುತ್ತಿತ್ತು. ಅಲ್ಲಿರುವವರಿಗೆ ರಾತ್ರಿ ಏನಾದರೂ ಆದರೆ, ಬೆಳಗಿನವರೆಗೂ ಕಾಯಬೇಕಿತ್ತು.

ಸೇತುವೆ
ನದಿ ತುಂಬಿ ಹರಿಯುವಾಗ ತೆಪ್ಪದಲ್ಲಿ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾದ ಸ್ಥಿತಿ ಇತ್ತು. ನಡುಗಡ್ಡೆಯಲ್ಲಿರುವವರು ಸಂಜೆ ನಂತರ ಬಂದರೆ ಕಂಕಣವಾಡಿ ಸಂಬಂಧಿಕರ ಅಥವಾ ದೇವಸ್ಥಾನದಲ್ಲಿ ಉಳಿದುಕೊಂಡು ಬೆಳಿಗ್ಗೆ ನಡುಗಡ್ಡೆಗೆ ಹೋಗಬೇಕಾಗುತ್ತಿತ್ತು
ಸದಾಶಿವ ಕವಟಗಿ ಗ್ರಾಮಸ್ಥ
ಕಂಕಣವಾಡಿ ಗ್ರಾಮದ ಜನತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.