ADVERTISEMENT

ಕೌತುಕದ ನೆಲೆ ಗೋಕರ್ಣ ಗುಹೆ; ಋಷಿಮುನಿಗಳ ನೆಚ್ಚಿನ ತಾಣ

ಗಣಪತಿ ಹೆಗಡೆ
Published 9 ಆಗಸ್ಟ್ 2025, 23:30 IST
Last Updated 9 ಆಗಸ್ಟ್ 2025, 23:30 IST
<div class="paragraphs"><p>ಗೋಕರ್ಣದ ಗೋ ಗರ್ಭ ಗುಹೆಯ ಪ್ರವೇಶ ದ್ವಾರದ ಬಳಿ ನಿಂತ ವಿದೇಶಿ ಯುವತಿ.</p></div>

ಗೋಕರ್ಣದ ಗೋ ಗರ್ಭ ಗುಹೆಯ ಪ್ರವೇಶ ದ್ವಾರದ ಬಳಿ ನಿಂತ ವಿದೇಶಿ ಯುವತಿ.

   

ಅದು 2020ರ ಏಪ್ರಿಲ್‌. ಕೋವಿಡ್ ಕಾರಣಕ್ಕೆ ಇಡೀ ದೇಶ ಲಾಕ್‌ಡೌನ್ ಆಗಿದ್ದ ಸಮಯವದು. ಗೋಕರ್ಣದ ಮುಖ್ಯ ಕಡಲತೀರ ಮತ್ತು ಕುಡ್ಲೆ ಕಡಲತೀರದ ಮಧ್ಯದಲ್ಲಿರುವ ಜಟಾಯು ತೀರ್ಥದ ಪಕ್ಕದ ಬಲ್ಲಾಳ ತೀರ್ಥದ ದುರ್ಗಮ ಪ್ರದೇಶದಲ್ಲಿನ ಗುಹೆಯೊಂದರಲ್ಲಿ ಓರ್ವ ವಿದೇಶಿ ಪ್ರಜೆ ಹಾಗೂ ಅಲ್ಲೇ ಪಕ್ಕದಲ್ಲಿ ಇನ್ನೋರ್ವ ವಿದೇಶಿಗ ಟೆಂಟ್ ಹಾಕಿಕೊಂಡು ವಾಸಿಸುತ್ತಿರುವುದು ಕಂಡು ಬಂದಿತ್ತು. ಸ್ಥಳೀಯ ಯುವಕರು ಗುಡ್ಡದ ತಪ್ಪಲಿನಲ್ಲಿರುವ ಐತಿಹಾಸಿಕ ಸ್ಥಳಗಳ ವೀಕ್ಷಣೆಗೆ ತೆರಳಿದಾಗ ಇವರನ್ನು ಪತ್ತೆ ಮಾಡಿದ್ದರು.

ತೀರಾ ಈಚೆಗೆ ಇಲ್ಲಿಯೇ ಸಮೀಪದ ರಾಮತೀರ್ಥ ಗುಹೆಯಲ್ಲಿ ರಷ್ಯನ್ ಮಹಿಳೆಯೊಬ್ಬರು ತನ್ನಿಬ್ಬರು ಪುಟ್ಟ ಹೆಣ್ಣು ಮಕ್ಕಳೊಂದಿಗೆ ಹಲವು ವಾರಗಳಿಂದ ವಾಸವಿದ್ದ ಸಂಗತಿ ಬೆಳಕಿಗೆ ಬಂದಿತ್ತು. ನಿರಂತರವಾಗಿ ಸುರಿಯುತ್ತಿದ್ದ ಮಳೆ, ಬೋರ್ಗರೆಯುತ್ತಿದ್ದ ಝರಿ, ಸರಿಸೃಪಗಳ ಓಡಾಟ, ಸ್ವಲ್ಪ ಹೊರಕ್ಕೆ ಬಂದು ಕಾಲು ಎಡವಿದರೂ ಪ್ರಪಾತದಿಂದ ಜಾರಿ ಸಮುದ್ರಕ್ಕೆ ಬೀಳಬಹುದಾಗಿದ್ದ ಸ್ಥಳದಲ್ಲಿ ಮಹಿಳೆ ಮತ್ತು ಮಕ್ಕಳು ಹೆದರದೆ ವಾಸವಿದ್ದ ಸಂಗತಿ ಪೊಲೀಸರನ್ನೂ ಅಚ್ಚರಿಗೆ ತಳ್ಳಿತ್ತು.

ADVERTISEMENT

ಗುಹೆಗಳಲ್ಲಿ ವಿದೇಶಿಗರು ಕಾಣಸಿಗುವುದು ಗೋಕರ್ಣದ ಜನರಿಗೆ ಅಚ್ಚರಿಯ ವಿಷಯವೇನಲ್ಲ. ಆದರೆ, ಮಳೆಗಾಲ, ಕೋವಿಡ್ ಲಾಕ್‌ಡೌನ್‌ನಂತಹ ಕ್ಲಿಷ್ಟಕರ ಸ್ಥಿತಿಯಲ್ಲೂ ಅಪಾಯಕಾರಿ ಎನಿಸಬಹುದಾದ ಸ್ಥಳದಲ್ಲಿ ಬೀಡುಬಿಟ್ಟವರು ಪತ್ತೆಯಾಗಿದ್ದು ಆಶ್ಚರ್ಯ ಹುಟ್ಟಿಸಿತ್ತು.

ವಿಶಿಷ್ಟ ಬಗೆಯ ಕಡಲತೀರ, ಪುರಾಣ ಕಾಲದ ದೇವಾಲಯಗಳಿಂದಾಗಿ ಆಕರ್ಷಣೀಯ ತಾಣವಾಗಿರುವ ಗೋಕರ್ಣದಲ್ಲಿ ಗುಹೆಗಳೂ ಕುತೂಹಲ ಸೃಷ್ಟಿಸಿವೆ. ಸಮುದ್ರದ ತೀರದ ಗುಡ್ಡದಲ್ಲಿನ ಗುಹೆಗಳ ಬಗ್ಗೆ ವಿದೇಶಿಯರು ಆಕರ್ಷಿತರಾದರೆ, ದೇಸಿ ಪ್ರವಾಸಿಗರಿಗೆ ಇದು ಕೌತುಕದ ಸಂಗತಿಯಾಗಿದೆ.

ಗೋಕರ್ಣದ ಗೋ ಗರ್ಭ ಗುಹೆಯಲ್ಲಿ ವಿಹರಿಸುತ್ತಿರುವ ಪ್ರವಾಸಿಗರು.

ಗೋಕರ್ಣದ ಗುಹೆಗಳನ್ನು ಯಾರೂ ನಿರ್ಮಿಸಿದ್ದಲ್ಲ, ಇವು ಸ್ವಾಭಾವಿಕವಾಗಿ ರೂಪುಗೊಂಡ ಭೂರಚನೆಗಳು. ಇವುಗಳಿಗೆ ಎಂಟು ಸಾವಿರ ವರ್ಷಗಳಿಗಿಂತ ಪುರಾತನ ಹಿನ್ನೆಲೆ ಇರಬಹುದು ಎನ್ನುತ್ತಾರೆ ಇತಿಹಾಸಕಾರರು.

ಓಂ ಕಡಲ ತೀರ, ಅದರ ಪಕ್ಕದ ಕುಡ್ಲೆ ಕಡಲ ತೀರ, ಮುಖ್ಯ ಕಡಲ ತೀರಗಳು ಗೋಕರ್ಣದಲ್ಲಿವೆ. ಕುಡ್ಲೆ ಕಡಲ ತೀರದ ಪಕ್ಕದಲ್ಲಿನ ಗುಡ್ಡದಲ್ಲೇ ಐದಾರು ಗುಹೆಗಳಿವೆ. ಕುಡ್ಲೆ ತೀರದ ಮೇಲ್ಭಾಗದಲ್ಲಿರುವ ಗೋ ಗರ್ಭ ಗುಹೆ, ಮುಖ್ಯ ಕಡಲತೀರದ ಬಳಿಯ ರಾಮತೀರ್ಥ ಮತ್ತು ಜಟಾಯುತೀರ್ಥದ ಬಳಿಯ ಗುಹೆಗಳಲ್ಲಿ ಜನರ ವಾಸ ಹೆಚ್ಚು. ಆದರೆ, ಇನ್ನೂ ಬೆಳಕಿಗೆ ಬಾರದ, ದುರ್ಗಮ ಪ್ರದೇಶಗಳಲ್ಲಿ ಹತ್ತಕ್ಕೂ ಹೆಚ್ಚು ಗುಹೆಗಳಿರಬಹುದು ಎಂಬ ಅಂದಾಜಿದೆ. ಒಂದು ಕಾಲದಲ್ಲಿ ಇವು ಆಧ್ಯಾತ್ಮಿಕ ಸಾಧನೆಯ ನೆಲೆಗಳಾಗಿದ್ದವು. ಈಗ ವಿದೇಶಿ ಪ್ರವಾಸಿಗರ ಏಕಾಂತ ವಾಸಕ್ಕೆ, ಮೋಜಿಗೆ ಬಳಕೆ ಆಗುತ್ತಿವೆ. ಮುಖ್ಯ ಕಡಲ ತೀರದ ಸಮೀಪದಲ್ಲಿನ ರಾಮತೀರ್ಥ ಗುಹೆ ಈಚೆಗೆ ಹೆಚ್ಚು ಚರ್ಚೆಗೆ ಒಳಗಾಗಿದೆ.

ಕಡಿದಾದ ಮಾರ್ಗ ಹೊಂದಿದ್ದ, ಗುಡ್ಡದ ಅಂಚಿನಲ್ಲಿದ್ದ ಗುಹೆಯಲ್ಲಿ ಉಳಿದುಕೊಂಡಿದ್ದ ರಷ್ಯನ್ ಮಹಿಳೆ ಹೊರ ಜಗತ್ತಿಗೆ ಅಚ್ಚರಿಯಾದರು. ಅಲ್ಲಿ ಆಕೆ ಆಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದ್ದರು ಎಂಬುದಕ್ಕೆ ಪಾಂಡುರಂಗನ ಮೂರ್ತಿ, ಇನ್ನಿತರ ಸಾಮಗ್ರಿಗಳು ಕುರುಹುಗಳಾಗಿದ್ದವು.

ಈ ಘಟನೆಯ ಕಾರಣದಿಂದಲೇ ಗೋಕರ್ಣದ ಗುಹೆಗಳು ಮತ್ತೆ ಮುನ್ನೆಲೆಯ ಚರ್ಚೆಗೆ ಎಡೆಮಾಡಿಕೊಟ್ಟಿವೆ. ವಿದೇಶಿಗರಿಗೆ ಗುಹೆಯ ಮೇಲೆ ಮೋಹ ಏಕೆ? ಎಂಬ ಪ್ರಶ್ನೆ ಸಹಜವಾಗಿ ಜನರಲ್ಲಿ ಕುತೂಹಲ ಹುಟ್ಟಿಸುತ್ತಿದೆ.

‘ಗುಹೆಗಳಲ್ಲಿ ವಿದೇಶಿಗರ ವಾಸ ಇದೇ ಮೊದಲಲ್ಲ. ಕಳೆದ ಕೆಲ ದಶಕಗಳಿಂದ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಅವರ ಪೈಕಿ ಹಲವರು ಐಷಾರಾಮಿ ರೆಸಾರ್ಟ್, ಹೋಮ್ ಸ್ಟೇ ಬದಲಿಗೆ ಗುಡ್ಡ, ಕಡಲ ತೀರದ ದುರ್ಗಮ ಸ್ಥಳಗಳನ್ನು ವಾಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಏಕಾಂತ ಬಯಸುವ ವಿದೇಶಿಗರು ಗುಡ್ಡದ ಮೇಲ್ಭಾಗದಲ್ಲಿನ ಗುಹೆಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಾರೆ. ಹೀಗೆ ಉಳಿದವರು ಒಂದೆರಡು ದಿನ, ಕೆಲವರು ಮಾತ್ರ ವಾರಗಟ್ಟಲೆ ಉಳಿದುಕೊಳ್ಳುತ್ತಾರೆ’ ಎಂದು ವಿದೇಶಿಗರ ಗುಹೆ ವಾಸದ ಕುರಿತು ಗೋಕರ್ಣದ ಮಾಣಿ ಗೌಡ ವಿವರಿಸುತ್ತಾರೆ.

ಗೋಕರ್ಣದ ಗೋ ಗರ್ಭ ಗುಹೆಯಲ್ಲಿರುವ ಶಿವಮಂದಿರದ ಬಳಿ ಧ್ಯಾನಸ್ಥ ಸ್ಥಿತಿಯಲ್ಲಿರುವ ವಿದೇಶಿ ಮಹಿಳೆ.

‘ಭಾರತೀಯ ಸಂಸ್ಕೃತಿಗೆ ಮಾರುಹೋದ ವಿದೇಶಿಗರು ಗುಹೆಗಳಲ್ಲಿದ್ದುಕೊಂಡು ಧ್ಯಾನ ಮಾಡುವುದುಂಟು. ಗೋ ಗರ್ಭ ಗುಹೆಯಲ್ಲಿನ ಶಿವತಾಣದ ಬಳಿ ಹತ್ತಾರು ವಿದೇಶಿಗರು ಕುಳಿತು ಆಗಾಗ ಧ್ಯಾನ, ಯೋಗ ಮಾಡುತ್ತಾರೆ. ಕೆಲವರು ಒಬ್ಬಂಟಿಯಾಗಿ ದಿನಗಟ್ಟಲೆ ಕುಳಿತು ಧ್ಯಾನಸ್ಥರಾಗುತ್ತಾರೆ’ ಎಂದು ಅವರು ಹೇಳುತ್ತಾರೆ.

‘ಗುಹೆಗಳನ್ನೇ ವಾಸಕ್ಕೆ ಆಶ್ರಯಿಸುವ ವಿದೇಶಿ ಪ್ರವಾಸಿಗರ ಪೈಕಿ ಕೆಲವರು ಕೇವಲ ಏಕಾಂತದ ಕಾರಣಕ್ಕೆ ಮಾತ್ರವೇ ಗುಹೆಯನ್ನು ಆಯ್ದುಕೊಳ್ಳುವುದಿಲ್ಲ. ರೆಸಾರ್ಟ್, ಹೋಂ ಸ್ಟೇಗಳಲ್ಲಿನ ದುಬಾರಿ ದರ ಭರಿಸಲಾಗದೆ ನೈಸರ್ಗಿಕ ತಾಣದ ಮೊರೆ ಹೋಗುವುದೂ ಉಂಟು. ಕೆಲವರು ಗಾಂಜಾ ಸೇವೆನಯಂತಹ ಚಟುವಟಿಕೆಯಲ್ಲಿ ನಿರಂತರವಾಗಿ ತೊಡಗಿರುವ ಕಾರಣದಿಂದ ಯಾರ ಹಂಗಿಲ್ಲದೆ ನಿಸರ್ಗದ ಮಧ್ಯೆ ಮೋಜಿನಲ್ಲಿ ತೊಡಗಲು ‘ಗುಹೆ ವಾಸಿ’ ಆಗುತ್ತಾರೆ’ ಎಂದು ವಿವರಣೆ ನೀಡುತ್ತಾರೆ.

‘ಸಾಮಾಜಿಕ ಕಟ್ಟಲೆಗಳನ್ನು ತೊರೆದು ಬದುಕಲು ಬಯಸುವ ವಿದೇಶಗಳ ಹಿಪ್ಪಿಗಳು ಗೋಕರ್ಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದರು. ಹೀಗೆ ಬಂದವರು ಯಾರ ಸಂಪರ್ಕಕ್ಕೆ ಸಿಗಲು ಬಯಸದೆ ಗುಡ್ಡದ ಮೇಲೆ ಟೆಂಟ್ ಕಟ್ಟಿಕೊಂಡು ಉಳಿಯುತ್ತಿದ್ದರು. ಅವರಲ್ಲಿ ಕೆಲವರು ಗುಹೆಗಳನ್ನೇ ಆಶ್ರಯಿಸಿಕೊಂಡಿದ್ದರು. ಅವರಿಂದಾಗಿ ವಿದೇಶಿ ಪ್ರವಾಸಿಗರಿಗೆ ಗುಹೆಯ ವಾಸದ ಸೆಳೆತ ಹೆಚ್ಚಿರಬಹುದು’ ಎಂದು
ವಿಶ್ಲೇಷಿಸುತ್ತಾರೆ.

ಸಾಮಾನ್ಯವಾಗಿ ಅಕ್ಟೋಬರ್ ಬಳಿಕ ವಿದೇಶಿಗರ ಗೋಕರ್ಣ ಭೇಟಿ ಆರಂಭಗೊಳ್ಳುತ್ತದೆ. ಮಾರ್ಚ್‌ವರೆಗೂ ಇಲ್ಲಿಯೇ ನೆಲೆ ನಿಲ್ಲುವವರ ಸಂಖ್ಯೆ ಸಾಕಷ್ಟಿದೆ. ವರ್ಷಾಂತ್ಯದ ಅವಧಿಯಲ್ಲಂತೂ ಗೋಕರ್ಣದ ಕಡಲ ತೀರ, ಮುಖ್ಯ ಬೀದಿಗಳಲ್ಲಿ ವಿದೇಶಿಗರ ಮುಖವೇ ಹೆಚ್ಚು ಕಾಣಸಿಗುತ್ತವೆ. ಆದರೆ, ಕೋವಿಡ್‌ ಹರಡಿದ್ದ ಅವಧಿಗೆ ಮುನ್ನದ ಅವಧಿಗೆ ಹೋಲಿಕೆ ಮಾಡಿದರೆ ವಿದೇಶಿಗರ ಭೇಟಿ ಅರ್ಧದಷ್ಟು ಇಳಿಕೆಯಾಗಿದೆ ಎಂಬುದಾಗಿ ಸ್ಥಳೀಯರು ಹೇಳುತ್ತಾರೆ.

ಗೋಕರ್ಣದಲ್ಲಿ ಈಚೆಗೆ ರಷ್ಯನ್ ಮಹಿಳೆಯೊಬ್ಬರು ವಾಸವಿದ್ದ ದುರ್ಗಮ ಸ್ಥಳದಲ್ಲಿರುವ ರಾಮತೀರ್ಥ ಗುಹೆ. ಚಿತ್ರಗಳು: ರವಿ ಸೂರಿ & ಪುಷ್ಪಹಾಸ ಭಕ್ತಿಕರ್

ಋಷಿಮುನಿಗಳ ನೆಚ್ಚಿನ ತಾಣ

ಗೋಕರ್ಣದ ಗುಹೆ ಈಗ ವಿದೇಶಿಗರನ್ನು ಆಕರ್ಷಿಸುವ ತಾಣ. ಪುರಾಣ ಪ್ರಸಿದ್ಧ ಕ್ಷೇತ್ರವಾಗಿರುವ ಗೋಕರ್ಣ ಈಗ ಪ್ರಾಕೃತಿಕ ಸೊಬಗಿನಿಂದಾಗಿ ವಿಶ್ವ ಮಟ್ಟದ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿದೆ. ಆದರೆ, ಇಲ್ಲಿನ ಗುಹೆಗಳಿಗೆ ಮತ್ತು ದೇವಾಲಯಗಳಿಗೆ ನಂಟು ಬೆಸೆದುಕೊಂಡಿತ್ತು. ತಪಸ್ಸು ಮಾಡಲು ಋಷಿಮುನಿಗಳು ಗೋಕರ್ಣವನ್ನೇ ಆಯ್ಕೆ ಮಾಡಿಕೊಂಡಿದ್ದು ಹೆಚ್ಚು ಎಂದು ಇತಿಹಾಸಕಾರರು ಪ್ರತಿಪಾದಿಸುತ್ತಾರೆ.

‘ಗೋಕರ್ಣದ ಗುಹೆಗಳು ಮಾನವ ನಿರ್ಮಿತವಂತೂ ಅಲ್ಲ. ಇವು ನೈಸರ್ಗಿಕವಾಗಿ ರಚನೆಯಾದ ತಾಣಗಳು. ಈವರೆಗಿನ ಯಾವುದೇ ಶಿಲಾಶಾಸನಗಳಲ್ಲಿ ಗುಹೆಗಳ ಬಗ್ಗೆ ಉಲ್ಲೇಖವಿಲ್ಲ. ಈ ಕಾರಣದಿಂದಲೇ ಇವುಗಳ ಹಿನ್ನೆಲೆಯ ಕುರಿತಾಗಿ ಸಂಶೋಧನೆಗಳು ನಡೆದಿಲ್ಲ. ಆದರೆ, ಸುಮಾರು ಎಂಟು ಸಾವಿರ ವರ್ಷಗಳಷ್ಟು ಹಳೆಯ ರಚನೆ ಆಗಿರಬಹುದು ಎಂಬ ಊಹೆಯಿದೆ. ಪುರಾಣ ಸ್ಥಳವಾಗಿರುವ ಇಲ್ಲಿ ಋಷಿಮುನಿಗಳು ತಪಸ್ಸನ್ನು ಆಚರಿಸಲು ಗುಹೆಗಳನ್ನು ಆಶ್ರಯಿಸುತ್ತಿದ್ದರು ಎಂಬುದನ್ನು ಅನೇಕ ಪೌರಾಣಿಕ ಕಥೆಗಳನ್ನು ಆಧಾರವಾಗಿಟ್ಟುಕೊಂಡು ಹೇಳಬಹುದು’ ಎನ್ನುತ್ತಾರೆ ಇತಿಹಾಸ ಸಂಶೋಧಕ ಲಕ್ಷ್ಮೀಶ ಹೆಗಡೆ ಸೋಂದಾ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.