ಇದು ಹತ್ತು ವರ್ಷಗಳ ಹಿಂದಿನ ಮಾತು. ಶಂಕರ್ ಲಾಲ್ ಗಾರ್ಗ್ ರಸಾಯನ ಶಾಸ್ತ್ರದ ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತರಾದರು. ಆಗ ಅವರಿಗೆ ಕೈತುಂಬ ನಿವೃತ್ತಿ ಪರಿಹಾರ ಸಿಕ್ಕಿತು. ಅಲ್ಲದೆ ಪ್ರತಿತಿಂಗಳೂ ಕೈತುಂಬಾ ನಿವೃತ್ತಿ ವೇತನ. ಅವರು ತಮ್ಮ ಆಕರ್ಷಕ ಶೈಲಿಯ ಬೋಧನೆಯಿಂದಾಗಿ ವಿದ್ಯಾರ್ಥಿ ವಲಯದಲ್ಲಿ ಒಳ್ಳೆಯ ಹೆಸರು ಗಳಿಸಿದ್ದರು. ಹೀಗಾಗಿ ತಾವು ಗಳಿಸಿದ ಹಣದಿಂದ ಕಾಲೇಜು ಸ್ಥಾಪಿಸಲು ಮಧ್ಯಪ್ರದೇಶದ ಇಂದೋರ್ ಬಳಿ 22 ಎಕರೆ ಬಂಜರುಗುಡ್ಡವನ್ನು ಖರೀದಿಸಿದರು. ಯೋಜನೆ ತಯಾರಿಸುವಾಗ ಅವರಿಗನ್ನಿಸಿತು, ಕಾಲೇಜು ತೆರೆದರೆ ಒಂದಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾದೀತು. ಮತ್ತು ಅದರಿಂದ ಸ್ವಲ್ಪ ಹಣ ಸಂಪಾದನೆಯೂ ಆಗಬಹುದು. ಆದರೆ ಅದು ನಾನು ಸಮಾಜಕ್ಕೆ ನೀಡುವ ಕೊಡುಗೆ ಆಗುವುದೇ ಎಂಬ ಆಲೋಚನೆ ಮನದಲ್ಲಿ ಸುಳಿದಾಡಿತು. ಅದಕ್ಕಾಗಿ ಏನು ಮಾಡಬೇಕು ಎಂದು ಯೋಚಿಸಿ, ಆ ಬರಡುಗುಡ್ಡದಲ್ಲಿ ಕಾಡನ್ನೇಕೆ ಬೆಳೆಸಬಾರದು ಎಂದು ಅಂದುಕೊಂಡರು.
ಸರಿ, ಬೆಂಗಾಡಾಗಿದ್ದ ಆ ಸ್ಥಳದಲ್ಲಿ ಕಾಡು ಬೆಳೆಸುವುದೇ ಉತ್ತಮ. ಇದರಿಂದ ಪರಿಸರ ಸಂರಕ್ಷಣೆಗೆ ಅಲ್ಪ ಕೊಡುಗೆಯಾದಂತೆ ಆಗುವುದು ಎಂದು ನಿರ್ಧರಿಸಿದರು. ಆ ಬೆಟ್ಟದಲ್ಲಿದ್ದ ಕಲ್ಲುಗಳನ್ನೆಲ್ಲಾ ಆರಿಸಿ ತೆಗೆದು ಅದನ್ನೊಂದು ಕಡೆ ಸಂಗ್ರಹಿಸುವ ಕಾರ್ಯ ನಡೆಸಿದರು. ಎಷ್ಟು ಕಲ್ಲುಗಳನ್ನು ತೆಗೆಸಿದರೂ ಮುಗಿಯದೇ ಇದ್ದಾಗ, ಇವರ ಈ ಹುಚ್ಚು ಸಾಹಸವನ್ನು ಜನ ಗೇಲಿ ಮಾಡಲಾರಂಭಿಸಿದರು. ಸುತ್ತಮುತ್ತಲಿನ ರೈತರು ‘ಈ ಒಣಭೂಮಿಯಲ್ಲಿ ಹುಲ್ಲುಕಡ್ಡಿಯೂ ಬೆಳೆಯುವುದಿಲ್ಲ, ನೀವೇಕೆ ಇಷ್ಟು ಪರಿಶ್ರಮ ಪಡುತ್ತೀರಿ? ಹಣ ಜಾಸ್ತಿಯಾಗಿದೆಯೇ?’ ಎಂದು ಮೂದಲಿಸಿ, ಉತ್ಸಾಹಕ್ಕೆ ತಣ್ಣೀರೆರೆಚುವ ಕೆಲಸ ಮಾಡಿದರು. ಆದರೆ ಅದ್ಯಾವುದಕ್ಕೂ ಗಮನಕೊಡದ ಗಾರ್ಗ್ ಅವರ ನಿರ್ಧಾರ ಅಚಲವಾಗಿತ್ತು. ಅಲ್ಲಿ ಸಹಜ ಕೃಷಿ ಪದ್ಧತಿಯಲ್ಲಿ ಗಿಡಗಳನ್ನು ಬೆಳೆಸಲು ಮುಂದಾದರು. ಅದಕ್ಕೆ ನೀರಿನ ವ್ಯವಸ್ಥೆಗಾಗಿ ಬೆಟ್ಟದ ತುದಿಯಲ್ಲಿ ವಿಶಾಲವಾದ ಕೃತಕ ಕೆರೆ ನಿರ್ಮಾಣ ಮಾಡಿದರು. ಅದಕ್ಕೆ ನೀರನ್ನು ಬೆಟ್ಟದ ಬುಡದಲ್ಲಿದ್ದ ರೈತರ ಬಾವಿಗಳಿಂದ ಹಣ ಕೊಟ್ಟು ಖರೀದಿಸಿ ನೀರನ್ನು ಕೆರೆಗೆ ಪಂಪ್ ಮಾಡಲು ಪ್ರಾರಂಭಿಸಿದರು. ಇಂದಿಗೂ ಇದು ನಡೆಯುತ್ತಲೇ ಇದೆ. ಆ ಕೆರೆ ಗಿಡಗಳಿಗೆ ನೀರು ಉಣಿಸುತ್ತಿದೆ. ಆ ನೀರಿನಲ್ಲಿ ಮೀನು ಸಾಕಣೆ ಕೂಡ ಮಾಡಲಾಗುತ್ತಿದೆ.
ಇಂದೋರ್‌ನಿಂದ 40 ಕಿಲೋಮೀಟರ್ ದೂರದಲ್ಲಿರುವ ಈ ಗುಡ್ಡದಲ್ಲಿ ಐದಾರು ಇಂಚು ಮಾತ್ರ ಅಗೆಯಲು ಸಾಧ್ಯವಾಗುತ್ತಿತ್ತು. ಗಾರ್ಗ್ ಅವರು ತಮ್ಮ ಪ್ರಯತ್ನದಿಂದ ವಿಮುಖರಾಗಲಿಲ್ಲ. ತಾವು ತಂದ ಗಿಡಗಳನ್ನು ನೆಟ್ಟು, ಪ್ರತಿ ದಿನವೂ ನೀರುಣಿಸಿದಾಗ ಅವು ತಂತಾನೆ ಚಿಗುರಲು ಮತ್ತು ಬೆಳೆಯಲು ಪ್ರಾರಂಭಿಸಿದವು. ಗಿಡ ಸತ್ತರೆ ಅದೇ ಜಾಗದಲ್ಲಿ ಮತ್ತೊಂದು ಗಿಡ ನೆಟ್ಟು ಬೆಳೆಸಿದರು. ಕೆಲವೇ ವರ್ಷಗಳಲ್ಲಿ ನಳನಳಿಸುವ ಹಚ್ಚ ಹಸಿರು ಅವರ ಉತ್ಸಾಹಕ್ಕೆ ಇಂಬುಕೊಟ್ಟಿತು.
ಇಂದು ಆ ಬೆಟ್ಟದಲ್ಲಿ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಗಿಡಮರಗಳು ಬೃಹದಾಕಾರವಾಗಿ ಬೆಳೆದಿವೆ. ಗುಡ್ಡದ ಮೇಲೇರಿ ಒಳ ಹೋದಂತೆಲ್ಲಾ, ದಟ್ಟಾರಣ್ಯದಲ್ಲಿ ಸಂಚರಿಸುತ್ತಿದ್ದೇವೆಯೋ ಎಂಬ ಭಾವ ಮೂಡುತ್ತದೆ. ಈ ಸ್ಥಳದಲ್ಲಿ ಕಾಡು ಬೆಳೆಸಲು ಸಾಧ್ಯವೆ? ಎಂದು ನಗುತ್ತಿದ್ದವರೇ ಇಂದು ಕೊಂಡಾಡುತ್ತಿದ್ದಾರೆ.
ತಮ್ಮ ಈ ವನಸಂಪತ್ತಿಗೆ ಅವರು ‘ಕೇಶರ್ ಪರ್ವತ್’ ಎಂದು ಹೆಸರಿಟ್ಟಿದ್ದಾರೆ. ಹೀಗೆ ಹೆಸರಿಡುವುದಕ್ಕೆ ಕಾರಣವೂ ಇದೆ. ಕಾಶ್ಮೀರದಲ್ಲಿ ಮಾತ್ರ ಬೆಳೆಯುವ ಕೇಸರಿಯ ಗಿಡಗಳನ್ನು ತಂದು ಇಲ್ಲಿ ಸಹಜ ಕೃಷಿಯಲ್ಲಿ ಬೆಳೆಯಲಾಗುತ್ತಿದೆ. 43 ಡಿಗ್ರಿ ಉಷ್ಣಾಂಶದಲ್ಲಿಯೂ ಕೇಸರಿ ಬೆಳೆ ಬೆಳೆಯುತ್ತಿರುವ ಗಾರ್ಗ್ ಅವರ ಸಾಹಸವನ್ನು ಮೆಚ್ಚಲೇಬೇಕು. ಇಲ್ಲಿರುವ ಕೆಲ ಅಪರೂಪದ ಗಿಡ ಮರಗಳನ್ನು ನೋಡುತ್ತಿದ್ದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಇಟಲಿಯ ಆಲಿವ್ ಮರಗಳು, ಮರುಭೂಮಿಯಲ್ಲಿ ಬೆಳೆಯುವ ಮೆಕ್ಸಿಕೊ ಖರ್ಜೂರದ ಮರಗಳು, ನೇಪಾಳದ ರುದ್ರಾಕ್ಷಿ, ಮಲೆನಾಡಿನ ಏಲಕ್ಕಿ, ಲೀಚ್, ಆಫ್ರಿಕಾ ದೇಶದ ಟುಲಿಪ್, ಮಾವು, ಬೇವು, ಪೇರಲೆ, ಥಾಯ್ಲೆಂಡ್‌ನ ಡ್ರಾಗನ್ ಫ್ರುಟ್, ಶ್ರೀಗಂಧ, ಮಹಾಗನಿ, ದೇವದಾರು, ಪೈನ್, ತೆಂಗು, ಬಾಳೆ, ಸಿಲ್ವರ್ ಓಕ್ ಮರಗಳು ಇಲ್ಲಿವೆ.
ಜೊತೆಗೆ ವಿವಿಧ ಬಗೆಯ ಸುವಾಸನಾಭರಿತ ಹೂಗಳ ಬಳ್ಳಿಗಳು, ಗಿಡಗಳು ಮುಂತಾದ ಐದುನೂರಕ್ಕೂ ಹೆಚ್ಚು ವಿವಿಧ ತಳಿಯ ಮರಗಿಡಗಳನ್ನು ಇಲ್ಲಿ ಕಾಣಬಹುದು. ಇದರ ಜೊತೆಗೆ ವೈವಿಧ್ಯಮಯ ಹಣ್ಣು ಮತ್ತು ಹೂವಿನ ಗಿಡಗಳು ಬೀಸುವ ತಂಗಾಳಿಗೆ ತೊನೆಯುತ್ತಾ ಭೇಟಿ ನೀಡುವ ಪರಿಸರ ಪ್ರಿಯರನ್ನು ಸ್ವಾಗತಿಸುತ್ತವೆ. ಬೆಂಗಾಡಾಗಿದ್ದ ಈ ಸ್ಥಳವೀಗ ತಂಗಾಳಿ ಬೀಸುವ, ಸುಡುಬೇಸಿಗೆಯಲ್ಲಿ ನೆರಳು ನೀಡುವ ಸ್ಥಳವಾಗಿ ಮಾರ್ಪಟ್ಟು, ಪಟ್ಟಣದ ಬವಣೆಯಿಂದ ಕೆಲಕಾಲ ಇಲ್ಲಿ ಕಾಲ ಕಳೆಯಲು ವಿಶ್ರಾಂತಿ ಸ್ಥಳವಾಗಿ ಮಾರ್ಪಟ್ಟಿದೆ.
ಈ ದಟ್ಟಾರಣ್ಯದಲ್ಲಿ ಸುಮಾರು ಮೂವತ್ತು ಜಾತಿಯ ಹಕ್ಕಿಗಳು, ಇಪ್ಪತ್ತೈದು ವಿವಿಧ ರೀತಿಯ ಚಿಟ್ಟೆಗಳು, ನರಿಗಳು, ಮೊಲಗಳು, ಕಾಡು ಹಂದಿಗಳು ಮತ್ತು ಹೈನಾಗಳು ಇವೆ. ಇಡೀ ಅರಣ್ಯವನ್ನು ಸ್ವಚ್ಛವಾಗಿ ಇಡಲಾಗಿದ್ದು, ‘ಪರಿಸರ ರಕ್ಷಿಸಿ, ಭೂಮಿ ಉಳಿಸಿ’ ಘೋಷಣೆಯ ಅಡಿಯಲ್ಲಿ ಪ್ರತಿವರ್ಷ ಹತ್ತು ಸಾವಿರ ಗಿಡಗಳನ್ನು ನೆಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.
ಇಲ್ಲಿಗೆ ಭೇಟಿ ನೀಡುವ ಶಾಲಾ–ಕಾಲೇಜು ವಿದ್ಯಾರ್ಥಿಗಳಿಗೆ ಮರಗಿಡಗಳನ್ನು ಪರಿಚಯಿಸಿ, ಪ್ರತಿಯೊಬ್ಬರೂ ತಮ್ಮ ಜೀವಿತಾವಧಿಯಲ್ಲಿ ಒಂದಾದರೂ ಗಿಡ ನೆಟ್ಟು ಬೆಳೆಸಲು ಪ್ರೋತ್ಸಾಹಿಸಲಾಗುತ್ತದೆ. ಈ ಸುಂದರ ಶಾಂತ ವಾತಾವರಣದಲ್ಲಿ ಧ್ಯಾನ ಮಂದಿರವಿದೆ. ಅಲ್ಲಿ ಧ್ಯಾನ ಮಾಡಲು ಅನುಕೂಲ ಕಲ್ಪಿಸಲಾಗಿದೆ. ಮಕ್ಕಳಿಗಾಗಿ ಕ್ರಿಕೆಟ್ ಮೈದಾನವಿದೆ. ಈ ಮಹತ್ಕಾರ್ಯದಲ್ಲಿ ಭಾಗವಹಿಸಲಿಚ್ಛಿಸುವವರಿಗೆ ಒಂದು ಗಿಡ ನೆಟ್ಟು ಪೋಷಿಸಲು ಅವಕಾಶವಿದೆ. ಅದಕ್ಕಾಗಿ ಅಲ್ಪ ಶುಲ್ಕವನ್ನು ಪಡೆದು ಅಂತಹ ದಾನಿಗಳ ಹೆಸರಿನಲ್ಲಿ ಒಂದು ಮರವನ್ನು ಬೆಳೆಸಲಾಗುವುದು. ಇದಲ್ಲದೆ ದಾನಿಗಳು ಪ್ರತಿಷ್ಠಾನಕ್ಕೆ ಧನಸಹಾಯ ಮಾಡಬಹುದು.
‘ಕೇಶರ್ ಪರ್ವತ’ದಲ್ಲಿ ಬಿಡುವ ಹಣ್ಣುಗಳನ್ನು ಉಚಿತವಾಗಿ ತೃಪ್ತಿ ಆಗುವಷ್ಟು ತಿನ್ನಬಹುದು. ಅನುಮತಿ ಪಡೆದು ಮನೆಗೂ ಒಯ್ಯಬಹುದು. ಪ್ರಕೃತಿ ನೀಡಿರುವುದನ್ನು ಜನರು ಉಪಯೋಗಿಸಿದರೆ ತಪ್ಪೇನು? ಎಂದು ಗಾರ್ಗ್ ಪ್ರಶ್ನಿಸುತ್ತಾರೆ. ಆದಾಗ್ಯೂ ಅಲ್ಲಿ ಉಳಿಯುವ ಹಣ್ಣುಗಳು ಬಿದ್ದು ಮಣ್ಣಿನೊಡನೆ ಬೆರೆತು ಗೊಬ್ಬರವಾಗುತ್ತವೆ ಎಂಬ ಸಾರ್ಥಕ ಭಾವ ಅವರದ್ದು. ಇಲ್ಲಿಗೆ ಅಬ್ದುಲ್ ಕಲಾಂ ಸೇರಿ ಅನೇಕ ಗಣ್ಯಾತಿಗಣ್ಯರು ಭೇಟಿ ನೀಡಿ ಶ್ಲಾಘಿಸಿದ್ದಾರೆ. ಸಸ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಇದೊಂದು ಸಂಶೋಧನಾ ಕೇಂದ್ರವಾಗಿ ರೂಪುಗೊಂಡಿದೆ.
ಇಂತಹ ಮಹಾನ್ ಸಾಧಕನಿಗೆ ಶಿವಮೊಗ್ಗದ ಶ್ರೀ ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಇತ್ತೀಚೆಗೆ 2025 ನೇ ಸಾಲಿನ ‘ಶ್ರೀ ದೊಡ್ಡಮ್ಮ ದೇವಿ ಅನುಗ್ರಹ ರಾಷ್ಟ್ರೀಯ ಪ್ರಶಸ್ತಿ’ ಯನ್ನು ಒಂದು ಲಕ್ಷ ರೂಪಾಯಿ ನಗದು ಸಹಿತ ನೀಡಿ ಗೌರವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.