
ಧ್ಯಾನ ( ಸಾಂಕೇತಿಕ ಚಿತ್ರ)
ಧ್ಯಾನ ಮಾಡುವಾಗ ಸಾಧ್ಯವಾದಷ್ಟೂ ಯಾವ ಶಬ್ದವೂ ಇಲ್ಲದಂತೆ ನೋಡಿಕೊಳ್ಳಿ. ಸಾಧ್ಯವಾಗದಿದ್ದರೆ, ಅದಕ್ಕಾಗಿ ದುಃಖಿಸಬೇಡಿ. ಆದರೆ ನೋಡಿ, ನೀವು ಬಸ್ಸಿನಲ್ಲಿ ಹೋಗುತ್ತಿದ್ದಾಗ ಅಥವಾ ಕಾರಿನಲ್ಲಿ ಹೋಗುತ್ತಿದ್ದಾಗ, ಹೇಗೋ ನಿದ್ದೆಯಲ್ಲಿ ಜಾರುತ್ತೀರಿ. ವಿಮಾನದಲ್ಲಿ ನಿಮ್ಮ ಸುತ್ತಲೂ ಶಬ್ದಗಳು ಇದ್ದರೂ ನಿದ್ದೆ ಮಾಡುತ್ತೀರಿ. ನಿಮ್ಮ ಮನೆ ಮಾರುಕಟ್ಟೆಯ ಬದಿಯಲ್ಲಿದ್ದರೂ ನಿದ್ದೆ ಮಾಡುತ್ತೀರಿ. ನೀವು ನಿದ್ದೆ ಮಾಡಬಹುದಾದ ಪರಿಸ್ಥಿತಿಗಳಲ್ಲಿ, ನೀವು ಧ್ಯಾನವನ್ನೂ ಮಾಡಬಹುದು. ಆಲೋಚಿಸುತ್ತಾ ಕೂರುವ ಸಮಯಗಳಲ್ಲೂ ನೀವು ಧ್ಯಾನ ಮಾಡಬಹುದು. ಧ್ಯಾನದೊಳಗೆ ಆಳವಾಗಿ ಇಳಿಯುತ್ತಿರುತ್ತೀರಿ. ಸಾಮೂಹಿಕ ಧ್ಯಾನದಲ್ಲಿ ಕುಳಿತಿರುತ್ತೀರಿ. ದಿಢೀರೆಂದು ಯಾರೋ ಕೆಮ್ಮುತ್ತಾರೆ. “ಅಯ್ಯೋ ದೇವರೆ! ನಾನು ಇಲ್ಲಿ ಧ್ಯಾನ ಮಾಡಲು ಬಂದರೆ, ಈ ವ್ಯಕ್ತಿ ನನ್ನ ಪಕ್ಕದಲ್ಲಿ ಕುಳಿತು ನನ್ನ ಧ್ಯಾನವನ್ನು ಕೆಡಿಸುತ್ತಿದ್ದಾರೆ. ಆ ವ್ಯಕ್ತಿ ನನ್ನ ಪಕ್ಕದಲ್ಲಿ ಕುಳಿತು ಗೊರಕೆ ಹೊಡೆಯುತ್ತಿದ್ದಾರೆ. ಅಯ್ಯೋ ದೇವರೆ!" ಎಂದು ಕುಳಿತು ಹಲುಬುವ ಬದಲಿಗೆ, ಅವರನ್ನು ಮೆಲ್ಲನೆ ಎಬ್ಬಿಸಿ! ಕೋಣೆಯ ಒಂದು ಕಡೆ ಗೊರಕೆ ಹೊಡೆಯುವವರಿಗೆ, ಮತ್ತೊಂದು ಕಡೆ ಕೆಮ್ಮುವವರಿಗೆ ಮೀಸಲಿಟ್ಟರೆ?! ಆಗ ಈ ಸಮಸ್ಯೆಯನ್ನು ನಿವಾರಿಸಬಹುದೋ ಏನೋ!
ಸರಿ, ನಿಮ್ಮ ಮನೆಯವರನ್ನು ಅಥವಾ ಧ್ಯಾನದ ಕಕ್ಷೆಯಲ್ಲಿರುವ ನಿಮ್ಮ ನೆರೆಹೊರೆಯವರನ್ನು ಹೇಗೋ ನಿಭಾಯಿಸಿದ ನಂತರ ಅಥವಾ ಆ ಪರಿಸ್ಥಿತಿಯನ್ನು ಒಪ್ಪಿದ ನಂತರ ಧ್ಯಾನಕ್ಕೆ ಕುಳಿತುಕೊಂಡಿರಿ. "ಓ ನಾನು ಧ್ಯಾನ ಮಾಡುತ್ತಿದ್ದೇನೆ, ಧ್ಯಾನ ಮಾಡುತ್ತಿದ್ದೇನೆ!" ಎಂದು ಮುಖವನ್ನು, ದೇಹವನ್ನು ಕಿವುಚಿಕೊಂಡು ಕುಳಿತು, "ಯಾವ ಆಲೋಚನೆಯೂ ಬರಬಾರದು. ಆಲೋಚನೆ, ಹೊರಟುಹೋಗು!!" ಎಂದು ಸೊಳ್ಳೆಯನ್ನು ಓಡಿಸಿದಂತೆ ಆಲೋಚನೆಗಳನ್ನು ಓಡಿಸಲು ಯತ್ನಿಸುವುದು!! ಇದು ಯಾವುದೂ ನಡೆಯುವುದಿಲ್ಲ! ಆಲೋಚನೆಗಳೂ ಸಹ ಧ್ಯಾನದ ಒಂದು ಭಾಗವೇ. ಆಲೋಚನೆಗಳನ್ನು ಹೊಡೆದೋಡಿಸುವ ಯತ್ನ ಬೇಡ! ಧ್ಯಾನ ಮಾಡುತ್ತಿರುವಾಗ ಏಳುವ ಆಲೋಚನೆಗಳನ್ನು ಹೇಗೆ ನಿಭಾಯಿಸುವುದು? ಆಲೋಚನೆಗಳ ಮೇಲೆ ಗಮನವನ್ನಿಡುವುದು ಬೇಡ, ಮನಸ್ಸಿನ ಮೇಲೆ ಯಾವ ಒತ್ತಡವನ್ನೂ ಹೇರುವುದು ಬೇಡ. ಧ್ಯಾನ ಘಟಿಸುವಂತಹ ಸ್ಥಿತಿಯನ್ನು ಸೃಷ್ಟಿಸಬೇಕು. ಅದಕ್ಕಾಗಿ ಸುಖವಾಗಿ ಕುಳಿತುಕೊಳ್ಳಬೇಕು, ಕಣ್ಣು ಮುಚ್ಚಿ ವಿಶ್ರಮಿಸಬೇಕು, ಇಡೀ ದೇಹವನ್ನು ಸಡಿಲಬಿಟ್ಟು ವಿಶ್ರಮಿಸಬೇಕು. ಏನೋ ಒಂದನ್ನು ಕಾಣುವ ಯತ್ನವನ್ನು ಧ್ಯಾನ ಎಂದು ಕೆಲವರು ಭಾವಿಸಿದ್ದಾರೆ. ಇಲ್ಲ! ಏಕೆಂದರೆ, ಏನನ್ನೋ ನೋಡುವ ಯತ್ನದಲ್ಲಿ ಬಹಳ ಶ್ರಮವನ್ನು ಮಾಡುತ್ತಿರುವಿರಿ. ಧ್ಯಾನದೊಳಗೆ ಆಳವಾಗಿ ಹೊಕ್ಕಲು ಆ ಶ್ರಮವೇ ದೊಡ್ಡ ಅಡಚಣೆಯಾಗುತ್ತದೆ. ಧ್ಯಾನ ಮಾಡುವ ಕುಶಲತೆಯೆಂದರೆ, "ನಾನು ಏನೂ ಅಲ್ಲ! ನನಗೆ ಏನೂ ಬೇಡ! ನಾನು ಏನನ್ನೂ ಈ ಸಮಯದಲ್ಲಿ ಬಯಸುವುದಿಲ್ಲ!". ಈ ಮೂರು ಸುವರ್ಣ ನಿಯಮಗಳು ಧ್ಯಾನಕ್ಕೆ ಅವಶ್ಯಕ.
ಧ್ಯಾನವೆಂದರೆ ಏಕಾಗ್ರತೆಯಲ್ಲ! ಧ್ಯಾನವೆಂದರೆ ಏಕಾಗ್ರತೆ ಎಂದು ಬಹಳ ಜನರು ಭಾವಿಸಿದ್ದಾರೆ. ಧ್ಯಾನವೆಂದರೆ ಆಳವಾದ ವಿಶ್ರಾಂತಿ. ಅನೇಕ ಸಲ ಇದು ನಮಗೆ ಘಟಿಸುತ್ತಿದೆ. ಆದರೆ ಇದು ಅಪ್ರಜ್ಞಾಪೂರ್ವಕವಾಗಿ ನಡೆಯುತ್ತಿದೆ. ಆಗೊಮ್ಮೆ ಈಗೊಮ್ಮೆ ನೀವು ಆನಂದದ, ತೃಪ್ತಿಯ ಇಣುಕು ನೋಟವನ್ನು ಪಡೆದೇ ಪಡೆಯುತ್ತೀರಿ. ಆಗ ಧ್ಯಾನದ ಆಳವನ್ನು ಸ್ಪರ್ಶಿಸಿದ್ದೀರಿ ಎಂದಾಯಿತು. ಧ್ಯಾನವೆಂದರೆ ಆಳವಾದ ವಿಶ್ರಾಂತಿ. ಪ್ರತಿನಿತ್ಯ ಧ್ಯಾನ ಮಾಡಬೇಕು. ಸೂರ್ಯೋದಯ, ಸೂರ್ಯಾಸ್ತದ ಸಮಯಗಳು ಧ್ಯಾನಕ್ಕೆ ಪ್ರಶಸ್ತವಾದ ಸಮಯ. ಸೂರ್ಯೋದಯ ಮತ್ತು ಸೂರ್ಯಾಸ್ತವು ಪ್ರಕೃತಿಯಲ್ಲಿ ನಡೆಯುವ ದೊಡ್ಡ ಬದಲಾವಣೆ. ಹಕ್ಕಿಗಳು ಮರಳಿ ತಮ್ಮ ಗೂಡುಗಳಿಗೆ ತೆರಳುತ್ತಿರುತ್ತವೆ ಅಥವಾ ತಮ್ಮ ಗೂಡುಗಳಿಂದ ಹೊರಬರುತ್ತಿರುತ್ತವೆ. ಆ ಪರಿಸ್ಥಿತಿಯಲ್ಲಿ ನಮ್ಮ ಚೇತನದಲ್ಲೂ; ನಮ್ಮೊಳಗೂ ಏನೋ ಘಟಿಸುತ್ತಿರುತ್ತದೆ. ಆದ್ದರಿಂದಲೇ ಈ ಎರಡು ಸಮಯಗಳು ಧ್ಯಾನಕ್ಕೆ ಬಲು ಉತ್ತಮ ಎಂದು ಹಿರಿಯರು ಹೇಳಿದರು. ಪ್ರತಿದಿನ ನೀವು ಮೂರು ಸಲ ಊಟ ಮಾಡುತ್ತೀರಲ್ಲವೆ? ಒಂದೇ ಸಲ ತಿನ್ನುತ್ತೀರೆ? ಇಲ್ಲ! ಮೂರು ಸಲ ಊಟ ಮತ್ತು ಅದರೊಡನೆ ಮಧ್ಯದಲ್ಲಿ ಏನಾದರೊಂದು ಕುರುಕಲು ತಿಂಡಿಯನ್ನೂ ತಿನ್ನುತ್ತೀರಲ್ಲವೆ?! ಧ್ಯಾನವು ನಿಮ್ಮ ಆತ್ಮಕ್ಕೆ ಆಹಾರ. ಆದ್ದರಿಂದ ದಿನಕ್ಕೆರಡು ಸಲ ಖಂಡಿತ ಧ್ಯಾನ ಮಾಡಬೇಕು.
ಇದೇ ತಿಂಗಳ 21ರಂದು ವಿಶ್ವ ಧ್ಯಾನ ದಿನ. ಗುರುದೇವ ಶ್ರೀ ಶ್ರೀ ರವಿ ಶಂಕರರ ಮಾರ್ಗದರ್ಶನದಲ್ಲಿ ನಡೆಯು ವಿಶ್ವದ ಅತಿದೊಡ್ಡ ಧ್ಯಾನದ ಕಾರ್ಯಕ್ರಮ ನಡೆಯಲಿದೆ. ಗುರುದೇವರ ಅಧಿಕೃತ ಯೂಟ್ಯೂಬ್ ವಾಹಿನಿಯ ಮೂಲಕ ನೀವೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.