
ಶಿಲಾಯುಗದ ಸಂಸ್ಕೃತಿಯ ಕುರುಹುಗಳನ್ನು ಹೊತ್ತ ಹಿರೇಬೆಣಕಲ್‌ನ ಚಿತ್ರಗಳು ಬೆಂಗಳೂರಿನ ಕಸ್ತೂರಬಾ ರಸ್ತೆಯಲ್ಲಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶಿತವಾಗುತ್ತಿವೆ. ಇದನ್ನು ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯೋಜಿಸಿದ್ದು ಸೆಪ್ಟೆಂಬರ್ ಕೊನೆಯವರೆಗೂ ನೋಡಲು ಲಭ್ಯವಿದೆ...
ಸಹಯೋಗ ಸೃಷ್ಟಿ ಎನ್ನುವ ಜಗತ್ತು ಕಲಾವಿದರಿಗೆ ಹೊಸ ಸಾಹಸಗಳಿಗೆ ಕೈ ಹಾಕಲು ಪ್ರೋತ್ಸಾಹ ನೀಡುತ್ತಿದೆ. ನಮ್ಮಲ್ಲಿ ಛಾಯಾಚಿತ್ರಗ್ರಹಣ ವಿಭಾಗದಲ್ಲಿ ಸ್ವಲ್ಪ ವಿರಳವೇ ಆದರೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅದ್ಭುತ ಕಾರ್ಯಗಳು ನಡೆದು ಉತ್ತಮ ಗುಣಮಟ್ಟದ ಫಲಿತಾಂಶಗಳು ಕಾಣಸಿಗುತ್ತಿವೆ. ಕಳೆದೆರಡು ವರ್ಷಗಳಿಂದ ‘ಪ್ರಾಗೈತಿಹಾಸ’ ಮತ್ತು ಛಾಯಾಚಿತ್ರಗ್ರಹಣವನ್ನು ಒಟ್ಟಿಗೆ ಸೇರಿಸುವ ಪ್ರಯೋಗದಲ್ಲಿ ಅಭ್ಯಾಸ ಮಾಡುತ್ತಿದ್ದ ನನಗೆ ಹಿರೇಬೆಣಕಲ್ ಮೇಲೆ ಛಾಯಾಚಿತ್ರ ಪ್ರದರ್ಶನಕ್ಕೆ ಪುರಾತತ್ತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಕೇಳಿದಾಗ ಬಹಳ ಸಂತೋಷದಿಂದಲೇ ಒಪ್ಪಿಕೊಂಡೆ.
ವಿಶ್ವ ಪಾರಂಪರಿಕ ತಾತ್ಕಾಲಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ, ಕರ್ನಾಟಕದ ಏಳು ಅದ್ಭುತಗಳಲ್ಲಿ ಒಂದು ಎಂದು ಪ್ರಸಿದ್ಧಿಗೊಂಡ ಹಿರೇಬೆಣಕಲ್ ಗಂಗಾವತಿಗೆ ಹತ್ತು ಕಿಲೋಮೀಟರ್ ದೂರದಲ್ಲಿದೆ. ದೇಶದಲ್ಲಿಯೇ ಅತಿ ಹೆಚ್ಚು ಬೃಹತ್ ಶಿಲಾಯುಗ ಸಂಸ್ಕೃತಿಯ ಕುರುಹುಗಳನ್ನು ಇನ್ನೂ ಉಳಿಸಿಕೊಂಡಿರುವ ಅತಿ ವಿಶಿಷ್ಟ ಜಾಗ ಇದು. ಇಲ್ಲಿ ಸೂಕ್ಷ್ಮ ಶಿಲಾಯುಗದಿಂದ ಅಂದರೆ 6000 -8000 ವರ್ಷಗಳ ಹಿಂದಿನಿಂದ, ಆದಿ ಇತಿಹಾಸದವರೆಗಿನ ಅಂದರೆ 2000 ವರ್ಷಗಳ ಹಿಂದಿನ ಕುರುಹುಗಳನ್ನು ಇತಿಹಾಸ ವಿದ್ವಾಂಸರು ಪತ್ತೆ ಹಚ್ಚಿದ್ದಾರೆ. ಇಂದಿಗೂ ಗುಡ್ಡದ ತುಂಬಾ ಆಗ ಬಳಸಿದ ಮಡಿಕೆ ಚೂರುಗಳು, ಕಲ್ಲಿನ ಉಪಕರಣಗಳು, ಸಂಗೀತ ಕಲ್ಲುಗಳು, ವಾಸ್ತವ್ಯದ ಕುರುಹುಗಳು ಕಾಣಸಿಗುತ್ತವೆ. ಆದರೆ ನಮಗೆ ಇಲ್ಲಿಯವರೆಗೆ ಹೆಚ್ಚಿನ ಪರಿಚಯವಿದ್ದದ್ದು ಅಲ್ಲಿರುವ ಬೃಹದಾಕಾರದ ಕಲ್ಲಿನ ಚಪ್ಪಡಿಯ ನೂರಾರು ಗೋರಿಗಳಷ್ಟೇ. ಸೋಷಿಯಲ್ ಮೀಡಿಯಾಗಳಲ್ಲಂತೂ ಇಲ್ಲ ಸಲ್ಲದ ಸುದ್ದಿಗಳೆಲ್ಲ ಅದರ ಬಗ್ಗೆ ಹರಿದಾಡುತ್ತಿದ್ದು ಸರಿಯಾದ ಮಾಹಿತಿ ಶಾಸ್ತ್ರೀಯವಾದ ಪರಿಚಯ ಇಲ್ಲ. ಅಲ್ಲಿನ ಅತಿ ವಿಶಿಷ್ಟವಾದ ಕಲ್ಲಾಸರೆಯ ವರ್ಣಚಿತ್ರಗಳು ಸಾಮಾನ್ಯ ಜನರಿಗೆ ಪರಿಚಯವೂ ಇಲ್ಲ ಮತ್ತು ಇಪ್ಪತ್ತಕ್ಕೂ ಹೆಚ್ಚಿನ ಕಲ್ಲಾಸರೆಗಳಲ್ಲಿ ಚಿತ್ರಗಳಿರುವ ಹಿರೇಬೆಣಕಲ್ಲಿನ ಬೆಟ್ಟವನ್ನು ಸರಿಯಾಗಿ ನೋಡಲು ಕನಿಷ್ಠ ಒಂದೆರಡು ವಾರವಾದರೂ ಬೇಕು. ನನ್ನ ಹೆಚ್ಚಿನ ಆಸಕ್ತಿ ಇದ್ದುದ್ದು ಈ ಚಿತ್ರಗಳಲ್ಲಿ.
ಕೇವಲ 3-4 ದಿನಗಳಲ್ಲಿ ಒಂದು ಉತ್ತಮ ಗುಣಮಟ್ಟದ ಛಾಯಾಚಿತ್ರ ಪ್ರದರ್ಶನಕ್ಕೆ ಛಾಯಾಗ್ರಹಣ ಮಾಡುವುದು ಸುಲಭದ ಕೆಲಸವಲ್ಲ. ಮೊದಲು ಅಲ್ಲಿನ ಭೂಭಾಗದ ಅಧ್ಯಯನ ಮಾಡಿ, ಇತಿಹಾಸದ ಪರಿಚಯ ಮಾಡಿಕೊಳ್ಳಬೇಕು. ಚಿತ್ರಗಳು ಅದರ ಕಥೆಗೆ ಅರ್ಥಪೂರ್ಣವಾಗಿ ಬರಬೇಕು. ಹವಾಮಾನದ ಅಧ್ಯಯನ ಮಾಡಿ ಚಿತ್ರಗ್ರಹಣದ ದಿನಗಳನ್ನು ಗೊತ್ತು ಮಾಡಬೇಕು. ನಿಗದಿಪಡಿಸುವ ದಿನಕ್ಕೆ ಅಗತ್ಯವಾದ ಅನುಮತಿ ಪತ್ರ, ನುರಿತ ಗೈಡುಗಳು, ಛಾಯಾಗ್ರಹಣದ ಉಪಕರಣಗಳು ಇವೆಲ್ಲವುಗಳ ಪೂರ್ವ ತಯಾರಿ ಬೇಕೇ ಬೇಕು. ಇನ್ನು ನಿಗದಿಪಡಿಸಿದ ದಿನಗಳಲ್ಲಿ ಹವಾಮಾನ ಕೈಕೊಡದೆ ಛಾಯಾಗ್ರಹಣ ಮಾಡುವುದು ಮತ್ತೊಂದು ಸಾಹಸ.
ಹಿರೇಬೆಣಕಲ್ಲಿನ ಆಕರ್ಷಣಾ ಕೇಂದ್ರವಾದ ಶಿಲಾಗೋರಿಗಳ ಚಿತ್ರ ಅತಿ ಸುಲಭದಲ್ಲಿ ಆಯಿತು. ನಾನಂದುಕೊಂಡಂತೆ ಮಳೆ ಬಂದು ಆಕಾಶದಲ್ಲಿ ಅದ್ಭುತವಾದ ಮೋಡಗಳ ಅಲಂಕಾರ ತೆಗೆಯುವ ಚಿತ್ರದ ಅಮೋಘತೆಯನ್ನು ವೃದ್ಧಿಸಿದವು. ಆದರೆ ಕಲ್ಲಾಸರೆಗಳನ್ನು ಶೋಧಿಸುವುದು ಮತ್ತು ಅಲ್ಲಿನ ವರ್ಣ ಚಿತ್ರಗಳನ್ನು ಸೆರೆಹಿಡಿಯುವುದು ಸವಾಲಿನ ಕೆಲಸವಾಯಿತು. ನಮ್ಮ ಭಾರವಾದ ಕ್ಯಾಮೆರಾ ಉಪಕರಣಗಳನ್ನು ಹೊತ್ತು ಪ್ರತಿದಿನ ಅತಿ ಕಿರಿದಾದ ಮುಳ್ಳಿನಿಂದ ಕೂಡಿದ ಗುಡ್ಡದ ದಾರಿಗಳಲ್ಲಿ ನಡೆದೆವು. ಅದೆಷ್ಟೋ ಇತಿಹಾಸಕಾರರ ಶೋಧನೆಗಳ ವಿವರಗಳು ನಮ್ಮ ಸಹಾಯಕ್ಕೆ ಬಂದಿದ್ದವು. ಅಲ್ಲೇ ಗವಿಗಳಲ್ಲೋ, ಮರದ ಕೆಳಗೋ ಸ್ವಲ್ಪ ವಿಶ್ರಾಂತಿ, ಅಲ್ಲೇ ಊಟ. ನೀರನ್ನೂ ಕೊಂಡೊಯ್ಯಬೇಕಿತ್ತು. ನಮ್ಮ ತಂಡದ ಎಲ್ಲರಿಗೂ ಒಂದೊಂದು ಜವಾಬ್ದಾರಿ ಇತ್ತು. ಮುಂದಿನ ನಾಲ್ಕು ದಿನಗಳಲ್ಲಿ ಒಟ್ಟು ಹದಿನೈದು- ಹದಿನಾರು ಕಲ್ಲಾಸರೆಗಳನ್ನು ಶೋಧಿಸಿ ಚಿತ್ರಗಳನ್ನು ತೆಗೆದೆವು. ಹಿಂದಿರುಗಿದ ಮೇಲೆ ಚಿತ್ರಗಳನ್ನು ಆರಿಸುವುದು, ಪೋಸ್ಟ್ ಪ್ರೊಸೆಸಿಂಗ್ ಮಾಡುವುದು, ಅದಕ್ಕೆ ಸರಿಯಾದ ಶೀರ್ಷಿಕೆಗಳನ್ನು ಬರೆದು ಮುದ್ರಣ ಮಾಡಿ ವಿಧಾನಸೌಧದಲ್ಲಿ ನಿಲ್ಲಿಸಿದ್ದು ಮುಂದಿನ ಸಾಹಸಗಳಾದವು.
ಇಲ್ಲಿರುವ ಕಲ್ಲಾಸರೆಗಳಲ್ಲಿ ಬರೆದ ಈ ಉರುಮಂಜಿನ ಚಿತ್ರಗಳು 2000-5000 ಸಾವಿರ ವರ್ಷಗಳ ಹಿಂದಿನದ್ದು. ಇವುಗಳನ್ನು ಮಳೆ ಬಿಸಿಲು ಅಷ್ಟಾಗಿ ಪರಿಣಾಮ ಮಾಡದ ಸಮತಟ್ಟಾದ ಕಲ್ಲಿನ ಮೇಲ್ಮೈ ಅಥವಾ ಗವಿಗಳ ಒಳಮೈಯಲ್ಲಿ ರಚಿಸಿದ್ದು ಇವುಗಳ ಫೋಟೊ ತೆಗೆದಾಗ ಸಹಜವಾಗಿಯೇ ಬೆಳಕಿನ ಅಭಾವದ ಕಾರಣ ಕೆಂಪು ವರ್ಣದ ಛಾಯೆಗಳಲ್ಲಿ ಮೂಡಿಬರುತ್ತವೆ. ಆದರೆ ಸರಿಯಾದ ಬೆಳಕಿನ ವ್ಯವಸ್ಥೆ ಮಾಡಿಕೊಂಡು ತೆಗೆದಾಗ ಅವುಗಳ ನಿಜ ವರ್ಣಗಳು ಹೊರಬಂದು ಈ ಶಿಲಾ ವರ್ಣಚಿತ್ರಗಳ ಬಣ್ಣಗಳು ಪ್ರಖರವಾಗಿ ಕಾಣುತ್ತವೆ. ಇನ್ನು ಈ ವರ್ಣಗಳಿಗೆ ಪೋಸ್ಟ್ ಪ್ರೊಸೆಸಿಂಗ್‌ನಲ್ಲಿ ಸ್ವಲ್ಪ ಹೆಚ್ಚಿನ ಶಕ್ತಿ ತುಂಬಿದಾಗ ಛಾಯಾಚಿತ್ರವು ಒಂದು ಅಮೂರ್ತ ಕಲಾಕೃತಿಯ ರೂಪ ತಳೆದು ಅತಿ ಆಕರ್ಷಕವಾಗಿ ಕಂಡುಬಂದು ಒಂದು ವಿಶಿಷ್ಟ ಅನುಭವವನ್ನು ಕೊಡುತ್ತವೆ. ಇನ್ನು ಸಾವಿರಾರು ವರ್ಷಗಳ ಹಿಂದಿನ ಆದಿಮಾನವ ರಚಿಸಿದ ಸಂಸ್ಕೃತಿಯ ಕಲೆಯು ಈ ತಂತ್ರಗಾರಿಕೆಯಲ್ಲಿ ಕಲಾಕೃತಿ ರೂಪ ತಳೆದಾಗ ಅದೊಂದು ವಿಶಿಷ್ಟವಾದ ಕಲೆ ಮತ್ತು ‘ಪ್ರಾಗೈತಿಹಾಸ’ದ ಸಮಾಗಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.