ADVERTISEMENT

‘ಹರಿಭಕ್ತಿಸಾರ’: ಬದುಕಿಗೆ ಭರವಸೆ

ಘನಶ್ಯಾಮ ಡಿ.ಎಂ.
Published 1 ಡಿಸೆಂಬರ್ 2019, 11:27 IST
Last Updated 1 ಡಿಸೆಂಬರ್ 2019, 11:27 IST
ಕನಕದಾಸ
ಕನಕದಾಸ   

‘ಏನಾಯ್ತೋ ಅದು ಆಗಿಹೋಯ್ತು. ಮುಂದೆ ಸರಿಯಾಗಿ ಇರ್ತೀಯಾ ಅಷ್ಟು ಸಾಕು. ಒಳ್ಳೆಯ ಹಾದಿ ಹಿಡಿದರೆ ಸದ್ಗತಿ ಕಟ್ಟಿಟ್ಟ ಬುತ್ತಿ’ ಎನ್ನುವುದು ಕನಕದಾಸರು ತಮ್ಮ ಕೃತಿಗಳ ಮೂಲಕ ಕೊಡುವ ಭರವಸೆ.

ಕನಕದಾಸರು ತಮ್ಮ ಇಳಿ ವಯಸ್ಸಿನಲ್ಲಿ ಬರೆದರು ಎನ್ನಲಾದ ‘ಹರಿಭಕ್ತಿದಾಸರ’ವು ದಾಸರ ಜೀವನಪ್ರೀತಿ, ಬದುಕಿನೆಡೆಗೆ ಅವರಿಗಿದ್ದ ದೃಷ್ಟಿ ಮತ್ತು ಅವರ ಪರಿಕಲ್ಪನೆಯ ದೇವರ ಕಾರುಣ್ಯವನ್ನು ಸಾರಿ ಹೇಳುವ ಕೃತಿ. ಈ ಕೃತಿಯ 61ನೇ ಪದ್ಯದಲ್ಲಿ ದಾಸರು ‘ಇಂದು ಈ ಜನ್ಮದಲಿ ನೀನೇ | ಬಂಧು ಹಿಂದಣ ಜನ್ಮದಲಿ ಬಳಿ | ಸಂದು ಮುಂದಣ ಜನ್ಮಕಧಿಪತಿಯಾಗಿ ಇರುತಿರಲು’ ಎಂದು ಉದ್ಗರಿಸುತ್ತಾರೆ.

ನಾವು ಅನುಭವಿಸುತ್ತಿರುವ ಇಂದಿನ ಈ ಕ್ಷಣಕ್ಕೆ ಎಷ್ಟೋ ಸಾವಿರ ವರ್ಷಗಳ ಪೀಠಿಕೆ ಇದೆ. ಮುಂದಿನ ಎಷ್ಟೋ ವರ್ಷಗಳಿಗೆ ಇದು ಮುನ್ನುಡಿಯೂ ಹೌದು. ನಮ್ಮ ಅನುಭವಕ್ಕೆ ದಕ್ಕುತ್ತಿರುವ ಇಂದಿನ ಈ ಕ್ಷಣಗಳನ್ನು ನಾವು ಹೇಗೆ ದಾಟುತ್ತೇವೆ ಎಂಬುದು ಹಿಂದು ಮತ್ತು ಮುಂದಿಗಿಂತಲೂ ಮುಖ್ಯ ಎನ್ನುವುದು ದಾಸರ ಭಾವ. ‘ಈ ಕ್ಷಣವನ್ನು ಉತ್ಕಟವಾಗಿ ಬದುಕಿಬಿಡು. ಮುಂದಿನದ್ದು ಅವನಿಚ್ಛೆಗೆ ಬಿಟ್ಟುಬಿಡು’ ಎನ್ನುವುದು ಅವರ ಹಿತನುಡಿ.

ADVERTISEMENT

ಹಿಂದೆ ಪಡೆದುಕೊಂಡು ಬಂದಂತೆ ಮಾತ್ರ ಇಂದು ನಡೆಯುತ್ತೆ, ಅದನ್ನು ಬದಲಿಸಲು ಆಗುವುದಿಲ್ಲ ಎನ್ನುವ ಪಲಾಯನವಾದವನ್ನು ಕನಕದಾಸರು ಒಪ್ಪುವುದಿಲ್ಲ. ‘ಪಟ್ಟವಾರಿಂದಾಯ್ತು ಧ್ರುವನಿಗೆ’ ಎಂದು ಈ ಮನೋಭಾವವನ್ನು ಪ್ರಶ್ನಿಸುತ್ತಾರೆ. ಮುಂದಿನದ್ದು ನಮ್ಮ ಕೈಲಿಲ್ಲ ಎನ್ನುವುದನ್ನೂ ಅವರು ಒಪ್ಪುವುದಿಲ್ಲ. ನಮ್ಮ ಈ ಜನ್ಮದ ಕರ್ಮಫಲಗಳನ್ನು ಬ್ರಹ್ಮ ಅವನ ಪಾಡಿಗೆ ಬರೆದುಕೊಂಡಿರಲಿ. ನಮಗೆ ‘ಕಮಲಾಸನನ ಹಂಗೇನು’ ಎನ್ನುವುದು ಅವರ ಆತ್ಮವಿಶ್ವಾಸದ ನುಡಿ. ‘ನಿನ್ನನ್ನೇ ನಂಬಿ ಬದುಕುವ ನನ್ನನ್ನು ಕಾಯಬೇಕಾದ್ದು ನಿನ್ನ ಕರ್ತವ್ಯ’ ಎಂದು ದೇವರನ್ನೂ ಎಚ್ಚರಿಸುವ ದಾಸರಾಯರು, ಭಕ್ತಿಗೆ ವಿರುದ್ಧವಾಗದಂತೆ ನನ್ನನ್ನು ಕಾಪಾಡಿಕೊಳ್ಳದಿದ್ದರೆ ‘ನೀನು ಇದ್ದುದಕೆ ಫಲವೇನು?’ ಎಂದು ಅವನನ್ನೂ ಪ್ರಶ್ನಿಸುವ ಧೈರ್ಯ ತೋರುತ್ತಾರೆ.

ದೇವರನ್ನು ಉತ್ಕಟವಾಗಿ ನಂಬಿದ, ಆ ನಂಬಿಕೆಯ ಚುಂಗು ಹಿಡಿದು ಬದುಕು ದಾಟಿದ ಆ ಹಿರೀ ಜೀವ ತನ್ನ ಆಪ್ತ ಗೆಳೆಯ ಕಾಗಿನೆಲೆಯ ಆದಿಕೇಶವನೊಡನೆ ನಡೆಸುವ ಸಂವಾದದ ದಾಖಲೆಯಾಗಿ ‘ಹರಿಭಕ್ತಿಸಾರ’ ನಮ್ಮೆದುರು ಇದೆ. ಇಷ್ಟಪಟ್ಟು ಓದುವವರೊಡನೆ ಇಂದಿಗೂ ಆ ಕಾಗಿನೆಲೆ ಆದಿಕೇಶವ ಅಷ್ಟೇ ಆಸ್ಥೆಯಿಂದ ಸಂವಾದ ಮಾಡುತ್ತಾನೆ.

ಹರಿಭಕ್ತಿಸಾರದ ಶುದ್ಧ ಪ್ರತಿ

ಹರಿಭಕ್ತಿಸಾರದ ಲಭ್ಯ ಪುಸ್ತಕಗಳಲ್ಲಿ ಅಕ್ಷರ–ವ್ಯಾಕರಣದೋಷಗಳು ಸಾಕಷ್ಟು ಉಳಿದಿವೆ. ಕೆಲವು ಪಠ್ಯಗಳಲ್ಲಿಯಂತೂ ಅರ್ಥವೇ ಅನರ್ಥವಾಗುವಂಥ ತಪ್ಪುಗಳಿವೆ. ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಹರಿಭಕ್ತಿಸಾರವನ್ನು ಹಲವರು ಶುದ್ಧಪ್ರತಿ ಎಂದು ಪರಿಗಣಿಸುತ್ತಾರೆ. ವಿದ್ವಾನ್ ಎನ್. ರಂಗನಾಥಶರ್ಮಾ ಅವರ ಗದ್ಯಾನುವಾದವೂ ಇರುವ ಈ ಪುಸ್ತಕ ಕನಕದಾಸರ ಭಾವವನ್ನು ಶಕ್ತವಾಗಿ ಹಿಡಿದಿಡುತ್ತದೆ. ಪುಸ್ತಕಕ್ಕಾಗಿhttps://bit.ly/2DzQRZg ಲಿಂಕ್ ಕ್ಲಿಕ್ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.