
ಬೆಳಗಿನ ಐದು ಗಂಟೆ. ಸಾಮಾನ್ಯವಾಗಿ ಮಾರುಕಟ್ಟೆಯ ಗದ್ದಲಕ್ಕೆ, ಬಸ್ ನಿಲ್ದಾಣದ ಕೂಗು-ಗಲಾಟೆಗೆ ಎಚ್ಚರವಾಗುವ ಯಲ್ಲಾಪುರ ಪಟ್ಟಣ ಆ ದಿನ ಬೇರೆ ರಾಗ ಹಿಡಿದಿರುತ್ತದೆ. ಮನೆಮನೆಗಳಲ್ಲಿ ಸಡಗರ, ಸಂಭ್ರಮ. ಹೆಂಗಸರು ಗಡಿಬಿಡಿಯಲ್ಲೇ ಒಲೆಗಳನ್ನು ಹಚ್ಚುತ್ತಾರೆ. ಕುರುಕು ತಿಂಡಿಗಳ ಸುವಾಸನೆ, ಬುತ್ತಿ ಕಟ್ಟುವ ಗದ್ದಲ-ಇವೆಲ್ಲವೂ ಹಬ್ಬದ ಮುನ್ಸೂಚನೆ ನೀಡುತ್ತವೆ.
ಆದರೆ ಬೆಳಿಗ್ಗೆ ಹತ್ತು ಗಂಟೆ ಹೊತ್ತಿಗೆ ಅದೇ ಪಟ್ಟಣ ಲಾಕ್‌ಡೌನ್ ಆದಂತೆ ನಿಶ್ಶಬ್ದವಾಗಿಬಿಡುತ್ತದೆ. ಅಂಗಡಿ ಮುಂಗಟ್ಟುಗಳು ಮುಚ್ಚಿ, ಮನೆಗಳಿಗೆ ಬೀಗ ಹಾಕಿ, ರಸ್ತೆಗಳಲ್ಲಿ ನರಪಿಳ್ಳೆಯೂ ಕಾಣದ ದೃಶ್ಯ ಹೊಸಬರಿಗೆ ಆಶ್ಚರ್ಯವನ್ನು ಉಂಟು ಮಾಡಬಹುದು.
ಇದು ಯಲ್ಲಾಪುರದ ಅಪರೂಪದ ಸಂಪ್ರದಾಯ–‘ಹೊರ ಮಂಗಳವಾರ’.
ಜಾತ್ರೆಗೆ ನಾಂದಿ
ಉತ್ತರ ಕನ್ನಡ ಜಿಲ್ಲೆಯ ಈ ಪಟ್ಟಣದಲ್ಲಿ ಗ್ರಾಮದೇವಿಯ ಜಾತ್ರೆ ಪ್ರತಿ ಮೂರು ವರ್ಷಕ್ಕೊಮ್ಮೆ ಒಂಬತ್ತು ದಿನ ಅದ್ದೂರಿಯಾಗಿ ನಡೆಯುತ್ತದೆ. ಈ ವರ್ಷ ಫೆಬ್ರುವರಿ 11ರಿಂದ ಜಾತ್ರೆ ಆರಂಭವಾಗಿದೆ. ಜಾತ್ರೆಗೆ ಮುನ್ನ ಬರುವ ಮೂರು ಅಥವಾ ಐದು ಮಂಗಳವಾರಗಳನ್ನು ‘ಹೊರ ಮಂಗಳವಾರ’ ಎಂದು ಆಚರಿಸುವುದು ಶತಮಾನಗಳ ಹಿಂದಿನಿಂದ ಬಂದಿರುವ ನಂಬಿಕೆ.
ಗ್ರಾಮದೇವಿಯ ಅನುಗ್ರಹದಿಂದಲೇ ಊರು ಉಳಿದಿದೆ ಎಂಬ ಭಕ್ತಿಭಾವ ಇಲ್ಲಿ ಗಾಢವಾಗಿದೆ. ಜಾತ್ರೆಗೆ ನಾಂದಿ ಹಾಡುವಂತೆ ಈ ಮಂಗಳವಾರಗಳು ಆಚರಣೆಗೊಳ್ಳುತ್ತವೆ. ಇದು ಕೇವಲ ಒಂದು ಧಾರ್ಮಿಕ ವಿಧಿಯಲ್ಲ; ಒಂದು ಸಮೂಹ ಅನುಭವ.
ಮನೆ ಬಿಡುವ ಕ್ಷಣ...
ಆ ದಿನ ಬೆಳಗ್ಗೆ ಹತ್ತು ಗಂಟೆಯೊಳಗೆ ಪಟ್ಟಣದ ಎಲ್ಲರೂ ಮನೆಗೆ ಬೀಗ ಹಾಕಿ ಹೊರಡಬೇಕು ಎಂಬ ಅಲಿಖಿತ ನಿಯಮ. ಹೊರಡುವ ಮುನ್ನ ಮನೆಯ ಹಿರಿಯ ಮುತ್ತೈದೆ ದೇವರಿಗೆ ಪೂಜೆ ಸಲ್ಲಿಸಿ, ದೇವರ ಬಟ್ಟಲಲ್ಲಿ ಅರಿಸಿನ-ಕುಂಕುಮ ಇಟ್ಟು, ‘ಅಮ್ಮ ಮನೆಗೆ ಬನ್ನಿ’ ಎಂಬ ಮನದ ಮಾತು ಹೇಳಿ ಹೊರಡುತ್ತಾರೆ.
ಭಕ್ತರ ನಂಬಿಕೆಯಂತೆ, ಆ ದಿನ ದೇವಿ ಮನೆಗೆ ಬಂದು ಆ ಅರಿಸಿನ-ಕುಂಕುಮವನ್ನು ಸ್ವೀಕರಿಸುತ್ತಾಳೆ. ದೇವಿಯ ಗಣಗಳು ಊರನ್ನು ಸುತ್ತಾಡುತ್ತವೆ ಎಂಬ ಮತ್ತೊಂದು ಶ್ರದ್ಧೆಯೂ ಇದೆ. ದೇವಿಯ ಸಂಚಾರಕ್ಕೆ ಮನೆಗಳು ತೆರವಾಗಿರಬೇಕು ಎಂಬ ಭಾವನೆ ಈ ಆಚರಣೆಯ ಹಿಂದಿನ ನಂಬಿಕೆ.
ಎಲ್ಲಿಗೆ ಹೋಗುತ್ತಾರೆ?
‘ಹೊರ ಮಂಗಳವಾರ’ ಎಂದರೆ ಶೋಕದ ದಿನವಲ್ಲ, ಅದು ಸಂತಸದ ದಿನ. ಕುಟುಂಬಗಳು ಸಮೀಪದ ಉದ್ಯಾನಗಳು, ಜಲಪಾತಗಳು, ಕಾನುಗಳು, ತಾಣಗಳು, ಹೊರ ಊರುಗಳ ಕಡೆಗೆ ತೆರಳುತ್ತಾರೆ. ಅಲ್ಲಿ ಚಾಪೆ, ಜಮಖಾನ ಹಾಸುತ್ತಾರೆ. ಮನೆಯಿಂದ ತೆಗೆದುಕೊಂಡು ಹೋಗಿರುವ ತಿಂಡಿ-ತಿನಿಸು, ಊಟದ ಡಬ್ಬಿಗಳು, ಬುತ್ತಿ, ಗಂಟುಗಳನ್ನು ಇಡುತ್ತಾರೆ. ಜೊತೆಗೆ ಕುಡಿಯುವ ನೀರಿನ ಕ್ಯಾನ್‌ಗಳೂ ಇರುತ್ತವೆ.
ಮಕ್ಕಳಿಗೆ ಆಟವಾಡುವ ಸಂಭ್ರಮ. ಕಣ್ಣಾಮುಚ್ಚಾಲೆ, ಓಡಾಟ. ಹಿರಿಯರಿಗೆ ಮನೆಮನೆ ಕತೆಗಳನ್ನು ಹಂಚಿಕೊಳ್ಳುವ ಅವಕಾಶ. ಯುವ ಸಮೂಹಕ್ಕೆ ರೀಲ್ಸ್ ಮಾಡುವ ಉತ್ಸಾಹ. ಗಂಡಸರಿಗೆ ಲೋಕ-
ರಾಜಕೀಯದಿಂದ ಹಿಡಿದು ಕೃಷಿ-ವ್ಯಾಪಾರದವರೆಗಿನ ಚರ್ಚೆಗಳು ಜಾರಿಯಲ್ಲಿರುತ್ತವೆ.
ಅಲ್ಲಿ ಎಲ್ಲರೂ ತಮ್ಮ ತಮ್ಮ ಮನೆಗಳಿಂದ ತಂದ ಬುತ್ತಿಗಳನ್ನು ಹಂಚಿಕೊಂಡು ತಿನ್ನುತ್ತಾರೆ. ಆ ಕ್ಷಣದಲ್ಲಿ ತಾರತಮ್ಯವೆಲ್ಲ ಕರಗಿಹೋಗುತ್ತವೆ. ಉಳಿಯುವುದು ಕೇವಲ ಒಟ್ಟುಗೂಡುವ ಸಂತೋಷ. ಇವೆಲ್ಲವೂ ಒಂದು ಧಾರ್ಮಿಕ ಪಿಕ್‌ನಿಕ್‌ನ ನೆನಪನ್ನು ಮೂಡಿಸುತ್ತವೆ. ಬದುಕಿನ ಜಂಜಾಟದಿಂದ ಒಂದು ದಿನದ ವಿರಾಮ–ಮೊಬೈಲ್ ಸಿಗ್ನಲ್‌ಗಿಂತ ಸಂಬಂಧಗಳ ಸಿಗ್ನಲ್ ಬಲವಾಗುವ ದಿನ.
ವಿನಾಯಿತಿಯೂ ಉಂಟು
ಮನೆಯಲ್ಲಿ ರೋಗಿಗಳು ಇದ್ದರೆ ವಿನಾಯಿತಿ ಇದೆ. ಅವರನ್ನು ಹೊರಗೆ ಕರೆತರಲು ಸಾಧ್ಯವಾಗದ ಕಾರಣ ಮನೆಯಲ್ಲೇ ಬಿಡುತ್ತಾರೆ. ಅವರನ್ನು ನೋಡಿಕೊಳ್ಳಲು ಒಬ್ಬರನ್ನು ಇರಿಸಲಾಗುತ್ತದೆ. ಇಂತಹ ಮನೆಗಳಲ್ಲೂ ಮುಂದಿನ ಬಾಗಿಲಿಗೆ ಬೀಗ ಹಾಕಲಾಗುತ್ತದೆ; ಮತ್ತೊಂದು ಬಾಗಿಲು ತೆರೆದಿರುತ್ತದೆ. ಆಚಾರಕ್ಕೂ, ಅವಶ್ಯಕತೆಗೂ ಮಧ್ಯದ ಸಮತೋಲನ.
ಸರ್ಕಾರಿ ಕಚೇರಿಗಳು ತೆರೆದಿರುತ್ತವೆ. ಆದರೆ ಸಿಬ್ಬಂದಿ ಹಾಜರಾತಿ ಕಡಿಮೆ. ಜನಸಂಚಾರವೇ ಇಲ್ಲದ ಕಾರಣ, ಆ ಕಚೇರಿಗಳೂ ಮೌನಕ್ಕೆ ಸಾಕ್ಷಿಯಾಗುತ್ತವೆ.
ಹಬ್ಬದ ಸೊಗಡು
ಇಡೀ ಪಟ್ಟಣ ಬೀಗ ಹಾಕಿದಂತೆ ಕಂಡರೂ, ಅದರೊಳಗೆ ಭಕ್ತಿಯ ನಾಡಿ ಸ್ಪಂದಿಸುತ್ತಲೇ ಇರುತ್ತದೆ. ಸಂಜೆ ಐದು ಗಂಟೆಯ ನಂತರ ಎಲ್ಲರೂ ಮನೆಗೆ ಮರಳುತ್ತಾರೆ. ಮನೆ ಬಾಗಿಲು ತೆರೆದು ಒಳಬರುವಾಗ ಮೂಡುವ ಆಧ್ಯಾತ್ಮಿಕ ನೆಮ್ಮದಿ–‘ದೇವಿ ನಮ್ಮ ಮನೆಗೆ ಬಂದಿದ್ದಾಳೆ’ ಎಂಬ ನಂಬಿಕೆಯ ಖುಷಿ.
ಈ ಸಂಪ್ರದಾಯ ಒಂದು ಕಡೆ ಭಕ್ತಿಯ ಅಭಿವ್ಯಕ್ತಿ; ಮತ್ತೊಂದು ಕಡೆ ಸಾಮಾಜಿಕ ಏಕತೆಯ ಸಂಕೇತ. ಒಂದೇ ನಿಯಮ ಪಾಲಿಸುವುದು, ಸಮೂಹವಾಗಿ ಹೊರಡುವುದು, ಸಂಜೆ ಮರಳಿ ಮನೆ ಸೇರಿ ಅನುಭವ ಹಂಚಿಕೊಳ್ಳುವುದು ಇಡೀ ಪಟ್ಟಣವನ್ನು ಒಂದು ಕುಟುಂಬವನ್ನಾಗಿಸುವ ಶಕ್ತಿ.
‘ಹೊರ ಮಂಗಳವಾರ’ ಯಲ್ಲಾಪುರದ ಆತ್ಮ. ಇದು ಕೇವಲ ಮನೆಗೆ ಬೀಗ ಹಾಕುವ ದಿನವಲ್ಲ; ಹೃದಯದ ಬಾಗಿಲು ತೆರೆಯುವ ದಿನ. ಜಾತ್ರೆಯ ಘೋಷಕ್ಕೆ ಮುಂಚೆ, ಭಕ್ತಿಯ ಮಂಗಳವಾದ್ಯ ಮೊಳಗಿಸುವ ಸಂಪ್ರದಾಯ. ಸಂಪ್ರದಾಯಗಳು ಕೇವಲ ದೇವರಿಗಾಗಿ ಅಲ್ಲ; ಜನರನ್ನು ಒಟ್ಟುಗೂಡಿಸಲು. ಯಲ್ಲಾಪುರದ ‘ಹೊರ ಮಂಗಳವಾರ’ ಅದಕ್ಕೆ ಜೀವಂತ ಉದಾಹರಣೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.