
ಸಿಂಗಳಿಕ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಬರಿಗೆಯ ನಾರಾಯಣಪ್ಪನಿಗೆ ಇಸ್ಪೀಟ್ ಹುಚ್ಚು ತುಂಬಾ ಇತ್ತು. ದೊಡ್ಡಾಟ ಆಡಿ ಒಂದೇ ಬಾರಿ ಶ್ರೀಮಂತನಾಗಬೇಕು ಎಂಬ ಆತನ ಕನಸು ನನಸಾಗಲೇ ಇಲ್ಲ. ಬರಿಗೆಯಿಂದ ಸಾಗರ ತಾಲ್ಲೂಕಿನ ಆವಿನಹಳ್ಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದ. ರಾತ್ರಿ ಹೊತ್ತು ಸಂಚರಿಸಲು ಅನುಕೂಲವಾಗಲಿ ಎಂದು ಲಾಟೀನ್ ಇಟ್ಟುಕೊಳ್ಳುತ್ತಿದ್ದ. ಒಳದಾರಿಯಲ್ಲಿ ಸಾಗಿದರೂ ಬರಿಗೆಯಿಂದ ಆವಿನಹಳ್ಳಿಗೆ 21 ಕಿ.ಮೀ ಕ್ರಮಿಸಬೇಕಿತ್ತು. ಈ ಭಾಗದಲ್ಲಿ ಆಗ ಹುಲಿಗಳ ಸಂಖ್ಯೆ ದಂಡಿಯಾಗಿಯೇ ಇತ್ತು. ಹುಲಿ ಗರ್ಜನೆ ಸಾಮಾನ್ಯವಾಗಿತ್ತು. ಯಾವ ದಿಕ್ಕಿನಲ್ಲಿ ಹುಲಿ ಕೂಗುತ್ತಿದೆ ಎಂದು ಅಂದಾಜು ಮಾಡಿಕೊಂಡು ಮಾರ್ಗ ಬದಲಿಸಿ ಆವಿನಹಳ್ಳಿ ತಲುಪುತ್ತಿದ್ದ. ಹುಲಿಗಳು ತನ್ನ ಮೇಲೆ ದಾಳಿ ಮಾಡಬಹುದು ಎಂಬ ಕಲ್ಪನೆಯೇ ಆತನಿಗಿರಲಿಲ್ಲ. ಆದರೂ ವಯಸ್ಸಾದ ಕೆಲ ಹುಲಿಗಳು ಹಳ್ಳಿಗರನ್ನು ಕೊಂದು ಎತ್ತಿಕೊಂಡು ಹೋಗುವ ಘಟನೆಗಳು ನಡೆಯುತ್ತಿದ್ದವು. ನರಭಕ್ಷಕಗಳನ್ನು ನುರಿತ ಬೇಟೆಗಾರರು ಕೊಂದು ಸಂಭ್ರಮಿಸುತ್ತಿದ್ದರು. ಕೊಂದ ಹುಲಿಯನ್ನು ಅಳತೆ ಮಾಡಿ ಇಂತಿಷ್ಟು ಮೆಟ್ಟು (ಪಾದ) ಉದ್ದವಿತ್ತು ಎಂದು ದಾಖಲಿಸುತ್ತಿದ್ದರು. ಇಂದಿಗೆ ಸುಮಾರು ನೂರು ವರ್ಷಗಳ ಹಿಂದಿನ ಘಟನೆ ಇದು. ಇಸ್ಪೀಟ್ ಆಟದಲ್ಲಿ ಸೋತು ನಾರಾಯಣಪ್ಪ ತನ್ನೆಲ್ಲಾ ಆಸ್ತಿ ಕಳೆದುಕೊಂಡನೇ ಹೊರತು ಹುಲಿಗೆ ಬಲಿಯಾಗಲಿಲ್ಲ.
1900ರಲ್ಲಿ ಭಾರತದ ಜನಸಂಖ್ಯೆ 20 ಕೋಟಿ ಇತ್ತು. ಅಂದಾಜು ಹುಲಿಗಳ ಸಂಖ್ಯೆ ಒಂದು ಲಕ್ಷಗಳಷ್ಟಿತ್ತು. ಅರಣ್ಯ ವಿಸ್ತಾರವಾಗಿತ್ತು. ಮಾನವನ ಜೊತೆ ವನ್ಯಜೀವಿಗಳ ಸಂಘರ್ಷ ಮಿತಿಯಲ್ಲಿತ್ತು. ಮೊದಲನೇ ಮಹಾಯುದ್ಧದ ನಂತರ, ಭಾರತದ ಜನಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಲೇ ಹೋಯಿತು. ವನ್ಯಜೀವಿಗಳ ಜೊತೆ ಮನುಷ್ಯನ ಮುಖಾಮುಖಿ ಹೆಚ್ಚಾಯಿತು. ನರಹಂತಕ ಹುಲಿಗಳ ಸಂಖ್ಯೆಯೂ ಹೆಚ್ಚಿತು. ನರಭಕ್ಷಕ ಹುಲಿಗಳನ್ನು ಬೇಟೆಯಾಡುತ್ತಿದ್ದ, ಕೆನೆತ್ ಆಂಡರ್ಸನ್ ಮತ್ತು ಜಿಮ್ ಕಾರ್ಬೆಟ್ ಅವರ ಅನುಭವ ಕಥನಗಳನ್ನು ಭಾವಾನುವಾದ ಮಾಡಿದ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಪುಸ್ತಕದಲ್ಲಿ 1900-1960 ದಶಕಗಳನ್ನು ನಭೂತೋ ನಭವಿಷ್ಯತಿ ಎಂದು ಕರೆದಿದ್ದನ್ನು ಇಲ್ಲಿ ಸ್ಮರಿಸಬೇಕು.
ವನ್ಯಜೀವಿಗಳನ್ನು ಹರಣ ಮಾಡುವುದು ಅಪರಾಧವಾಗಿರಲಿಲ್ಲ. ನರಭಕ್ಷಕ ಹುಲಿಗಳಿಗಿಂತ ಹೆಚ್ಚು ಅಮಾಯಕ ಹುಲಿಗಳು ಬೇಟೆಗೆ ಬಲಿಯಾದವು. ಒಂದು ಹಂತದಲ್ಲಿ ಸರ್ಕಾರಗಳು ಹುಲಿ ಶಿಕಾರಿಗೆ ಪ್ರೋತ್ಸಾಹ ಧನ ಘೋಷಣೆ ಮಾಡಿದ್ದವು. ಒಂದು ಲಕ್ಷ ಇದ್ದ ಹುಲಿಗಳ ಸಂಖ್ಯೆ 1970ರ ಹೊತ್ತಿಗೆ ಶೇಕಡ 97ರಷ್ಟು ನಾಶವಾಯಿತು. ಆಗಿನ ಸರ್ಕಾರ 70ರ ದಶಕದಲ್ಲಿ ವನ್ಯಜೀವಿಗಳನ್ನು ಉಳಿಸುವ ಸಲುವಾಗಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ಹಾಗೂ ಹುಲಿ ಯೋಜನೆಯನ್ನು ಜಾರಿಗೆ ತಂದಿತು.
2022ರ ಗಣತಿಯ ಪ್ರಕಾರ ಹುಲಿಗಳ ಸಂಖ್ಯೆ 3167 ಇದೆ. ಆದಾಗ್ಯೂ 55 ವರ್ಷಗಳಲ್ಲಿ ಹುಲಿಗಳ ಅವನತಿಯನ್ನು ತಗ್ಗಿಸಲಾಗಿದೆಯೇ ಹೊರತು ಅವುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿಲ್ಲ. ಬದಲಾದ ಕಾಲದಲ್ಲಿ ಜನಸಂಖ್ಯೆಯಲ್ಲಿ ವಿಶ್ವದಲ್ಲಿ ಮೊದಲನೇ ಸ್ಥಾನಕ್ಕೆ ಭಾರತ ತಲುಪಿದೆ. ಅರಣ್ಯ ವ್ಯಾಪ್ತಿ ತೀರಾ ಕಡಿಮೆಯಾಗಿದೆ. ಅದರಲ್ಲೂ ವನ್ಯಜೀವಿಗಳಿಗೆಂದೇ ಮೀಸಲಾದ ಅಭಯಾರಣ್ಯಗಳ ಪ್ರಮಾಣ ಶೇಕಡ 4ರಷ್ಟು ಮಾತ್ರ. ಇದರಲ್ಲೂ ಅಭಿವೃದ್ಧಿ ಯೋಜನೆಗಳು ಧಾಂಗುಡಿಯಿಡುತ್ತಿವೆ. ಜನವಸತಿಯೂ ಇದೆ. ಇದೇ ಕಾರಣಗಳಿಗೆ ಮಾನವ-ವನ್ಯಜೀವಿಗಳ ಸಂಘರ್ಷ ದಿನೇ ದಿನೇ ಹೆಚ್ಚುತ್ತಿದೆ.
ಪ್ರಪಂಚದ ಒಟ್ಟು ವಿಸ್ತಾರದಲ್ಲಿ ಭಾರತದ ಭೌಗೋಳಿಕ ವಿಸ್ತೀರ್ಣ ಶೇಕಡ 2.4 ರಷ್ಟು ಮಾತ್ರ. ಗಮನಿಸಬೇಕಾದ ಅಂಶವೆಂದರೆ, ಜಾಗತಿಕ ಜನಸಂಖ್ಯೆಯ ಶೇಕಡ 20 ರಷ್ಟು ಭಾರತದಲ್ಲಿದೆ. ವನ್ಯಜೀವಿ ನೆಲೆಗಳ ಮೇಲೆ ಇಷ್ಟು ಪ್ರಮಾಣದ ಒತ್ತಡವಿದ್ದರೂ, ಜಾಗತಿಕ ಜೀವಿವೈವಿಧ್ಯ ಪ್ರಮಾಣದಲ್ಲಿ ಭಾರತದ ಕೊಡುಗೆ ಶೇಕಡ 8ರಷ್ಟಿದೆ ಎನ್ನುವುದು ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ.
ಸಂಘರ್ಷವನ್ನು ನಿಭಾಯಿಸಬೇಕಾದ ಅರಣ್ಯ ಇಲಾಖೆ ಕೈಚೆಲ್ಲಿ ಕುಳಿತಿದೆ. ಹಾಗಾದರೆ, ಮಾನವ-ವನ್ಯಜೀವಿ ಸಂಘರ್ಷ ಎಂದರೇನು? ಕರ್ನಾಟಕ ಅರಣ್ಯ ಇಲಾಖೆಯ ಸಂಘರ್ಷ ತಂತ್ರಾಂಶ ಮತ್ತು ಪಶ‍್ಚಿಮಘಟ್ಟ ಸಂರಕ್ಷಣಾ ಪಡೆ ತಂತ್ರಾಂಶದ ಅಂಕಿಅಂಶಗಳ ಪ್ರಕಾರ ಹತ್ತು ವರ್ಷಗಳಲ್ಲಿ 35,580 ಸಂಘರ್ಷ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಎಲ್ಲಾ ರೀತಿಯ ಸಂಘರ್ಷಗಳನ್ನ ದಾಖಲಿಸಲಾಗಿದೆ. ಬೆಳೆ ನಾಶ ಮತ್ತು ಸಂಘರ್ಷದಲ್ಲಿ ಗಾಯಗೊಂಡವರು, ತೀರಿಕೊಂಡವರ ಸಂಖ್ಯೆಯೂ ಸೇರಿದೆ.
ಜನಸಂಖ್ಯೆಯ ಬೆಳವಣಿಗೆ, ಕಾಡುಗಳ ನಾಶ ಮತ್ತು ಛಿದ್ರೀಕರಣ, ಕೃಷಿ ವಿಸ್ತರಣೆ-ನಗರೀಕರಣದಿಂದಾಗಿ ವನ್ಯ ನೆಲೆ ವ್ಯಾಪಕವಾಗಿ ನಾಶವಾಗಿದೆ. ಹತ್ತು ವರ್ಷಗಳಲ್ಲಿ ಸಂಘರ್ಷದಿಂದ ನೂರಾರು ಜನರು ಮತ್ತು ಹೆಚ್ಚು ಸಂಖ್ಯೆಯಲ್ಲಿ ಪ್ರಾಣಿಗಳು ಮರಣಹೊಂದಿವೆ.. ಯಾವಾಗ ಭಾರತದ ಜನಸಂಖ್ಯೆ 140 ಕೋಟಿಗೆ ತಲುಪಿತೋ ಅದೇ ಹೊತ್ತಿಗೆ ಕಾಡುಗಳ ಪ್ರಮಾಣ ಶೇಕಡ 20 ರಷ್ಟು ಇಳಿಕೆಯಾಯಿತು. ಇದು ಸಂಘರ್ಷಕ್ಕೆ ಮೂಲ ಕಾರಣ.
ಹತ್ತು ವರ್ಷಗಳಲ್ಲಿ ಪಶ‍್ಚಿಮಘಟ್ಟಗಳಲ್ಲಿ ಆನೆ ಪಥ ಶೇಕಡ 40ರಷ್ಟು ಕಡಿಮೆಯಾಗಿದೆ. ಇಷ್ಟೇ ಸಮಯದಲ್ಲಿ ಭದ್ರಾ ಹುಲಿ ಯೋಜನೆಯ ಸುತ್ತಮುತ್ತಲ ವ್ಯಾಪ್ತಿಯಲ್ಲಿ 18 ಆನೆಗಳನ್ನು ವಿದ್ಯುತ್ ಹರಿಸಿ ಕೊಲ್ಲಲಾಗಿದೆ.
ಹವಾಗುಣ ಬದಲಾವಣೆಯಿಂದಾಗಿ ತಾಪಮಾನ 1 ಡಿಗ್ರಿ ಸೆಂಟಿಗ್ರೇಡ್‍ನಷ್ಟು ಏರಿಕೆಯಾಗಿದೆ. ಇದು ವನ್ಯಜೀವಿಗಳ ಚಲನೆಯನ್ನು ಬದಲಾಯಿಸಿದೆ. ಎಲ್‍ನಿನೊ ವಿದ್ಯಮಾನದಿಂದ ಮಳೆ ಕಡಿಮೆಯಾದ ಕಾರಣ ಆಹಾರ ಕೊರತೆಯಿಂದಾಗಿಯೂ ವನ್ಯಪ್ರಾಣಿಗಳು ಮನುಷ್ಯ ವಾಸಿಸುವ ಪ್ರದೇಶಕ್ಕೆ ಬರುತ್ತಿವೆ.
ಅದೊಂದು ಸಾಧಾರಣ ಆದಾಯವಿರುವ ರೈತ ಕುಟುಂಬ. ದಿನವಿಡೀ ದುಡಿದರೆ ಮಾತ್ರ ಉದರಂಭರಣಕ್ಕೆ ಸರಿಯಾಗುತ್ತದೆ. ಕೊಂಚ ಜಮೀನು ಇದೆ. ಜಮೀನಿಗೆ ಗೊಬ್ಬರ ಬೇಕು ಎಂದು ಒಂದೆರಡು ಹಸು ಕಟ್ಟಿಕೊಂಡಿದ್ದಾರೆ. ಹಸುವಿಗೆ ಹುಲ್ಲು ಬೇಕು. ಕುದುರೆಮುಖ ರಾಷ್ಟ್ರೀಯ ವನ್ಯಧಾಮದ ಅಂಚಿನಲ್ಲೇ ಆ ರೈತನ ಕುಟುಂಬ ವಾಸವಿತ್ತು. ಹುಲ್ಲು ಬೆಳೆದ ಸ್ಥಳವನ್ನು ಹುಡುಕಿಕೊಂಡು ವನ್ಯಧಾಮದ ಅಂಚಿನಲ್ಲೇ ಸಾಗಿದ. ಸಾಕುನಾಯಿಗಳು ಜೊತೆಗಿದ್ದವು. ಸೊಂಪಾದ ಹುಲ್ಲು ನೋಡಿ ಕುಡುಗೋಲಿಂದ ಸವರಲು ಮುಂದಾದ. ನಾಯಿಗಳು ಜೋರಾಗಿ ಬೊಗಳಲು ಪ್ರಾರಂಭಿಸಿದವು. ರಾಷ್ಟ್ರೀಯ ಅಭಯಾರಣ್ಯ ತಾನೇ. ಹಂದಿ-ಮಿಕ ಏನಾದರೂ ನೋಡಿರಬಹುದು, ಅದಕ್ಕೆ ಕೂಗುತ್ತಿವೆ ಎಂದು ಹುಲ್ಲು ಸವರುತ್ತಲೇ ಇದ್ದ. ಅಲ್ಲೇ ಇದ್ದ ವಲಸೆ ಆನೆಗೆ ನಾಯಿಗಳ ಕೂಗು ತುಂಬಾ ರೇಜಿಗೆ ತಂದಿರಬೇಕು. ನಾಯಿಗಳನ್ನು ಓಡಿಸಲು ಬಂದ ಆನೆಗೆ ಹುಲ್ಲು ಕೊಯ್ಯುತ್ತಿದ್ದ ರೈತ ಸಿಕ್ಕಿದ. ಸೊಂಡಿಲಿನಲ್ಲಿ ಎತ್ತಿ ಬಡಿಯಿತು. ರೈತ ಪ್ರಾಣ ಬಿಟ್ಟ. ಪಕ್ಕದ ಮನೆಯಾತ ಹುಡುಕಿಕೊಂಡು ಹೊರಟ. ಅನತಿ ದೂರದಲ್ಲಿ ನಾಯಿಗಳು ಬೊಗಳುತ್ತಲೇ ಇದ್ದವು. ನಾಗರಹಾವನ್ನೋ ಅಥವಾ ಕಾಳಿಂಗನನ್ನೋ ನೋಡಿ ನಾಯಿಗಳು ಬೊಗಳುತ್ತಿವೆ ಎಂದುಕೊಂಡ ಆತ ಕಾಲಬುಡವನ್ನೇ ನೋಡಿಕೊಳ್ಳುತ್ತಾ ಮುಂದೆ ಹೋದ. ಸಿಟ್ಟಿನಲ್ಲಿದ್ದ ಅದು ಅವನನ್ನೂ ಎತ್ತಿ ನೆಲಕ್ಕೆ ಬಡಿಯಿತು. ಹೀಗೆ ಗಂಟೆಯ ಅವಧಿಯಲ್ಲಿ ಅವಳಿ ದುರ್ಘಟನೆಗಳು ನಡೆದು ಹೋದವು.
ಸುದ್ದಿ ತಿಳಿದ ರಾಜಕಾರಣಿಗಳು, ರೈತರು, ಹೆಂಗಸರು, ಮಕ್ಕಳು ಸಾವಿರ ಸಂಖ್ಯೆಯಲ್ಲಿ ಸೇರಿದರು. ನರಹಂತಕ ಆನೆಯನ್ನು ಸೆರೆ ಹಿಡಿಯಬೇಕು ಎಂಬ ಕೂಗು ಜೋರಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿಗಳು ಇಬ್ಬಂದಿಗೊಳಗಾದರು. ವಿಷಯ ಬೆಂಗಳೂರಿಗೂ ಹೋಯಿತು. ಅರಣ್ಯ ಸಚಿವರು ಸಮಾಲೋಚನೆ ಮಾಡಿದರು. ಇಬ್ಬರನ್ನು ಕೊಂದ ಆನೆಯನ್ನು ಹಿಡಿಯಲು ಅನುಮತಿ ಸಿಕ್ಕಿತು. ಸಾಕಾನೆಗಳ ಸಹಾಯದಿಂದ ಕಾಡಿನ ದೈತ್ಯನನ್ನು ಸೆರೆ ಹಿಡಿಯಲಾಯಿತು ಎಂಬ ಸುದ್ದಿ ಎಲ್ಲೆಡೆ ಹರಡಿತು.
ಮೇಲಿನ ಘಟನೆಯನ್ನು ವಿವರವಾಗಿ ನೋಡಬೇಕು. ತನ್ನ ಕುಟುಂಬವನ್ನು ಸಾಕಿ ಸಲಹುವ ಜವಾಬ್ದಾರಿ ಆ ರೈತನ ಮೇಲಿತ್ತು. ಇರುವ ಕೊಂಚ ಜಮೀನಿನಲ್ಲಿ ಬೆಳೆ ಬೆಳೆಯಲು ಗೊಬ್ಬರ ಬೇಕು; ಅದಕ್ಕೆ ಹಸು ಸಾಕಿಕೊಳ್ಳಬೇಕು. ಹಸುವಿಗೆ ಹುಲ್ಲುಬೇಕು. ಹುಲ್ಲಿರುವುದು ಅಭಯಾರಣ್ಯದ ಅಂಚಿನಲ್ಲಿ. ಇದು ಕಾಡಂಚಿನ ರೈತರ ಅನಿವಾರ್ಯ. ಕೆರೆಕಟ್ಟೆ ಗ್ರಾಮದ ಜನರಿಗೆ ವನ್ಯಜೀವಿಗಳಿಂದ ತೊಂದರೆಯಾಗುತ್ತದೆ. ಅದಕ್ಕೆ ಅವರು ಕಂಡುಕೊಂಡ ಮಾರ್ಗ ಸ್ವಯಂಪ್ರೇರಿತವಾಗಿ ಆ ಸ್ಥಳದಿಂದ ಬೇರೆಡೆಗೆ ಹೋಗುವುದು. ಇಂತಹವರನ್ನು ಸರ್ಕಾರ ತನ್ನ ಖರ್ಚಿನಲ್ಲಿ ಅವರಿಗೆ ಸೂಕ್ತ ಪರಿಹಾರ ಮತ್ತು ನೆಲೆಯನ್ನು ಕಲ್ಪಿಸಬೇಕು.
ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಮಾನವ ವನ್ಯಜೀವಿ ಸಂಘರ್ಷವನ್ನು ಶಾಶ್ವತವಾಗಿ ತಡೆಗಟ್ಟಲು, ಪುನರ್ವಸತಿ ಪ್ಯಾಕೇಜ್ ಯೋಜನೆಗೆ ನೂರಾರು ಜನರು ಕಳೆದ ಇಪ್ಪತ್ತು ವರ್ಷಗಳಿಂದ ಅರ್ಜಿ ಸಲ್ಲಿಸಿ ಸೂಕ್ತ ಕ್ರಮಕ್ಕಾಗಿ ಕಾಯುತ್ತಿದ್ದಾರೆ. ನಿತ್ಯ ವನ್ಯಜೀವಿಗಳ ಜೊತೆ ಸಂಘರ್ಷದ ಬದುಕು ಸಾಗಿಸುತ್ತಾ, ಅರಣ್ಯದಲ್ಲಿ ಯಾವುದೇ ಸೌಲಭ್ಯ ಇಲ್ಲದೆ ಇಲ್ಲಿನ ನೂರಾರು ಕುಟುಂಬಗಳು ಆತಂಕದಲ್ಲಿವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ 1,382 ಕುಟುಂಬಗಳು ಒಳಭಾಗದ ಕಾಡಿನಲ್ಲಿವೆ. ಅದರಲ್ಲಿ 550 ಕುಟುಂಬಗಳು ಈಗಾಗಲೇ ಪುನರ್ವಸತಿ ಪ್ಯಾಕೇಜ್ ಪಡೆಯಲು ಅರ್ಜಿ ಸಲ್ಲಿಸಿವೆ. ಅದರಲ್ಲಿ 253 ಕುಟುಂಬಗಳು ಒಳ್ಳೆಯ ಪುನರ್ವಸತಿ ಪ್ಯಾಕೇಜ್ ಪಡೆದು ಉದ್ಯಾನವನದ ಹೊರಗೆ ಜಾಗ ಖರೀದಿಸಿ ಉತ್ತಮ ಜೀವನ ನಡೆಸುತ್ತಿವೆ. ಇನ್ನೂ 297 ಕುಟುಂಬದವರು ಉದ್ಯಾನವನದಿಂದ ಸ್ವಯಂಪ್ರೇರಿತರಾಗಿ ಹೊರ ಹೋಗಲು ಪುನರ್ವಸತಿ ಪ್ಯಾಕೇಜ್ ಪರಿಹಾರ ನಿರೀಕ್ಷೆಯಲ್ಲಿ ಇದ್ದಾರೆ.
ಆದರೆ ಕಳೆದ ಐದು ವರ್ಷದಲ್ಲಿ ಪುನರ್ವಸತಿ ಯೋಜನೆಯೇ ಕುಂಠಿತವಾಗಿದೆ. ಒಂದೊಮ್ಮೆ ಸರ್ಕಾರ ಈ 297 ಕುಟುಂಬಗಳಿಗೆ ಸ್ವಯಂಪ್ರೇರಿತ ಪುನರ್ವಸತಿ ಪ್ಯಾಕೇಜ್ ಸೌಲಭ್ಯ ನೀಡಿದ್ದರೆ, ಅಮಾಯಕ ಇಬ್ಬರು ರೈತರ ಹತ್ಯೆಯಾಗುತ್ತಿರಲಿಲ್ಲ. ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ರಾಷ್ಟ್ರೀಯ ಉದ್ಯಾನವನಗಳಲ್ಲಿ ಅರಣ್ಯೇತರ ಚಟುವಟಿಕೆಗಳಿಗೆ ಅವಕಾಶವಿಲ್ಲ. ಆದರೂ, ಈ ಸಂರಕ್ಷಿತ ಪ್ರದೇಶದಲ್ಲಿ ಬೃಹತ್ ಯೋಜನೆಗಳನ್ನು ಎಗ್ಗಿಲ್ಲದೆ ಜಾರಿ ಮಾಡಲು ಹೊರಟಿರುವುದು ಕಾಯ್ದೆಯ ಮೂಲ ಆಶಯವನ್ನೇ ಧಿಕ್ಕರಿಸುತ್ತದೆ. ಇದು ಸ್ಪಷ್ಟವಾಗಿ ಅರಣ್ಯ ಇಲಾಖೆ ಮತ್ತು ಸರ್ಕಾರದ ನಿರ್ಲಕ್ಷ್ಯದ ಧೋರಣೆಯಾಗಿದೆ.
ರಾಜ್ಯದ ಒಟ್ಟು ವಿಸ್ತೀರ್ಣದ ಶೇಕಡ 4.5ರಷ್ಟು ಪ್ರದೇಶದಲ್ಲಿ ಐದು ರಾಷ್ಟ್ರೀಯ ಉದ್ಯಾನವನಗಳು, 36 ಅಭಯಾರಣ್ಯಗಳಿವೆ. ಇಷ್ಟು ಕಡಿಮೆ ಪ್ರದೇಶವೂ ಕೂಡ ಮಾನವ ವಸತಿಯಿಂದ ಹೊರತಾಗಿಲ್ಲ. ಈ ಪ್ರದೇಶಗಳಲ್ಲೇ ಮಾನವ-ವನ್ಯಜೀವಿ ಸಂಘರ್ಷ ತೀರಾ ಹೆಚ್ಚಿದೆ. ಈ ಪ್ರದೇಶಗಳಲ್ಲೇ ನದಿಗಳು ಹುಟ್ಟುತ್ತವೆ. ವಾತಾವರಣದಲ್ಲಿರುವ ಇಂಗಾಲಾಮ್ಲವನ್ನು ಹೀರಿಕೊಳ್ಳುತ್ತವೆ. ಮಳೆ ಪ್ರಮಾಣವನ್ನು ನಿರ್ಧರಿಸುವ ಜೊತೆಗೆ ಅನೇಕ ರೀತಿಯ ನೈಸರ್ಗಿಕ ಸೇವೆಯನ್ನು ಈ ಪ್ರದೇಶಗಳು ಉಳಿದ ಶೇಕಡ 95.5ರಷ್ಟು ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಮಾನವ ಕುಲಕ್ಕೆ ನೀಡುತ್ತವೆ.
ಸುಮಾರು 4 ಲಕ್ಷ ಕೋಟಿ ಬಜೆಟ್ ಮಂಡಿಸುವ ಸರ್ಕಾರಕ್ಕೆ ರಾಷ್ಟ್ರೀಯ ಉದ್ಯಾನವನ, ಅಭಯಾರಣ್ಯಗಳಲ್ಲಿ ವನ್ಯಜೀವಿಗಳ ಜೊತೆ ಸಂಘರ್ಷ ನಡೆಸುತ್ತಾ, ಮೂಲ ಸೌಕರ್ಯಗಳಿಂದ ವಂಚಿತರಾಗಿ ದಯನೀಯ ಬಾಳು ಬಾಳುತ್ತಿರುವ ಜನರಿಗೆ ಅವರ ಬದುಕಿಗೆ ಸಾಕಾಗುವಷ್ಟು ಪರಿಹಾರ ನೀಡಿದರೆ, ಸಮಾಜದ ಮುಖ್ಯವಾಹಿನಿಗೆ ಸೇರುತ್ತಾರೆ. ಹೀಗೆ ಸೇರಲು ಬಯಸುವವರ ಸಂಖ್ಯೆ ದೊಡ್ಡದಿದೆ. ಶರಾವತಿ ಸಿಂಗಳೀಕ ಅಭಯಾರಣ್ಯದ ಕೇಂದ್ರ ಭಾಗದಲ್ಲಿ ಚಿಕ್ಕ ಗ್ರಾಮಗಳಿವೆ. ಮಕ್ಕಳು ಶಾಲೆಗೆ ಹೋಗಬೇಕು ಎಂದರೆ 8 ಕಿ.ಮೀ ಕಾಲ್ನಡಿಗೆಯಲ್ಲಿ ಬರಬೇಕು. ಯಾವ ಹೊತ್ತಿನಲ್ಲಿ ಯಾವ ಪ್ರಾಣಿ ದಾಳಿ ಮಾಡುತ್ತದೋ ಅಂದಾಜಿಸಲಾಗುವುದಿಲ್ಲ. ಇಂತಹ ದಾರುಣ ಸ್ಥಿತಿಯಲ್ಲಿರುವ ಆ ಕುಟುಂಬಗಳು ಸೂಕ್ತ ಪರಿಹಾರ ಕೊಟ್ಟು ಪುನರ್ವಸತಿಗೊಳಿಸಿ ಎಂದು ಅಂಗಲಾಚುತ್ತಿವೆ. ಶೆಟ್ಟಿಹಳ್ಳಿ ಅಭಯಾರಣ್ಯ, ಭೀಮಗಢ ಮುಂತಾದ ಅಭಯಾರಣ್ಯಗಳ ಸ್ಥಿತಿಯೂ ಹೀಗೆಯೇ ಇದೆ. ಈ ಕೂಗು ಸರ್ಕಾರಕ್ಕೆ ಕೇಳುತ್ತಿಲ್ಲ. ಆದರೆ, ಹತ್ತಿಪ್ಪತ್ತು ಸಾವಿರ ಕೋಟಿ ಹಾಳು ಮಾಡಿ ನಾಗರಿಕ ಸಮಾಜಕ್ಕೆ ಪ್ರಯೋಜನವಿಲ್ಲದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯನ್ನು ಅಭಯಾರಣ್ಯದ ಕೇಂದ್ರ ಭಾಗದಲ್ಲಿ ಜಾರಿ ಮಾಡಲು ತುದಿಗಾಲಲ್ಲಿ ನಿಂತಿದೆ. ನಮ್ಮ ಭವಿಷ್ಯಕ್ಕಾಗಿ ಶೇಕಡ 5ರಷ್ಟು ಭೂಭಾಗವನ್ನೂ ಸಹ ಕಾಪಾಡಲಿಕ್ಕಾಗದ ವ್ಯವಸ್ಥೆಯಿದು, ಇದೆಂಥ ಪ್ರಜಾಪ್ರಭುತ್ವ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.