ADVERTISEMENT

ಮಾತುಕತೆ: ಸರೋದ್‌ ಲೋಕದ ಸುರ ಆಶೀಷ್‌ ಖಾನ್‌

ಎಸ್.ರಶ್ಮಿ
Published 10 ಫೆಬ್ರುವರಿ 2024, 23:30 IST
Last Updated 10 ಫೆಬ್ರುವರಿ 2024, 23:30 IST
ಆಶಿಷ್‌ ಖಾನ್‌
ಆಶಿಷ್‌ ಖಾನ್‌   

ಜೀವ ಇಲ್ಲದೆ ಜೀವನ ಅರ್ಥ ಮಾಡ್ಕೊಬಹುದಾ?

ಮೂಲ ವಾದ್ಯಗಳಿಲ್ಲದೆ ಸಂಗೀತವನ್ನೂ ಅರ್ಥ ಮಾಡಿಕೊಳ್ಳೋದು ಕಷ್ಟ. ಹೀಗೆ ತಮ್ಮ ಮಾತನ್ನು ಆರಂಭಿಸಿದವರು ಸರೋದ್‌ ವಾದಕರಾದ 83ರ ಹರೆಯದ ಆಶೀಷ್‌ ಖಾನ್‌. ಗಾಂಧಿ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡಿದ ಖ್ಯಾತಿಯೊಂದಿಗೆ ಮೈಹರ್‌ ಘರಾನಾದ ಆಶೀಷ್‌ ಖಾನ್‌, ಪಾಶ್ಚಿಮಾತ್ಯ ಸಂಗೀತ ಮತ್ತು ಪೌರ್ವಾತ್ಯ ಸಂಗೀತದ ಸಂಗಮ ಮಾಡುವಲ್ಲಿ ಘನ ಪಾತ್ರ ವಹಿಸಿದವರು.  ಈಚೆಗೆ ಸಿತಾರ್‌ ನವಾಜ್‌ ಉಸ್ತಾದ್‌ ಬಾಲೆಖಾನ್‌ ಪ್ರಶಸ್ತಿ ಪಡೆಯಲು ಬೆಂಗಳೂರಿಗೆ ಬಂದಾತ ಸಂಗೀತ, ಜೀವನ ಮತ್ತು ಜಗತ್ತು ಮೂರರ ಕುರಿತೂ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.

ಪಶ್ಚಿಮ ದೇಶಗಳು ನಮ್ಮ ಸಂಗೀತವನ್ನು ಹಾಳುಗೆಡಹಿದರು ಎಂಬುದೊಂದು ಆರೋಪ. ಅಲ್ಲಿ ಆರ್ಕೆಸ್ಟ್ರಾಗಳಲ್ಲಿ ಈಗಲೂ ಪಿಯಾನೊ ನುಡಿಸಲು ದೊಡ್ಡ ಪಿಯಾನೊವನ್ನೇ ತರುತ್ತಾರೆ. ಕೀಬೋರ್ಡ್‌ ನುಡಿಸುವುದಿಲ್ಲ. ಡ್ರಮ್‌ನ ಕೆಲಸವನ್ನೂ ಡ್ರಮ್‌ ವಾದ್ಯವೇ ಮಾಡುತ್ತದೆ. ಮೂಲ ಸಂಗೀತವೆಂದರೆ ಅದು. ಮನುಷ್ಯನ ಸ್ಪರ್ಶದಿಂದ ಬರುವಂಥದ್ದು. ಉಸಿರಿನಿಂದ ಬರುವಂಥದ್ದು. ನಿಮ್ಮೊಳಗಿನ ರಾಗಗಳೇ, ಸಂಗೀತದ ರಾಗಗಳಾಗಿಯೂ ನುಡಿಯುವಂಥದ್ದು.  ಭಾರತದಲ್ಲಿ ಕೀಬೋರ್ಡಿನ ಹಾವಳಿ ನೋಡಿದಾಗ, ತಾನ್‌ಪುರಾ ಬದಲು ಶ್ರುತಿ ಪೆಟ್ಟಿಗೆ ನೋಡಿದಾಗ ಖೇದವೆನಿಸುತ್ತದೆ. ಮೊದಲು ಸಂಗೀತ ಸರಳಗೊಳಿಸಿತು ಎಂದೆನಿಸುವುದು ಸಹಜ. ಆದರೆ ಆತ್ಮವೇ ಇಲ್ಲದ ಆನಂದವನ್ನು ಹೇಗೆ ಅನುಭವಿಸುವುದು? ಪ್ರತಿ ವಾದ್ಯವೂ ಬಿಡಿಬಿಡಿಯಾಗಿ ನುಡಿಸಬೇಕು, ಆಲಿಸಬೇಕು. ಅವೆಲ್ಲ ಇಡಿಯಾಗಿ ರಾಗವಾಗಿ, ನಾದವಾಗಿ ಹರಿಯಬೇಕು. ಅವು ನಮ್ಮೊಳಗೆ ಇಳಿಯಬೇಕು. ಆರ್ಕೆಸ್ಟ್ರಾ ಅಥವಾ ವಾದ್ಯವೃಂದ ಅಂದ್ರೆ ಅದೇನೆ. 

ADVERTISEMENT

ಪ್ರತಿ ವಾದ್ಯವೂ ನಮ್ಮ ದೇಹದ ಒಂದೊಂದು ಅಂಗದೊಂದಿಗೆ, ನಮ್ಮ ಮನಸಿನ ಒಂದೊಂದು ಭಾವ ಅಥವಾ ರಾಗದೊಂದಿಗೆ ತಳಕು ಹಾಕಿಕೊಂಡಿದೆ. ಸುಖಾನುಭವ ದೊರೆಯುವುದು ಇಂಥ ಕೇಳ್ವಿಕೆಯಿಂದ. ಆದರೆ ಸುಖಾನುಭೂತಿ ಅಥವಾ ಆನಂದ ದೊರೆಯುವುದು ಇಡಿಯಾಗಿ ಅವೆಲ್ಲ ಒಗ್ಗೂಡಿ ನಮ್ಮನ್ನು ಆವರಿಸಿಕೊಂಡಾಗ. ಸಂಗೀತದ ಶಕ್ತಿ ಇದೇನೆ. 

ಯಾರನ್ನ ಕುಸುರ್‌ವಾರ್‌ ಅಂತೀರಿ? ಯಾರೂ ಬೇಕಸೂರರು ಅಲ್ಲ (ಯಾರನ್ನ ಅಪರಾಧಿಗಳು ಅಂತೀರಿ? ಆದರೆ ನಿರಪರಾಧಿಗಳೂ ಯಾರಿಲ್ಲ) ಇದೊಂದು ಜಮಾನಾ.  ಈ ಯುಗಧರ್ಮ ಹೀಗಿದೆ. ಹಲವಾರು ಜನರ ಬದಲಿಗೆ ಕಂಪ್ಯೂಟರ್‌ ಪ್ರೊಗ್ರಾಂಗಳನ್ನು, ಕೀಬೋರ್ಡುಗಳನ್ನು ಬಳಸಲಾಗುತ್ತಿದೆ. ಆದರೆ ನನಗೆ ಭರವಸೆ ಇದೆ. ಮತ್ತೆ ಎಲ್ಲರೂ ನಮ್ಮ ಪರಂಪರಾಗತ ಜ್ಞಾನಕ್ಕೆ ಹಿಂದಿರುಗುತ್ತಾರೆ. ಅಲ್ಲಿಯವರೆಗೂ ಆ ಜ್ಞಾನವನ್ನು ಉಳಿಸಿಕೊಳ್ಳುವ ಕೆಲವು ಮನಸುಗಳು, ಜೀವಗಳು ಭಾರತದಲ್ಲಿ ಇನ್ನೂ ಬದುಕಿವೆ.

ನಾನು ಪಶ್ಚಿಮಕ್ಕೆ ಹೋದಾಗ ನನ್ನ ಸಂಗೀತದ ಹೆಗ್ಗಳಿಕೆ ನನ್ನೊಟ್ಟಿಗೆ ಇತ್ತು. ಸಂಗೀತದ ಚೈತನ್ಯ ಮತ್ತು ಸಾಮರ್ಥ್ಯ ಎರಡೂ ಅಗಾಧವಾದವು. ನಾನು ಮತ್ತು ಉಸ್ತಾದ್‌ ಜಾಕಿರ್‌ ಹುಸೇನ್‌ ಶಾಂತಿ ಬ್ಯಾಂಡ್‌ ಮಾಡಿದಾಗ ಈ ಮಾತಿಗೆ ಮತ್ತಷ್ಟು ಪುರಾವೆ ದೊರೆಯಿತು.

ಸಂಗೀತ ವಿಶ್ವಶಾಂತಿಯ ಭಾಷೆ. ನಾನಿಲ್ಲಿ ಬಂದಿದ್ದು ಕೇವಲ ಪ್ರಶಸ್ತಿಯ ಸನ್ಮಾನ ಸ್ವೀಕರಿಸಲು ಅಲ್ಲ. ಬಾಲೆಖಾನ್‌ ಅವರ ನೆನಪನ್ನು ನನ್ನೊಟ್ಟಿಗೆ ಕರೆದೊಯ್ಯಲು. 24–25 ವರ್ಷಗಳಾಗಿರಬೇಕು ನಾನು ಇಲ್ಲಿಗೆ ಬಂದು. ಬೆಂಗಳೂರಿಗೆ ಬಂದು ಯಾವ ಕಾಲವಾಯಿತೋ ನೆನಪೂ ಇಲ್ಲ. ಬೆಂಗಳೂರಿನ ನಕ್ಷೆ ಬದಲಾಗಿದೆ. ಮೊದಲೆಲ್ಲ ಹಸಿರು ಇರುತ್ತಿತ್ತು. ಈಗ ಕಟ್ಟಡಗಳು ಕಾಣ್ತಿವೆ. ಬದಲಾಗದೇ ಇರೋದು ಸಂಗೀತಾಸಕ್ತರು ಮತ್ತು ಅವರ ಅಭಿರುಚಿ..

ಅಚ್ಛಾ.. ಈಗ ನೀ ಹೇಳು, ನಿನಗೆ ಹೇಗನಿಸಿತು ಇಂದಿನ ಕಛೇರಿ? ಮೂರು ವರ್ಷಗಳ ನಂತರ ವೇದಿಕೆ ಏರಿದ್ದು. ಬಾಲೆಖಾನರಿಗೆ ಗೌರವ ಸಲ್ಲಿಸಲೆಂದೇ ಇಂದು ಪ್ರಸ್ತುತಪಡಿಸಿದೆ. ಮೊದಮೊದಲು ಅದ್ಯಾಕೋ ತಂತಿ ಬಿಗಿದಂತೆ ಅನಿಸುತ್ತಿತ್ತು. ಕೇಳುಗಳಾಗಿ ಹೇಳು, ವಯಸ್ಸಾಯಿತು ಆಶೀಷ್‌ ಖಾನ್‌ಗೆ ಅಂತನಿಸಿತೆ?

‘ಇಲ್ಲ. ನನಗೆ ಈ ಕಛೇರಿ ಕಭಿ ದವಾ ಲಗಾ, ತೊ ಕಭಿ ದುವಾ ಲಗಾ’ (ಈ ಕಛೇರಿ ನನಗೆ ಕೆಲವೊಮ್ಮೆ ಔಷಧಿಯಂತೆಯೂ, ಕೆಲವೊಮ್ಮೆ ಪ್ರಾರ್ಥನೆಯಂತೆಯೂ ಅನಿಸಿತು)  ಜೋರಾಗಿ ನಕ್ಕರು.. ಮತ್ತೆ ಮಾತಿಗಿಳಿದರು.

ಸಂಗೀತ ನಮ್ಮನ್ನು ಶಾಂತಗೊಳಿಸುತ್ತದೆ. ನಮ್ಮನ್ನು ಬ್ರಹ್ಮಾಂಡದ ಜೊತೆಗೆ ಬೆಸೆಯುತ್ತದೆ.  ಕೆಲವೊಮ್ಮೆ ನನ್ನ ಸರೋದ್‌, ನನ್ನ ಸಂಗೀತ ನನ್ನನ್ನು ಆಪೋಷನ ತೆಗೆದುಕೊಂಡಂತೆ ಅನಿಸುತ್ತದೆ. ನಾನು ಕಳೆದೇ ಹೋಗುತ್ತೇನೆ, ಅಥವಾ ಆ ಸಂಗೀತ ಆ ನಾದವೇ ನಾನಾಗುತ್ತೇನೆ. ಆ ತಾದಾತ್ಮವೇ ಆತ್ಮಾನಂದ. 

ನೀವು ಸರೋದ್‌ ಹಗುರಗೊಳಿಸಿದ್ರಿ ಅಂತಾರಲ್ಲ... ಹೌದಾ.. ಹಂಗೆ ನೆನಪಿಸಿಕೊಳ್ತಾರಾ?

ನಿಜ. ಮೊದಲಿನ ಸರೋದ್‌ತುಂಬಾ ಭಾರವಾಗಿರುತ್ತಿದ್ದವು. ಅವುಗಳ ಭಾರವನ್ನು ಕಡಿಮೆಗೊಳಿಸುವಂತೆ ವಿನ್ಯಾಸಗೊಳಿಸಿದೆ. ಒಂದಷ್ಟು ಕೇಜಿಗಳ ಭಾರ ಕಡಿಮೆ ಆಯ್ತು. ಆಗ ಕಲಾವಿದರಿಗೆ ಅನುಕೂಲ ಆಯ್ತಲ್ಲ. ನೋಡಲು ಚಂದ ಕಾಣುತ್ತದೆ. ರೂಢಿಗತವಾಗಿ ಬೃಹತ್‌ ಬುರುಡೆಯ ಬದಲು ಅದನ್ನು ಕಡಿಮೆಗೊಳಿಸಿದೆ. ಬದಲಾವಣೆ ಯಾವತ್ತಿಗೂ ಸುಧಾರಣೆಯ ಪರವಾಗಿರಬೇಕು. 

ಮಾತಾಡುವಾಗಲೆಲ್ಲ ಅವರ ಜಟೆಗಳು ಗಮನಸೆಳೆಯುತ್ತಲೇ ಇದ್ದವು. ತಡೆಯದೆ, ಈ ಜಟೆಗಳನ್ನು ಯಾಕೆ ಬೆಳೆಸಿದ್ರಿ?

ಇವನ್ನ.. ಇವನ್ನು ನಾನು ಬೆಳೆಸಲಿಲ್ಲ. ಅವು ಹುಟ್ಟಿದವು. ಬೆಳೆದವು. ಒಂದಿನ ಮಲಗಿ ಎದ್ದಾಗ ಒಂದು ಕಡೆ ಇಂಥ ಜಟೆ ನೋಡಿದೆ. ಅದ್ಯಾಕೋ ಕತ್ತರಿಸುವ ಮನಸಾಗಲಿಲ್ಲ. ಅದೊಂದು ಬಗೆಯ ದೈವೀಕ ಬೆಳವಣಿಗೆ ಎನಿಸಿತು. ಬೆಳೆಸಿದೆ. ಕೆಲದಿನಗಳಲ್ಲಿ ಇನ್ನೊಂದು ಕಡೆಯೂ ಕಾಣಿಸಿಕೊಂಡಿತು. ಇದೀಗ ಎರಡು ದಶಕಗಳ ಮೇಲಾಯಿತು. ಪಾದ ದಾಟಿ ಬೆಳೆದಿವೆ. ಅದಕ್ಕೇ ಹೀಗೆ ಎರಡು ಮೂರು ಮುಡಿಪಾಗಿ ಕಟ್ಟಿಕೊಳ್ಳುತ್ತೇನೆ.

ಆಶೀಷ್‌ ಖಾನ್‌ ಭಾರತವನ್ನು ಹೇಗೆ ನೆನಪಿಸಿಕೊಳ್ಳುತ್ತಾರೆ?

ಭಾರತವನ್ನು ನೆನಪಿಸಿಕೊಳ್ಳುವುದಲ್ಲ, ಭಾರತವನ್ನು ಅನುಭವಿಸುವುದು. ನಮ್ಮ ಪ್ರಾರ್ಥನೆಯಲ್ಲಿ, ಶ್ರದ್ಧೆಯಲ್ಲಿ, ಭಾಷೆ, ಆಹಾರ, ಬದುಕು, ಪರಂಪರೆ ಸಂಗೀತ, ನಾದೋಪಾಸನೆ, ಎಲ್ಲಕ್ಕೂ ಮಿಗಿಲಾಗಿ ಸಮರ್ಪಣೆ. ಹೀಗೆ ಪದಗಳನ್ನು ಹೇಳುವುದಲ್ಲ.. ಅವುಗಳಲ್ಲಿ ಭಾರತವನ್ನು ಕಾಣುತ್ತೇನೆ.

ತಾನ್‌ ಸೇನನ ವಂಶಸ್ಥರು
ಸಂಗೀತಗಾರರಾದ ಅಲಿ ಅಕ್ಬರ್‌ ಖಾನ್‌, ಜುಬೇದಾ ಬೇಗಂ ಅವರ ಮಗ ಆಶೀಷ್‌ ಖಾನ್‌ ದೇವಶರ್ಮಾ, 1939ರ ಡಿ. 5ರಂದು ಮೈಹರ್‌ನಲ್ಲಿ ಜನಿಸಿದರು. ಸರೋದ್‌ ಮಾಂತ್ರಿಕ ಅಲಾವುದ್ದೀನ್‌ ಖಾನ್‌ ಅವರ ಮೊಮ್ಮಗ. ಅಲಾವುದ್ದೀನ್‌ ಖಾನ್‌ ಅವರು ಸೇನಿಯಾ ಮೈಹರ್ ಘರಾನೆ ಸ್ಥಾಪಿಸಿದವರು. ತಾನಸೇನ್‌ ವಂಶಸ್ಥರು ಎಂದು ಹೇಳಲಾಗುತ್ತದೆ. ಅಲಾವುದ್ದೀನ್‌ ಖಾನ್‌ ಸ್ಥಾಪಿಸಿರುವ ತಾನಸೇನ್‌ ಸಂಗೀತ ಶಾಲೆ ಈಗಲೂ ಕಾರ್ಯನಿರ್ವಹಿಸುತ್ತಿದೆ. ಆಶೀಷ್‌ ಖಾನ್‌ ಹಿಂದೂಸ್ತಾನಿ ಮತ್ತು ಪಾಶ್ಚಿಮಾತ್ಯ ಸಂಗೀತ ಎರಡರಲ್ಲಿಯೂ ಖ್ಯಾತಿಗಳಿಸಿದವರು. ಕ್ಯಾಲಿಫೋರ್ನಿಯಾದಲ್ಲಿ ಹಿಂದೂಸ್ತಾನಿ ಸಂಗೀತ ವಿಭಾಗದಲ್ಲಿ ಪ್ರೊಫೆಸರ್‌ ಆಗಿದ್ದವರು. ಮೈಹರ್ ಘರಾನೆಯ ಆಶೀಶ್‌ ಖಾನ್‌, ಸಂಗೀತದಲ್ಲಿ ಸಾಕಷ್ಟು ಪ್ರಯೋಗಗಳನ್ನು ಕೈಗೊಂಡವರು. ಅವರ ಗೋಲ್ಡನ್‌ ಸ್ಟ್ರಿಂಗ್ಸ್‌ ಆಫ್‌ ಸರೋದ್‌ ಗ್ರ್ಯಾಮಿ ಪ್ರಶಸ್ತಿಗೆ ನಾಮಾಂಕಿತವಾಗಿತ್ತು. ಸದ್ಯ ನ್ಯೂಯಾರ್ಕ್‌ನಲ್ಲಿ ವಾಸವಾಗಿದ್ದಾರೆ.

ಭಾರತ ನಿಮ್ಮನ್ನು ಹೇಗೆ ನೆನಪಿಸಿಕೊಳ್ಳಬೇಕು..

ಅದನ್ನು ನಾನೇನು ಹೇಳುವುದು.. ನಾನೊಬ್ಬ ಸಂಗೀತದ ಸೇವಕ. ಮೈಹರ್‌ ಘರಾನೆಯ ಸೇವಕ. ಇದನ್ನು ಹೊರತು ಪಡಿಸಿದರೆ ಏನೇನೂ ಹೇಳಲು ತೋಚುತ್ತಿಲ್ಲ... 

ಕೋವಿಡ್‌ ಕಾಲ ಕಳೆಯಿತು. ಇನ್ನು ಆಗಾಗ ಸಿಗುವ ದುವಾ ಮಾಡಣ. ವಯಸ್ಸಿನ ಕಾರಣದಿಂದ ನನ್ನ ಹೆಣ್ಣುಮಕ್ಕಳು ಪ್ರವಾಸ ಸಾಕೆನ್ನುತ್ತಾರೆ. ಕೋವಿಡ್‌ ಸಮಯದಲ್ಲಿ ಮಧುಮೇಹದಿಂದಾಗಿ ಕಾಲು ಕತ್ತರಿಸುವಂಥ ಪ್ರಸಂಗ ಎದುರಾಯಿತು. ಹೆಣ್ಣುಮಕ್ಕಳಿಬ್ಬರೂ ತಾಯಿಯಂತೆ ಕಾಳಜಿ ಮಾಡಿದರು. ನಮ್ಮ ನೋವನ್ನು ನಾವೇ ಅನುಭವಿಸಬೇಕಲ್ಲ. ಆ ನೋವು ತಡೆಯಲಾಗದೇ ಅಳುತ್ತಿದ್ದೆ. ನನ್ನ ಆಕ್ರಂದನ ನನಗೇ ಅಸಹನೀಯವೆನಿಸುತ್ತಿತ್ತು.

ದೇಹವನ್ನು ದೇಗುಲದಂತೆ ಗೌರವದಿಂದ ಕಾಣಬೇಕು. ಸ್ವಪ್ರೀತಿ ಬಲು ಮುಖ್ಯ. ಶ್ರದ್ಧೆಯಿಂದ ನಮ್ಮನ್ನು ನಾವೇ ಆರೈಕೆ ಮಾಡಿಕೊಳ್ಳಬೇಕು ಎಂಬ ಪಾಠ ಆ ಸಂದರ್ಭದಲ್ಲಿ ಕಲಿತೆ. ನೀವು ಎಲ್ಲ ಕಣ್ತುಂಬ ನಿದ್ದೆ ಮಾಡಿ, ಹೊಟ್ಟೆಯಲ್ಲಿ ಒಂಚೂರು ಜಾಗ ಇರುವಾಗಲೇ ಊಟ ಸಾಕು ಮಾಡಿ. ಮತ್ತೆ ನಿಮ್ಮ ನೆಲದ, ನೀವು ಬೆಳೆಯುವ ಆಹಾರವನ್ನೇ ಊಟ ಮಾಡಿ. ಅಸ್ವಸ್ಥರೆನಿಸಿದರೆ, ದಣಿವಾದರೆ ಸಂಗೀತವನ್ನು ಕೇಳಿ. ಆನಂದಿಸಿ. ಇದಕ್ಕಿಂತ ಬೇರೆ ಚಿಕಿತ್ಸೆ ಯಾವುದೂ ಇಲ್ಲ.

ಈ ಸಲ ಆರೋಗ್ಯದ ಕಾರಣದಿಂದ ಸಣ್ಣ ಕಛೇರಿ ನೀಡಿದೆ. ಮುಂದಿನ ಸಲ ಬರುವಾಗ ಗಟ್ಟಿಯಾಗಿ ಬರುವೆ. ಬೆಂಗಳೂರಿನ ಕೇಳುಗರಿಗೆ ರಸದೌತಣ ನೀಡುವೆ. ಹಾಗೆ ಆಗಲಿ ಎಂದು ಪ್ರಾರ್ಥಿಸಿ, ಬಯಸಿ ಎನ್ನುತ್ತ ಖುಷ್‌ ರಹೊ, ಆಬಾದ್‌ ರಹೊ (ಖುಷಿಯಾಗಿರು, ಸಮೃದ್ಧಿಯಾಗಿರು) ಎಂದು ಹರಸುತ್ತ ಮಾತು ಮುಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.