ADVERTISEMENT

ಆಟಗಳಲ್ಲಿ ಸಂಸ್ಕೃತಿಯ ಹುಡುಕಾಟ

ಡಾ.ರಾಜೇಗೌಡ ಹೊಸಹಳ್ಳಿ
Published 9 ಮಾರ್ಚ್ 2019, 19:30 IST
Last Updated 9 ಮಾರ್ಚ್ 2019, 19:30 IST
   

ಪ್ರಾಣಿಯ ಹೊಟ್ಟೆ ಒಳಗಿನ ಬ್ಲಾಡರ್ ಅದು ಕಮ್ಮಾರನ ತಿದಿಯಂತೆ. ಅದನ್ನು ತೊಳ್ಳೆ ಎನ್ನುವರು. ಬ್ರಿಟಾನಿಕ ವಿಶ್ವಕೋಶದಲ್ಲಿ ಈ ಬ್ಲಾಡರೇ ಚೆಂಡಾಟಕ್ಕೆ ಆಕರ ಎಂದುಂಟು. ನಾವು ಹಾಸನ ಅರೆಮಲೆನಾಡು ಕಡೆ ಬಿಸಿಲು ಕಾಲದ ಹೆಂಟೆಗದ್ದೆ ಉತ್ತು ಮಧ್ಯಾಹ್ನದಲ್ಲಿ ಬಿಡುವಿಗೆ ಬಂದಾಗ ಊರ ಮುಂದೆ ಲಗ್ಗೆಯಾಟ, ಲಗೋರಿ ಹಾಗೂ ಗ್ರಾಮೀಣ ಕ್ರಿಕೆಟ್ ಎಂದು ಕರೆಯಬಹುದಾದ ಚೆಂಡಾಟ ಆಡುತ್ತಿದ್ದೆವು. ಗ್ರಾಮೀಣ ಕ್ರಿಕೆಟ್ ಇದು ದೇಶೀಯೋ ಪರದೇಶಿಯೋ ಎನ್ನಬೇಕಿಲ್ಲ. ಮಾನವ ಜಗದಾದ್ಯಂತ ಆಲೋಚಿಸುವುದು ಒಂದೇ ರೀತಿ. ಈ ಗ್ರಾಮೀಣ ಕ್ರಿಕೆಟ್‌ನಲ್ಲಿ ಎರಡು ಪಂಗಡ. ಒಂದು ಫೀಲ್ಡ್ ಕಾಯುವುದು, ಮತ್ತೊಂದು ಹೆಂಚಿನ ಪಿಲ್ಲೆಯ ಟಾಸ್ ಗೆದ್ದು ಬ್ಯಾಟ್ ಹಿಡಿವ ತಂಡ. ಮಾರಂತರದಲ್ಲಿ ಎರಡು ದಪ್ಪ ಕಲ್ಲು. ಅವುಗಳ ಮೇಲೆ ಅಡ್ಡಲಾಗಿ ಒಂದು ಕೋಲು. ಇದೇ ವಿಕೆಟ್. ಎಡಗೈಲಿ ಬಟ್ಟೆ ತುಂಡುಗಳಿಂದ ಹುರಿ ಮೂಲಕ ದಬ್ಬಳದಲ್ಲಿ ಹೊಲಿದು ಮಾಡಿದ ಚೆಂಡು. ಬಲಗೈಲಿ ಒಂದು ಸೌದೆ ತುಂಡೇ ಬ್ಯಾಟು. ಸೋತವರು ‘ಕುದುರೆ’ಗಳಾಗಿ ಗೆದ್ದವರು ಅವರ ಹೆಗಲ ಮೇಲೆ ಏರಿ ಟರ್‌ಟರ್ ಎನ್ನುತ್ತಾ ಆಟ ಮುಕ್ತಾಯ.

ಹೂವಿನ ಚೆಂಡು: ಮದುವೆಯ ಧಾರೆಯಾದ ಮಾರನೆ ದಿನ ಗಂಡಿನ ಮನೆಯಲ್ಲಿ ನಾಗೋಲೆ ಅರಿಸಿನ ಶಾಸ್ತ್ರದಲ್ಲಿ ಹಸೆಮಣೆ ಅಷ್ಟಂತರದಲ್ಲಿ ಗಂಡು ಹೆಣ್ಣು ನಿಲ್ಲಿಸಿ ಅರಿಸಿನ ನೀರು ಹುಯ್ದು ಹೂವಿನ ಚೆಂಡುಗಳನ್ನು ಅರಿಸಿನ ನೀರಿಗೆ ಅದ್ದಿ ಕೊಡುವರು. ಎದುರು ಬದುರು ಮದುಮಕ್ಕಳು ಈ ಹೂವಿನ ಚೆಂಡಾಡಬೇಕು.

ಖುಷಿಗಾಗಿ ಸಾಲಾವಳಿಯಾದವರು ಅನಂತರ ಹೂವಿನ ಚೆಂಡಾಟ ಆಡುವುದುಂಟು. ಕುಮಾರ ರಾಮನು ಹೊಡೆದ ಚೆಂಡು ಚಿಕ್ಕಮ್ಮ ರತ್ನೋಜಿ ಕೋಣೆಗೆ ಹೋದಾಗ ಆಕೆಯನ್ನು ಕೆಣಕಿದ ಕಾಮದ ಚೆಂಡು ಆತನ ತಲೆಕಡಿಸಿದ್ದುಂಟು. ದಕ್ಷಿಣ ಕನ್ನಡದ ಪೊಳಲೆ, ಮುಗ್ಗೇರ ಕೋಲ ಆಚರಣೆಗಳಲ್ಲಿ ಚೆಂಡಾಟ ಸಾಂಸ್ಕೃತಿಕ ಪಳೆಯುಳಿಕೆಯೂ ಹೌದು.

ADVERTISEMENT

ಆನೆ ಕುರಿಯಾಟ: ಗವಿ ಮಾನವ ಪಶು ಪಾಲಕನಾದ. ತ್ರಿಕೋನಾಕೃತಿಯ ಗುಡಿಸಲು ಕಟ್ಟಿದ. ಆನೆ ಹುಲಿ ಕಿರುಬಗಳಿಂದ ರಕ್ಷಿಸಿಕೊಳ್ಳುವ ಹುನ್ನಾರ ಕಲಿತ. ಇದೆಲ್ಲದರ ಪ್ರತಿರೂಪ ಈ ಆಟ. ತ್ರಿಕೋನಾಕಾರಗಳನ್ನು ಕೂಡಿಸಿ ಮಸಿಯಿಂದ ಕಲ್ಲುಬಂಡೆಯ ಮೇಲೆ ಬರೆದೋ ಕೆತ್ತಿಯೋ ಬರೆದ ರೂಪದಲ್ಲಿ ಹಾಲಿವಾಣ ಮುಂತಾದ ಬೀಜಗಳನ್ನು ಮನೆಯಿಂದ ಮನೆಗೆ ನಡೆಸುತ್ತಾ ಕುರಿ ಹೇಗೆ ತಪ್ಪಿಸಿಕೊಳ್ಳಬೇಕೆಂಬ ಸಂಕೇತ ರೂಪಿಸಿಕೊಂಡ ವಿಧಾನದ ಆಟವಿದು.

ಈಜಿಪ್ಟಿನ ಪಿರಮಿಡ್ಡುಗಳು ತಾಂತ್ರಿಕ ಜಗತ್ತಿನ ತ್ರಿಕೋನ ರಂಗೋಲೆಗಳು. ಅಷ್ಟೇ ಏಕೆ ಆಕಾಶವು ಭೂಮಿ ಮೇಲೆ ಕವಿದ ವಿಧಾನವು ಶಿವಶಿವೆಯರಾಡುವ ಆಡುಂಬೊಲ.

ಚೌಕಾಬಾರ: ಮಾನವ ನಾಗರಿಕವಾಗಿ ರೂಪುಗೊಂಡು ತ್ರಿಕೋನ ಗುಡಿಸಲುಗಳಿಂದ ಚೌಕಾಕಾರದ ಚದರ ರೀತಿಯ ಮನೆಗಳನ್ನು ವಿಸ್ತರಿಸಿಕೊಂಡ. ಇದೆಲ್ಲದರ ಪ್ರತೀಕವೇ ಚೌಕಾಬಾರ. 5x5 ರ 25 ಅಂಕಣದ ಚದರ ಮನೆಯಾಟವಿದು.

ಒಂದು ಮಗ್ಗಲು ಸವೆದ ಹುಣಸೇ ಬೀಜಗಳೋ ಕವಡೆಗಳೋ ನಾಲ್ಕು ಅವೇ ದಾಳಗಳು. ಆಟಕ್ಕೆ ನಾಲ್ಕುಕಡೆ ಅಥವಾ ಎರಡು ಕಡೆ ಕುಳಿತವರು ನಡೆಸುವ ನಾಲ್ಕು ಕಾಯಿಗಳು ಲೆಕ್ಕಾಚಾರದಲ್ಲಿ ನಡೆಯುತ್ತಾ ಕಾಯಿ ‘ಕಡಿಸಿ’ಕೊಳ್ಳದೆ 24ನೇ ಮನೆಯಲ್ಲಿ ನಾಲ್ಕೂ ಸಹಾ ಸೇರಿದರೆ ‘ಹಣ್ಣಾಯ್ತು’ ಎನ್ನುವರು. ಇದರ ಮುಂದಿನ ವಿಧಾನವೇ ಋಗ್ವೇದದಲ್ಲಿರುವ ಅಕ್ಷ ಎಂಬ ಮಾಹಿತಿ. ಅದೇ ಚದುರಂಗದಾಟ. ಅಡವಿಗೆ ಪಾಂಡವರನ್ನು ಅಟ್ಟಿದ್ದು ಇದೇ ಹೌದು. ಈ ಮಾದರಿ ನವೀನ ಮಾದರಿಯ ರೂಪ ತಾಳಿ ಎಂಜಿನಿಯರುಗಳ ಹಣವಂತರ ಕೈಗೆ ಸಿಕ್ಕಿ ಅನೇಕ ಚದುರಗಳ ಮನೆಗಳಾಗಿ ಮೌಢ್ಯದ ವಾಸ್ತು ಪ್ರವೀಣರಿಗೆ ಸಹಾ ಸಿಕ್ಕಿದ್ದುಂಟು.

ಚನ್ನೆಮಣೆಯಾಟ: ಅಶೋಕ ವನದಲ್ಲಿ ಸೀತೆ ಒಬ್ಬಳೇ ಆಡುತ್ತಿದ್ದಳಂತೆ. ಹೆಚ್ಚಾಗಿ ಹೆಂಗಸರು ಬೇಸರ ಕಳೆಯುವ ಆಟ. ಏಳು ಬಟ್ಟಲಿನ ಎರಡು ಸಾಲಿನ ಚನ್ನೆಮಣೆ ಬಟ್ಟಲೊಳಗೆ ಹಾಲಿವಾಣದ ಅಥವಾ ಹುಣಸೆ ಬೀಜದಂತವು ಇಟ್ಟು ಲೆಕ್ಕಾಚಾರದಲ್ಲಿ ಆಡುತ್ತಾರೆ. ಏಳೆಂಬ ಸಂಖ್ಯೆ ವ್ಯಾಪಾರ ವ್ಯವಹಾರದಲ್ಲಿ ಅಶುಭ. ಬಾಯಿಬಿಟ್ಟು ಹೇಳದೆ ಆ ಸಂಖ್ಯೆ ಬಂದಾಕ್ಷಣ ‘ಹೆಚ್ಚಲಿ’ ಎನ್ನುವರು. ಏಳು ಸಮುದ್ರದಾಚೆ ಕೀಳು ಸಮುದ್ರ, ಸಪ್ತಪದಿ, ಕರ್ಮಸಿದ್ಧಾಂತ ಸೂಚನೆ ಕೊಡುವ ಇದು ವೈದಿಕ ಪ್ರಭಾವದ ಜನರಾಟ. ಗ್ರಾಮೀಣರಲ್ಲಿ ಕಡಿಮೆ.

ಕಣ್ಣಾಮುಚ್ಚೆ ಕಾಡೇ ಗೂಡೇ: ಅಜ್ಜಿ ಇಲ್ಲಿ ನಾಯಕಿ. ಮಗುವಿನ ಕಣ್ಣುಮುಚ್ಚಿ ‘ಕಣ್ಣಾ ಮುಚ್ಚೆ ಕಾಡೇಗೂಡೆ/ ಉದ್ದಿನ ಮೂಟೆ ಉರುಳೇ ಹೋಯ್ತು. ನಮ್ಮಯ ಹಕ್ಕಿ ಬಿಟ್ಟೆ ಬಿಟ್ಟೆ / ನಿಮ್ಮಯ ಹಕ್ಕಿ ಅಡಗಿಸಿಕೊಳ್ಳಿರಿ’ ಎಂದು ಹೇಳಿ ಕಣ್ಣು ಬಿಟ್ಟಾಗ ಆ ಮಗು ಅಡಗಿದ್ದ ಇತರೆ ಮಕ್ಕಳನ್ನು ಮುಟ್ಟಿ ಔಟ್ ಮಾಡಬೇಕು.

ಈ ಆಟ ಇಹ-ಪರ-ಕರ್ಮಸಿದ್ಧಾಂತ ಹೇಳುತ್ತದೆನ್ನುವರು. ಮುಟ್ಟಚಿಟ್ಟಿನ ವರ್ಣಪದ್ಧತಿ ಹೇಳುತ್ತದೆನ್ನುವರು. ಬೆಳಗೆರೆ ಕೃಷ್ಣಶಾಸ್ತ್ರಿಯವರ ‘ಯೇಗ್ದಾಗೆಲ್ಲಾ ಐತೆ’ ಎಂಬ ಪುಸ್ತಕವು ದಶರಥ ರಾಜ ಕಣ್ಣು ಮುಚ್ಚಿದಾಗ ಶ್ರಿರಾಮ ಕಾಡು ಸೇರಿ ಉದ್ದಿನ ಮೂಟೆಯಂತೆ ರಾವಣನ ಕೆಡವಿ ಸೀತೆಯನ್ನು ರಕ್ಷಿಸಿಕೊಂಡ ಸೂಚನೆ ಕೊಡುತ್ತದೆ. ಈ ಪ್ರತಿಮಾ ವಿಧಾನಗಳು ಏನೇ ಇರಲಿ ಬಿಡುವಿನ ವೇಳೆಯ ನಲಿದಾಟವಿದು.

ಕೈಕೈ: ಕೈಕೈ ಎಲ್ಲಿ ಹೋದವು? ಸಂತೆಗೆ ಹೋದವು / ಸಂತೇಲಿ ಏನ್ತಂದೆ? ಬಾಳೆ ಹಣ್ಣು ತಂದೆ / ಬಾಳೆ ಹಣ್ಣ ಏನ್ಮಾಡಿದೆ? ತಿಂದು ತಿಂದು ಕದವಿನ ಮೂಲೆ ಹಾಕಿದೆ / ಕದ ಏನು ಕೊಡ್ತು? ಚಕ್ಕೆ ಕೊಡ್ತು/ ಚಕ್ಕೆ ಏನು ಮಾಡಿದೆ? ಒಲೆಗೆ ಹಾಕಿದೆ/ ಒಲೆ ಏನು ಕೊಡ್ತು? ಬೂದಿ ಕೊಡ್ತು / ಬೂದಿ ಏನು ಮಾಡಿದೆ? ಹೊಲಕ್ಕೆ ಹಾಕಿದೆ / ಹೊಲ ಏನು ಕೊಡ್ತು? ಗರಿಕೆ ಕೊಡ್ತು/ ಗರಿಕೆ ಏನು ಮಾಡಿದೆ? ಹಸುಗೆ ಹಾಕಿದೆ / ಹಸು ಏನು ಕೊಡ್ತು? ಹಾಲು ಕೊಡ್ತು / ಹಾಲೇನ್ಮಾಡದೆ? ರ‍್ಬೂತಿಗೆ ಕೊಟ್ಟೆ…. ಕೈಕೈ ಬಂತು ಕೈ ಬಂತು.)
ಅಪ್ಪಪ್ಪಂಡ /ಆಲಿಮೊಗ್ಗು: ಊರೊಳಗಲಮ್ಮ/ ಕಲ್ಕಲ್ಲಮ್ಮ / ಕಾಲಿಗೆ ಗೆಜ್ಜೆ/ಮಾವಿನ ಮೊಗ್ಗು ಮುನಿಸ್ಕೆಂತು ಎಂದಾಕ್ಷಣ ಸುತ್ತಲೂ ಹಸ್ತಗಳನ್ನು ಊರಿ ಕುಳಿತ ಮಕ್ಕಳು ಹಸ್ತ ಮೇಲ್ಮುಖ ಮಾಡುವರು. ಹೀಗೆ ಎಲ್ಲಾ ಹಸ್ತಗಳು ಮೇಲ್ಕುಖವಾದಾಗ ಎಲ್ಲರ ಕೈಗಳು ಬೆನ್ನ ಹಿಂದಕ್ಕೆ ಹೋಗುವವು. ಆಟದ ನಾಯಕ ಮಗು ಹೇಳುವಾಗ ಕೈಕೈ ಎಲ್ಲಿ ಹೋದವು? ಸಂತೆಗೆ ಹೋದವು …/ ಹಾಲೇನ್ಮಾಡದೆ? ರ‍್ಬೂತಿಗೆ ಕೊಟ್ಟೆ… ಹೀಗೆ ಸಾಗಿ ಕೈಕೈ ಬಂತು ಕೈ ಬಂತು. ಆ ಮುಗೀತು ಎನ್ನುವರು.

ಹೊಟ್ಟೆಗಿಲ್ಲದ ಮಕ್ಕಳಿಗೆ ಹಾಲು ಹಂಚುಣ್ಣುವ ವಿಧಾನವಿರಬೇಕು. ಈ ಆಟ ಮಕ್ಕಳಿಗೆ ಪರಿಸರ ಪಾಠ ಕಲಿಸುವ ಜೊತೆಗೆ ಬದುಕಿನ ಪ್ರಥಮ ಪಾಠ ಕಲಿಸುವ ವಿಧಾನ. ಈ ಆಟದ ಪೂರ್ವಾರ್ಧದಲ್ಲಿ ಮೂಟೆಗಳ ರೀತಿ ಮಕ್ಕಳು ಕೈಹಿಡಿ ಜೋಡಿಸುತ್ತಾ ಇದೆಂತಾ ಇದೆಂತಾ ಮೂಟೆ ಎಂದು ಹೇಳುತ್ತಾ ಬೆನ್ನು ಹಿಂದೆ ಕೈಹೋಗುವ ರೀತಿ ಕೂಡ ಉಂಟು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.