
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಬ್ಯಾಣಗಳಲ್ಲಿ ಶಾಲಾ ಮಕ್ಕಳು ಓಡಾಡುತ್ತಿದ್ದರು. ಆಗಸದೆತ್ತರಕ್ಕೆ ಬೆಳೆದಿದ್ದ, ದಪ್ಪ ಮುಳ್ಳುಗಳಿಂದ ಕೂಡಿದ ಮರವೊಂದು ಅವರ ಗಮನ ಸೆಳೆಯಿತು. ಅದರ ಕೆಳಗೆ ಬಿದ್ದಿದ್ದ ಕಪ್ಪುಬಣ್ಣದ ಒಣಕಾಯಿ ವಿಚಿತ್ರ ಪರಿಮಳ ಬೀರುತ್ತಿತ್ತು. ಕುತೂಹಲದಿಂದ ಹೆಕ್ಕಿ ರುಚಿ ನೋಡಿದ ಕ್ಷಣದಲ್ಲೇ ಮೈಯಲ್ಲಿ ‘ಜುಮ್’ ಎನ್ನುವ ಅನುಭವ. ಕ್ಷಣಕಾಲ ಮಕ್ಕಳು ಗಾಬರಿಗೊಂಡರು– ‘ವಿಷದ ಕಾಯಿ ತಿಂದೆವೋ?’
ಅವರ ಜೊತೆಗಿದ್ದ ಸ್ಥಳೀಯ ರಾಮಿ ಗೌಡ ನಗುತ್ತಾ ಹೇಳಿದರು: ‘ಅದು ವಿಷ ಅಲ್ಲ. ನಮ್ಮ ಮೀನುಸಾರಿಗೆ ಹಾಕೋ ಜುಮ್ಮನಕಾಯಿ!’ ಅಲ್ಲಿಂದಲೇ ಈ ಅಪರೂಪದ ಮಸಾಲೆಯ ಕಥೆ ಆರಂಭವಾಯಿತು.
ಜುಮ್ಮನಕಾಯಿ ಮರ (Zanthoxylum rhetsa) ಪಶ್ಚಿಮ ಘಟ್ಟಗಳ ವೈಶಿಷ್ಟ್ಯಪೂರ್ಣ ಸಸ್ಯ. ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಶಿರಸಿ, ಸಿದ್ಧಾಪುರ ಹಾಗೂ ಗೋವಾ ಭಾಗಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹಳ್ಳಿಗರು ಇದನ್ನು ‘ಗಾವಂಟಿ ಮರ’ ಎಂದು ಕರೆಯುತ್ತಾರೆ. ಕೊಂಕಣಿಯಲ್ಲಿ ‘ತೆಪ್ಪಲ್’, ತುಳುನಾಡಿನಲ್ಲಿ ‘ಕಾಂವಟಿಕಾಯಿ’ ಎಂಬ ಹೆಸರುಗಳಿವೆ.
ಸುಮಾರು 30 ರಿಂದ 35 ಮೀಟರ್ ಎತ್ತರಕ್ಕೆ ಬೆಳೆಯುವ ಈ ಮರದ ಕಾಂಡ ದಪ್ಪ ಹಾಗೂ ಗಟ್ಟಿಯಾದ ಮುಳ್ಳುಗಳಿಂದ ಕೂಡಿರುತ್ತದೆ. ಮಳೆಗಾಲ ಮುಗಿದ ಬಳಿಕ ಬಿಳಿ ಹೂವು ಬಿಡುವ ಮರವು ನವೆಂಬರ್–ಡಿಸೆಂಬರ್ ವೇಳೆಗೆ ಗೊಂಚಲು ಗೊಂಚಲಾಗಿ ದ್ರಾಕ್ಷಿಯಂತೆ ಕಾಯಿ ಕೊಡುತ್ತದೆ. ಹಸಿ ಜುಮ್ಮನಕಾಯಿಯನ್ನು ಬಿಸಿಲಿನಲ್ಲಿ ಒಣಗಿಸಿ ಒಳಗಿನ ಬೀಜ ಬೇರ್ಪಡಿಸಿದಾಗ ಘಮಘಮಿಸುವ ಪರಿಮಳ ಇನ್ನಷ್ಟು ಹೆಚ್ಚುತ್ತದೆ. ಒಮ್ಮೆ ಒಣಗಿಸಿ ಶೇಖರಿಸಿದರೆ ವರ್ಷವೀಡಿ ಬಳಕೆ ಸಾಧ್ಯ.
ಕರಾವಳಿ ಭಾಗದ ವಿಶೇಷ ಮೀನು ಪದಾರ್ಥಗಳಲ್ಲಿ ಜುಮ್ಮನಕಾಯಿ ಬೇಕೇಬೇಕು. ವಿಶೇಷವಾಗಿ ಬಂಗುಡೆ ಮತ್ತು ತಾರ್ಲೆ ಮೀನಿನ ಸಾರಿನಲ್ಲಿ ಇದರ ಬಳಕೆ ಹೆಚ್ಚು. ಮೀನಿನ ಗಾಢ ವಾಸನೆಯನ್ನು ಸಮತೋಲನಗೊಳಿಸಿ, ಸಾರಿಗೆ ವಿಶಿಷ್ಟ ರುಚಿ ನೀಡುವ ಗುಣ ಇದರಲ್ಲಿದೆ. ಸ್ಥಳೀಯ ನಂಬಿಕೆಯ ಪ್ರಕಾರ, ಮೀನಿನ ಅತಿಯಾದ ಸೇವನೆಯಿಂದ ಉಂಟಾಗುವ ಅಜೀರ್ಣ ಹಾಗೂ ವಾಯು ಸಮಸ್ಯೆ ನಿವಾರಣೆಗೆ ಸಹ ಇದು ಸಹಕಾರಿ.
ಶಾಖಾಹಾರದಲ್ಲೂ ಇದರ ಬಳಕೆ ಇದೆ. ಬೆಂಡೆಕಾಯಿ, ಆಲೂಗಡ್ಡೆ, ತೆಂಗಿನಕಾಯಿ ರುಬ್ಬಿದ ಪದಾರ್ಥಗಳಲ್ಲಿ ಜುಮ್ಮನಕಾಯಿ ಸೇರಿಸಿದರೆ ವಿಶೇಷ ಸುವಾಸನೆ ಮೂಡುತ್ತದೆ. ಕೊಂಕಣಿ ಶೈಲಿಯ ‘ತೆಪ್ಪಳಾ ಆಂಬಟ್’ ಅನ್ನದ ಜೊತೆಗೆ ಅಥವಾ ನೀರ್ ದೋಸೆ, ಉದ್ದಿನ ದೋಸೆ, ಕೊಟ್ಟೆ ಕಡಬಿನೊಂದಿಗೆ ರುಚಿಕರ.
ಕಾಡಂಚಿನ ಹಳ್ಳಿಗಳಲ್ಲಿ ಹಾಲಕ್ಕಿ ಮಹಿಳೆಯರು ಜುಮ್ಮನಕಾಯಿ ಸಂಗ್ರಹಿಸಿ ಪೇಟೆಗಳಲ್ಲಿ ಮಾರಾಟ ಮಾಡುತ್ತಾರೆ. ಗೋಕರ್ಣ, ಅಂಕೋಲಾ, ಕುಮಟಾ ಪೇಟೆಗಳಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ಇದನ್ನು ಖರೀದಿಸುತ್ತಾರೆ. ಮೊದಲೆಲ್ಲ ಒಂದು ಗೊಂಚಲು ₹5 ರಿಂದ ₹10 ಇತ್ತಂತೆ. ಈಗ ಅದು ₹50 ರಿಂದ ₹60ಕ್ಕೆ ಏರಿದೆ. ಮರ ಹತ್ತಿ ಕೊಯ್ಯುವವರು ಕಡಿಮೆಯಾಗಿರುವುದು ಹಾಗೂ ಮರಗಳ ಸಂಖ್ಯೆ ಕುಸಿಯುತ್ತಿರುವುದು ಬೆಲೆ ಏರಿಕೆಗೆ ಕಾರಣ. ಋತುವಿಗೂ ಮೊದಲು ಮನೆ ಹತ್ತಿರ ಬಂದು ಕೇಳಿ ಹೋಗುವ ಗ್ರಾಹಕರೂ ಇದ್ದಾರೆ. ಇದರಿಂದ ಹಾಲಕ್ಕಿ ಕುಟುಂಬಗಳಿಗೆ ಒಂದು ಹೆಚ್ಚುವರಿ ಆದಾಯ ದೊರೆಯುತ್ತದೆ.
ಕರಾವಳಿ ಸಂಸ್ಕೃತಿಯ ಪ್ರತಿನಿಧಿ ಯಕ್ಷಗಾನ ವೇಷಭೂಷಣ ತಯಾರಿಕೆಯಲ್ಲಿ ಹಿಂದೆ ಗಾವಂಟಿ ಮರದ ತೊಗಟೆ ಬಳಸಲಾಗುತ್ತಿತ್ತು. ಅದರ ಗಟ್ಟಿತನ ಹಾಗೂ ಮುಳ್ಳಿನ ಆಕೃತಿ ಭುಜಕೀರ್ತಿ, ಎದೆಹಾರ, ಕೀರಿಟ ತಯಾರಿಕೆಗೆ ಸೂಕ್ತವಾಗಿತ್ತು ಎಂದು ಹಿರಿಯ ಕಲಾವಿದರು ನೆನಪಿಸುತ್ತಾರೆ. ಮರಗಳ ಕೊರತೆ ಮತ್ತು ಕರಕುಶಲ ಕಲಾವಿದರ ಅಭಾವದಿಂದ ಆ ಪದ್ಧತಿ ಬಹುತೇಕ ನಿಂತಿದೆ.
ಉಡುಪಿಯ ಶ್ರೀ ಕೃಷ್ಣ ಮಠದ ವಿಟ್ಲಪಿಂಡಿ ಉತ್ಸವದ ಸಂದರ್ಭದಲ್ಲಿ ರಥಬೀದಿಯಲ್ಲಿ ನಡೆಯುವ ಆಟಗಳಲ್ಲಿ ಹಸಿ ಜುಮ್ಮನಕಾಯಿಯನ್ನು ಗುಂಡಿನಂತೆ ಬಳಸುವ ಸಂಪ್ರದಾಯ ಇಂದಿಗೂ ಕಂಡುಬರುತ್ತದೆ. ಅದರಿಂದ ಹೊಮ್ಮುವ ‘ಥಡ್’ ಎಂಬ ಶಬ್ದ ಮಕ್ಕಳಲ್ಲಿ ಸಂಭ್ರಮ ಉಂಟುಮಾಡುತ್ತದೆ.
ಒಮ್ಮೆ ಕಾಡು, ಬೆಟ್ಟ, ಬ್ಯಾಣಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತಿದ್ದ ಜುಮ್ಮನಕಾಯಿ ಮರಗಳು ಈಗ ನಿಧಾನವಾಗಿ ಕಣ್ಮರೆಯಾಗುತ್ತಿವೆ. ಸುಲಭವಾಗಿ ಕೊಯ್ಯಲು ಆಗದ ಕಾರಣ ಕೆಲವರು ಮರದ ರೆಂಬೆ-ಕೊಂಬೆಗಳನ್ನು ಕತ್ತರಿಸಿ ಸಂಗ್ರಹಿಸುವುದು ಕಾಣಸಿಗುತ್ತಿದೆ. ಕಾಡು ಕಡಿತ ಹಾಗೂ ಮನೆ ನಿರ್ಮಾಣವೂ ಮರಗಳ ಸಂಖ್ಯೆಯನ್ನು ಕುಗ್ಗಿಸುತ್ತಿದೆ.
ಜುಮ್ಮನಕಾಯಿ ಕೇವಲ ಮಸಾಲೆ ಅಲ್ಲ. ಅದು ಕರಾವಳಿಯ ರುಚಿ, ಪರಿಮಳ ಮತ್ತು ಸಂಸ್ಕೃತಿಯ ಸ್ಮೃತಿ. ಈ ಮರವನ್ನು ಬೆಳೆಸಿ, ಉಳಿಸಿ ಮುಂದಿನ ತಲೆಮಾರಿಗೆ ಈ ‘ಜುಮ್’ ಅನುಭವವನ್ನು ವರ್ಗಾಯಿಸುವುದು ನಮ್ಮ ಹೊಣೆ ಅಲ್ಲವೇ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.