ಕುವೆಂಪು
ದೀವಿನಾಡು
ದೀವಿನಾಡು (ನಾ). ದ್ವೀಪದ ಪ್ರದೇಶ
ಸುಗ್ರೀವನು ರಾಮನೊಂದಿಗೆ ಸಂಭಾಷಿಸುತ್ತ ಲಂಕೆಯ ಬಗ್ಗೆ ಹೇಳುವಾಗ, ಕುವೆಂಪು ಅವರು ಆ ಲಂಕಾ ದ್ವೀಪವನ್ನು ‘ದೀವಿನಾಡು’ ಪದದಿಂದ ಹೀಗೆ ಬಣ್ಣಿಸಿದ್ದಾರೆ.
‘ಕೇಳಿಬಲ್ಲೆವು ಲಂಕೆಯಂ, ತೆಂಕಣದ ಕಡಲ
ನಡುವಣ ದೀವಿನಾಡಂ’
ಕೆಂಬಕ್ಕಿ
ಕೆಂಬಕ್ಕಿ (ನಾ). ಕೆಂಪು ಬಣ್ಣದ ಪಕ್ಷಿ
ಸುಗ್ರೀವನು ರಕ್ತವಸ್ತ್ರ, ಕೆಂಪು ಹೂ, ಕೆಂಪು ಬಣ್ಣದ ಪಕ್ಷಿಗಳ ಗರಿಗಳಿಂದ ಅಲಂಕೃತನಾಗಿ ಬಂದ ಎಂದು ಬಣ್ಣಿಸುವಾಗ ಕುವೆಂಪು ಅವರು ‘ಕೆಂಬಕ್ಕಿ’ ಪದ ಹೀಗೆ ಪ್ರಯೋಗಿಸಿದ್ದಾರೆ:
‘ಕೆಂಬಣ್ಣವೂಗಳಿಂ ಕೆಂಬಕ್ಕಿ ಗರಿಗಳಿಂ
ವ್ಯೋಮಾಭ ರೋಮಮಯ ದೇಹಮನಲಂಕರಿಸಿ.’
ತಿಮಿರಕುಂತಲೆ
ತಿಮಿರಕುಂತಲೆ (ನಾ). ಕತ್ತಲಂತ ಕಡುಕಪ್ಪಾದ ಕೂದಲು
ಚಿತ್ರಾಂಗದೆಯು ‘ನಿನ್ನೊಡನೆ ನಲಿದಾಡಿದ ಈ ದೀನ ಕಾನನ ಕುಸುಮವನ್ನು ಹೇ ಕಾಂತನೇ ಮರೆಯದಿರು; ತೊರೆಯದಿರು!’ ಎಂದು ಅರ್ಜುನನಿಗೆ ಹೇಳುವಳು. ತನ್ನ ಹಣೆಯನ್ನು ಅವನ ಪಾದಕ್ಕೆ ಚಾಚುವಳು. ಆಗ ಆ ನವಯೌವ್ವನದ ತರುಣಿಯ ಕತ್ತಲೆಯಂತೆ ಕಡುಕಪ್ಪಾದ ಕೂದಲನ್ನು ಕುವೆಂಪು ಅವರು ‘ತಿಮಿರ ಕುಂತಲೆ’ ಪದದಿಂದ ಬಣ್ಣಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.