
ಸುತ್ತಲೂ ಹಸಿರಿನಿಂದ ಕೂಡಿದ ಬೆಟ್ಟಗಳು. ಅದರ ತಪ್ಪಲಿನಲ್ಲಿ ಪಚ್ಚೆ–ನೀಲಿ ಬಣ್ಣದ ನೀರಿನ ಸರೋವರ. ಪಕ್ಷಿನೋಟದಲ್ಲಿ ಈ ದೃಶ್ಯವನ್ನು ನೋಡಿದರೆ ಕಲಾಕೃತಿಯೊಂದನ್ನು ನೋಡಿದ ಅನುಭವ. ಸ್ಲೊವೇನಿಯಾದ ರತ್ನ ಎಂದೇ ಖ್ಯಾತಿ ಪಡೆದಿರುವ ಈ ಸರೋವರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸುತ್ತಿ ಬಂದ ಲೇಖಕರ ಅನುಭವ ಇಲ್ಲಿದೆ..
ಬ್ಲೆಡ್, ಸ್ಲೊವೇನಿಯಾದ ಜೂಲಿಯನ್ ಆಲ್ಪ್ಸ್ಪ್ರದೇಶದಲ್ಲಿರುವ ಸುಂದರವಾದ ಆಲ್ಪೈನ್ ಪಟ್ಟಣ. ಇದು ತನ್ನ ಅದ್ಭುತ ಪ್ರಕೃತಿ ಸೌಂದರ್ಯದಿಂದ ಜಗತ್ ಪ್ರಸಿದ್ಧವಾಗಿದೆ. ಬ್ಲೆಡ್ ಸರೋವರ, ಅದರಲ್ಲಿನ ದ್ವೀಪ, ಸುತ್ತಲೂ ಹಸಿರು ಬೆಟ್ಟಗಳು, ಎತ್ತರದ ಬೆಟ್ಟದ ಮೇಲಿನ ಐತಿಹಾಸಿಕ ಕೋಟೆ ಇಲ್ಲಿನ ಪ್ರಮುಖ ಆಕರ್ಷಣೆ. ಪ್ರವಾಸಿಗರಿಗೆ ತನ್ನ ಪ್ರಾಕೃತಿಕ ಸೌಂದರ್ಯದಿಂದ ವಿಶೇಷ ಅನುಭೂತಿ ನೀಡುವ ಈ ಸ್ಥಳ ಸ್ಲೊವೇನಿಯಾದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
ಹಿಮಕರಗಿ, ಶಿಲಾಪದರಗಳಿಂದ ರೂಪುಗೊಂಡ ನೈಸರ್ಗಿಕ ಅದ್ಭುತ ಸೃಷ್ಟಿ ಈ ಸುಂದರ ಸರೋವರ. ಸರೋವರದ ಹಸಿರು ಬಣ್ಣ, ಅದರಲ್ಲಿರುವ ದ್ವೀಪ, ದ್ವೀಪದಲ್ಲಿರುವ ಮಧ್ಯಕಾಲೀನ ಕೋಟೆ ಮತ್ತು ಸುತ್ತಲಿನ ಮನಸೂರೆಗೊಳ್ಳುವ ನೈಸರ್ಗಿಕ ಭೂದೃಶ್ಯಾವಳಿಗೆ ಈ ಸರೋವರ ಹೆಸರುವಾಸಿ. ಇದನ್ನು ‘ಸ್ಲೊವೇನಿಯಾದ ರತ್ನ’ ಎಂದು ಕರೆಯುತ್ತಾರೆ. ನಿಸರ್ಗ ಸೌಂದರ್ಯ, ಐತಿಹಾಸಿಕ ತಾಣಗಳು ಮತ್ತು ಹೊರಾಂಗಣ ಚಟುವಟಿಕೆಗಳಿಗಾಗಿ ಅನೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಹಸಿರಿನಿಂದ ಆವರಿಸಿರುವ ಸರೋವರದ ಸುತ್ತಲೂ ಸುಂದರ ಪಾದಚಾರಿ ಮಾರ್ಗವಿದೆ.
ಪಚ್ಚೆ-ನೀಲಿ ಬಣ್ಣವನ್ನು ಹೊಂದಿರುವ ಬ್ಲೆಡ್ ಸರೋವರದಲ್ಲಿರುವ ದ್ವೀಪದಲ್ಲಿ ಮೇರಿ ಮಾತೆಯ ಚರ್ಚ್ ಇದೆ. ಚರ್ಚ್‌ನ ಗಂಟೆಯನ್ನು ಬಾರಿಸಿದರೆ, ಮನಸ್ಸಿನ ಇಚ್ಛೆ ಈಡೇರುತ್ತದೆ ಎಂಬ ನಂಬಿಕೆಯಿದೆ. ಸ್ಮರಣಿಕೆಗಳ ಅಂಗಡಿಯಲ್ಲಿ ಪೋಸ್ಟ್ ಕಾರ್ಡ್ ಖರೀದಿಸಿ, ನಮ್ಮ ಊರಿಗೆ (ನನ್ನದೇ ವಿಳಾಸಕ್ಕೆ) ಇಲ್ಲಿಗೆ ಬಂದಿದ್ದ ನೆನಪಿಗಾಗಿ ಪೋಸ್ಟ್ ಮಾಡಿದೆ.
ದೋಣಿಯಲ್ಲಿ ಈ ದ್ವೀಪವನ್ನು ತಲುಪಿದ ಮೇಲೆ ಚರ್ಚ್‌ಗೆ ಹೋಗಲು 99 ಮೆಟ್ಟಿಲು ಹತ್ತಬೇಕು. ಸ್ಥಳೀಯ ಆಚರಣೆಯ ಪ್ರಕಾರ ಮದುವೆಯ ದಿನದಂದು ಸಂತೋಷ ಮತ್ತು ಸಮೃದ್ಧವಾದ ದಾಂಪತ್ಯಕ್ಕಾಗಿ ವರನು ವಧುವನ್ನು ಎತ್ತಿಕೊಂಡು ಈ 99 ಮೆಟ್ಟಿಲುಗಳನ್ನು ಹತ್ತಬೇಕು. ಈ ನಂಬಿಕೆ ಮತ್ತು ಆಚರಣೆಯಿಂದ ದ್ವೀಪದ ಮೇಲಿರುವ ಚರ್ಚ್ ಜನಪ್ರಿಯ ವಿವಾಹ ಸ್ಥಳವಾಗಿದೆ. ಈ ಸಂಪ್ರದಾಯದಲ್ಲಿ ಪಾಲ್ಗೊಳ್ಳಲು ಅನೇಕ ದಂಪತಿಗಳು ತಮ್ಮ ವಿವಾಹ ಸಮಾರಂಭಕ್ಕಾಗಿ ಬ್ಲೆಡ್ ದ್ವೀಪವನ್ನೇ ಆಯ್ಕೆ ಮಾಡುತ್ತಾರೆ.
ಸರೋವರದ ಪಕ್ಕದ ಕಡಿದಾದ ಬೆಟ್ಟದ ಮೇಲಿರುವ 11 ನೇ ಶತಮಾನದ ಕ್ಯಾಸಲ್ (ಕೋಟೆ) ನಲ್ಲಿ ವಸ್ತುಸಂಗ್ರಹಾಲಯ, ವೈನ್ ಮ್ಯೂಸಿಯಂ ಮತ್ತು ರೆಸ್ಟೋರೆಂಟ್ ಇದೆ. ರೆಸ್ಟೋರೆಂಟ್‌ನಲ್ಲಿ ಸ್ಥಳೀಯ ಖಾದ್ಯಗಳನ್ನು ಸೇವಿಸುವುದರ ಜೊತೆಗೆ ಇಲ್ಲಿನ ಪ್ರಸಿದ್ಧ ಬ್ಲೆಡ್ ಕ್ರೀಮ್ ಕೇಕ್ ಅನ್ನು ಸವಿಯಬಹುದು. ಹಳೆಯ ಮುದ್ರಣಾಲಯ ಇಲ್ಲಿದ್ದು, ಪ್ರವಾಸಿಗರು ತಮ್ಮ ಹೆಸರನ್ನು ಮುದ್ರಿಸಿಕೊಳ್ಳಲು ಅವಕಾಶವಿದೆ. ಇಲ್ಲಿ ನಿಂತು ದೂರದಲ್ಲಿ ಕಾಣುವ ದ್ವೀಪ, ಸುತ್ತಲಿನ ಬೆಟ್ಟ ಗುಡ್ಡಗಳು, ಸರೋವರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು.
ಇಲ್ಲಿನ ಹಿತವಾದ ಹವಾಗುಣ, ಆರೋಗ್ಯವನ್ನು ವೃದ್ಧಿಸುವ ಅನುಭವ ನೀಡುವಂತೆ ಬೀಸುವ ಗಾಳಿ ಮತ್ತು ಸರೋವರದ ನೀರು ಪ್ರವಾಸಿಗರನ್ನು ವರ್ಷಪೂರ್ತಿ ಆಕರ್ಷಿಸುತ್ತದೆ. ರೋಯಿಂಗ್, ಈಜು, ಹೈಕಿಂಗ್, ಸೈಕ್ಲಿಂಗ್, ಚಳಿಗಾಲದ ಕ್ರೀಡೆಗಳು, ಸ್ಪಾಗಳನ್ನರಸಿ ಪ್ರವಾಸಿಗರು ಬರುವರು. ಆಲ್ಪೈನ್ ಪ್ರದೇಶದ ರಜಾ ಮತ್ತು ಆರೋಗ್ಯಧಾಮವಾಗಿ ಬ್ಲೆಡ್ ಹೆಸರಾಗಿದೆ.
ಸುಂದರವಾದ ಭೂದೃಶ್ಯ ಹೊಂದಿರುವ ಬ್ಲೆಡ್ ಅತ್ಯಂತ ಹೆಚ್ಚು ಛಾಯಾಚಿತ್ರಗಳನ್ನು ಕ್ಲಿಕ್ಕಿಸುವ ಪ್ರದೇಶವೆಂದು ಹೆಸರಾಗಿದೆ. ಛಾಯಾಗ್ರಾಹಕರ ನೆಚ್ಚಿನ ತಾಣವಿದು. ಅಂತೆಯೇ ಸಿನಿಮಾ ಮಂದಿಗೂ.
ಸ್ಲೊವೇನಿಯಾದಲ್ಲಿ ಭಾರತದ ವಿವಿಧ ಭಾಷೆಗಳ ಹಲವು ಚಲನಚಿತ್ರಗಳ ಹಾಡುಗಳನ್ನು ಚಿತ್ರೀಕರಿಸಲಾಗಿದೆ. ಈ ದೇಶದಲ್ಲಿ ನುರಿತ ತಂತ್ರಜ್ಞರು ಮತ್ತು ನಟ ನಟಿಯರೊಂದಿಗೆ ಕುಣಿಯುವ ಪ್ರತಿಭಾನ್ವಿತ ಸಹ ಕಲಾವಿದರು ಸಿಗುತ್ತಾರೆ. ನಿರ್ಮಾಣ ತಂಡವು ರಾಜಧಾನಿ ಲೂಬ್ ಲಿಯಾನ ನಗರದಲ್ಲಿದ್ದುಕೊಂಡು ಕರಾವಳಿ ಅಥವಾ ಪರ್ವತ ಪ್ರದೇಶಗಳಲ್ಲಿ ಒಂದು ದಿನದ ಚಿತ್ರೀಕರಣವನ್ನು ಸಲೀಸಾಗಿ ಮಾಡಬಹುದು. ಅದ್ಭುತವಾದ ನೈಸರ್ಗಿಕ ದೃಶ್ಯಗಳು, ಕೋಟೆಗಳು, ಅದ್ಭುತ ವಾಸ್ತುಶಿಲ್ಪದ ಕಟ್ಟಡಗಳು, ಸ್ಥಳೀಯ ಸಾಂಸ್ಕೃತಿಕ ಪರಂಪರೆಯೊಂದಿಗೆ ಸಂಯೋಜಿಸಿ ಇಲ್ಲಿ ಚಿತ್ರೀಕರಣ ನಡೆಸಲು ಸಾಧ್ಯವಿದೆ.
ತೆಲುಗು ಭಾಷೆಯ ರಾಮ್‌ಚರಣ್ ಮತ್ತು ಕಾಜಲ್ ಅಗರವಾಲ್ ನಟಿಸಿರುವ ನಾಯಕ್ (2013) ಚಲನಚಿತ್ರದ ‘ಒಕ ಚೂಪುಕೆ ಪಡಿಪೋಯ..’ ಹಾಡನ್ನು ಸ್ಲೊವೇನಿಯಾದ ಬ್ಲೆಡ್‌ನಲ್ಲಿ ಸುಂದರವಾಗಿ ಚಿತ್ರೀಕರಿಸಿದ್ದಾರೆ. ರಾಮ್‌ಚರಣ್ 2017ರಲ್ಲಿ ತನ್ನ ತಂದೆ ಚಿರಂಜೀವಿ ನಟನೆಯ ‘ಕೈದಿ ನಂ. 150’ ಚಲನಚಿತ್ರದ ನಿರ್ಮಾಪಕರಾಗಿ, ಇದೇ ಬ್ಲೆಡ್‌ನಲ್ಲಿ ‘ಸುಂದರಿ..’ ಎಂಬ ಹಾಡನ್ನು ಚಿತ್ರೀಕರಿಸಿದ್ದಾರೆ. ವಿಶೇಷವೆಂದರೆ, ಇದರ ಹೀರೋಯಿನ್ ಕೂಡ ಕಾಜಲ್ ಅಗರವಾಲ್. ಉಪೇಂದ್ರ ನಟಿಸಿರುವ ಸೂಪರ್ ರಂಗ (2014) ಚಲನಚಿತ್ರದ ‘ನನಗೂ ನಿನಗೂ..’ ಹಾಡನ್ನು ಕೂಡ ಬ್ಲೆಡ್‌ನಲ್ಲಿ ಚಿತ್ರೀಕರಿಸಿದ್ದಾರೆ.
ಈ ದೃಶ್ಯಗಳನ್ನೆಲ್ಲಾ ನೋಡುವಾಗ, ಸ್ಲೊವೇನಿಯಾದಲ್ಲಿನ ಬ್ಲೆಡ್ ಸರೋವರದಲ್ಲಿ ದೋಣಿಯಲ್ಲಿ ಕುಳಿತು ಬ್ಲೆಡ್ ಐಲ್ಯಾಂಡ್‌ಗೆ ಹೋಗುವುದು, ಎತ್ತರದ ಬೆಟ್ಟದ ಮೇಲಿರುವ ಬ್ಲೆಡ್ ಕ್ಯಾಸಲ್‌ನಲ್ಲಿ ನಿಂತು, ಕೆಳಗೆ ಕಾಣುವ ಸರೋವರದ ನಿರ್ಮಲ ಸೌಂದರ್ಯದಲ್ಲಿ ಕಳೆದುಹೋಗುವ ಆಸೆ ಮೂಡುವುದು ಸಹಜ.
ಯುಗೊಸ್ಲಾವಿಯಾದ ನಾಯಕ ಜೋಸಿಪ್ ಬ್ರೋಜ್ ಟಿಟೊ, ಬ್ಲೆಡ್ ಸರೋವರದ ತೀರದಲ್ಲಿರುವ ವಿಲಾ ಬ್ಲೆಡ್ ಅನ್ನು ತನ್ನ ಮುಖ್ಯ ಬೇಸಿಗೆ ನಿವಾಸವಾಗಿ ಮಾಡಿಕೊಂಡಿದ್ದರು. 1947 ಮತ್ತು 1980ರ ಅವಧಿಯಲ್ಲಿ ಟಿಟೊ, ಇಲ್ಲಿ ಹಲವು ದೇಶಗಳ ಮುಖಂಡರನ್ನು ಕರೆಸಿ ಆತಿಥ್ಯ ನೀಡಿದ್ದರು.
ಜಪಾನ್‌ನ ಚಕ್ರವರ್ತಿ ಅಕಿಹಿಟೊ (ಆಗ ಕ್ರೌನ್ ಪ್ರಿನ್ಸ್), ರಾಣಿ ಎಲಿಜಬೆತ್, ಜೋರ್ಡಾನ್ ರಾಜ ಹುಸೇನ್, ಭಾರತದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ, ಉತ್ತರ ಕೊರಿಯಾದ ನಾಯಕ ಕಿಮ್ ಇಲ್-ಸಂಗ್ ಮತ್ತು ಸೋವಿಯತ್ ನಾಯಕಿ ನಿಕಿತಾ ಕ್ರುಶ್ಚೇವ್ ಮುಂತಾದವರು ಟಿಟೊ ಯುಗದಲ್ಲಿ ಬ್ಲೆಡ್‌ಗೆ ಅತಿಥಿಗಳಾಗಿ ಆಗಮಿಸಿದ್ದರು. ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ. ಬುಷ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಮೊದಲ ಅಧಿಕೃತ ಶೃಂಗಸಭೆಯನ್ನು ಜೂನ್ 16, 2001 ರಂದು ಬ್ಲೆಡ್‌ನಲ್ಲಿ ಆಯೋಜಿಸಲಾಗಿತ್ತು.
ಬ್ಲೆಡ್ ಸರೋವರದ ಸೌಂದರ್ಯಕ್ಕೆ ಮನಸೋಲದವರೇ ಇಲ್ಲ. ನಾನಂತೂ ಇದರ ಮೋಹದೊಳಗೆ ಸಿಲುಕಿಬಿಟ್ಟಿದ್ದೇನೆ!
ಯೂರೋಪಿನ ಆಗ್ನೇಯ ದಿಕ್ಕಿನಲ್ಲಿ ಪಶ್ಚಿಮ ಯುರೋಪ್ ಮತ್ತು ಬಾಲ್ಕನ್ ದೇಶಗಳ ನಡುವೆ ಇರುವ ದೇಶ ಸ್ಲೊವೇನಿಯಾ. ಯುಗೋಸ್ಲಾವಿಯಾದ ಭಾಗವಾಗಿದ್ದ ಈ ದೇಶದ ನೆರೆರಾಷ್ಟ್ರಗಳು ಆಸ್ಟ್ರಿಯಾ, ಹಂಗೆರಿ, ಇಟಲಿ ಮತ್ತು ಕ್ರೊಯೇಷಿಯಾ. ಮೆಡಿಟರೇನಿಯನ್ ಸಮುದ್ರತೀರದಲ್ಲಿರುವ ಈ ದೇಶವು ಶೇಕಡ 60 ರಷ್ಟು ಹಸಿರಿನಿಂದ ಕೂಡಿದೆ. ಕ್ರಿ.ಶ 9ನೇ ಶತಮಾನದಿಂದ ಒಂದಲ್ಲ ಒಂದು ದೇಶದ ಅಧೀನದಲ್ಲಿದ್ದ ಈ ದೇಶ ಸ್ವತಂತ್ರಗೊಂಡದ್ದು 20ನೇ ಶತಮಾನದ ಆರಂಭದಲ್ಲಿ.
ಮೊದಲನೆ ಮಹಾಯುದ್ಧ ಮುಗಿದ ಮೇಲೆ 1929ರಲ್ಲಿ ಸ್ಲೊವೇನಿಯಾ, ಸರ್ಬಿಯ ಮತ್ತು ಕ್ರೊಯೇಷಿಯಾ ಜೊತೆಗೂಡಿ ಯುಗೋಸ್ಲಾವಿಯಾ ಎಂಬ ರಾಷ್ಟ್ರವನ್ನು ಸ್ಥಾಪಿಸಿಕೊಂಡವು. ಎರಡನೇ ವಿಶ್ವ ಯುದ್ಧದ ನಂತರ ಮರ‍್ಷಲ್ ಟೀಟೋ ನಾಯಕತ್ವದಲ್ಲಿ ಯುಗೋಸ್ಲಾವಿಯಾ ಪ್ರಗತಿ ಸಾಧಿಸಿತು. ಆತನ ನಿಧನಾನಂತರ ಯುಗೋಸ್ಲಾವಿಯಾ ಛಿದ್ರಗೊಂಡಾಗ, 1991ರಲ್ಲಿ ಸ್ಲೊವೇನಿಯಾ ಸ್ವತಂತ್ರ ರಾಷ್ಟ್ರವಾಯಿತು. 2003 ರಿಂದ ನ್ಯಾಟೊ ಮತ್ತು ಯುರೋಪಿಯನ್ ಯೂನಿಯನ್ನಿನ ಸದಸ್ಯ ರಾಷ್ಟ್ರವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.