ಮಹಾವೀರನು (ಇವನಿಗೆ ವರ್ಧಮಾನ ಎಂಬ ಹೆಸರೂ ಉಂಟು) ತೀರ್ಥಂಕರರಲ್ಲಿ ಇಪ್ಪತ್ತನಾಲ್ಕನೆಯವನು ಮತ್ತು ಕೊನೆಯವನು. ಇವನು ಈಗಲೂ ಬಳಕೆಯಲ್ಲಿರುವ ಜೈನಶಕೆಯ ಪ್ರಕಾರ, ಕ್ರಿ. ಪೂ. 599ರಲ್ಲಿ ಹುಟ್ಟಿದನು.
ಇವನ ತಂದೆ ವೈಶಾಲಿಯ ಸಮೀಪದ ಕೌಂಡಿನ್ಯಪುರದ ದೊರೆ. (ವೈಶಾಲಿ – ಇದು ಇಂದಿನ ಪಟ್ನಾದಿಂದ ಉತ್ತರಕ್ಕೆ 44
ಕಿ. ಮೀ. ದೂರದಲ್ಲಿರುವ ಬಸ್ಹರ್ ಎಂಬ ಹಳ್ಳಿ.) ವೈಶಾಲಿಯ ಲಿಚ್ಛವಿದೊರೆಯ ಮಗಳಾದ ತ್ರಿಶಲಾದೇವಿ ಇವನ ತಾಯಿ. ಬಾಲ್ಯದಿಂದಲೂ ಮಹಾವೀರನು ಅಂತರ್ಮುಖಿಯಾಗಿದ್ದನು. ಆ ಕಾಲದ ರಾಜಕುಮಾರನಿಗೆ ಉಚಿತವಾದ ವಿದ್ಯೆ ಮತ್ತು ಶಿಕ್ಷಣಗಳನ್ನೆಲ್ಲ ಪಡೆದಮೇಲೆ, ಪ್ರಪಂಚದ ಅನಿತ್ಯತೆಯ ಅರಿವಾಗಿ ಅವನು ತನ್ನ ಮೂವತ್ತನೆಯ ವಯಸ್ಸಿನಲ್ಲಿ ಸನ್ಯಾಸಿಯಾದನು. ಅವನು ಹನ್ನೆರಡು ವರ್ಷಗಳವರೆಗೆ ಕಠೋರವಾದ ತಪಸ್ಸನ್ನೂ ಧ್ಯಾನವನ್ನೂ ಆಚರಿಸಿದ. ಈ ಅವಧಿಯಲ್ಲಿ ಅವನು ಅಜ್ಞರ ಕೈಯಿಂದ ಬಹುವಾದ ಹಿಂಸೆಗಳನ್ನು ಅನುಭವಿಸಿದರೂ, ಕೊನೆಗೆ ದಿವ್ಯಜ್ಞಾನವನ್ನು ಪಡೆದನು. ಅಲ್ಲಿಂದ ಜನರಿಗೆ ತನ್ನ ತತ್ವಗಳನ್ನು ಬೋಧಿಸಲು ಆರಂಭಮಾಡಿದನು.
ಅವನು ಹೀಗೆ ಪ್ರಚಾರಮಾಡಿದ ಮೂಲತತ್ವದಲ್ಲಿ ಐದು ವ್ರತಗಳು ಮತ್ತು ಇಪ್ಪತ್ತೆರಡು ರೀತಿಯ ಸಹನೆಗಳಿದ್ದವು. ಅವನ ಮುಖ್ಯ ಕಾಣಿಕೆ ಎಂದರೆ ಅಹಿಂಸಾತತ್ವವನ್ನು ಜನಪ್ರಿಯಗೊಳಿಸಿದ್ದು. ಈ ತತ್ವದ ಆಧಾರದ ಮೇಲೆ ಅವನು ಗೃಹಸ್ಥರಿಗೂ ಸನ್ಯಾಸಿಗಳಿಗೂ ಒಂದು ನೀತಿಮಾರ್ಗವನ್ನು ಹಾಕಿಕೊಟ್ಟ.
ಇದರ ಹಿನ್ನೆಲೆಯಲ್ಲಿ ಅವನು ತನ್ನ ಏಳು ತತ್ವಗಳ ದರ್ಶನವನ್ನು ರೂಪಿಸಿದ.ಮಹಾವೀರನು ತನ್ನ ಬೋಧನೆಗಳು ಮಾಗಧೀ ಮತ್ತು ಶೌರಸೇನೀಗಳನ್ನು ಮಾತನಾಡುವ ಎರಡು ಜನರಿಗೂ ಅರ್ಥವಾಗಬೇಕೆಂಬ ಉದ್ದೇಶದಿಂದ ಅರ್ಧಮಾಗಧೀ ಎಂಬ ಮಿಶ್ರಭಾಷೆಯಲ್ಲಿ ಬೋಧಿಸಿದನು. ಮಹಾವೀರನು ಬೋಧಿಸಿದ ದಾರಿಯೇ ಜೈನಧರ್ಮ ಎಂದು ಹೆಸರಾದದ್ದು.
ಮಹಾವೀರ ತನ್ನ ದೇಹವನ್ನು ವಿಸರ್ಜಿಸಿದ್ದು ಎಪ್ಪತ್ತೆರಡನೆಯ ವಯಸ್ಸಿನಲ್ಲಿ, ಕ್ರಿ. ಪೂ. 527ರಲ್ಲಿ.
ಮೋಕ್ಷಮಾರ್ಗ
ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ – ಇವನ್ನು ರತ್ನತ್ರಯ ಎಂದು ಕರೆದಿದ್ದಾರೆ. ಇವೇ ಮೋಕ್ಷಮಾರ್ಗಕ್ಕೆ ಸಾಧನಗಳು.ಆತ್ಮದಲ್ಲಿ ದೃಢವಿಶ್ವಾಸ ಸಮ್ಯಕ್ ಜ್ಞಾನ; ಆತ್ಮಜ್ಞಾನವೇ ಸಮ್ಯಕ್ ಜ್ಞಾನ; ಆತ್ಮಶಕ್ತಿಯಲ್ಲಿ ವಿಶ್ವಾಸ, ಆತ್ಮಶಕ್ತಿಯ ಜ್ಞಾನ – ಇವುಗಳಿಗೆ ಅನುಗುಣವಾದ ನಡತೆಯೇ ಸಮ್ಯಕ್ ಚಾರಿತ್ರ.ಗೃಹಸ್ಥರಿಗೂ ಸನ್ಯಾಸಿಗಳಿಗೂ ಜೈನಧರ್ಮದಲ್ಲಿ ಹಲವಾರು ಸಾಧನಗಳನ್ನು ಹೇಳಲಾಗಿದೆ.
(ಆಧಾರ: ‘ವಿಶ್ವಧರ್ಮದರ್ಶನ’ ಸಂಪುಟ 1; ಸಂ: ಪ್ರಭುಶಂಕರ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.