ADVERTISEMENT

ಕಾನನದಲ್ಲಿ ಕಲ್‌ ಮಾವ್‌ ಅರಸುತ್ತಾ...

​ಪ್ರಜಾವಾಣಿ ವಾರ್ತೆ
Published 21 ಜೂನ್ 2025, 23:58 IST
Last Updated 21 ಜೂನ್ 2025, 23:58 IST
   

‘ಕಲ್ ಮಾವ್ ಬೇಕಾ ಕಲ್ ಮಾವ್. ಬೇಗ ಬೇಗ ಬರ್‍ರಿ.. ಸ್ವಲ್ಪ ಇದಾವೆ; ಮತ್ತೆ ಸಿಕ್ತಾವೋ ಇಲ್ವೋ ಗೊತ್ತಿಲ್ಲ. ಬನ್ನಿ ಬನ್ನಿ..’ ಹೀಗೆ ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲ್ಲೂಕಿನ ಶಿವಪುರದಲ್ಲಿ ಅಂಜಿನಪ್ಪ ಜನರನ್ನು ತಾವಿದ್ದ ಸ್ಥಳದಿಂದಲೇ ಕೂಗಿ ಕೂಗಿ ಕರೆಯುತ್ತಿದ್ದರು. ಅರೆ ಕ್ಷಣದಲ್ಲೇ ಮಹಿಳೆಯರು ನಾ ಮುಂದು ತಾ ಮುಂದು ಎನ್ನುತ್ತಾ ಅಂಜಿನಪ್ಪರನ್ನು ಮುತ್ತಿಕೊಂಡರು. ಸಣ್ಣ ಬುಟ್ಟಿಯೊಳಗಿಂದ ಸೇರನ್ನು ಹೊರ ತೆಗೆದ ಅವರು ಕಾಯಿ ಅಳೆಯಲು ಶುರುಮಾಡಿದರು! ಸ್ವಲ್ಪವೂ ಚೌಕಾಸಿ ಮಾಡದೆ ಹೇಳಿದಷ್ಟು ದುಡ್ಡು ಕೊಟ್ಟು ಉತ್ಸಾಹದಿಂದಲೇ ಅದನ್ನು ಜನರು ಖರೀದಿಸುತ್ತಿದ್ದರು. ಮಾವನ್ನು ಕೆ.ಜಿ. ಇಲ್ಲವೆ ಡಜನ್ ಲೆಕ್ಕದಲ್ಲಿ ಮಾರುವುದು ರೂಢಿ. ಇದೇನಿದು ಸೇರಿನಿಂದ ಅಳೆಯುವುದು ಎನ್ನುವ ಕುತೂಹಲ ಬೇರೆ. ಮರುಕ್ಷಣ, ಕಿಕ್ಕಿರಿದ ಮಹಿಳೆಯರ ಗುಂಪು ಸೀಳಿಕೊಂಡು ಹೋಗಿ ‘ಹೇಗಿವೆ ಕಲ್‌ ಮಾವು ತೋರಿಸಿ...?’ ಅಂದೆ. ‘ಇವೇ ನೋಡಿ’ ಎಂದು ಕೈಯಲ್ಲಿ ಹಿಡಿದು ತೋರಿಸಿದ್ದು ನೆಲ್ಲಿಕಾಯಿ ಗಾತ್ರದ ಕಸುಗಾಯಿಗಳನ್ನು!.

ಇವು ಏತಕ್ಕೆ? ಎಲ್ಲಿ ಬೆಳೆದಿದ್ದೀರಿ? ಸಸಿಗಳು ಸಿಗಬಹುದಾ?.. ಹೀಗೆ ಪ್ರಶ್ನೆಗಳ ಸುರಿಮಳೆಗೈದೆ. ಅಲ್ಲೇ ಇದ್ದ ಶಿವಪುರದ ನಾಗೇಂದ್ರಜ್ಜ ‘ಇದು ಬೆಳೆಸುವ ಸಸ್ಯವಲ್ಲ. ಪ್ರಯತ್ನಿಸಿದರೂ ಬೆಳೆಯುವುದಿಲ್ಲ. ನೈಸರ್ಗಿಕವಾಗಿಯೇ ಬೆಳೆಯುತ್ತವೆ. ನಮ್ಮೂರಿನ ಕಾಡಿನಲ್ಲಿ ಅಲ್ಲಲ್ಲಿ ಇವೆ’ ಎನ್ನುತ್ತಾ ಸೀದಾ ಕರೆದೊಯ್ದಿದ್ದು ಎನ್.ಎಚ್ 50ಕ್ಕೆ ಹೊಂದಿಕೊಂಡಿರುವ ಕ್ವಾಟೆ ಕಲ್ಲು ಗುಡ್ಡಕ್ಕೆ. ಈ ಗುಡ್ಡ ಮಾತ್ರವಲ್ಲದೇ ಅದರಾಚೆಯ ಘಾಟಿನ ಗುಡ್ಡ, ಗೋಣೆಪ್ಪನ ಗುಡ್ಡಗಳನ್ನು ಹತ್ತಿ ಇಳಿದು, ಬೆವರು ಸುರಿಸಿದ ಮೇಲೆ ನೋಡಲಿಕ್ಕೆ ಸಿಕ್ಕಿದ್ದು ಐದಾರು ಕಲ್ಲು ಮಾವಿನ ಮರಗಳಷ್ಟೆ.

ಯುಗಾದಿ ಆಸುಪಾಸು ಸೀಜನ್..

ಸಾಕಷ್ಟು ಜನಕ್ಕೆ ಅದರಲ್ಲೂ ಇಂದಿನವರಿಗೆ ಈ ಗಿಡ, ಮಾವು ಅಪರಿಚಿತವೇ. ಬಯಲು ಸೀಮೆಯಲ್ಲಿ ಅದರಲ್ಲೂ ಕಲ್ಲುಗಳಿಂದ ಆವೃತ್ತವಾದ ಬೆಟ್ಟಗುಡ್ಡಗಳಲ್ಲಿ ವಿರಳವಾಗಿ ಕಾಣಸಿಗುತ್ತವೆ. ಇವು ಗುಹೆ-ಗಹ್ವರಗಳ ಆಜುಬಾಜು, ದೊಡ್ಡ ಗಾತ್ರದ ಕಲ್ಲುಗಳ ಸಂದಿಗೊಂದಿಗಳಲ್ಲಿ ಇಲ್ಲವೆ ಕಲ್ಲು ಗುಂಡುಗಳನ್ನೇ ಅವಲಂಬಿಸಿ ಬಲು ಸೊಂಪಾಗಿ ಬೆಳೆಯುತ್ತವೆ. ಅದಕ್ಕಾಗಿಯೇ ಇದಕ್ಕೆ ಸ್ಥಳೀಯವಾಗಿ ಕಲ್ಲು ಮಾವು ಎಂಬ ಹೆಸರು ಬಂದಿದೆ. ಇನ್ನು ತತ್‌ಕ್ಷಣಕ್ಕೆ ಬ್ಯಾಟಿ [ಬಿರ್ಚ್] ಮರದಂತೆ ಕಾಣುವ ಈ ಮರದ ರೆಂಬೆಕೊಂಬೆಗಳು ಟೊಳ್ಳು. ಕಾಂಡ ಹೆಬ್ಬಾವು ಚರ್ಮ ಹೋಲುತ್ತದೆ. ಮರದ ಬಿಳಿ ತೊಗಟೆಯ ಮೇಲ್ಮೈ ಅತ್ಯಂತ ನಯವಾಗಿದ್ದು, ಹಾವಿನ ಪೊರೆಯ ರೀತಿ ಸಿಪ್ಪೆ ಸುಲಿದಿರುತ್ತದೆ. ಈ ದಿನಗಳಲ್ಲಿ ಇದು ಕಡು ಹಸಿರು ಎಲೆ, ಕಾಯಿಗಳಿಂದ ಮೈದುಂಬಿರುತ್ತದೆ. ಅದರಲ್ಲೂ ವಿಶೇಷವಾಗಿ ಯುಗಾದಿ ಎಡಬಲದಲ್ಲಿ ಕಾಯಿಗಳು ಗೊಂಚಲು ಗೊಂಚಲಾಗಿ ಬಿಟ್ಟು, ಆ ಭಾರಕ್ಕೆ ಗೆಲ್ಲುಗಳು ನೆಲದೆಡೆ ಬಾಗಿರುತ್ತವೆ.

ADVERTISEMENT

ರುಚಿ ನೂರು ತರಹ..

ಈ ಮರಗಳಲ್ಲಿ ಚಿಗುರು, ಕಾಯಿ ಒಟ್ಟೊಟ್ಟಿಗೆ ಬಿಟ್ಟು ಸೋಜಿಗ ತರುತ್ತದೆ. ಅರಳಿ ಮರದ ಎಲೆಯನ್ನು ಹೋಲುವ ಇದರ ಎಲೆ ಮೂಸಿದರೆ ನಿಂಬೆಗಿಡದ ಎಲೆಯ ಸುವಾಸನೆಯೂ, ರುಚಿ ನೋಡಿದರೆ ಒಗರು ಮಿಶ್ರಿತ ಹುಳಿ ಇಲ್ಲವೆ ಬಿಲ್ವಪತ್ರೆ ತಿಂದಂತೆ ಅನಿಸುತ್ತದೆ. ಗೋಲಿಗುಂಡು ಗಾತ್ರದ ಕಾಯಿಯ ಕೆರೆದರೆ ಅಂಟಿನಂತಹ ಹಾಲು ಉತ್ಪತ್ತಿ ಆಗಿ, ಅದನ್ನು ಮೂಸಿದರೆ ಥೇಟ್ ಮಾವಿನ ಕೇರಿನ ವಾಸನೆ ಬರುತ್ತದೆ. ಹಾಗೆ ಕಾಯಿಯ ಅಗೆದರೆ ಚೂಯಿಂಗ್ ಗಮ್‌ನಂತೆ ಆಗಿ ಲೋಳೆ ಲೋಳೆ ಬರುತ್ತದೆ. ಬೀಜದ ಭಾಗ ಸ್ವಲ್ಪ ಗಟ್ಟಿಯಾಗಿರುತ್ತದೆ. ಇದು ಹಣ್ಣಾಗದೇ ಅರಿಸಿನ ಬಣ್ಣಕ್ಕೆ ತಿರುಗಿ, ಬತ್ತಿ ಹೋಗುತ್ತದೆ.

ಹುಣಸೆ ಉಪ್ಪಿನಕಾಯಿಯಲ್ಲಿ ಸೈ..

ಹೆಂಗಳೆಯರು ಕಲ್ಲು ಮಾವು ಕೊಳ್ಳುವ ಮುಖ್ಯ ಉದ್ದೇಶವೇ ಹುಣಸೆ ಉಪ್ಪಿನಕಾಯಿ/ ಚಟ್ನಿಯಲ್ಲಿ ಬೆರೆಸಲು. ಹೇಳಿಕೇಳಿ ಹುಣಸೆ ನಾಡು. ಹುಣಸೆ ಹಣ್ಣಿನ ತೊಕ್ಕಿಗೆ ಇಲ್ಲಿಯ ಆಹಾರದಲ್ಲಿ ಪ್ರಮುಖ ಸ್ಥಾನ. ಈ ತೊಕ್ಕಿನಲ್ಲಿ ಈ ಕಲ್ಲು ಮಾವು ಬೆರೆಸಿದರೆ ಅದರ ಹದ, ಸ್ವಾದ ನೂರ್ಮಡಿಸುತ್ತದೆ. ಅದಕ್ಕಾಗಿ ಈ ಕಲ್ಲು ಮಾವಿಗೆ ಎಲ್ಲಿಲ್ಲದ ಬೇಡಿಕೆ. ಕಲ್ಲು ಮಾವನ್ನು ಉಪ್ಪಿನಲ್ಲಿ ನೆನೆ ಹಾಕಿ ಒಂದೆರೆಡು ದಿನ ಕೊಳೆ ಬಿಟ್ಟು ನಂತರ ನೆರಳಲ್ಲಿ ಒಣಗಿಸಿ, ಅರೆಬರೆ ಜಜ್ಜಿ ಹುಣಸೆ ಉಪ್ಪಿನಕಾಯಿಯಲ್ಲಿ ಹಾಕಿ ರುಬ್ಬುತ್ತಾರೆ. ಆಗ ತೊಕ್ಕಿನ ರುಚಿಯೇ ಬದಲಾಗುವುದರ ಜೊತೆಗೆ ವಿಶೇಷ ಪರಿಮಳ ಸೂಸಿ, ಘಮಾಡಿಸುತ್ತದೆ. ಇದರ ಎಲೆಗಳನ್ನೂ ಹಲವರು ಆಹಾರ ಖಾದ್ಯವಾಗಿ ಬಳಸುತ್ತಾರೆ. ಅಂಚಿನಲ್ಲಿ ಎಣ್ಣೆ ಹಾಕಿ ಎಲೆಗಳನ್ನು ಫ್ರೈ ಮಾಡಬೇಕು. ನಂತರ ಶೇಂಗಾ, ಕೊಬ್ಬರಿ, ಪುದಿನ, ಬೆಳ್ಳುಳ್ಳಿ ಹುರಿದು ಒಗ್ಗರಣೆ ಕೊಟ್ಟು ರುಚಿಗೆ ತಕ್ಕಷ್ಟು ಬೆಲ್ಲ, ಉಪ್ಪು,ಎಲೆ ಸೇರಿಸಿ ಮಿಕ್ಸಿಗೆ ಹಾಕಬೇಕು. ಇಲ್ಲವೇ ಒಳಕಲ್ಲಲ್ಲಿ ಕುಟ್ಟಿ ಚಟ್ನಿ ಮಾಡಬಹುದು. ಆಗ ಬೀಜ ಸಮೇತ ಸಣ್ಣಗೆ ಆಗುತ್ತದೆ. ಹೀಗೆ ಸಿದ್ಧವಾದ ಚಟ್ನಿಯನ್ನು ರೊಟ್ಟಿ, ಚಪಾತಿ, ಮುದ್ದೆ, ಅನ್ನದೊಂದಿಗೆ ಸೇವಿಸುತ್ತಾರೆ.

ಎಲ್ಲೆಲ್ಲಿ ಕಾಣಬಹುದು?

ಸಾಮಾನ್ಯವಾಗಿ ಕಲ್ಲುಗುಂಡುಗಳಿಂದ ಕೂಡಿರುವ ಬೆಟ್ಟಗುಡ್ಡಗಳಲ್ಲಿ ಈ ಮರಗಳನ್ನು ಕಾಣಬಹುದು. ಅತ್ಯಂತ ದುರ್ಲಬ ಮರಗಳಾಗಿದ್ದು, ಬಳ್ಳಾರಿ ಜಿಲ್ಲೆಯ ಸಂಡೂರು, ಕೂಡ್ಲಿಗಿ ತಾಲ್ಲೂಕುಗಳ ಬೆಟ್ಟಗುಡ್ಡಗಳಲ್ಲಿ ಈ ಮರಗಳು ಕಂಡು ಬರುತ್ತವೆ. ಮರಗಳ ಬಗ್ಗೆ ಅರಣ್ಯದ ನಂಟು ಇರುವವರಲ್ಲಿ ಮಾಹಿತಿ ಇರುತ್ತದೆ. ಇಲ್ಲದಿದ್ದರೆ ಕಾಡು ಸುತ್ತಾಟದಲ್ಲಿ ಸೂಕ್ಷ್ಮವಾಗಿ ಗಮನಹರಿಸಿದರೆ ಸಿಗಬಹುದು. ಇನ್ನು ಈ ಮರದ ಸುತ್ತಲೂ ವಿಶೇಷವಾದ ಪರಿಮಳ ಇರುತ್ತದೆ. ‘ಇದಕ್ಕಾಗಿ ಬೆಟ್ಟಗುಡ್ಡಗಳನ್ನು ಹತ್ತಿ ಇಳಿಯಬೇಕು; ಕಲ್ಲು ಪೊಟರೆಗಳಲ್ಲಿ ಬೆದಕಬೇಕು. ಕಾಡು ಪ್ರಾಣಿಗಳ ಭಯದಿಂದ ಈ ಮಾವು ಹುಡುಕಿಕೊಂಡು ಹೋಗುವವರು ವಿರಳ. ಮರಗಳನ್ನು ಗೊತ್ತು ಮಾಡಿಟ್ಟುಕೊಂಡವರಷ್ಟೇ ಈ ಕಾಯಿಗಳನ್ನು ಸಲೀಸಾಗಿ ತರಲಿದ್ದು, ಸಹಜವಾಗಿ ಡಿಮ್ಯಾಂಡ್. ಈಗ ಇದರ ಬೆಲೆ ಸೇರಿಗೆ ನೂರು ರುಪಾಯಿ ಮೀರಿದೆ’ ಎನ್ನುತ್ತಾರೆ ಸಂಡೂರಿನ‌ ಚಾರಣಿಗ ಜಟ್ಟಿಂಗರಾಜ್.

‘ಇದು ಬರ್ಸೆರೇಸಿ ಕುಟುಂಬಕ್ಕೆ ಸೇರಿದ್ದು, ಕನ್ನಡದಲ್ಲಿ ಕಾಡು, ಕಲ್ಲು ಮಾವೆಂದು, ತೆಲುಗಿನಲ್ಲಿ ಕೊಂಡ ಮಾಮಿಡಿ ಎಂತಲೂ ಕರೆಯುತ್ತಾರೆ. ಇದು ಮುಖ್ಯವಾಗಿ ದಕ್ಷಿಣ ಭಾರತ, ಶ್ರೀಲಂಕಾದಲ್ಲಿ ಕಂಡು ಬರುತ್ತದೆ. ಒಣ ಹವೆಗೆ ಕನಿಷ್ಠ ನೀರು ಬಳಸಿಕೊಂಡು
ಗುಡ್ಡಗಾಡುಗಳಲ್ಲಿ 10-20 ಮೀಟರ್‌ ಎತ್ತರ ಬೆಳೆಯುತ್ತದೆ. ಇದರ ಎಲೆ, ಬೇರು, ತೊಗಟೆಯನ್ನು ಸಾಂಪ್ರದಾಯಿಕ ಔಷಧಿಯಲ್ಲಿ ಬಳಸಲಾಗುತ್ತದೆ. ಗಾಯ ಗುಣಪಡಿಸಲು, ಉರಿಯೂತ, ಜ್ವರ ನಿವಾರಕ, ಅಜೀರ್ಣ, ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ಕೊಲ್ಲುವ ಗುಣಗಳನ್ನು ಹೊಂದಿರುವ ಕಾರಣಕ್ಕೆ ಜನರು ಇದನ್ನು ಬಳಸುತ್ತಾರೆ. ಇದರ ಬಗ್ಗೆ ಇನ್ನೂ ಸಾಕಷ್ಟು ಅಧ್ಯಯನ ಆಗಬೇಕಿದೆ’ ಎನ್ನುತ್ತಾರೆ ದಾವಣಗೆರೆ ವಿವಿಯ ಜೀವರಸಾಯನಶಾಸ್ತ್ರ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂತೋಷ ಕುಮಾರ್.

ನಮ್ಮೂರ ಕಡೆಗೆ ಬಂದಾಗ ಮರೆಯದೇ ಈ ಕಲ್ಲುಮಾವಿನ ಉಪ್ಪಿನಕಾಯಿಯ ರುಚಿಯನ್ನು ಸವಿಯುವುದನ್ನು ಮರೆಯಬೇಡಿ.

ಕಲ್‌ ಮಾವು ಅರಸುತ್ತಾ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.