ADVERTISEMENT

ಕಾಂಡ್ಲಾ ಕಾಡಿನಲ್ಲೊಂದು ಸುತ್ತು...

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 0:28 IST
Last Updated 26 ಅಕ್ಟೋಬರ್ 2025, 0:28 IST
ಕಾಂಡ್ಲಾ ನಡುವೆ ನಡಿಗೆಗೆ ಹೀಗೊಂದು ಪಥ...
ಕಾಂಡ್ಲಾ ನಡುವೆ ನಡಿಗೆಗೆ ಹೀಗೊಂದು ಪಥ...   

ಘಟ್ಟ ಪ್ರದೇಶಗಳಿಂದ ಹರಿದು ಬಂದು ಸಮುದ್ರ ಸೇರುವ ನದಿ ಸೃಷ್ಟಿಸುವ ಜೀವ ಪರಿಸರ ಅತ್ಯಂತ ಸೂಕ್ಷ್ಮ ಹಾಗೂ ವಿಶಿಷ್ಟವಾದುದು. ಈ ಪ್ರದೇಶವನ್ನು ಅಳಿವೆಗಳೆಂದು ಕರೆಯುತ್ತಾರೆ. ನದಿಯ ಸಿಹಿ ನೀರು ಹಾಗೂ ಸಮುದ್ರದ ಉಪ್ಪು ನೀರು ಇವೆರಡೂ ಮಿಶ್ರಣವಾಗುವ, ಈ ಜೌಗು ಪ್ರದೇಶದ ಹಿನ್ನೀರಿಗೆ ‘ಬ್ರಾಕಿಶ್ ವಾಟರ್’ ಎಂದು ಕರೆಯಲಾಗುತ್ತದೆ.

ಈ ಪ್ರದೇಶದಲ್ಲಿ ದಿನಕ್ಕೆ ಎರಡು ಬಾರಿ ಸಂಭವಿಸುವ ಸಮುದ್ರದ ಉಬ್ಬರವಿಳಿತದಿಂದ ಕೆಸರು ಮಿಶ್ರಿತ ಜೌಗು ಪ್ರದೇಶ ಸೃಷ್ಟಿಯಾಗಿರುತ್ತದೆ. ಇಲ್ಲಿ ಕಂಡು ಬರುವ ಸಸ್ಯರಾಶಿಗೆ ‘ಕಾಂಡ್ಲಾ ವನ’ ಎಂದು ಕರೆಯುತ್ತಾರೆ. ಇಲ್ಲಿನ ಸಸ್ಯಗಳು ಅತ್ಯಂತ ವಿಶಿಷ್ಟ ಬಗೆಯವು. ಸಾಧಾರಣವಾಗಿ ನೆಲದ ಮೇಲಿರುವ ಸಸ್ಯಗಳಲ್ಲಿ ಬೇರು ಭೂಮಿಯ ಒಳಗಿದ್ದರೆ, ಇಲ್ಲಿನ ಸಸ್ಯಗಳು ನೆಲದಿಂದ ಹೊರಗೆ ಚಾಚಿಕೊಂಡಿರುವ ಹಾಗೂ ‘ಆಸರೆ ಬೇರು’ ಹಾಗೂ ‘ಸಿಕ್ಕು ಬೇರು’ ಗಳನ್ನು ಹೊಂದಿರುತ್ತವೆ.

ಈ ಕಾಂಡ್ಲಾ ಗಿಡ–ಮರಗಳು ‘ನ್ಯುಮಟೋ ಫೋರ್ಸ್’ (Pneumatophores) ಎಂಬ ಮೇಲ್ಮುಖ ಬೇರುಗಳನ್ನು ಹೊಂದಿದ್ದು ಇವನ್ನು ‘ಉಸಿರಾಡುವ ಬೇರುಗಳು’ ಎಂದು ಕರೆಯುತ್ತಾರೆ.

ADVERTISEMENT

ಇಂತಹ ವಿಶಿಷ್ಟವಾದ ಹಾಗೂ ಜೀವ ಪರಿಸರದಲ್ಲಿರುವ ಅತ್ಯಂತ ಮುಖ್ಯವಾದ ಜಲ ವನರಾಶಿಯ ಪರಿಚಯ ಮಾಡಿಕೊಡುವ ಅಪರೂಪದ ಪ್ರಯತ್ನವನ್ನು ಕರ್ನಾಟಕ ಅರಣ್ಯ ಇಲಾಖೆಯು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮಾಡಿದೆ. ಇಲ್ಲಿರುವ ‘ಶರಾವತಿ ಕಾಂಡ್ಲಾ ನಡಿಗೆ’ ಖಂಡಿತವಾಗಿಯೂ ನಮ್ಮನ್ನು ಬೇರೆ ಲೋಕಕ್ಕೇ ಒಯ್ಯುತ್ತದೆ. ಕಾಂಡ್ಲಾ ವನದೊಳಗೆ ಹಾಕಲಾಗಿರುವ ಸುಮಾರು ಒಂದು ಕಿಲೋಮೀಟರ್‌ನಷ್ಟಿರುವ ಮರದ ಹಲಗೆಯ ಸೇತುವೆಯ ಮೇಲೆ ನಡೆಯುತ್ತಾ, ಪಕ್ಕದಲ್ಲಿಯೇ ಆಕ್ಟೋಪಸ್‌ನಂತೆ, ತಮ್ಮ ಬೇರುಗಳನ್ನು ವಿಶಾಲವಾಗಿ ಹರಡಿಕೊಂಡು ನಿಂತಿರುವ ಕಾಂಡ್ಲಾ ವೃಕ್ಷಗಳ ಪಕ್ಕದಲ್ಲಿಯೇ ನಡಿಗೆ ಮಾಡಬಹುದು.

ಕೆಳಗೆ ಏರುಬ್ಬರವಿದ್ದಾಗ ನುಗ್ಗಿ ಬರುವ ಸಮುದ್ರದ ನೀರನ್ನು ಹಾಗೂ ಇಳಿಯುಬ್ಬರವಿದ್ದಾಗ ಕೆಸರು ಮಣ್ಣಿನ ಜೌಗನ್ನು ನಾವಿಲ್ಲಿ ನೋಡಬಹುದು. ಜೊತೆಗೆ ಈ ಪರಿಸರದಲ್ಲಿ ಕಂಡುಬರುವ ವಿಶಿಷ್ಟವಾದ ಜೀವಿಗಳನ್ನು ಕೂಡ ನಾವು ನೋಡಬಹುದು. ಈ ಕಾಂಡ್ಲಾ ವನ ಪ್ರದೇಶ ಬಹುತೇಕ ಮೀನುಗಳ ಹಾಗೂ ಸೀಗಡಿ ಮುಂತಾದ ಕಠಿಣ ಚರ್ಮ ಆಕಶೇರುಕಗಳ ನರ್ಸರಿ ತಾಣವಾಗಿದೆ. ಈ ಜೀವಿಗಳು ಇಲ್ಲಿ ಮರಿಯಿಟ್ಟು ತಮ್ಮ ಸಂತಾನವನ್ನು ಪರಭಕ್ಷಕಗಳಿಂದ ರಕ್ಷಿಸಿಕೊಳ್ಳುತ್ತವೆ. ಈ ತಾಣ ಅವುಗಳಿಗೆ ಆಮ್ಲಜನಕಯುಕ್ತ ಅತ್ಯಂತ ಆರೋಗ್ಯಪೂರ್ಣವಾದ ಜೀವ ಪರಿಸರವನ್ನೂ ಒದಗಿಸುತ್ತದೆ.

ಕಾಂಡ್ಲಾ ಲೋಕಕ್ಕೆ ಸ್ವಾಗತ

ಒಟ್ಟಾರೆ ಪ್ರಪಂಚದಲ್ಲಿರುವ ಈ ಬಗೆಯ ಮ್ಯಾಂಗ್ರೋವ್ ಕಾಡುಗಳಲ್ಲಿ ಏಳು ಪ್ರತಿಶತ ಭಾರತದಲ್ಲಿವೆ. ನಮ್ಮ ಕರ್ನಾಟಕ ಕರಾವಳಿಯ ಗಂಗಾವಳಿ, ಶರಾವತಿ, ಅಘನಾಶಿನಿ, ಕಾಳಿ, ವೆಂಕಟಾಪುರ, ಶಿರೂರು, ಬೈಂದೂರು, ಚಕ್ರಾ-ಹಳದಿ, ಸುವರ್ಣ ಸೀತಾ ಕೋಡಿ, ಉದ್ಯಾವರ, ಮುಲ್ಕಿ ಪಾವಂಜೆ, ಗುರುಪುರಗಳಲ್ಲಿ ಈ ರೀತಿಯ ಅಳಿವೆ ಕಾಡುಗಳನ್ನು ಕಾಣಬಹುದು. ಪಶ್ಚಿಮ ಘಟ್ಟದ ನದಿಗಳು ಹರಿದು ಬಂದು ಸಮುದ್ರ ಸೇರುವ ಜಾಗಗಳಲ್ಲಿ ಸೃಷ್ಟಿಯಾಗಿರುವ ದ್ವೀಪ ಸಮೂಹಗಳಲ್ಲಿ ಸಹ ಈ ಕಾಂಡ್ಲಾ ಕಾಡುಗಳು ಕಂಡುಬರುತ್ತವೆ. ಪಶ್ಚಿಮ ಬಂಗಾಳದ ಸುಂದರಬನ ಇಂತಹದೇ ಒಂದು ವಿಶಾಲವಾದ ಅಳಿವೆ ಕಾಡು. ಅದು ಹುಲಿಗಳಿಗೆ ಬಹಳ ಪ್ರಸಿದ್ಧಿ.

ಹೊನ್ನಾವರದ ಈ ಸುಂದರ ಕಾಂಡ್ಲಾ ಕಾಡಿನಲ್ಲಿ ನಾವು ಅತ್ಯಂತ ವಿಶಿಷ್ಟ ಬಗೆಯ ‘ಮ್ಯಾಂಗ್ರೋವ್ ಸೇಬಿನಮರ’ವನ್ನು ನೋಡಬಹುದು. ‘ಸೋನೆರೇಶಿಯಾ ಕ್ಯಾಸಿಯೋಲಾರಿಸ್’ ಎಂಬ ವೈಜ್ಞಾನಿಕ ಹೆಸರಿನ ಈ ಮರ 20 ಮೀಟರ್ ಎತ್ತರ ಬೆಳೆಯುತ್ತದೆ ಹಾಗೂ ಇದರ ಕಾಂಡದ ಸುತ್ತಳತೆ 50 ಸೆಂಟಿಮೀಟರ್‌ಗಳು. ಇದು ಬಿಡುವ ಹಣ್ಣುಗಳಿಂದ ಕೆಮ್ಮಿಗೆ ಔಷಧಿ ತಯಾರಿಸಲಾಗುತ್ತದೆ. ಹಾಗೆಯೇ ಈ ಕಾಂಡ್ಲಾ ನಡಿಗೆಯ ಸಂದರ್ಭದಲ್ಲಿ ನಾವು ರೈಜೋಫೊರೇಸಿಯಾ ಜಾತಿಗೆ ಸೇರಿದ 30 ಅಡಿ ಎತ್ತರಕ್ಕೆ ಬೆಳೆಯುವ, ಬಿಳಿ ಹೂಗಳನ್ನು ಬಿಡುವ ‘ಕ್ಯಾಂಡಲಿಯ ಕೆಂಡಲ್’ ಎಂಬ ವಿಶಿಷ್ಟ ಮರವನ್ನೂ ನೋಡಬಹುದು.

ಈ ಕಾಂಡ್ಲಾ ನಡಿಗೆಯಲ್ಲಿ ಈ ಪರಿಸರದಲ್ಲಿ ಕಂಡುಬರುವ ವಿಶಿಷ್ಟ ಮರಗಳ ಪರಿಚಯ ಫಲಕಗಳಲ್ಲದೇ ಬೇರೆ ಬೇರೆ ಕಾಂಡ್ಲಾ ಕಾಡುಗಳಲ್ಲಿ ಕಂಡುಬರುವ ಸಸ್ಯರಾಶಿ ಹಾಗೂ ಜೀವರಾಶಿಗಳ ಕುರಿತು ಪರಿಚಯಾತ್ಮಕ ಫಲಕಗಳನ್ನು ಹಾಕಲಾಗಿದೆ.

ಕಾಂಡ್ಲಾ ವನ 

ಈ ಭಾಗಕ್ಕೆ ಬರುವ ಪ್ರವಾಸಿಗರಿಗೆ ಅತ್ಯಂತ ನೆಚ್ಚಿನ ಜಾಗವಾಗಿರುವ ಈ ‘ಕಾಂಡ್ಲಾ ನಡಿಗೆ’ ತಾಣ, ಹೊನ್ನಾವರ ನಗರದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿದೆ. ಇದರ ಎದುರಲ್ಲೇ ಇರುವ ‘ಇಕೋ ಬೀಚ್’ ಸಹ ಪ್ರವಾಸಿಗರನ್ನು ಸದಾ ತನ್ನತ್ತ ಸೆಳೆಯುವ ತಾಣವಾಗಿದೆ. ಶರಾವತಿ ನದಿಯಲ್ಲಿ ಇರುವ ದೋಣಿ ವಿಹಾರಕ್ಕೆ ಹೋದರೆ ಈ ಕಾಂಡ್ಲಾ ದ್ವೀಪಗಳನ್ನು ಹತ್ತಿರದಿಂದ ನೋಡಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.