ADVERTISEMENT

ಮಿನುಗು ಮಿಂಚು | ಭಗೀರಥನ ತಪಸ್ಸಿಗೆ ಒಲಿದ ಗಂಗೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2019, 19:30 IST
Last Updated 2 ನವೆಂಬರ್ 2019, 19:30 IST
ಗಂಗೋತ್ರಿ ನೀರ್ಗಲ್ಲು
ಗಂಗೋತ್ರಿ ನೀರ್ಗಲ್ಲು   

ಭಗೀರಥನ ತಪಸ್ಸಿಗೆ ಒಲಿದ ಗಂಗೆ
ಗಂಗೆ ಧರೆಗೆ ಇಳಿಯುವುದು ದೇವಲೋಕದಿಂದ. ಆದರೆ, ಆಕೆ ದೇವಲೋಕದಿಂದ ನೇರವಾಗಿ ಧರೆಗೆ ಅಪ್ಪಳಿಸುವುದಿಲ್ಲ. ಬದಲಿಗೆ, ಶಿವನ ಜಟೆಯ ಮೇಲಿಳಿದು, ಅಲ್ಲಿಂದ ನಿಧಾನವಾಗಿ ಭೂಮಿಯನ್ನು ಸ್ಪರ್ಶಿಸುತ್ತಾಳೆ. ದೇವಲೋಕದಿಂದ ತನ್ನ ಜಟೆಯ ಮೇಲಿಳಿದು, ಗಂಗೆ ಅಲ್ಲಿಂದ ಭೂಮಿಯನ್ನು ಸ್ಪರ್ಶಿಸುವವರೆಗೂ ಶಿವ ಶಾಂತ ಸ್ವರೂಪಿಯಾಗಿ ಕುಳಿತಿರುತ್ತಾನೆ.

ಗಂಗೆ ಭೂಮಿಯ ಮೇಲೆ ಅವತರಿಸಿದ್ದು ಭಗೀರಥ ಕರೆಗೆ ಓಗೊಟ್ಟು. ಆತ ಮಾಡಿದ ಕಠಿಣ ಹಾಗೂ ದೀರ್ಘ ತಪಸ್ಸಿಗೆ ಮೆಚ್ಚಿ. ಆತ ತಪಸ್ಸು ಮಾಡಿದ್ದಕ್ಕೆ ಕೂಡ ಒಂದು ಕಾರಣ ಇದೆ. ಗಂಗೆಯ ನೀರಿನಿಂದ ಮಾತ್ರ ಭಗೀರಥನ ಪೂರ್ವಿಕರ ಆತ್ಮಕ್ಕೆ ಮೋಕ್ಷ ಸಿಗುತ್ತಿತ್ತು. ಗಂಗೆ ತನ್ನ ಉದ್ದೇಶವನ್ನು ಪೂರೈಸಿದ ನಂತರ, ಸಮುದ್ರದಲ್ಲಿ ಲೀನವಾಗುತ್ತಾಳೆ.

ಪುರಾಣಗಳಲ್ಲಿ ಇರುವ ಈ ರಮ್ಯ ಕಥೆಯೇ ಗಂಗೆಯ ಅಸ್ತಿತ್ವದ ಬಗ್ಗೆ ಹೇಳುತ್ತದೆ. ಹಿಮಾಲಯದಲ್ಲಿ ಜನಿಸುವ ಈ ನದಿಯನ್ನು ಭಾರತದಲ್ಲಿ ಕೋಟ್ಯಂತರ ಜನ ಪೂಜನೀಯ ಭಾವದಿಂದ ಕಾಣುತ್ತಾರೆ. ಅಲಕನಂದಾ ಮತ್ತು ಭಾಗೀರಥಿ ನದಿಗಳು ದೇವಪ್ರಯಾಗದಲ್ಲಿ ಒಂದನ್ನೊಂದು ಸೇರಿಕೊಂಡಾದ ಗಂಗಾ ನದಿ ಜನಿಸುತ್ತದೆ. ಗಂಗೋತ್ರಿಯಲ್ಲಿ ಇರುವ ‘ಗೋಮುಖ’ವು ಗಂಗೆಯ ಉಗಮ ಸ್ಥಾನ ಎಂದು ಪರಿಗಣಿತವಾಗಿದೆ.

ADVERTISEMENT

ಹಿಮಾಲಯ ಪರ್ವತ ಶ್ರೇಣಿಗಳ ಕಿರಿದಾದ ಕಣಿವೆಗಳಲ್ಲಿ ಸಾಗುವ ಗಂಗೆಯು, ಉತ್ತರ ಪ್ರದೇಶ, ಬಿಹಾರ ರಾಜ್ಯಗಳ ಮೂಲಕ ಸಾಗುತ್ತದೆ. ಯಮುನಾ, ಗಂಡಕ್, ಕೋಸಿ ಸೇರಿದಂತೆ ಹಲವು ಉಪನದಿಗಳು ಗಂಗೆಯನ್ನು ಸೇರಿಕೊಳ್ಳುತ್ತವೆ. ‍ಪಶ್ಚಿಮ ಬಂಗಾಳದಲ್ಲಿ ಗಂಗೆಯು ಎರಡು ಕವಲುಗಳಾಗಿ ಹರಿಯುತ್ತಾಳೆ – ಒಂದು ‘ಹೂಗ್ಲಿ’ ಹೆಸರಿನಲ್ಲಿ, ಇನ್ನೊಂದು ‘ಪದ್ಮಾ’ ಹೆಸರಿನಲ್ಲಿ. ಹೂಗ್ಲಿ ನದಿ ದಂಡೆಯಲ್ಲಿ ಇರುವುದೇ ಕೋಲ್ಕತ್ತ ಮಹಾನಗರ. ಪದ್ಮಾ ನದಿಯು ಬಾಂಗ್ಲಾದೇಶದಲ್ಲಿ ಹರಿಯುತ್ತದೆ.

ನಾಯಿಯ ಕಾಸು!
ದಕ್ಷಿಣ ಅಮೆರಿಕದ ಒಂದು ದೇಶ ‘ಕೊಲಂಬಿಯಾ ಗಣರಾಜ್ಯ’. ಇಲ್ಲಿನ ತಾಂತ್ರಿಕ ಸಂಸ್ಥೆಯೊಂದರಲ್ಲಿ ಇರುವ ಒಂದು ನಾಯಿಯ ಹೆಸರು ‘ನೀಗ್ರೊ’. ಇದು ತಾನು ಪಡೆಯುವ ಆಹಾರಕ್ಕೆ ಪ್ರತಿಯಾಗಿ ಹಣ ಸ್ವೀಕರಿಸಬೇಕು ಎಂದು ಒತ್ತಾಯಿಸುತ್ತದೆ.

ಆ ನಾಯಿ ಕೊಡುವ ಹಣ ಬ್ಯಾಂಕುಗಳು ಟಂಕಿಸುವ ಅಥವಾ ಮುದ್ರಿಸುವ ಹಣ ಅಲ್ಲ; ಅದು ಮರದ ಮೇಲೆ ಬೆಳೆಯುವ ಹಣ! ಅಂದರ, ಹಸಿರು ಎಲೆ. ನೀಗ್ರೊ ನಾಯಿ ಪ್ರತಿದಿನವೂ ಈ ಎಲೆಯನ್ನು ಆಹಾರದ ಕೌಂಟರ್‌ನಲ್ಲಿ ಇರುವವನ ಬಳಿ ಕೊಟ್ಟು, ಆಹಾರ ಪಡೆದುಕೊಳ್ಳುತ್ತದೆ. ಆ ಸಂಸ್ಥೆಯ ವಿದ್ಯಾರ್ಥಿಗಳು ಹಸಿರುವ ಬಣ್ಣದ ನೋಟನ್ನು ಕೊಟ್ಟು, ಆಹಾರ ಪಡೆದುಕೊಳ್ಳುವುದನ್ನು ಗಮನಿಸಿದ ನಾಯಿಯು ತಾನೂ ಹಾಗೆಯೇ ಮಾಡುತ್ತಿದೆ!

ನೀಲಕಂಠ
ಶಿವನ ಕತ್ತಿನ ಭಾಗ ನೀಲಿಗಟ್ಟಿದೆ. ಅಂದರೆ, ಅಲ್ಲಿನ ಚರ್ಮದ ಬಣ್ಣ ನೀಲಿ. ಶಿವನಿಗೆ ಹೀಗೆ ಆಗಿರುವುದಕ್ಕೆ ಒಂದು ಕಥೆಯಿದೆ. ಸಮುದ್ರ ಮಥನದ ಸಂದರ್ಭದಲ್ಲಿ ಉದ್ಭವವಾದ ಹಾಲಾಹಲವನ್ನು (ಒಂದು ಬಗೆಯ ಭಯಂಕರ ವಿಷ) ಶಿವ ಕುಡಿದ. ಆ ವಿಷವು ಇಡೀ ವಿಶ್ವದ ಜೀವಿಗಳಿಗೆ ಸಂಚಕಾರ ತರುವಷ್ಟು ಭಯಂಕರವಾಗಿತ್ತು. ವಿಶ್ವವನ್ನು ಉಳಿಸುವ ಉದ್ದೇಶದಿಂದ ಶಿವ ಅದನ್ನು ಕುಡಿದ.

ಕುಡಿದ ವಿಷ ಹೊಟ್ಟೆಯನ್ನು ಸೇರದಂತೆ ನೋಡಿಕೊಂಡ ಶಿವ, ಅದನ್ನು ತನ್ನ ಗಂಟಲಿನಲ್ಲೇ ಇರಿಸಿಕೊಂಡ. ಆಗ ಶಿವನ ಕತ್ತಿನ ಭಾಗದ ಬಣ್ಣ ನೀಲಿಗಟ್ಟಿತು! ಈ ಕಾರಣದಿಂದಾಗಿ ಶಿವನಿಗೆ ನೀಲಕಂಠ ಎಂದೂ ವಿಷಕಂಠ ಎಂದೂ ಹೆಸರು ಇದೆ. ವಿಷಕ್ಕೆ ‘ನಂಜು’ ಎಂಬ ಪರ್ಯಾಯ ಪದವಿರುವ ಕಾರಣ, ಶಿವನಿಗೆ ‘ನಂಜುಂಡೇಶ್ವರ’ ಎನ್ನುವ ಹೆಸರೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.