ADVERTISEMENT

ಕ್ಷೇಮ ಕುಶಲ: ಸಂವಹನದಲ್ಲೂ ಸಂಬಂಧದಲ್ಲೂ ಮೊಬೈಲ್‌

ರಮ್ಯಾ ಶ್ರೀಹರಿ
Published 1 ಫೆಬ್ರುವರಿ 2022, 2:32 IST
Last Updated 1 ಫೆಬ್ರುವರಿ 2022, 2:32 IST
   

ಮಾನವ ಸಂಬಂಧಗಳು ಪ್ರತಿಯೊಂದು ಕಾಲಘಟ್ಟದಲ್ಲಿಯೂ ಆ ಕಾಲಕ್ಕೇ ವಿಶಿಷ್ಟವಾದ ಸವಾಲುಗಳನ್ನು ಎದುರಿಸುತ್ತಲೇ ಇರುತ್ತದೆ. ಬಾಂಧವ್ಯಕ್ಕೆ ಅತಿ ಮುಖ್ಯವಾದ ಸಂವಹನವು ಎಲ್ಲ ಕಾಲದಲ್ಲಿಯೂ ಒಂದಲ್ಲ ಒಂದು ರೀತಿಯಿಂದ ಸಂಕೀರ್ಣವೇ ಹೌದು. ಇದಕ್ಕೆ ಕಾರಣ ಸಂವಹನದ ಮೂಲಗುಣವೇ ಹೊರತು ಮತ್ತೇನಲ್ಲ.

ನಮ್ಮ ಜೀವನದಲ್ಲಿ ತುಂಬಾ ಮುಖ್ಯವಾದ ಸಂಬಂಧಗಳು ನಾವಾಡುವ ಮಾತಿನ ಮೇಲಷ್ಟೇ ನಿಂತಿದೆಯೆ? ಪ್ರೀತಿ, ನಂಬಿಕೆ, ವಿಶ್ವಾಸ ಇವು ಕೂಡ ಮಾತಿನಿಂದ ಮಾತ್ರ ಉಂಟಾಗುವಂಥವೆ? ಬಾಂಧವ್ಯವನ್ನು ಸ್ಥಿರಗೊಳಿಸುವುದಕ್ಕೆ ನಿರಂತರ ಮಾತಿನ ಮೂಲಕ ನಡೆಸುವ ಸಂವಹನವಷ್ಟೇ ಸಾಕಾಗುತ್ತದೆಯೆ? ಮಾತಿನ ಮೂಲಕ ನಿಜಕ್ಕೂ ಬೇರೆಯವರ ಮನಸ್ಸಿನಲ್ಲೇನಿದೆ ಎನ್ನುವುದನ್ನು ಅರಿಯಲು ಸಾಧ್ಯವೆ? ಮಾತೆನ್ನುವುದು ಪದೇ ಪದೇ ಗುರಿತಪ್ಪಿಹೋಗುವ ಬಾಣದಂತೆ – ನಾವು ಇಚ್ಛಿಸಿಲ್ಲದ ಅರ್ಥಗಳನ್ನು ಬಿಟ್ಟುಕೊಡುತ್ತದೆ. ಹೀಗಿದ್ದ ಮೇಲೆ ಮಾತನ್ನು ನಂಬಿ ಸಂಬಂಧ ಬೆಳೆಸುವುದು ಸರಿಯೇ? ಮೊದಲೇ ಸಂವಹನ ಮತ್ತು ಬಾಂಧವ್ಯದ ನಡುವೆ ಇಷ್ಟೊಂದು ತೀವ್ರವಾದ ಹೋರಾಟ ನಡೆಯುತ್ತಿರುವ ಅಖಾಡಕ್ಕೆ ತಂತ್ರಜ್ಞಾನ ಎಂಬ ಮತ್ತೊಂದು ಪ್ರಬಲ ಆಟಗಾರನನ್ನು ತಂದು ಸೇರಿಸಿದರೆ ಹೇಗಿರುತ್ತದೆ? ಇದೇ ಮಾನವ ಸಂಬಂಧಗಳು ನಮ್ಮ ಕಾಲಘಟ್ಟದಲ್ಲಿ ಎದುರಿಸಬೇಕಾಗಿರುವ ಸವಾಲು.

ಝೂಮ್, ಸ್ಕೈಪ್ ಮುಂತಾದ ವಿಡಿಯೊ ಕಾಲಿಂಗ್ ವಿಧಾನಗಳ ಮೂಲಕ ಎಷ್ಟೇ ದೂರವಿದ್ದರೂ ಎದುರಿಗಿದ್ದಂತೆಯೇ ಮಾತನಾಡಬಹುದು, ಮಾತು ಮುಗಿದ ಮೇಲೆ ವಿಡಿಯೊ ಕಾಲನ್ನು ಡಿಸ್‌ಕನೆಕ್ಟ್ ಮಾಡಲೇಬೇಕಲ್ಲವೇ? ಆದರೆ ಅದೇ ವ್ಯಕ್ತಿ ನಮ್ಮ ಮನೆಯಲ್ಲಿ ನಮ್ಮ ಜೊತೆಯಲ್ಲಿಯೇ ಕುಳಿತಿದ್ದಾಗ ಆಡುವ ಮಾತನ್ನೆಲ್ಲಾ ಆಡಿ ಮುಗಿಸಿದ ಮೇಲೂ ಎದ್ದು ಹೋಗಬೇಕೆಂಬುದಿಲ್ಲ; ಮಾತಿಲ್ಲದೆಯೂ ಒಬ್ಬರನ್ನೊಬ್ಬರು ನೋಡಬಹುದು, ಪರಸ್ಪರರ ಉಪಸ್ಥಿತಿಯಲ್ಲಿ ಸುಮ್ಮನೆ ಇರಬಹುದು. ‘ಸಂಬಂಧಗಳಲ್ಲಿನ ಆತ್ಮೀಯತೆ ಕೇವಲ ಮಾತಿಗೆ ಅಥವಾ ವಿಡಿಯೊ/ಫೋಟೊಗೆ ಸೀಮಿತವಾದುದಲ್ಲ’ – ಎಂದು ತಂತ್ರಜ್ಞಾನ ನೀಡುತ್ತಿರುವ ಬಾಂಧವ್ಯದ ವ್ಯಾಖ್ಯೆಗೆ ಆಕ್ಷೇಪಿಸುವುದು ಸಾಧ್ಯವಿದೆ. ಬಾಂಧವ್ಯ ಎಂದರೆ ಮಾತಷ್ಟೇ ಅಲ್ಲ, ಹೌದು; ಆದರೆ ಹೃದಯಕ್ಕೆ ಹತ್ತಿರವಾದ ಮಾತೇ ಇಲ್ಲದೆ ಬಾಂಧವ್ಯ ಇರುವುದು ಸಾಧ್ಯವೇ? ಮಧ್ಯರಾತ್ರಿಯಾದರೂ ನಿದ್ರೆ ಹತ್ತಿರ ಸುಳಿಯದೆ, ಚಿಂತೆ ಬೃಹದಾಕಾರವಾಗಿ ಬೆಳೆದು ನಮ್ಮನ್ನು ನುಂಗಲು ಸಜ್ಜಾಗಿ ನಿಂತಿದೆಯೇನೋ ಎನಿಸುವ ಕ್ಷಣದಲ್ಲಿ, ಒಂದು ಸುದೀರ್ಘವಾಟ್ಸ್‌ಆ್ಯಪ್‌ ಸಂದೇಶ ಟೈಪಿಸಿ ಗೆಳೆಯನಿಗೊ/ಗೆಳತಿಗೋ (ಅವರ ನಿದ್ರೆ ಭಂಗವಾದೀತೆಂಬ ಸಣ್ಣ ಅಳುಕೂ ಇರದೇ!) ಕಳಿಸಿದ ನಂತರದ ನಿರಾಳತೆಯನ್ನು ಅನುಭವಿಸುವುದು ತಂತ್ರಜ್ಞಾನದಿಂದ ಸಾಧ್ಯವಾಗಿದೆ. ನಮ್ಮ ಸಂದೇಶವನ್ನು ಅವರು ಬೆಳಗ್ಗೆ ಎದ್ದು ನೋಡಬಹುದು, ಎರಡು ದಿನ ಬಿಟ್ಟು ಉತ್ತರಿಸಬಹುದು ಅಥವಾ ಉತ್ತರಿಸದೆಯೂ ಇರಬಹುದು. ಆದರೆ ಉದ್ವಿಗ್ನತೆಯ ಆ ಕ್ಷಣದಲ್ಲಿ ನಾವು ಮತ್ತೊಂದು ಜೀವಿಯನ್ನು, ಅದರಲ್ಲೂ ನಮ್ಮನ್ನು ಅರ್ಥಮಾಡಿಕೊಳ್ಳುವವರನ್ನು ತಲುಪುವುದು ಸಾಧ್ಯವಿದೆ ಎನ್ನುವುದೇ ಆ ಕ್ಷಣಕ್ಕೆ ನಮ್ಮ ತಳಮಳವನ್ನು ಉಪಶಮನಗೊಳಿಸುತ್ತದೆ. ಹೀಗೆ ದಿನದ ಯಾವ ಹೊತ್ತಿನಲ್ಲಿಯಾದರೂ ಮನದ ಭಾವನೆಯನ್ನು ಹೊತ್ತ ಇಂತಹ ಸಂದೇಶಗಳನ್ನು ಪರಸ್ಪರ ಹಂಚಿಕೊಳ್ಳಬಹುದು; ಅದನ್ನು ತಕ್ಷಣ ಓದಬೇಕೆಂಬ, ಪ್ರತಿಕ್ರಿಯೆ ನೀಡಬೇಕೆಂಬ ಒತ್ತಡ ಇಲ್ಲ ಎಂಬ ಮೊದಲೇ ಮಾಡಿಕೊಂಡ ಒಪ್ಪಂದ ಇಬ್ಬರ ಮಧ್ಯೆ ಇದ್ದರೆ ಸಾಕು.

ADVERTISEMENT

ಎಷ್ಟೋ ಬಾರಿ ಮುಖಾಮುಖಿಯಾಗಿ ಕುಳಿತು ಮಾತನಾಡಿದಾಗ ಮಾತು ಜಗಳಕ್ಕೆ ತಿರುಗಬಹುದಾದ ಸಂದರ್ಭಗಳಲ್ಲಿ ವಾಟ್ಸ್‌ಆ್ಯಪ್‌ ಬರಹದ ಮೂಲಕ ಅನಿಸಿಕೆಗಳನ್ನು ಹಂಚಿಕೊಂಡಾಗ ಹಲವು ವಿಷಯಗಳು ತಿಳಿಯಾಗಬಹುದು. ಬರಹದ ಮೂಲಕ ಎಲ್ಲವನ್ನೂ ಹೇಳಲಾಗುವುದಿಲ್ಲ; ಹೇಳಿದರೂ ಬರಹದ ಹಿಂದಿನ ಭಾವವನ್ನು ತಪ್ಪಾಗಿ ಗ್ರಹಿಸುವ ಸಾಧ್ಯತೆಯಿದೆಯಾದರೂ, ನಾವು ಹೇಳಬೇಕಾಗಿರುವುದನ್ನು ಯಾವ ಮುಜುಗರವೂ ಇಲ್ಲದೆ, ನಿಷ್ಠುರವಾಗಿದ್ದರೂ ಗೌರವಯುತವಾಗಿ, ಸ್ಪಷ್ಟವಾಗಿ ತಿಳಿಸಬಹುದು.

ಯಾವಾಗಲೋ ಒಮ್ಮೆ ಬೇಸರವಾದಾಗ ನಮಗೆ ಬೇಕಾದವರೊಡನೆ ನಡೆಸಿದ ವಾಟ್ಸ್‌ಆ್ಯಪ್‌ ಸಂಭಾಷಣೆ, ಹಂಚಿಕೊಂಡ ಫೋಟೊಗಳನ್ನು ಮತ್ತೆ ನೋಡುತ್ತಾ ಕುಳಿತಾಗ ಮನಸ್ಸು ಮುದಗೊಳ್ಳುತ್ತದೆ, ಅವರೊಂದಿಗಿನ ಸೌಹಾರ್ದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಳ್ಳಬೇಕೆನಿಸುತ್ತದೆ, ಜಗಳ/ಭಿನ್ನಾಭಿಪ್ರಾಯವೇನಿದ್ದರೂ ಅದನ್ನು ಮರೆತುಬಿಡೋಣ ಅಂತಲೂ ಎನಿಸುವಷ್ಟು ಅವರೆಡೆಗೆ ಹೃದಯ ಮೃದುವಾಗುತ್ತದೆ.

ಹೌದು, ಪ್ರತ್ಯಕ್ಷ ಸಂಭಾಷಣೆಯ ಆತ್ಮೀಯತೆಯನ್ನು ಯಾವ ತಂತ್ರಜ್ಞಾನವೂ ಸೃಷ್ಟಿಸುವುದು ಸಾಧ್ಯವಿಲ್ಲವಲ್ಲ. ಆದರೆ ಪ್ರತ್ಯಕ್ಷವಾಗಿ ಭೇಟಿಯಾಗುವುದು ಸಾಧ್ಯವೇ ಇಲ್ಲದಿದ್ದಾಗ ಮಾಡುವುದಾದರೂ ಏನು? ಬಾಂಧವ್ಯವನ್ನು ಗಟ್ಟಿಗೊಳಿಸಬೇಕೆನ್ನುವ ಇಚ್ಛೆಯಿದ್ದಲ್ಲಿ ಎಂಥದ್ದೇ ಅಡೆತಡೆಯೂ ಬಾಧಿಸುವುದಿಲ್ಲ. ಅಂದ ಮೇಲೆ ಮೊಬೈಲ್ ಅಥವಾ ಲ್ಯಾಪ್‌ಟಾಪ್‌ನ ಪರದೆ ಒಂದು ತಡೆಗೋಡೆಯಾಗುವುದು ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.