ವಾಜಿದ್ ಸಾಜಿದ್ ಕಲಾಕೃತಿಗಳಲ್ಲಿ ಕಂಡ ಮದರ್ ತೆರೆಸಾ
ಸ್ವಾರ್ಥ, ಯಾವ ಫಲಾಪೇಕ್ಷೆಯಿಲ್ಲದೆ ಬಡಜನರ ಸೇವೆ ಸಲ್ಲಿಸಿ ಇಡೀ ಜಗತ್ತಿಗೆ ಮಾನವೀಯತೆಯ ಸಂದೇಶ ಸಾರುವ ಮುಖಾಂತರ ಮಾದರಿಯಾದ ಧೀಮಂತ ಮಹಿಳೆ ಮದರ್ ತೆರೆಸಾ. ಮೂಲತಃ ಅಲ್ಬೇನಿಯಾದವ ರಾದರೂ ಭಾರತದ ಕಲ್ಕತ್ತಾದಲ್ಲಿ ನೆಲೆಸಿ ನಿರಾಶ್ರಿತ, ನಿರ್ಗತಿಕ, ಬಡವರ, ದೀನರ ಕಣ್ಣೀರನ್ನು ಒರೆಸಿ, ಮಮತೆ ತೋರಿದವರು. ಇಂಥ ವಿಶ್ವಮಾತೆಯ ಒಟ್ಟು ಹನ್ನೆರಡು ಕಲಾಕೃತಿಗಳನ್ನು ಅಕ್ರಲಿಕ್, ಆಯಿಲ್ ಮತ್ತು ಮಿಶ್ರಮಾಧ್ಯಮದಲ್ಲಿ ವಿವಿಧ ಗಾತ್ರದ ಕ್ಯಾನ್ವಾಸ್ ಮೇಲೆ ಮನೋಜ್ಞವಾಗಿ ಚಿತ್ರಿಸಿದ್ದಾರೆ. ಮನುಷ್ಯತ್ವವನ್ನು ಎತ್ತಿಹಿಡಿದ ಮದರ್ ತೆರೆಸಾ ಅವರ ಅಮೂಲ್ಯ ಸೇವೆ ಇವರಿಗೆ ಈ ಚಿತ್ರಕಲಾಕೃತಿಗಳ ರಚನೆಗೆ ಸ್ಫೂರ್ತಿಯಾಗಿದೆ.
ಮಗುವಿಗೆ ಊಟ ಮಾಡಿಸಿ ಹಸಿವನ್ನು ತಣಿಸುತ್ತಿರುವುದು, ಮಗುವನ್ನು ಪ್ರೀತಿಯಿಂದ ಎತ್ತಿಕೊಂಡಿರುವುದು, ವಾತ್ಸಲ್ಯದಿಂದ ಅಪ್ಪಿಕೊಂಡಿರುವುದು, ಬಡಜನತೆಯ ಜೊತೆಗಿನ ಒಡನಾಟ, ಮಕ್ಕಳೊಂದಿಗೆ ಅಕ್ಕರೆಯಿಂದ ಮಾತನಾಡುತ್ತಿರುವುದು, ಕೈ ಮುಗಿದ ಕಲಾಕೃತಿಗಳು–ಹೀಗೆ ಮದರ್ ತೆರೆಸಾ ಅವರ ಜೀವನದ ಪ್ರಮುಖ ಘಟನಾವಳಿಗಳು ಜೀವಕಳೆ ತುಂಬಿಕೊಂಡಂತೆ ಸೊಗಸಾಗಿ ಚಿತ್ರಿಸಿದ್ದಾರೆ.
ಪದ್ಮಶ್ರೀ, ಭಾರತ ರತ್ನ, ನೊಬೆಲ್ ಶಾಂತಿ ಪ್ರಶಸ್ತಿ ಒಲಿದ ಮದರ್ ತೆರೆಸಾ ಅವರ ಸೇವೆ ಸದಾ ಸ್ಮರಣೀಯವಾಗಿದ್ದು. ಈ ಅಪರೂಪದ ಕಲಾಕೃತಿಗಳನ್ನು ವಾಜಿದ್ ಸಾಜಿದ್ ಅವರು ವಿವಿಧೆಡೆ ಪ್ರದರ್ಶನ ಮಾಡಿದ್ದಾರೆ. ಕ್ಯಾನ್ವಾಸ್ ಮೇಲೆ ಕರುಣೆಯ ಕಡಲನ್ನು ಕಂಡ ಅನೇಕರಲ್ಲಿ ಮಹಾಮಾತೆಯ ಸೇವಾಮನೋಭಾವ ಅವರ ಮನದಲ್ಲಿ ಅಚ್ಚೊತ್ತಿ, ತಾವೂ ತಮ್ಮ ಕೈಲಾದ ಸೇವೆಗೆ ಮುಂದಾಗುವಂತೆ ಪ್ರೇರೇಪಿಸಿದೆ.
ಸಿನಿಮಾ ಪೋಸ್ಟರ್ ಬರೆಯುತ್ತಿದ್ದ ವಾಜಿದ್
90ರ ದಶಕದಲ್ಲಿ ಸಿನಿಮಾ ಕ್ಷೇತ್ರದ ನಂಟನ್ನು ಕಲಾವಿದ ವಾಜಿದ್ ಸಾಜಿದ್ ಹೊಂದಿದ್ದರು. ಅಂದು ಚಲನಚಿತ್ರದ ಪ್ರಚಾರಕ್ಕೆ ಬೇಕಾದ ಸಿನಿಮಾ ಪೋಸ್ಟರ್‌ಗಳನ್ನು ಮಾಡುತ್ತಿದ್ದರು. ಹಿರಿಯ ನಟ ಜಗ್ಗೇಶ್ ಅವರ ಆತ್ಮೀಯತೆ ಇವರಿಗಿದೆ. ಜಗ್ಗೇಶ್ ಅವರ ಆರಂಭದ ದಿನಗಳಲ್ಲಿ ಪೋಷಕ ಪಾತ್ರವನ್ನು ನಿರ್ವಹಿಸುತ್ತಿದ್ದರು. ಆಗ ವಾಜಿದ್ ಸಾಜಿದ್ ಗುರು ರಾಘವೇಂದ್ರ ಸ್ವಾಮಿಯ ಪೇಂಟಿಂಗ್‍ನ್ನು ಮಾಡಿ ಅದನ್ನು ಜಗ್ಗೇಶ್ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು. ರಾಯರ ಪೇಂಟಿಂಗ್ ಇಂದಿಗೂ ಜಗ್ಗೇಶ್ ಅವರ ಬಳಿ ಇದೆ. ‘ನನ್ನ ಹಿಂದೆ ಇರುವ ರಾಘವೇಂದ್ರ ಸ್ವಾಮಿ ಚಿತ್ರವನ್ನು ನಾನು ಪೋಷಕ ಪಾತ್ರ ಮಾಡುತ್ತಿದ್ದಾಗ ಒಬ್ಬ ಮುಸ್ಲಿಂ ಅಭಿಮಾನಿ ತಾನೇ ರಚಿಸಿ ತಂದುಕೊಟ್ಟು ನೀವು ಮುಂದೆ ಕನ್ನಡದ ದೊಡ್ಡ ಸ್ಟಾರ್ ಆಗಬೇಕು ಅಂದಿದ್ದರು. ಅಲ್ಲಿಂದ ನಡೆದುದ್ದೆಲ್ಲ ಪವಾಡ’ ಎಂದು ಜಗ್ಗೇಶ್ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
ವಾಜಿದ್ ಸಾಜಿದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.