ಮದುವೆ, ಮುಂಜಿ, ಆರತಕ್ಷತೆ–ಹೀಗೆ ಅದು ನೆನಪಾಗಿ ಉಳಿಯುವಂತಹ ಮಹತ್ವದ ಕಾರ್ಯಕ್ರಮಗಳು ಎಂದಾದರೆ, ಅಲ್ಲಿನ ವೇದಿಕೆ ಅಲಂಕಾರದ ಸೊಬಗೂ ಕೂಡ ನೆನಪಿನಲ್ಲಿ ಉಳಿಯುವಂತಿರಬೇಕು ಎಂದು ಬಯಸುವುದು ಸಹಜ. ಆದರೆ, ಆಧುನಿಕತೆಯ ತಳುಕು–ಬಳುಕು ಬಣ್ಣ ಬ್ಯಾಗಡೆಯ ಅಲಂಕಾರಗಳು ಎಲ್ಲರಿಗೂ ಇಷ್ಟವಾಗುವುದಿಲ್ಲ. ಅದರಲ್ಲೂ ಹಳ್ಳಿಯಲ್ಲೇ ಹುಟ್ಟಿ ಬೆಳೆದವರಂತೂ ನೈಸರ್ಗಿಕ ವೇದಿಕೆಗಳನ್ನೇ ಅಪೇಕ್ಷೆ ಪಡುತ್ತಾರೆ. ಪ್ರಕೃತಿ ಸಹಜ ವಸ್ತುಗಳನ್ನೇ ಬಳಸಿಕೊಂಡು ಸಿದ್ಧಗೊಳ್ಳುವ ವೇದಿಕೆ, ಮಂಟಪಗಳು ಕಣ್ಣು ಮಾತ್ರವಲ್ಲ, ಹೃದಯವನ್ನೂ ಗೆಲ್ಲುತ್ತವೆ. ತೋಟದ ಬಾಳೆದಿಂಡು, ಮಾವಿನಎಲೆ, ಹಣ್ಣಾದ ಅಡಿಕೆಗಳಿಂದ ಅಲಂಕಾರವಾದರೆ ಅದೆಷ್ಟು ಸಹಜ, ಸುಂದರ. ಇಂತಹ ಮಂಟಪ, ವೇದಿಕೆಗಳು ಸಮಾರಂಭಕ್ಕೆ ವಿಶೇಷ ಆಕರ್ಷಣೆ ತಂದುಕೊಡುತ್ತವೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಶಿರುಮನೆ, ಸಾಲೆಕೊಪ್ಪದ ಕೆಲವು ಉತ್ಸಾಹಿ ಯುವಕರು ಇಂಥದ್ದೊಂದು ಕಲಾ ಹವ್ಯಾಸ ರೂಢಿಸಿಕೊಂಡು ಮುಂದುವರೆದಿದ್ದಾರೆ. ಬಾಳೆದಿಂಡಿನಿಂದ ಮಂಟಪ ಹಾಗೂ ತೋಟದಎಲೆ, ಬಳ್ಳಿ ಇತ್ಯಾದಿ ಹಸಿರನ್ನೇ ಬಳಸಿಕೊಂಡು ಮದುವೆ ಮೊದಲಾದ ಸಮಾರಂಭಗಳಿಗೆ ಆಕರ್ಷಕ ಮಂಟಪ ಸಿದ್ಧಪಡಿಸುವುದರಲ್ಲಿ ಇವರು ಪ್ರಸಿದ್ಧರು. ಪಾರಂಪರಿಕ ಕೃಷಿ ಬದುಕಿನಲ್ಲಿ ತಮ್ಮನ್ನು ತೊಡಗಿಸಿಕೊಂಡ ಇವರೆಲ್ಲರ ಹವ್ಯಾಸ ನೈಸರ್ಗಿಕ ಮಂಟಪ ತಯಾರಿಕೆ. ವರ್ಷದ ಮದುವೆ-ಮುಂಜಿ ಸೀಸನ್‌ನಲ್ಲಿ ಕರಕುಶಲಿಗರಾದ ಇವರಿಗೆ ಭಾರೀ ಬೇಡಿಕೆ. ಕೈತುಂಬ ಕೆಲಸ. ಸಂಬಂಧಿಕರು, ಪರಿಚಯಸ್ಥರು ಇವರ ಕೌಶಲವನ್ನು ನ್ಯಾಯಯುತವಾಗಿ, ಗೌರವ ಪೂರ್ವಕವಾಗಿಯೇ ಬಳಸಿಕೊಳ್ಳುತ್ತಿದ್ದಾರೆ. ಹಾಗಾಗಿ ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುತ್ತಿದೆ.
‘ನಾವೇನೂ ಇಂತಿಷ್ಟೇ ಕೊಡಿ ಎಂದು ಒತ್ತಾಯಿಸುವುದಿಲ್ಲ. ಮಂಟಪ ಮಾಡಿಸಿಕೊಂಡವರು ಈಗಿನ ಕಾಲಕ್ಕೆ ಸ್ಪಂದಿಸಿ ಸೂಕ್ತ ವೀಳ್ಯ ನೀಡುತ್ತಾರೆ’ ಎನ್ನುತ್ತಾರೆ ಶಿರುಮನೆಯ ಯುವಕ ಮಧು. ಮಂಟಪ ತಯಾರಿಸುವ ಆರೇಳು ಜನರ ತಂಡವು ಸಾಗರ ತಾಲ್ಲೂಕು ಮಾತ್ರವಲ್ಲದೇ, ಪಕ್ಕದ ಶಿವಮೊಗ್ಗ, ಸಿದ್ದಾಪುರದ ಹಲವಾರು ಕಡೆಗಳಲ್ಲಿ ಈಗಾಗಲೇ ನೂರಾರು ನಮೂನೆಯ ಮಂಟಪಗಳನ್ನು ತಯಾರಿಸಿಕೊಟ್ಟು ಭೇಷ್ ಎನಿಸಿಕೊಂಡಿದೆ. ‘ಕೇರಳದಲ್ಲೂ ಬಾಳೆಮಂಟಪ ಮಾಡಿದ್ದೇವೆ’ ಎನ್ನುತ್ತಾರೆ ಮಧು ಹಾಗೂ ಸಾಲೆಕೊಪ್ಪದ ಯುವಕ ಮಹಾಬಲೇಶ್ವರ. ಕೃಷಿ ಕಾರ್ಯದ ನಡುವಲ್ಲೇ ಒಂದು ಕಲಾ ಹವ್ಯಾಸವಾಗಿ ಬೆಳೆಸಿಕೊಂಡ ಇಂತಹ ಮಂಟಪ ತಯಾರಿಕೆ ಕಲೆ ಸಂಪಾದನೆಗೂ ನೆರವಾಗಿದೆ.
ಇದೇ ರೀತಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಅಗಸಾಲ ಬೊಮ್ಮನಳ್ಳಿಯ ಯುವಕ ಮಂಡಳದ ಸದಸ್ಯರು ಹಲವಾರು ವರ್ಷಗಳಿಂದ ನೈಸರ್ಗಿಕ ಮಂಟಪ ತಯಾರಿಸುವುದರಲ್ಲಿ ಸಕ್ರಿಯರಾಗಿದ್ದಾರೆ. ಬಾಳೆ ಮಂಟಪ ತಯಾರಿಕೆಯಲ್ಲಿ ಯುವಕ ಮಂಡಳದ ಹಿರಿಯ ಸದಸ್ಯರು ಕಿರಿಯರಿಗೂ ಮಾರ್ಗದರ್ಶನ ಮಾಡುತ್ತ ಬಂದಿದ್ದು, ಈ ‘ಮಂಟಪ ಕಲೆ’ಯನ್ನೂ ಮುಂದುವರೆಸಿದ್ದಾರೆ. ಇದೇ ರೀತಿ, ಶಿರಸಿ ತಾಲ್ಲೂಕಿನ ಜಡ್ಡೀಮನೆಯ ಶ್ರೀಧರ ಹೆಗಡೆ ಅವರು ವೃತ್ತಿಯಿಂದ ಕೃಷಿಕರು. ಆದರೆ, ಇವರ ಕಲಾಸಕ್ತಿ ಬಾಳೆ ಮಂಟಪ ಮತ್ತು ಅಡಿಕೆ ದಬ್ಬೆಯಿಂದ ವೈವಿಧ್ಯಮಯ ಮಂಟಪ, ವೇದಿಕೆಗಳನ್ನು ತಯಾರು ಮಾಡುವುದು. ಊರಿನ ಜನರು ಉದ್ಯೋಗಕ್ಕಾಗಿ ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ದೂರದ ನಗರದಲ್ಲಿ ಇದ್ದಾಗ್ಯೂ, ಅವರೆಲ್ಲ ತಮ್ಮ ಮಕ್ಕಳ ಮದುವೆ ಕಾರ್ಯವನ್ನೂ ಊರಲ್ಲೇ ಮಾಡುವ ಅವಕಾಶ ದೊರೆತಾಗ, ಮೊದಲು ಸಂಪರ್ಕಿಸುವುದು ಬಾಳೆಮಂಟಪ ಮಾಡಿಕೊಡುವ ತಮ್ಮದೇ ಊರಿನ ಉತ್ಸಾಹಿ ಯುವಕರನ್ನು.
ತೋಟದಲ್ಲಿ ಬೆಳೆದ ಬಾಳೆದಿಂಡು, ಮಾವಿನಎಲೆಗಳು, ತೆಂಗಿನಗರಿ, ಹಣ್ಣಡಿಕೆ ಇಂತಹ ನೈಸರ್ಗಿಕ ವಸ್ತುಗಳನ್ನು ಬಳಸಿ ಅಲಂಕಾರವಾದರೆ ಅದೆಷ್ಟು ಸಹಜ, ಸುಂದರ. ಅನೇಕ ಕಡೆ ಇಂದು ಊರಿನ ಕೆಲವು ಉತ್ಸಾಹಿ ಯುವಕರು ಇಂತಹ ಹಸಿರನ್ನೇ ಬಳಸಿಕೊಂಡು ಮದುವೆ ಮೊದಲಾದ ಸಮಾರಂಭಗಳಿಗೆ ಆಕರ್ಷಕ ಮಂಟಪ ಸಿದ್ಧಪಡಿಸುವುದರಲ್ಲಿ ಪಳಗಿರುತ್ತಾರೆ. ಪಾರಂಪರಿಕ ಕೃಷಿ ಬದುಕಿನಲ್ಲಿ ತಮ್ಮನ್ನು ತೊಡಗಿಸಿಕೊಂಡ ಯುವಕರ ಜೇಬುತುಂಬುತ್ತಿದೆ ನೈಸರ್ಗಿಕ ಮಂಟಪ ತಯಾರಿಕೆ ಹವ್ಯಾಸ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.