ADVERTISEMENT

ಹಾರುವ ಹಕ್ಕಿಗೆ ಗೂಡು ಕಟ್ಟುವ ನಿತ್ಯಾನಂದ

ರಾಮಕೃಷ್ಣ ಶಾಸ್ತ್ರಿ
Published 3 ಮೇ 2025, 23:30 IST
Last Updated 3 ಮೇ 2025, 23:30 IST
ಮಣ್ಣಿನಿಂದ ತಯಾರಿಸಿದ ಹಕ್ಕಿ ಗೂಡು ಕಟ್ಟುತ್ತಿರುವ ನಿತ್ಯಾನಂದ ಶೆಟ್ಟಿ
ಮಣ್ಣಿನಿಂದ ತಯಾರಿಸಿದ ಹಕ್ಕಿ ಗೂಡು ಕಟ್ಟುತ್ತಿರುವ ನಿತ್ಯಾನಂದ ಶೆಟ್ಟಿ   
ಇವರು ಹಕ್ಕಿಗಳ ಮೇಲಿನ ಪ್ರೀತಿಯಿಂದಾಗಿಯೇ ಉದ್ಯೋಗ ತೊರೆದರು. ಊರಿಗೆ ಬಂದು ತೋಟ ಮಾಡಿ ಪಕ್ಷಿಗಳ ಮೆಚ್ಚಿನ ತಾಣವನ್ನಾಗಿಸಿದರು. ಗುಬ್ಬಚ್ಚಿ ಗೂಡು ಸಂಸ್ಥೆ ಕಟ್ಟಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುತ್ತಿದ್ದಾರೆ.

ನಿತ್ಯಾನಂದ ಶೆಟ್ಟಿ, ಅವರ ಪತ್ನಿ ರಮ್ಯಾ ದಶಕದಿಂದಲೂ ಹಕ್ಕಿಗಳಿಗೆ ನೀರಿಡುವ, ಕಾಳು ಕೊಡುವ, ಮೊಟ್ಟೆಯಿಡಲು ಗೂಡು ನಿರ್ಮಿಸುವ ಕಾಯಕದಲ್ಲಿ ತೊಡಗಿದ್ದಾರೆ. ಸರ್ಕಾರಿ ಶಾಲೆಗಳಿಗೆ ತೆರಳಿ ಮಕ್ಕಳಲ್ಲಿ ಪಕ್ಷಿ ಸಂರಕ್ಷಣೆಯ ಆಶಯವನ್ನು ಬಿತ್ತುವುದು, ತಮ್ಮದೇ ಖರ್ಚಿನಲ್ಲಿ ಕಾಳು ನೀಡುವುದು, ನೀರಿಡಲು ಮಣ್ಣಿನ ಪಾತ್ರೆಗಳನ್ನು ಕೊಡುವುದು, ಮೊಟ್ಟೆಯಿಡಲು ಮಣ್ಣಿನಗೂಡುಗಳನ್ನು ನೀಡುವುದನ್ನು ಮಾಡುತ್ತಿದ್ದಾರೆ. ನಿಸರ್ಗದಲ್ಲಿ ಸಸ್ಯ ಸಂರಕ್ಷಣೆಗೆ ಪೂರಕವಾಗಿರುವ ಪಕ್ಷಿ ಸಂಕುಲದ ರಕ್ಷಣೆಯ ಕಾಳಜಿ ಇವರದು. ಅದಕ್ಕೆಂದೇ ‘ಗುಬ್ಬಚ್ಚಿ ಗೂಡು’ ಸಂಸ್ಥೆಯನ್ನು ಕಟ್ಟಿದ್ದಾರೆ.

ನಿತ್ಯಾನಂದ ಶೆಟ್ಟಿ, ಬಂಟ್ವಾಳ ತಾಲ್ಲೂಕಿನ ಬದ್ಯಾರು ಗ್ರಾಮದವರು. ಅರ್ಥಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದರು. ಆದರೆ ಹಕ್ಕಿಗಳ ಮೇಲಿನ ಅಕ್ಕರೆಗಾಗಿ ಉದ್ಯೋಗ ಬಿಟ್ಟ ಬಂದು ಕೃಷಿ ಕಾಯಕದಲ್ಲಿ ತೊಡಗಿಕೊಂಡರು.

ಅಮ್ಮ ಸುಮತಿ ಬಾಲ್ಯದಲ್ಲೇ ಕಲಿಸಿದ್ದ ಪಕ್ಷಿ ರಕ್ಷಣೆಯ ಪಾಠ ಮನಸ್ಸಿನಲ್ಲಿ ಆಳವಾಗಿ ಬೇರೂರಿತ್ತು. ಅಮ್ಮ ಬೇಸಿಗೆಯಲ್ಲಿ ಪಕ್ಷಿಗಳಿಗಾಗಿ ಮನೆಯ ಮುಂದೆ ನೀರಿನ ಪಾತ್ರೆಯಿಡುತ್ತಿದ್ದರು. ಹಿತ್ತಲಿನಲ್ಲಿ ಕಾಳುಗಳನ್ನಿಡುತ್ತಿದ್ದರು. ಐದನೇ ತರಗತಿಯಲ್ಲಿ ಓದುತ್ತಿದ್ದಾಗಲೇ ನಿತ್ಯಾನಂದರಿಗೆ ಪಕ್ಷಿ ಪ್ರೇಮ ಆರಂಭವಾಗಿ ಹೆಮ್ಮರವಾಗಿ ಬೆಳೆಯಿತು. ಪುಸ್ತಕಗಳ ಓದಿನಿಂದ ಪ್ರಕೃತಿಗೂ, ಪಕ್ಷಿಗಳಿಗೂ ಇರುವ ಅವಿನಾಭಾವ ಸಂಬಂಧ ಅರ್ಥವಾಯಿತು. ಪರಾಗಸ್ಪರ್ಶದಿಂದ ತೊಡಗಿ ಬೀಜ ಪ್ರಸಾರ ಮಾಡುವುದರ ಜೊತೆಗೆ ಕೀಟಗಳನ್ನೂ ಭಕ್ಷಿಸುವ ಅವುಗಳಿಂದ ಭೂಮಿಗೆ ಸಿಗುವ ಪ್ರಯೋಜನಗಳು ಎಷ್ಟು ಅನನ್ಯ ಎಂಬುದೂ ಗೊತ್ತಾಯಿತು.

ADVERTISEMENT

ಹೀಗಾಗಿ ನಿತ್ಯಾನಂದರ ಹಿತ್ತಲು ಪಕ್ಷಿಗಳಿಗೆ ನಿತ್ಯ ಆನಂದ ನೀಡುವ ತಾಣವಾಯಿತು. ಅಪ್ಪ–ಅಮ್ಮ ಇಬ್ಬರೂ ಅಕಾಲಿಕವಾಗಿ ನಿಧನರಾದರು. ಅಮ್ಮನ ನೆನಪಿಗಾಗಿ ನಿತ್ಯಾನಂದ ತಮ್ಮ ಕೃಷಿ ಭೂಮಿಯ ಎರಡು ಎಕರೆ ಪ್ರದೇಶದ ಕಲ್ಲುಬಂಡೆಗಳ ಮೇಲೆ ಹೊಸ ಮಣ್ಣು ಹರಡಿ ಅದರ ಮೇಲೆ ಕುಂಟಳೆ, ಸಪೋಟ, ಪಪ್ಪಾಯಿ, ನೇರಳೆ ಇನ್ನಿತರ ಹಣ್ಣುಗಳ, ಹೂವಿನಗಿಡಗಳನ್ನು ನೆಟ್ಟು ಬೆಳೆಸಿದರು. ಇದುವರೆಗೆ ಕಂಡರಿಯದ ಪಕ್ಷಿಗಳು ಹಣ್ಣಿಗಾಗಿ ಬರುವುದು ನೋಡಿ ಅವುಗಳಿಗೆ ಕುಡಿಯಲು ನೀರು, ತಿನ್ನಲು ಕಾಳುಗಳನ್ನಿರಿಸಿದರು. ಅಲ್ಲಿ ಪಕ್ಷಿಗಳ ಚಿಲಿಪಿಲಿ ನಿತ್ಯ ನಾದವಾಗಿ ಹೊರಹೊಮ್ಮಿತು. ಮೊಟ್ಟೆಯಿಡಲಿ ಎಂದು ಮುಳಿಹುಲ್ಲಿನಿಂದ ಗೂಡುಗಳನ್ನು ತಯಾರಿಸಿ ಮರಗಳಿಗೆ ಜೋತಾಡಿಸಿದರು. ಕೆಲವು ಪಕ್ಷಿಗಳು ಗೂಡಿನಲ್ಲಿ ಮೊಟ್ಟೆಯಿಟ್ಟು ಸಂಸಾರ ಬೆಳೆಸುವುದು ಕಂಡು ಅವುಗಳ ಜೀವನ ಚಕ್ರವನ್ನು ಮಸೂರದಲ್ಲಿ ಸೆರೆಹಿಡಿಯಲೆಂದೇ ಛಾಯಾಗ್ರಹಣವನ್ನು ಹವ್ಯಾಸವನ್ನಾಗಿ ಮಾಡಿಕೊಂಡರು.

ಬಾನಾಡಿಗಳ ಕುರಿತು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಸುವ ಸಂಕಲ್ಪ ಮಾಡಿದರು. ಸರ್ಕಾರಿ ಶಾಲೆಗಳನ್ನು ಹುಡುಕಿಕೊಂಡು ಹೋಗಿ ಮಕ್ಕಳಿಗೆ ಪಾಠ ಮಾಡಿದರು. ಶಾಲೆ ಅಂಗಳದ ಮರಗಳಲ್ಲಿ ಮಾತ್ರವಲ್ಲ, ವಿದ್ಯಾರ್ಥಿಗಳ ಮನೆಯ ಮರಗಿಡಗಳಲ್ಲೂ ಹಕ್ಕಿಗಳಿಗೆ ಕುಡಿಯುವ ನೀರಿಡಲು ಮಣ್ಣಿನ ಪಾತ್ರೆಗಳನ್ನು ನೀಡಿದರು. ಕುಂಬಾರರ ಮೂಲಕ ಸಾವಿರಾರು ಇಂತಹ ಪರಿಕರಗಳನ್ನು ಮಾಡಿಸಿ ಶಾಲೆ ಮಕ್ಕಳಿಗೆ ಹಂಚಿದರೂ ಬಿಡಿಗಾಸನ್ನೂ ಪಡೆಯಲಿಲ್ಲ. ಹಕ್ಕಿಗಳಿಗೆ ಆಹಾರವಾಗುವ ಹಣ್ಣಿನ ಗಿಡಗಳನ್ನು ನೆಟ್ಟು ಬೆಳೆಸುವಂತೆ ಗಿಡಗಳನ್ನೂ ನೀಡಿದರು. ‘ಶ್ರದ್ಧೆಯಿಂದ ಪಕ್ಷಿಗಳಿಗೆ ನೀರು ಮತ್ತು ಆಹಾರ ಕೊಡಿ. ಅದೇ ನನಗೆ ಪ್ರತಿಫಲ’ ಎಂದರು.

ನಿತ್ಯಾನಂದರ ಪ್ರಕೃತಿ ಪ್ರೇಮಕ್ಕೆ ಆಕರ್ಷಿತರಾಗಿ ಅವರೊಂದಿಗೆ ಮಕ್ಕಳಿಗೆ ಪಕ್ಷಿ ಪ್ರೀತಿಯ ಬೋಧನೆ ನೀಡಲು ಬಂದವರು ಸುಳ್ಯದ ರಮ್ಯಾ. ಇವರು ಸ್ನಾತಕೋತ್ತರ ಪದವೀಧರೆ. ಕಡೆಗೆ ಜಾತಿಯ ಸಣ್ಣ ತೆರೆ ಅಡ್ಡ ಬಂದರೂ ಅದನ್ನು ಕಿತ್ತೆಸೆದು ಇಬ್ಬರೂ ಬದುಕಿನ ಜೋಡಿ ಹಕ್ಕಿಗಳಾದರು. ಬಳಿಕ ಇಬ್ಬರ ಪಕ್ಷಿ ಪ್ರೀತಿಯ ಯಾನ ಇನ್ನಷ್ಟು ಊರುಗಳಿಗೆ ವಿಸ್ತರಿಸಿ ಈಗ ಬೇಸಿಗೆಯುದ್ದಕ್ಕೂ ನಿರಂತರ ಮುಂದುವರೆಯುತ್ತಿದೆ.

ನಿತ್ಯಾನಂದರ ಕಾಯಕದಿಂದ ವಿದ್ಯಾರ್ಥಿಗಳು ಹಕ್ಕಿಗೆ ನೀರು, ಕಾಳು ಇಡುತ್ತಿದ್ದಾರೆ. ಮನೆಯ ಸಮೀಪದ ಪಕ್ಷಿಗಳ ತೋಟದಲ್ಲಿ ಪಕ್ಷಿಗಳು ನಿತ್ಯ ವಾಸ ಮಾಡುವಂತೆ ಹುಲ್ಲಿನಗೂಡುಗಳನ್ನು ಬಹುಸಂಖ್ಯೆಯಲ್ಲಿ ತೂಗಾಡಿಸಬೇಕು, ನೀರಿನ ಕೊಳಗಳ ನಿರ್ಮಾಣ, ಪಕ್ಷಿ ವೀಕ್ಷಣೆಗೆ ಬರುವ ಮಕ್ಕಳಿಗಾಗಿ ಜೋಕಾಲಿಗಳನ್ನು ನಿರ್ಮಿಸಬೇಕು ಎನ್ನುವ ಕನಸು ನಿತ್ಯಾನಂದ ದಂಪತಿಯದು. 

ಹೂಹಣ್ಣಿನ ಗಿಡಗಳು ಹಾಗೂ ಮಣ್ಣಿನ ಗೂಡುಗಳೊಂದಿಗೆ ಮಕ್ಕಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.