
ಸಾಪ್ತಾಹಿಕ ಪುರವಾಣಿ ವಿಶೇಷ ವರದಿ... ಚಾಣಕ್ಯ ವಿಶ್ವವಿದ್ಯಾಲಯದ ಚಿತ್ರಕಲಾ ಶಿಬಿರದಲ್ಲಿವಿವಿಧ ರಾಜ್ಯಗಳಿಂದ ಆಗಮಿಸಿದ ಕಲಾವಿದರು, ಚಿತ್ರ ಬಿಡಿಸುವ ಕಾರ್ಯದಲ್ಲಿ ಮಗ್ನರಾಗಿದು ಕಂಡುಬಂತು.
ಪ್ರಜಾವಾಣಿ ಚಿತ್ರ. ಪ್ರಶಾಂತ್ ಎಚ್.ಜಿ.
ಪಂಚತಂತ್ರಗಳ ಕಥೆಗಳು ಎಲ್ಲರ ಬಾಲ್ಯದ ಬೆರಗು. ನೀತಿಯನ್ನು ಕಥೆಗಳ ರೂಪದಲ್ಲಿ ಹೇಳುತ್ತಾ, ನೀತಿಯೆಡೆಗೆ ಪ್ರೀತಿ ಹುಟ್ಟಿಸುವ ಪಂಚತಂತ್ರದ ಕಥೆಗಳು ಬಾಲ್ಯವನ್ನು ಮತ್ತೊಂದು ಮಗ್ಗುಲಿಗೆ ವಿಸ್ತರಿಸುವಲ್ಲಿ ಸದಾ ಮುಂದಿವೆ. ಇಂಥ ಕಥೆಗಳನ್ನು ವಿವಿಧ ನೆಲದ ದೇಸೀ ಕಲಾ ಪ್ರಕಾರಗಳ ಮೂಲಕ ನಿರೂಪಿಸಿ ಬಣ್ಣದೊಂದಿಗೆ ಬೆರಗಿನ ಕಾರಂಜಿಯನ್ನೇ ಚಿಮ್ಮಿಸಲಾಯಿತು.
ದೇಶದ ನಾನಾ ಭಾಗಗಳಿಂದ ಬಂದಿದ್ದ ದೇಸಿ ಕಲಾವಿದರು ಪಂಚತಂತ್ರದ ಒಟ್ಟು 84 ಕಥೆಗಳಿಗೆ ಬಣ್ಣವಷ್ಟೇ ಅಲ್ಲ, ಭಾವವನ್ನೂ ತುಂಬಿದರು. ಗೆರೆ, ಕುಂಚ, ಬಣ್ಣಗಳು ಇಲ್ಲಿ ಕಥನವನ್ನು ಕಡೆಯುವ ಕಡೆಗೋಲುಗಳಾದವು. ಇದು ಅಂತರರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪ ಇರುವ ಚಾಣಕ್ಯ ವಿಶ್ವವಿದ್ಯಾಲಯದಲ್ಲಿ ಕಂಡುಬಂದ ರಾಷ್ಟ್ರೀಯ ಕಲಾ ಶಿಬಿರದ ಚಿತ್ರಣಗಳು.
ಈ ಕಲಾ ಶಿಬಿರವನ್ನು ಯುವಕ ಸಂಘದ ‘ಆರ್ಟ್ ಮ್ಯಾಟರ್ಸ್’ ವೇದಿಕೆಯು ತನ್ನ 10ನೇ ವಾರ್ಷಿಕೋತ್ಸವ ಪ್ರಯುಕ್ತ ಭಾರತೀಯ ಜ್ಞಾನಪರಂಪರೆ ವಿಭಾಗದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಶಿಬಿರ ಇದಾಗಿತ್ತು.
ಸಾಮಾನ್ಯವಾಗಿ ‘ಆರ್ಟ್ ಮ್ಯಾಟರ್ಸ್’ ಕಲಾ ವಿದ್ಯಾರ್ಥಿಗಳಿಗೆಂದು ಕಲಾ ಪ್ರದರ್ಶನ, ಸ್ಪರ್ಧೆಗಳನ್ನು ಆಯೋಜಿಸುತ್ತಾ ಬರುತ್ತಿದೆ. ಆದರೆ, ಈ ಬಾರಿ ಇಂಥದ್ದೊಂದು ವಿನೂತನ ಎನಿಸುವ ಶಿಬಿರವನ್ನು ಆಯೋಜಿಸಿತ್ತು. ಭಾರತೀಯ ಸಾಂಪ್ರದಾಯಿಕ ಕಲಾ ಪ್ರಕಾರಗಳಾದ ಮೈಸೂರು, ತಂಜಾವೂರು, ಕೇರಳ ಮ್ಯೂರಲ್, ಆಂಧ್ರದ ಕಲಂಕಾರಿ, ಅಸ್ಸಾಂನ ಸತ್ತಾರಿಯಾ, ಗುಜರಾತ್‌ನ ಮಾತಾ ನಿ ಪಚೇಡಿ, ಬಿಹಾರದ ಮಧುಬನಿ, ಮಹಾರಾಷ್ಟ್ರದ ಚಿತ್ರಕಥಿ, ಮಧ್ಯಪ್ರದೇಶದ ಗೋಂಡ್, ಬಂಗಾಳದ ಪಟಚಿತ್ರ ಕಲಾಪ್ರಕಾರಗಳಲ್ಲಿ ಪಂಚತಂತ್ರದ ಕಥೆಗಳನ್ನು ನಿರೂಪಿಸಲಾಗಿದೆ.
ಕಲಾ ಶಿಬಿರದ ಸಂಯೋಜಕ ಶಿವಪ್ರಸಾದ್ ಕೆ. ಆಚಾರ್ ನೀಡಿದ ಮಾಹಿತಿ ಇಷ್ಟು: ‘ಈ ಶಿಬಿರದಲ್ಲಿ ಪಾಲ್ಗೊಳ್ಳಬೇಕೆಂದು ಒಂದು ಸಾವಿರ ಕಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ದೇಶದ ಎಲ್ಲ ಪ್ರಮುಖ ಕಾಲೇಜಿನ ವಿದ್ಯಾರ್ಥಿಗಳನ್ನು ಈ ಶಿಬಿರದಲ್ಲಿ ನೋಡಬಹುದು. ಕೋಲ್ಕತ್ತದ ಶಾಂತಿನಿಕೇತನ, ವಾರಾಣಸಿಯ ಬನಾರಸ್ ಕಾಲೇಜಿನ ವಿದ್ಯಾರ್ಥಿಗಳು, ಪಾರೂಲ್ ಯುನಿರ್ವಸಿಟಿ, ಜವಾಹರ್‌ಲಾಲ್ ಆರ್ಕಿಟೆಕ್ಚರ್ ಆ್ಯಂಡ್ ಫೈನ್ ಆರ್ಟ್ಸ್ ಯುನಿವರ್ಸಿಟಿ, ಅಣೈ ಕಾಮಾಕ್ಷಿ, ಜಯಲಲಿತಾ ಫೈನ್ ಆರ್ಟ್ಸ್ ಆ್ಯಂಡ್ ಮ್ಯೂಸಿಕ್ ಅಕಾಡೆಮಿ, ಚಿತ್ರಕಲಾ ಪರಿಷತ್, ಮೈಸೂರಿನ ಕಾವಾ ಸೇರಿದಂತೆ ಒಟ್ಟು ಹದಿನೇಳು ರಾಜ್ಯಗಳ ಕಾಲೇಜುಗಳಿಂದ 300 ಕಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮೂನ್ನೂರು ಮಂದಿಗೆ ಏಕಕಾಲಕ್ಕೆ ಚಿತ್ರಬಿಡಿಸಲು ಅವಕಾಶ ಮಾಡಿಕೊಡುವುದು ಕಷ್ಟವಾಗುವುದರಿಂದ ಎರಡು ಹಂತಗಳಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.’
84 ಕಥೆಗಳನ್ನು ವಿವಿಧ ಕಲಾವಿದರಿಗೆ ಅವರದ್ದೇ ಭಾಷೆಯಲ್ಲಿ ಹೇಳಿ ಅರ್ಥ ಮಾಡಿಸಲಾಯಿತು. ಹೀಗೆ ಅರ್ಥ ಮಾಡಿಸುವಲ್ಲಿ ಪ್ರೊ. ರಾಘವೇಂದ್ರ ರಾವ್ ಕುಲಕರ್ಣಿ ಅವರ ಶ್ರಮ ದೊಡ್ಡದು. ಆ ಕಲಾವಿದರು ಬಿಡಿಸಿದ ಚಿತ್ರಗಳಿಗೆ, ಕಲಾ ವಿದ್ಯಾರ್ಥಿಗಳು ಬಣ್ಣ ತುಂಬಿದರು. ವಿವಿಧ ಪ್ರಕಾರಗಳಲ್ಲಿ 84 ಪಂಚತಂತ್ರ ಕಥೆಗಳನ್ನು ನೋಡಬಹುದು.
ರಾಜಾತಿಥ್ಯದಲ್ಲಿ ಇದ್ದ ವಿಷ್ಣುಶರ್ಮ ರಾಜನ ಮೂರು ಮಕ್ಕಳಿಗೆ ಕಥೆಗಳ ಮೂಲಕ ಬದುಕಿನ ಪಾಠಗಳನ್ನು ಹೇಳಿಕೊಟ್ಟ ಸಾರವೇ ‘ಪಂಚತಂತ್ರ'. ಆದರೆ, ಈ ಮಾಹಿತಿ ಸಾಗರದ ಯುಗದಲ್ಲಿ ಈ ಕಥೆಗಳನ್ನು ಬೇಕಾದ ಹಾಗೇ ತಿರುಚಲಾಗಿದೆ. ಮೂಲದಲ್ಲಿ ಇಲ್ಲದೇ ಇರುವುದನ್ನೆಲ್ಲ ಸೇರಿಸುವ ಅಥವಾ ತೆಗೆದಿರುವಂಥ ಕಥೆಗಳನ್ನೂ ನೋಡಬಹುದು. ಹಾಗಾಗಿ ಪಂಚತಂತ್ರದ ಮೂಲ ಸಾರವನ್ನು ಮುಂದಿನ ಪೀಳಿಗೆಗೆ ಸಶಕ್ತವಾಗಿ ಅಂದರೆ ಬಣ್ಣಗಳ ಮೂಲಕ ತಲುಪಿಸಬೇಕು ಎನ್ನುವ ಕಾರಣಕ್ಕೆ ಪಂಚತಂತ್ರವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ.
ಅದಕ್ಕಾಗಿ ಪಂಚತಂತ್ರಗಳ ಬಗ್ಗೆ ಅಧ್ಯಯನ ಮಾಡಿರುವ ಡಾ. ಭರತ್ ದಾಷ್ ಅವರು ಮೂಲ ಕಥೆಗಳ ಸಾರದ ಬಗ್ಗೆ ಪೂರ್ವ ಶಿಬಿರದಲ್ಲಿ ಕಲಾವಿದರಿಗೆ ಅರಿವು ಮೂಡಿಸಿದ್ದರು. ನಶಿಸಿ ಹೋಗುತ್ತಿರುವ ಕಲಾ ಪ್ರಕಾರಗಳಲ್ಲಿ ಕಥನ ಲೋಕದಲ್ಲಿ ಇಂದಿಗೂ ಛಾಪು ಉಳಿಸಿಕೊಂಡಿರುವ ಪಂಚತಂತ್ರದ ಕಥೆಗಳನ್ನು ಕ್ಯಾನ್ವಾಸ್ ಮೇಲೆ ತರಬೇಕು ಎನ್ನುವುದು ಪ್ರಮುಖ ಉದ್ದೇಶವಾಗಿತ್ತು ಎನ್ನುತ್ತಾರೆ ಶಿವಪ್ರಸಾದ್.
ಈ ಕಲಾ ಶಿಬಿರದಲ್ಲಿ ಸೃಷ್ಟಿಯಾದ ಎಲ್ಲ ಕಲಾಕೃತಿಗಳು ಸರ್ಕಾರಿ ಶಾಲೆಗಳಲ್ಲಿ ಪ್ರದರ್ಶನಗೊಳ್ಳಲಿವೆ. ಜತೆಗೆ ಬೇರೆ ಬೇರೆ ಭಾಷೆಗಳಲ್ಲಿ ಇವುಗಳನ್ನು ಪ್ರದರ್ಶಿಸುವ, ಎಲ್ಲ ಕಲಾಕೃತಿಗಳನ್ನು ಇಟ್ಟುಕೊಂಡು ಪುಸ್ತಕ ಮಾಡುವ ಇರಾದೆಯೂ ಇದೆ. ಜತೆಗೆ ವಿವಿಧ ರಾಜ್ಯಗಳಲ್ಲಿರುವ ಪ್ರಸಿದ್ಧ ಕಲಾ ಗ್ಯಾಲರಿಗಳಲ್ಲಿ ಪ್ರದರ್ಶನಗೊಳ್ಳುವ ಬಗ್ಗೆಯೂ ಆಲೋಚನೆ ಇದೆ.
ಸಾಂಪ್ರದಾಯಿಕ ಮೈಸೂರು ಕಲಾಪ್ರಕಾರದಲ್ಲಿ ಸಾಮಾನ್ಯವಾಗಿ ದೇವರ ಚಿತ್ರಗಳನ್ನು ನೋಡಬಹುದು. ಆದರೆ, ಕಥೆಗೆ ಅಗತ್ಯವಿರುವ ನಾಯಿ, ಸಿಂಹ, ಕೋತಿ ಸೇರಿದಂತೆ ಪ್ರಾಣಿಗಳನ್ನು ಇದೇ ಪ್ರಕಾರದಲ್ಲಿ ಬಿಡಿಸಿರುವುದು ಈ ಶಿಬಿರದ ವಿಶೇಷ. ಈ ಬಗ್ಗೆ ಮೈಸೂರು ಕಲಾಪ್ರಕಾರದ ಕಲಾವಿದರಿಗೆ ತುಸು ಆತಂಕವೂ ಇತ್ತು. ಹೀಗೆ ಅಸಂಪ್ರದಾಯಿಕವಾಗಿ ಚಿತ್ರ ಬಿಡಿಸುವುದು ಕಲೆಗೆ ಮಾಡುವ ಅಪಚಾರವಾಗಬಹುದೇ ಎಂಬ ಕೊರಗು ಇಟ್ಟುಕೊಂಡಿದ್ದರು. ಅವರನ್ನು ಒಪ್ಪಿಸುವುದು ಆರಂಭದಲ್ಲಿ ತುಸು ಕಷ್ಟವಾಯಿತು ಎನ್ನುತ್ತಾರೆ ಶಿವಪ್ರಸಾದ್.
ಚಿತ್ರ ಬಿಡಿಸುವ ಕಾರ್ಯದಲ್ಲಿ ಮಗ್ನರಾಗಿರುವ ಕಲಾವಿದರು
ಶಿಬಿರದ ಉದ್ದೇಶವೇ ನಶಿಸುತ್ತಿರುವ ಭಾರತೀಯ ಕಲಾಪ್ರಕಾರಗಳನ್ನು ಪುನಃಶ್ಚೇತನಗೊಳಿಸುವುದು. ಹಾಗಾಗಿ ಸಾಂಪ್ರದಾಯಿಕ ಶೈಲಿಗೆ ಜನಪದವನ್ನು ಮಿಳಿತಗೊಳಿಸಿ, ಇನ್ನಷ್ಟು ಈ ಕಲೆಗಳನ್ನು ಜನಪ್ರಿಯಗೊಳಿಸುವುದು ಹಾಗೂ ಸಮಕಾಲೀನ ತಂತ್ರಜ್ಞಾನವನ್ನೂ ಈ ಕಲಾ ಪ್ರಕಾರಗಳಲ್ಲಿ ಅಳವಡಿಸಿದಾಗ ಹೊಸ ಪೀಳಿಗೆ ಈ ಕಲಾ ಪ್ರಕಾರಗಳನ್ನು ಹೆಚ್ಚು ನೆಚ್ಚಿಕೊಳ್ಳುವ ಸಾಧ್ಯತೆ ಇರುತ್ತದೆ.
ಜಪಾನಿನ ದೇಸಿ ಕಲೆ ವುಡನ್ ಕಟ್ಟಿಂಗ್ ಪ್ರಿಂಟ್ ಅನ್ನು ಆ್ಯನಿಮೇಷನ್ ತಂತ್ರಜ್ಞಾನದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಹೊಸ ತಂತ್ರಜ್ಞಾನ ಬಳಸಿಕೊಂಡು ಕಲಾ ಪ್ರಕಾರಗಳನ್ನು ಪ್ರಯೋಗಗಳಿಗೆ ಒಡ್ಡಿದಾಗಷ್ಟೆ ಅವು ಜನಮಾನಸದಲ್ಲಿ ಉಳಿಯುತ್ತವೆ. ಸಮಕಾಲೀನವಾಗಿಯೂ ಪ್ರಚಲಿತದಲ್ಲಿರುತ್ತದೆ.
ನಶಿಸಿ ಹೋಗಿರುವ ಅಸ್ಸಾಂನ ಸತ್ತಾರಿಯಾ ಕಲಾ ಪ್ರಕಾರದ ಪುನಃಶ್ಚೇತನ ಕಾರ್ಯ ಕೈಗೊಂಡ ಸುಜಿತ್ ದಾಸ್ ಈ ಶಿಬಿರದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇದಲ್ಲದೇ ಮಹಾರಾಷ್ಟ್ರದ ಚಿತ್ರಕಥಿ ಕಲಾ ಪ್ರಕಾರವನ್ನು ಈವರೆಗೂ ಶ್ರದ್ಧೆಯಿಂದ ಕೈಗೊಂಡಿರುವ ಸಮಕಾಲೀನ ಚಿತ್ರ ಕಲಾವಿದೆ ಪ್ರತಿಭಾ ವಾಗ್ ಅವರೂ ಪಾಲ್ಗೊಂಡಿದ್ದರು.
ಇನ್ನೂ ಮಾತಾ ನಿ ಪಚೇಡಿ ಕಲಾಪ್ರಕಾರಕ್ಕೆ ಮುಡಿಪಾಗಿಟ್ಟ ಕುಟುಂಬದ ಜಗದೀಶ ಚಿತ್ತಾರ , ಪರೇಶ ಚಿತ್ತಾರ, ರಮೀಲಾ ಅವರು ಮಾತಿಗೆ ಸಿಕ್ಕರು. ಗುಜರಾತಿನ ವಾಘರಿ ಸಮುದಾಯದಲ್ಲಿ ರೂಪುಗೊಂಡ ವಿಶಿಷ್ಟ ಕಲಾ ಪ್ರಕಾರವೇ ಮಾತಾ ನಿ ಪಚೇಡಿ. 15–16ನೇ ಶತಮಾನದಲ್ಲಿ ಈ ಕಲಾ ಪ್ರಕಾರವೂ ಅಭಿವೃದ್ಧಿಗೊಂಡಿದ್ದು, ವಾಘರಿಯಂಥ ಅಲೆಮಾರಿ ಸಮುದಾಯಕ್ಕೆ ದೇವಸ್ಥಾನ ಪ್ರವೇಶ ನಿರಾಕರಿಸಿದಾಗ, ಬಂಡಾಯವೆದ್ದು ಬಣ್ಣದ ಮೂಲಕ ದೇವಿಯನ್ನು ಸಾಕ್ಷಾತ್ಕರಿಸಿಕೊಳ್ಳಲಾಯಿತು.
ಸಸ್ಯ ಹಾಗೂ ಖನಿಜಗಳಿಂದ ನೈಸರ್ಗಿಕವಾಗಿ ಬಣ್ಣವನ್ನು ತಯಾರಿಸಲಾಗುತ್ತದೆ. ಬಿದಿರಿನಿಂದ ಮಾಡಿದ ಪೆನ್ನನ್ನು ಬಳಸಿ ಚಿತ್ರ ಬಿಡಿಸಲಾಗುತ್ತದೆ. ದೇವಿಯ ಆರಾಧನೆ ಹಾಗೂ ಪೌರಾಣಿಕ ಕಥೆಗಳನ್ನು ಬಿಂಬಿಸುವ ಮಾತಾ ನಿ ಪಚೇಡಿ ಕಲಾಪ್ರಕಾರವನ್ನು, ಪಂಚತಂತ್ರ ಕಥೆ ನಿರೂಪಿಸುವಲ್ಲಿ ಬಳಸಿಕೊಂಡಿದ್ದು ವಿಶೇಷ ಎನಿಸಿತ್ತು. ಇದೊಂದು ಹೊಸ ಅನುಭವವೇ ಸರಿ. ಮೂಲ ಕಲಾಪ್ರಕಾರ ಹಾಗೂ ನಿಯಮಗಳಿಗೆ ಯಾವುದೇ ರೀತಿಯಲ್ಲಿ ಧಕ್ಕೆ ಬಾರದ ಹಾಗೇ ಈ ಕಲಾಪ್ರಕಾರವನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಲು ಜಗದೀಶ್ ಅವರು ಮರೆಯಲಿಲ್ಲ.
ಹಲವು ಕಲಾಪ್ರಕಾರಗಳ ಹಲವು ದೃಷ್ಟಿಕೋನಗಳನ್ನು ಏಕಕಾಲಕ್ಕೆ ನೋಡಲು, ಅರ್ಥೈಸಿಕೊಳ್ಳಲು ಈ ಶಿಬಿರವು ದೊಡ್ಡ ಅವಕಾಶವಾಗಿದೆ ಎಂದು ಚಿತ್ರಕಲಾ ವಿದ್ಯಾರ್ಥಿ ಸಚಿನ್ ಗದಗ ಹರ್ಷ ವ್ಯಕ್ತಪಡಿಸಿದರು. v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.