ದಿನದ 16 ರಿಂದ 18 ತಾಸು ಆಯತಾಕಾರದ ಅಚ್ಚಿನ ಮೇಲೆ ಒದ್ದೆ ಜೇಡಿಮಣ್ಣನ್ನು ಸುರಿದು ಅದಕ್ಕೆ ಇಟ್ಟಿಗೆಯ ರೂಪ ಕೊಡುವುದು ಪೂರ್ಣಿಮಾ ಅವರಿಗೆ ವಿಪರೀತ ಕಷ್ಟವಾಗುತ್ತಿತ್ತು. ಎಂಟು ತಿಂಗಳ ಗರ್ಭಿಣಿ ದಿನಕ್ಕೆ ಸಾವಿರ ಇಟ್ಟಿಗೆಗಳನ್ನು ತಯಾರಿಸುವುದು ದೈಹಿಕ ಮತ್ತು ಮಾನಸಿಕವಾಗಿ ಅಸಾಧ್ಯ ಎನಿಸುತ್ತಿತ್ತು. ಆದರೆ ಪೂರ್ಣಿಮಾ ಮತ್ತು ಅವರ ಪತಿ ಮಾರಪ್ಪ ಅವರಿಗೆ ನೋವನ್ನು ನುಂಗಿ ಕೆಲಸ ಮಾಡುವುದು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಇಟ್ಟಿಗೆಗೂಡು ಮಾಲೀಕರಿಂದ ದೈಹಿಕ ಹಲ್ಲೆ ಮತ್ತು ಕಿರುಕುಳ ಎದುರಿಸಬೇಕಾದೀತು ಎಂಬ ಭಯದಿಂದಾಗಿ ಅಲ್ಲಿಂದ ತಪ್ಪಿಸಿಕೊಳ್ಳುವುದನ್ನು ಯೋಚಿಸಿಯೂ ಇರಲಿಲ್ಲ.
ಆದರೆ ದಶಕದ ನಂತರ ಪೂರ್ಣಿಮಾ ಮತ್ತು ಮಾರಪ್ಪ ಅವರ ಬದುಕಿನಲ್ಲಿ ಕಾಮನಬಿಲ್ಲೊಂದು ಮೂಡಿದೆ. ಹಚ್ಚ ಹಸಿರಿನ ಭತ್ತದ ಪೈರಿನ ಸಾಲುಗಳ ಮಧ್ಯೆ ದಂಪತಿ ಸಾಗುವಾಗ ಇಬ್ಬರ ಮೊಗದಲ್ಲೂ ಮಂದಹಾಸ ಕಾಣುತ್ತಿದೆ. ‘ಸುಗ್ಗಿಕಾಲದಲ್ಲಿ ನಾನು ಇಲ್ಲಿ ಕೆಲಸ ಮಾಡುತ್ತೇನೆ, ಪೂರ್ಣಿಮಾ ಟೈಲರಿಂಗ್ ಘಟಕದಲ್ಲಿ ಕೆಲಸ ಮಾಡುತ್ತಾಳೆ. ನಮ್ಮ ಕಾಲ ಮೇಲೆ ನಾವು ನಿಲ್ಲಲು ಸಾಧ್ಯವಾಗುತ್ತದೆ ಎಂದು ನಾನು ಅಂದುಕೊಂಡಿರಲಿಲ್ಲ’ ಎನ್ನುತ್ತಾರೆ ಮಾರಪ್ಪ.
ಇಟ್ಟಿಗೆಗೂಡು, ಹಂದಿ ಸಾಕಣೆ ಕೇಂದ್ರ, ಟೈಲ್ಸ್ ಕಾರ್ಖಾನೆ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಶೋಷಣೆಗೆ ಒಳಗಾಗಿದ್ದ ಸಾವಿರಾರು ಜೀತದಾಳುಗಳಲ್ಲಿ ಈ ಜೋಡಿಯೂ ಒಂದು. 2014 ರಲ್ಲಿ ಮಾರಪ್ಪ ಅವರ ಸಹೋದರಿ ಸಹಾಯ ಅರಸಿ ಕಾರ್ಖಾನೆಯಿಂದ ತಪ್ಪಿಸಿಕೊಂಡಿದ್ದರು. ಸಹೋದರಿ ಸೇರಿ ಕುಟುಂಬದ ಎಂಟು ಮಂದಿ ಜೀತದಾಳುಗಳಾಗಿ ಅಲ್ಲಿ ಅತಂತ್ರರಾಗಿದ್ದರು.
ನಂತರದ ಬೆಳವಣಿಗೆಯಲ್ಲಿ ಪೊಲೀಸ್ ಅಧಿಕಾರಿ, ತಹಶೀಲ್ದಾರ್ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸ್ಥಳೀಯ ಠಾಣೆಯಲ್ಲಿ ಜೀತದಾಳುಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು. ನಂತರ ಅವರನ್ನು ‘ಜೀತದಾಳು’ಗಳು ಎಂದು ಪರಿಗಣಿಸಿ ‘ಬಿಡುಗಡೆ ಪ್ರಮಾಣಪತ್ರ’ ನೀಡಲಾಯಿತು.
ಈಗ ಪೂರ್ಣಿಮಾ ಮತ್ತು ಮಾರಪ್ಪ ತಾವು ಅನುಭವಿಸುತ್ತಿರುವ ಸ್ವಾತಂತ್ರ್ಯವನ್ನು ಇತರರೂ ಪಡೆಯಲು ಸಹಾಯಹಸ್ತ ಚಾಚಬೇಕೆಂದು ದೃಢನಿರ್ಧಾರ ಮಾಡಿದ್ದಾರೆ. ಕೇವಲ ಕುಲುಮೆಯಲ್ಲಿ ಮಾತ್ರವಲ್ಲದೆ, ಅಲ್ಲಿಂದ ಹೊರಬಂದ ನಂತರವೂ ನಿರಂತರವಾಗಿ ಕಿರುಕುಳ ಎದುರಿಸಿದ ಮತ್ತು ಪುನರ್ವಸತಿ, ಜೀವನ ನಿರ್ವಹಣೆಯ ಹೋರಾಟಗಳಿಂದಾಗಿ ಕಠಿಣ ಸವಾಲುಗಳನ್ನು ಎದುರಿಸಿದ ಈ ಜೋಡಿ, ಇದೇ ರೀತಿ ಸಂಕಷ್ಟದಲ್ಲಿರುವ ಇತರರಿಗೆ ಸಹಾಯ ಮಾಡಲು ತಮ್ಮ ಸಮಯವನ್ನು ಮೀಸಲಿಟ್ಟಿದೆ.
‘ನಮ್ಮ ಬಳಿ ಯಾವುದೇ ದಾಖಲೆಗಳು ಇರಲಿಲ್ಲ. ಹೀಗಾಗಿ ಸರ್ಕಾರದ ಬೆಂಬಲ ಪಡೆಯಲು ಅಗತ್ಯವಿರುವ ಗುರುತಿನ ಚೀಟಿ ಪಡೆಯಲು ಕಷ್ಟವಾಯಿತು. ಹೇಗೆ, ಎಲ್ಲಿಂದ ಆರಂಭಿಸಬೇಕು ಎಂಬ ತಿಳಿವಳಿಕೆ ನಮಗಿರಲಿಲ್ಲ. ಪ್ರಕ್ರಿಯೆಯನ್ನು ಅರ್ಥ ಮಾಡಿಕೊಳ್ಳಲು ಸಾಕಷ್ಟು ಸಮಯ ಹಿಡಿಯಿತು. ಹೀಗಾಗಿ ಗ್ರಾಮದ ಇತರರಿಗೆ ಅದರಲ್ಲೂ ಗರ್ಭಿಣಿಯರಿಗೆ ಮತ್ತು ಜೀತ ಪದ್ಧತಿಯಿಂದ ರಕ್ಷಿಸಲ್ಪಟ್ಟವರಿಗೆ ನಾವೀಗ ಸಹಾಯ ಮಾಡುತ್ತಿದ್ದೇವೆ’ ಎನ್ನುತ್ತಾರೆ ಪೂರ್ಣಿಮಾ.
120 ಸದಸ್ಯರನ್ನು ಒಳಗೊಂಡಿರುವ ಜೀತದಾಳುಗಳ ಸಂಘ ‘ಉದಯೋನ್ಮುಖ ಪ್ರತಿಷ್ಠಾನ’ದ ಪದಾಧಿಕಾರಿಗಳಾಗಿ ಈ ದಂಪತಿ ಸಂತ್ರಸ್ತರೊಂದಿಗೆ ಸಂವಹನ ನಡೆಸುತ್ತಾರೆ ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಾರೆ.
ಕೆಲ ತಿಂಗಳುಗಳ ಹಿಂದೆ, ಹಂದಿ ಸಾಕಣೆ ಕೇಂದ್ರದಲ್ಲಿ ಜೀತದಾಳುಗಳಾಗಿ ಸಿಲುಕಿದ್ದ ಕುಟುಂಬದ ಬಗ್ಗೆ ತನಿಖೆ ನಡೆಸಿ ಮಾಹಿತಿ ರವಾನಿಸಲು ಮಾರಪ್ಪ ಸಹಾಯ ಮಾಡಿದ್ದರು. ಸದ್ಯ ಆ ಕುಟುಂಬವನ್ನು ರಕ್ಷಿಸಿ ಅವರಿಗೆ ಪುನರ್ವಸತಿ ನೀಡಲಾಗಿದೆ.
ಸ್ವಾತಂತ್ರ್ಯವು ಪೂರ್ಣಿಮಾ ಅವರೊಳಗಿನ ಕನಸುಗಳಿಗೆ ರೆಕ್ಕೆ ನೀಡಿದೆ. ‘ನನಗೆ ಟೈಲರಿಂಗ್ ಕಲಿಯಲು ಆಸಕ್ತಿ ಇತ್ತು. ಜೀತ ಪದ್ಧತಿಯಿಂದ ಮುಕ್ತಳಾಗಿ ಟೈಲರಿಂಗ್ ತರಬೇತಿ ಪಡೆದೆ. ಬಳಿಕ ಲ್ಯಾಪ್‌ಟಾಪ್ ಬ್ಯಾಗ್, ಕೈ ಚೀಲ, ಅಲಂಕಾರಿಕ ಬ್ಯಾಗ್, ಮೊಬೈಲ್ ಪೌಚ್‌ಗಳನ್ನು ಹೊಲಿಯುವುದನ್ನು ಕಲಿತೆ’ ಎನ್ನುತ್ತಾರೆ.
ಪೂರ್ಣಿಮಾ ಟೈಲರ್ ಮಾತ್ರವಲ್ಲ, ತರಬೇತುದಾರೆ ಸಹ. ಗ್ರಾಮದ ನಾಲ್ಕು ಮಹಿಳೆಯರಿಗೆ ಹೊಲಿಗೆ ಕೌಶಲವನ್ನು ಕಲಿಸಿದ್ದಾರೆ. ‘ಹೊಲಿದ ಬಟ್ಟೆಯ ಲೆಕ್ಕದಲ್ಲಿ ನಮಗೆ ಸಂಬಳ ನೀಡುತ್ತಾರೆ. ಇದರಿಂದ ಕುಟುಂಬ ನಿರ್ವಹಣೆಗೆ ದಾರಿ ಸಿಕ್ಕಂತಾಗಿದೆ’ ಎನ್ನುತ್ತಾರೆ ಡಿಂಪಲ್.
‘ಉದಯೋನ್ಮುಖ ಪ್ರತಿಷ್ಠಾನ’ಕ್ಕೆ ಲಾಭರಹಿತ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರ ಬೆಂಬಲವಾಗಿವೆ. ಪೂರ್ಣಿಮಾ ಅವರ ಗ್ರಾಮದಲ್ಲಿ ಪ್ರತಿಷ್ಠಾನವು ಟೈಲರಿಂಗ್ ಘಟಕವನ್ನು ಸ್ಥಾಪಿಸಿದೆ. ಇಲ್ಲಿ ಪೂರ್ಣಿಮಾ ಮತ್ತು ಮಹಿಳೆಯರ ತಂಡ ಬಗೆಬಗೆಯ ಚೀಲಗಳನ್ನು ಹೊಲಿಯುತ್ತದೆ. ಹೆಚ್ಚು ಆರ್ಡರ್‌ಗಳು ಬಂದಾಗ ಜೀತ ಪದ್ಧತಿಯಿಂದ ಮುಕ್ತರಾದ ವಿವಿಧ ಜಿಲ್ಲೆಗಳ ಕಾರ್ಮಿಕರ ನೆರವನ್ನೂ ಪಡೆಯುತ್ತಾರೆ’ ಎಂದು ಎನ್‌ಜಿಒ ಕಾರ್ಯಕರ್ತರೊಬ್ಬರು ತಿಳಿಸಿದರು.
2019ರಲ್ಲಿ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಅವರಿಗೆ ಮೊದಲ ಆರ್ಡರ್ ಲಭಿಸಿತ್ತು. ಈ ಸಂದರ್ಭದಲ್ಲಿ ತಂಡವು 250 ಲ್ಯಾಪ್‌ಟಾಪ್ ಬ್ಯಾಗ್‌ಗಳನ್ನು ಹೊಲಿದುಕೊಟ್ಟಿತ್ತು.
‘ಜೀತದಾಳುಗಳು ಬದಲಾವಣೆಗೆ ಹಾತೊರೆಯುತ್ತಿರುವುದರಿಂದ ಇಲಾಖೆಯು ಈ ಉಪಕ್ರಮವನ್ನು ಬೆಂಬಲಿಸುತ್ತಿದೆ. ಜೀತದಾಳುಗಳಿಗೆ ವಾಸ್ತವ ಸ್ಥಿತಿಯ ಅರಿವಿದೆ. ಅವರ ನೋವು ಮತ್ತು ಅನುಭವದ ಆಧಾರದ ಮೇಲೆ ಸಂಬಂಧಪಟ್ಟ ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿ ಮಾಡಬೇಕು. ಜೀತ ಪದ್ಧತಿಯಿಂದ ಅವರನ್ನು ಹೊರತರಲು ಎಲ್ಲರೂ ಸಮನ್ವಯದಿಂದ ಕೆಲಸ ಮಾಡಬೇಕು’ ಎಂದು ಆರ್‌ಡಿಪಿಆರ್ ಇಲಾಖೆ ಮಾಜಿ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಹೇಳುತ್ತಾರೆ.
ಟ್ರಸ್ಟ್‌ನ ಅಧ್ಯಕ್ಷರಾಗಿ ಆಯ್ಕೆಯಾದ ಮಾರಪ್ಪ ‘ಶಿಕ್ಷಣ ತೀರಾ ಅಗತ್ಯ’ ಎಂದು ಭಾವಿಸುತ್ತಾರೆ. ‘ಜೀತ ಪದ್ಧತಿ ಮತ್ತು ಈ ಜಾಲದಲ್ಲಿ ಹೇಗೆ ಸುಲಭವಾಗಿ ಸಿಕ್ಕಿಹಾಕಿಕೊಳ್ಳಬಹುದು ಎಂಬ ಬಗ್ಗೆ ಅರಿವು ಮೂಡಿಸಲು ಬಯಸುತ್ತೇನೆ’ ಎನ್ನುತ್ತಾರೆ ಮಾರಪ್ಪ.
‘ನಾವು ಮದುವೆಯಾಗಲು ಬಯಸಿದಾಗ ಇಟ್ಟಿಗೆಗೂಡಿನ ಮಾಲೀಕರು ವಿವಾಹಕ್ಕೆ ತಗಲುವ ವೆಚ್ಚವೆಲ್ಲವನ್ನೂ ತಾವೇ ಭರಿಸುವುದಾಗಿ ಹೇಳಿದರು. ಮದುವೆಗೆ ₹20,000 ಖರ್ಚಾಗಿತ್ತು. ಕೊನೆಗೆ ‘ಸಾಲದ ಮೊತ್ತ ₹80,000ಕ್ಕೆ ಏರಿಕೆಯಾಗಿದೆ. ಈ ಸಾಲವನ್ನು ತೀರಿಸಲು ಹತ್ತು ವರ್ಷಗಳು ಬೇಕಾಗುತ್ತವೆ’ ಎಂದು ಹೇಳುತ್ತಿದ್ದರು’ ಎಂದು ಮಾರಪ್ಪ ಮತ್ತು ಪೂರ್ಣಿಮಾ ಆ ದಿನಗಳನ್ನು ನೆನಪು ಮಾಡಿಕೊಂಡರು.
ಪೂರ್ಣಿಮಾ ಮತ್ತು ಮಾರಪ್ಪ ಅವರ ಪ್ರಕರಣದಲ್ಲಿ ಮಾಲೀಕರಿಗೆ ಶಿಕ್ಷೆ ವಿಧಿಸಲಾಯಿತು. ಆದಾಗ್ಯೂ, ಇದು ಅತ್ಯಂತ ಅಪರೂಪ. ಹೆಚ್ಚಿನ ಸಂದರ್ಭಗಳಲ್ಲಿ, ಸಂತ್ರಸ್ತರು ಮಾಲೀಕರ ಸಮೀಪದಲ್ಲೇ ವಾಸಿಸುತ್ತಾ ಮತ್ತೆ ಮತ್ತೆ ಶೋಷಣೆಗೆ ಗುರಿಯಾಗುತ್ತಾರೆ. ಹೀಗಾಗಿ ಸಂಪೂರ್ಣ ಮತ್ತು ಸುಸ್ಥಿರ ಪುನರ್ವಸತಿ ಅತ್ಯಗತ್ಯ.
ಜೀತ ಪದ್ಧತಿ ನಿರ್ಮೂಲನೆ ವಿಚಾರದಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಸಂವೇದನಾಶೀಲರನ್ನಾಗಿ ಮಾಡುವುದು ಮುಖ್ಯ. ಈ ಪ್ರಕ್ರಿಯೆ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುವುದು ಆದ್ಯತೆಯಾಗಬೇಕು. ಇದರ ಜೊತೆಗೆ, ವಿವಿಧ ಜಿಲ್ಲೆಗಳಲ್ಲಿ ಜೀತದಿಂದ ಮುಕ್ತರಾದವರು ಸಂಘಟಿತರಾಗುವಂತೆ ಮಾಡಬೇಕು ಹಾಗೂ ಅವರ ಸಂಘಟನೆಯನ್ನು ಬಲಪಡಿಸಬೇಕು. ಇನ್ನೊಂದೆಡೆ, ಮತ್ತಷ್ಟು ಜೀತದಾಳುಗಳನ್ನು ಸಂಪರ್ಕಿಸುವ ಕೆಲಸವಾಗಬೇಕು.
‘ಜೀತ ಪದ್ಧತಿಯು ನನ್ನ ಜೀವಿತಾವಧಿಯಲ್ಲಿಯೇ ಸಂಪೂರ್ಣವಾಗಿ ನಿರ್ಮೂಲನೆಯಾಗುವುದನ್ನು ನಾನು ನೋಡಬೇಕು. ಇದಕ್ಕಾಗಿ ನಾನು ನನ್ನ ಅನುಭವವನ್ನು ಹಂಚಿಕೊಳ್ಳಲು ಬಯಸುತ್ತೇನೆ’ ಎಂದು ಮಾರಪ್ಪ ಹೇಳುತ್ತಾರೆ.
ಅನುವಾದ:ಕೀರ್ತಿಕುಮಾರಿ ಎಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.