ಮನೆಗೆ ಭೇಟಿ ನೀಡಿದ ವಿದ್ಯಾರ್ಥಿಗಳಿಗೆ ಶಿಶುಪಾಲ ಅವರು ಪರಿಸರ ಪಾಠ ಮಾಡುತ್ತಿರುವುದು
ಮನೆಯ ಹೊರಗೆ, ತಾರಸಿಯ ಮೇಲೆ ಗಿಡಗಳನ್ನು ಬೆಳೆಸುವುದು ಸಹಜ. ಆದರೆ ತಾವು ವಾಸಿಸುವ ಮನೆಯ ಡೈನಿಂಗ್ ಹಾಲ್‌ನಿಂದ ಹಿಡಿದು ಪ್ರತಿ ಮೂಲೆಯನ್ನೂ ಸಸ್ಯಕಾಶಿಯನ್ನಾಗಿಸಿಕೊಂಡಿದ್ದಾರೆ ದಾವಣಗೆರೆಯ ಪ್ರೊ.ಎಸ್.ಶಿಶುಪಾಲ. ಅವರ ಮನೆ ಹೊರಾಂಗಣ ಹಾಗೂ ಒಳಾಂಗಣದಲ್ಲಿ ವಿವಿಧ ಪ್ರಬೇಧಗಳ 850ಕ್ಕೂ ಹೆಚ್ಚು ಗಿಡಗಳಿವೆ.
–––
ಆ ಬೀದಿಯಲ್ಲಿ ಓಡಾಡುವ ಜನರಿಗೆ ಅದೊಂದು ಮನೆ ಎಂಬ ಭಾವ ಸಹಜವಾಗಿ ಮೂಡುವುದಿಲ್ಲ. ಮನೆಯ ಗೇಟು ದಾಟುತ್ತಲೇ ವಿವಿಧ ಬಳ್ಳಿಗಳು ತಲೆ ಸವರಿ ತೋರಣದ ರೀತಿ ಸ್ವಾಗತಿಸುತ್ತವೆ. ಹತ್ತಾರು ಬಗೆಯ ಹೂವುಗಳು ಸುವಾಸನೆ ಬೀರುತ್ತವೆ. ಮನೆಯ ಬಾಗಿಲು ಪ್ರವೇಶಿಸುವ ಮುನ್ನವೇ ವಿವಿಧ ಜಾತಿಯ ನೂರಾರು ಗಿಡ–ಮರ, ಬಳ್ಳಿಗಳು ವಿಶೇಷ ಅನುಭವ ನೀಡುತ್ತವೆ.
ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮ ಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಹವ್ಯಾಸಿ ಪಕ್ಷಿ ವೀಕ್ಷಕ ಪ್ರೊ.ಎಸ್.ಶಿಶುಪಾಲ ಅವರ ‘ಶಾಂತಿರತ್ನ’ ಮನೆಯ ಚಿತ್ರಣವಿದು. ದಾವಣಗೆರೆಯ ಎಸ್.ಎಸ್.ಲೇಔಟ್‌ನ ‘ಎ’ ಬ್ಲಾಕ್‌ನಲ್ಲಿರುವ ನೆಲೆಸಿರುವ ಶಿಶುಪಾಲ ಅವರು ತಮ್ಮ ಮನೆಯಲ್ಲಿ ತೋಟವನ್ನು ಸೃಷ್ಟಿಸಿದ್ದಾರೆ.
ಶಿಶುಪಾಲ ಅವರ ಮನೆ ಹೊರಾಂಗಣ ಹಾಗೂ ಒಳಾಂಗಣದಲ್ಲಿ ವಿವಿಧ ಪ್ರಬೇಧಗಳ 850ಕ್ಕೂ ಹೆಚ್ಚು ಗಿಡ–ಮರಗಳಿವೆ. ಮನೆಯ ಹೊರಾಂಗಣದಲ್ಲಿ ದೊಡ್ಡ ದೊಡ್ಡ ಗಿಡ, ಮರಗಳಿವೆ. ಒಳಗಡೆ ಸಣ್ಣ ಸಣ್ಣ ಸಸಿಗಳನ್ನು ಪೋಷಿಸಲಾಗುತ್ತಿದೆ. ಹಾಲ್, ಡೈನಿಂಗ್ ಟೇಬಲ್, ದೇವರ ಕೋಣೆ, ಬೆಡ್‌ರೂಮ್, ಬಾತ್‌ರೂಮ್, ಅಡುಗೆ ಮನೆ.. ಹೀಗೆ ಮನೆಯ ಮೂಲೆ ಮೂಲೆಯಲ್ಲೂ ಸಸಿಗಳು ನಳನಳಿಸುತ್ತಿವೆ.
ಮೆಟ್ಟಿಲುಗಳ ಮೇಲೆ ಕುಂಡಗಳಲ್ಲಿ ಕುಳಿತು ನಗೆ ಬೀರುವ ಸಸಿಗಳನ್ನು ಕಣ್ತುಂಬಿಕೊಳ್ಳುತ್ತಾ, ಬಾಲ್ಕನಿಗೆ ತೆರಳಿದರೆ ಅಲ್ಲಿನ ಸಸ್ಯ ಸಂಪತ್ತು ಯಾವ ನರ್ಸರಿಗೂ ಕಡಿಮೆ ಇಲ್ಲದಂತೆ ಬೆಳೆದು ನಿಂತಿರುವುದು ಆಶ್ಚರ್ಯ ತರಿಸುತ್ತದೆ. ಈ ನಿವಾಸದಲ್ಲಿ ಹೇಗೆಂದರೆ ಹಾಗೆ ಓಡಾಡಿದರೆ ಅಲ್ಲಲ್ಲಿ ತೂಗು ಬಿಟ್ಟಿರುವ ಸಸಿಗಳ ಕುಂಡಗಳು ತಲೆಗೆ ಬಡಿಯುವುದು ಖಚಿತ. ಆದರೆ, ಮನೆಯ ಸದಸ್ಯರಿಗೆ ಮಾತ್ರ ಆ ಬಗ್ಗೆ ಚಿಂತೆಯಿಲ್ಲ. ಅವರಿಗೆ ಸಸಿ ತೋರಣಗಳ ‘ಮ್ಯಾಪ್’ ತಲೆಯಲ್ಲಿ ಅಚ್ಚು ಹೊತ್ತಿದೆ.
ದಾಸವಾಳ, ಲಿಲ್ಲಿ, ಮಲ್ಲಿಗೆ, ಗುಲಾಬಿ, ಸಂಪಿಗೆ, ಬ್ಲೀಡಿಂಗ್ ಹಾರ್ಟ್, ಪಾರಿಜಾತ ಸೇರಿದಂತೆ ಬಗೆ ಬಗೆಯ 110ಕ್ಕೂ ಹೆಚ್ಚಿನ ಹೂವಿನ ಸಸ್ಯಗಳು ಕುಂಡಗಳಲ್ಲಿ ಅರಳಿ ನಿಂತಿವೆ. ಕಮಲ, ನೈದಿಲೆ, ಗ್ರೀನ್‌ರೋಸ್ ಸೇರಿ ಇನ್ನಿತರೆ ಜಲಸಸ್ಯಗಳೂ ನೀರಿನಲ್ಲಿ ನಗೆ ಬೀರುತ್ತಿವೆ. ಮಣ್ಣು, ಸಿಮೆಂಟ್ ಹಾಗೂ ಪ್ಲಾಸ್ಟಿಕ್ ಕುಂಡಗಳಲ್ಲೇ 450ಕ್ಕೂ ಹೆಚ್ಚು ಸಸ್ಯಗಳು ನಳನಳಿಸುತ್ತಿವೆ.
ನಿಂಬೆ, ಪನ್ನೇರಳೆ, ಸೀತಾಫಲ, ಪಪ್ಪಾಯ, ಬಾಳೆ ಮನೆಯ ಸುತ್ತಲೂ ದಟ್ಟವಾಗಿ ಬೆಳೆದು ನಿಂತಿದ್ದು, ಎಲ್ಲಿಂದಲೋ ಹಾರಿ ಬರುವ ವಿವಿಧ ಪಕ್ಷಿಗಳಿಗೆ ‘ಫಲ’ ಕೊಡುತ್ತಿವೆ. ದೊಡ್ಡಪತ್ರೆ, ತುಳಸಿ, ಕರಿಬೇವು, ಪುದೀನಾ, ಅಲೊವೇರಾ, ಶುಂಠಿ, ಅರಿಸಿನ ಒಳಗೊಂಡು ಹತ್ತಾರು ಪ್ರಭೇದದ ಔಷಧೀಯ ಸಸ್ಯಗಳು, ಟೊಮೆಟೊ, ಬದನೆಯಂತಹ ತರಕಾರಿ ಹಾಗೂ ಬಗೆ ಬಗೆಯ ಬಳ್ಳಿಗಳು ಮನೆಯನ್ನು ಆವರಿಸಿಕೊಂಡಿವೆ.
ಹಸಿರನ್ನೇ ಹೊದ್ದಿರುವ ‘ಶಾಂತಿರತ್ನ’ಕ್ಕೆ 21ಕ್ಕೂ ಹೆಚ್ಚು ತರಹೇವಾರಿ ಪಕ್ಷಿಗಳು ಭೇಟಿ ನೀಡುತ್ತಲೇ ಇರುತ್ತವೆ. ಹಲವು ಪಕ್ಷಿಗಳು ಇಲ್ಲಿಯೇ ಗೂಡು ಕಟ್ಟಿ ಮರಿ ಮಾಡಿಕೊಳ್ಳುವುದು ಸಹಜವಾಗಿದೆ. ಸೂರಕ್ಕಿ, ಪಿಕಳಾರ, ಹುಲಿಯಕ್ಕಿ, ಗಿಳಿಗಳ ನೆಚ್ಚಿನ ತಾಣವೂ ಇದಾಗಿದೆ.
ವಿದ್ಯಾರ್ಥಿಗಳಿಗೆ ಪರಿಸರ ಪಾಠ
ಶಿಶುಪಾಲ ಅವರ ಮನೆಗೆ ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳು ಶಿಕ್ಷಕರೊಂದಿಗೆ ಬಂದು ಪರಿಸರ ಪಾಠವನ್ನು ಆಲಿಸುತ್ತಾರೆ. ಹಸಿರು ನಿವಾಸವನ್ನು ಬೆರಗುಗಣ್ಣಿನಿಂದ ನೋಡುವ ಚಿಣ್ಣರು ಮನೆಯಲ್ಲೇ ತೋಟವನ್ನು ಸೃಷ್ಟಿಸುವ ಬಗೆಯನ್ನು ಶಿಶುಪಾಲ ಅವರಿಂದ ಕೇಳಿ ತಿಳಿದುಕೊಳ್ಳುತ್ತಿದ್ದಾರೆ. ಅವರು ಚಿಣ್ಣರಿಗೆ ಪರಿಸರ ಪ್ರೀತಿಯ ಬಗ್ಗೆ ಪಾಠ ಮಾಡುವ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯದಲ್ಲೂ ತೊಡಗಿದ್ದಾರೆ.
ಶಿಶುಪಾಲ ಅವರ ಪರಿಸರ ಪ್ರೀತಿಗೆ ಹತ್ತಾರು ಪ್ರಶಸ್ತಿಗಳು ಒಲಿದು ಬಂದಿವೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ‘ಪರಿಸರ ಸ್ನೇಹಿ ಮನೆ’ ಪ್ರಶಸ್ತಿ, ತೋಟಗಾರಿಕೆ ಇಲಾಖೆಯಿಂದ ‘ಕೈತೋಟ’ ವಿಭಾಗದಲ್ಲಿ ನೀಡುವ ‘ಅತ್ಯುತ್ತಮ ಮನೆ’ ಪ್ರಶಸ್ತಿಯು ಐದು ಬಾರಿ ಒಲಿದಿದೆ. ಭಾರತೀಯ ವಿಕಾಸ ಪರಿಷತ್ ‘ಹಸಿರು ವಾಸಿ’ ಮನೆ ಪ್ರಶಸ್ತಿ ಸೇರಿದಂತೆ ಹತ್ತಾರು ಸಂಘ–ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿವೆ.
ಇವರ ಮನೆಯಲ್ಲಿ ಮಳೆ ನೀರನ್ನು ಸಂಗ್ರಹಿಸುವ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ಕಾರಣಕ್ಕೆ ಗಿಡ, ಮರಗಳಿಗೆ ನೀರಿನ ಸಮಸ್ಯೆ ಎದುರಾಗುತ್ತಿಲ್ಲ. ಚಾವಣಿಯಿಂದ ಬರುವ ನೀರು ‘ರೈನಿ ಫಿಲ್ಟರ್’ ಶುದ್ಧಗೊಂಡು ಐದು ಸಾವಿರ ಲೀಟರ್ ಸಾಮರ್ಥ್ಯದ ಸಂಪ್ ಸೇರುತ್ತಿದೆ. ಸಂಪ್‌ನಲ್ಲಿನ ನೀರನ್ನು ಗಿಡಗಳಿಗೆ ನೀರುಣಿಸಲು ಬಳಸಲಾಗುತ್ತಿದೆ. ಎಲ್ಲ ಸಸಿಗಳಿಗೆ ನೀರುಣಿಸಲು ಒಂದೆರೆಡು ತಾಸು ಸಮಯ ಬೇಕಾಗುತ್ತದೆ.
ಪ್ರಕೃತಿಯೇ ದೇವರು..
ಮನೆಯ ಆವರಣದಲ್ಲಿನ ಗಿಡಮರಗಳ ಎಲೆ, ಒಣಗಿದ ಹೂವು, ಮಣ್ಣು ಕಸವಲ್ಲ. ಮನಃಶಾಂತಿಗಾಗಿ ಇನ್ನೆಲ್ಲಿಗೋ ಹೋಗುವ ಅವಶ್ಯಕತೆಯೂ ಇಲ್ಲ. ಪ್ರಕೃತಿಯೇ ದೇವರು. ಇಲ್ಲಿ ಸಿಗುವ ನೆಮ್ಮದಿ ಬೇರೆಲ್ಲಿಯೂ ದೊರೆಯುವುದಿಲ್ಲ ಎನ್ನುತ್ತಾರೆ ಶಿಶುಪಾಲ. ‘ನಮ್ಮ ಮನೆಯ ಗಿಡಮರಗಳಿಂದ ನಿತ್ಯವೂ ಕನಿಷ್ಠ ನೂರು ಜನರಿಗೆ ಶುದ್ಧ ಗಾಳಿ ದೊರೆಯುತ್ತಿದೆ. ಇದು ಕೂಡಾ ಒಂದು ರೀತಿಯ ಸಮಾಜ ಸೇವೆಯೇ ಆಗಿದೆ’ ಎನ್ನುತ್ತಾರೆ.
ಪರಿಸರ, ಪಕ್ಷಿಸಂಕುಲ ಅಧ್ಯಯನ ಬಗ್ಗೆ ಆಸಕ್ತಿ ಹೊಂದಿರುವ ಅವರು, ಮನೆಯಲ್ಲಿ ಸಣ್ಣದೊಂದು ಗ್ರಂಥಾಲಯವನ್ನೇ ತೆರೆದಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಕ್ಯಾಮೆರಾ ಹಿಡಿದು ಬೆಟ್ಟ ಗುಡ್ಡ, ಕೆರೆ ಕಟ್ಟೆಗಳತ್ತ ಸಾಗಿ, ವಿವಿಧ ಪಕ್ಷಿಗಳ ಚೆಂದದ ಚಿತ್ರಗಳನ್ನು ಸೆರೆ ಹಿಡಿಯುತ್ತಾರೆ.
ತಾಳ್ಮೆ ಇದ್ದರೆ ಮಾತ್ರ ಸಸಿಗಳ ಪೋಷಣೆ ಸಾಧ್ಯ. ಚಿಕ್ಕ ಮಕ್ಕಳೆಂದು ಭಾವಿಸಿ ನಿತ್ಯವೂ ನೀರುಣಿಸಿ, ಗೊಬ್ಬರ ಹಾಕಿ ಬೆಳೆಸಿದ ಸಸಿಗಳು ಹೂವು ಬಿಟ್ಟಾಗ ಸಿಗುವ ಖುಷಿಯನ್ನು ಪದಗಳಲ್ಲಿ ವರ್ಣಿಸಲಾಗದು. ಮನೆಯಲ್ಲಿರುವ ನೂರಾರು ಸಸಿಗಳು ನಮ್ಮ ಬದುಕಿನ ಭಾಗವೇ ಆಗಿವೆ ಎಂದು ಸಂತೃಪ್ತಿಯ ಭಾವ ತೋರಿದ್ದು ಶಿಶುಪಾಲ ಅವರ ಪತ್ನಿ ಪದ್ಮಲತಾ. ಪತಿಯ ಸಸ್ಯ ಪ್ರೀತಿಗೆ ನಿಜ ಅರ್ಥದಲ್ಲಿ ನೀರೆರೆದು ಪೋಷಿಸುತ್ತಿರುವವರೇ ಇವರು.
ಆಸಕ್ತಿ, ಸಸ್ಯ ಸಂಕುಲದ ಬಗೆಗೆ ಅಪಾರ ಪ್ರೀತಿ ಇದ್ದರೆ ‘ಮನೆ ತೋಟ’ವನ್ನು ಸೃಷ್ಟಿಸಲು ಸಾಧ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.