ಬಾಣಂತಿ ಚಾಕರಿಕೆ,
ಕಡು ಕಷ್ಟ ಮಾಹಾ ತಾಯಿ.
ಗುಂಡಿಯ ಹುಡುಕಾಡಿ,
ಅವ್ಲ ಮೀನ ತರು ತಾಯಿ
ಎನ್ನುವ ಜನಪದ ಹಾಡಿನಲ್ಲಿ ಅವ್ಲ ಮೀನಿನ ಪ್ರಸ್ತಾಪ ಬರುತ್ತದೆ. ಈ ಅವ್ಲ ಮೀನಿನ ರುಚಿ ನೋಡಿದ ಮೀನುಪ್ರಿಯರೂ ವಿರಳ. ಕಾರಣ ಯಾವ ಮಾರುಕಟ್ಟೆಯಲ್ಲೂ ಮಾರಾಟಕ್ಕೆ ಸಿಗದ ಈ ಮೀನುಗಳು ಅಳಿವಿನ ಅಂಚಿನಲ್ಲಿವೆ.
ಹೆಚ್ಚು ಮುಳ್ಳಿರದ, ಮುಟ್ಟಿದರೆ ಜಾರುವ, ನೀರಿನಿಂದ ತೆಗೆದ ಮೇಲೂ ಬಹಳ ಸಮಯ ಜೀವಂತವಾಗಿರುವ, ನಂಜಿನ ಅಂಶ ಇಲ್ಲದ, ಬಾಣಂತಿಯರಿಗೆ ಉಣ ಬಡಿಸುವ ಈ ಮೀನನ್ನು ವಾಡಿಕೆಯಲ್ಲಿ ಪಥ್ಯದ ಮೀನು ಎಂದೇ ಕರೆಯುತ್ತಾರೆ.
ಮುರ್ರೆಲ್ ಮೀನಿನ ಜಾತಿಗೆ ಸೇರಿದ ಈ ಮೀನುಗಳು ದುಂಡು, ಮುರ್ದುಂಡು ಜಾತಿಯ ಮೀನುಗಳನ್ನು ಹೋಲುತ್ತವೆ. ಗುಡ್ಡದ ಇಳಿಜಾರಿನಿಂದ ಹರಿದು ಬರುವ ಶುದ್ಧ ನೀರಿನ ಸಣ್ಣ ಹಳ್ಳಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಬಹಳ ಸೂಕ್ಷ್ಮ ಜಾತಿಯ ಮೀನಿನ ವರ್ಗಕ್ಕೆ ಸೇರಿದ ಇವುಗಳನ್ನು ಜಾಗ್ರತೆಯಿಂದ ಗಾಳ, ಬಲೆ, ಬಂದೂಕು ಬಳಸಿ ಬೇಟೆಯಾಡುತ್ತಿದ್ದರು.
ಎರಡು ಅಡಿಯವರೆಗೆ ಬೆಳೆಯುವ ಇವು ಐದು ಕೇಜಿಯವರೆಗೆ ತೂಗುತ್ತವೆ. ಹಳ್ಳಿಗಳಲ್ಲಿ ಈ ಮೀನುಗಳನ್ನು ಸ್ವಚ್ಛ ಮಾಡುವಾಗ ಜಾರುವುದರಿಂದ ಬೂದಿಯನ್ನು ಬಳಸಿ ತುಂಡರಿಸುತ್ತಾರೆ. ಸಾಕಷ್ಟು ಔಷಧೀಯ ಗುಣ ಹೊಂದಿರುವ ಈ ಅವ್ಲ ಮೀನುಗಳನ್ನು ಸಾರು, ಫ್ರೈ, ಮಸಾಲೆ ಫ್ರೈ ಮಾಡಿ ಸೇವಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.