
ಮೈಸೂರು ನಗರದ ನಂಜನಗೂಡು ರಸ್ತೆಯ ಮಧುವನದ ಎದುರು ಈಗ ಹೊಸದೊಂದು ಸ್ಥಳ ಗಮನ ಸೆಳೆಯುತ್ತಿದೆ. ಇದು ರೆಸಾರ್ಟ್ ಅಲ್ಲ, ಥೀಮ್ ಪಾರ್ಕ್ ಕೂಡ ಅಲ್ಲ; ಬೆಕ್ಕುಗಳಿಗಾಗಿ ರೂಪುಗೊಂಡಿರುವ ಅಪರೂಪದ ಲೋಕ. ‘ಜಿನ್ ಮಿನ್ ಕ್ಯಾಟ್ ವರ್ಲ್ಡ್’ ಎಂಬ ಹೆಸರಿನ ಈ ಬೆಕ್ಕುಗಳ ಮ್ಯೂಸಿಯಂ, ಮುದ್ದುಮರಿಗಳ ಆಟ, ಅಪರೂಪದ ತಳಿಗಳ ನಡಿಗೆ, ಮತ್ತು ಅವುಗಳ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳಿಂದ ಬೆಕ್ಕು ಪ್ರಿಯರು ಮತ್ತು ಪ್ರವಾಸಿಗರ ಗಮನ ಸೆಳೆಯುತ್ತಿದೆ.
ಹದಿನೈದು ವರ್ಷಗಳ ಕಾರ್ಪೊರೇಟ್ ಬದುಕಿನ ಒತ್ತಡದಿಂದ ಹೊರಬಂದ ಶರತ್ ಅವರ ಜೀವನದಲ್ಲಿ ಮುದ್ದಾದ ಸಂಗಾತಿ ಇದ್ದಳು; ಅವಳ ಹೆಸರು ‘ಕೊಕೊ’. ಕೆಲಸದ ದಣಿವು, ಜೀವನದ ಏರುಪೇರುಗಳನ್ನೆಲ್ಲ
ಹಂಚಿಕೊಳ್ಳುತ್ತಿದ್ದ ಆ ಬೆಕ್ಕು ಒಂದು ದಿನ ರಸ್ತೆ ಅಪಘಾತದಲ್ಲಿ ಮೃತಪಟ್ಟಾಗ, ಶರತ್ ಅವರ ಬದುಕು ಕ್ಷಣಾರ್ಧದಲ್ಲಿ ಬದಲಾಗಿತ್ತು. ಆ ನೋವು ಅವರನ್ನು ಕುಗ್ಗಿಸಲಿಲ್ಲ, ಬದಲಿಗೆ ಬೆಕ್ಕುಗಳಿಗಾಗಿ ಏನಾದರೂ ಮಾಡಬೇಕು ಎಂಬ ದೃಢಸಂಕಲ್ಪಕ್ಕೆ ದಾರಿ ತೋರಿಸಿತು.
‘‘ಕೊಕೊ’ ಇಲ್ಲದ ಖಾಲಿತನ ತುಂಬಲಾಗದು. ಆದರೆ ಆಕೆಯ ನೆನಪಿನಲ್ಲಿ ಇನ್ನೂ ಅನೇಕ ಬೆಕ್ಕುಗಳಿಗೆ ಸುರಕ್ಷಿತ, ಸಂತೋಷಕರ ಜಗತ್ತು ನಿರ್ಮಿಸಬೇಕು ಎಂದು ನಿರ್ಧರಿಸಿದೆ’ ಎನ್ನುತ್ತಾರೆ ಶರತ್.
₹50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಮ್ಯೂಸಿಯಂ ಕೇವಲ ಪ್ರದರ್ಶನ ಸ್ಥಳವಲ್ಲ; ಇದು ಅರಿವು ಕೇಂದ್ರವೂ ಹೌದು. ಎರಡು ವರ್ಷ ಶರತ್ ಬೆಕ್ಕುಗಳ ಸಾಕಾಣಿಕೆ, ಆರೈಕೆ, ತಳಿಗಳು ಮತ್ತು ರೋಗಗಳ ಕುರಿತು ಮಾಹಿತಿ ಸಂಗ್ರಹಿಸಿದರು. ಬೆಕ್ಕುಗಳ ಆರೈಕೆ (ಫೀಲೈನ್ ಕೇರ್) ಕುರಿತು ಅಧ್ಯಯನ ಮಾಡಿ ತಜ್ಞರ ಸಲಹೆ ಪಡೆದುಕೊಂಡರು. ಸ್ನೇಹಿತರ ಸಹಾಯದಿಂದ ಹದಿನಾಲ್ಕು ತಳಿಗಳ ಬೆಕ್ಕುಗಳನ್ನು ಪಡೆದು, ಮೈಸೂರಿನ ವಾತಾವರಣಕ್ಕೆ ಅವು ಹೊಂದಿಕೊಳ್ಳುತ್ತವೆಯೇ ಎಂಬುದನ್ನು ಮೂರು ತಿಂಗಳು ಗಮನಿಸಿದರು.
ಇದೀಗ ಇಲ್ಲಿ ಇಪ್ಪತ್ತಕ್ಕೂ ಹೆಚ್ಚು ಬೆಕ್ಕುಗಳಿವೆ. ಅಪರೂಪದ ತಳಿಗಳಾದ ಮೇನ್ ಕೂನ್, ಸೈಬೀರಿಯನ್, ಪರ್ಶಿಯನ್, ಬೆಂಗಾಲ್, ಸ್ಫಿಂಕ್ಸ್, ಹಿಮಾಲಯನ್ ಮತ್ತು ರ್‍ಯಾಗ್ ಡಾಲ್ ಬೆಕ್ಕುಗಳು ಇಲ್ಲಿ ಸ್ವಚ್ಛಂದವಾಗಿ ಓಡಾಡುತ್ತಿವೆ. ಕೆಲವು ಮರಿಗಳನ್ನು ದತ್ತು ಪಡೆದು ಸಾಕಲಾಗುತ್ತಿದೆ.
ಮ್ಯೂಸಿಯಂ ಒಳಭಾಗದಲ್ಲಿ ಮುದ್ದಾದ ಜೋಕಾಲಿಗಳು, ಕುಳಿತುಕೊಳ್ಳಲು ವಿನ್ಯಾಸಗೊಳಿಸಿದ ಮಂಚಗಳು ಹಾಗೂ ವಿಶಾಲಗೂಡುಗಳು ಇವೆ. ಒಂದು ಗೂಡಿನಿಂದ ಮತ್ತೊಂದಕ್ಕೆ ಸಾಗಲು 300 ಅಡಿ ಉದ್ದದ ಸುರಂಗ ಮಾದರಿಯ ಮಾರ್ಗವಿದ್ದು, ಬೆಕ್ಕುಗಳು ಯಾವುದೇ ಭಯವಿಲ್ಲದೆ ಓಡಾಡಬಹುದು. ಅವುಗಳನ್ನು ಪಂಜರಕ್ಕೆ ಸೀಮಿತಗೊಳಿಸದೇ, ಸ್ವತಂತ್ರವಾಗಿ ಆಟವಾಡಲು ಅವಕಾಶ ಕಲ್ಪಿಸಿರುವುದು ವಿಶೇಷ.
ಲಸಿಕೆ, ಆಹಾರ ಮತ್ತು ಆರೋಗ್ಯ ನಿರ್ವಹಣೆಗೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರತಿಯೊಂದು ತಳಿಯ ವಿಶೇಷತೆ, ಹೊಂದಿಕೊಳ್ಳುವ ವಾತಾವರಣ, ಸಾಮಾನ್ಯ ರೋಗಗಳು ಮತ್ತು ಆರೈಕೆ ವಿಧಾನಗಳ ಬಗ್ಗೆ ಮಾಹಿತಿಯನ್ನೂ ಪ್ರದರ್ಶಿಸಲಾಗಿದೆ.
ಇಲ್ಲಿ ಕೇವಲ ಬೆಕ್ಕುಗಳನ್ನು ನೋಡುವುದಲ್ಲ; ಅವುಗಳನ್ನು ಅರ್ಥಮಾಡಿಕೊಳ್ಳುವ ಅವಕಾಶವೂ ಇದೆ. ಬೆಕ್ಕಿನ ದೃಷ್ಟಿಗೆ ಬಣ್ಣಗಳು ಹೇಗೆ ಕಾಣುತ್ತವೆ ಎಂಬುದನ್ನು ಚಿತ್ರಗಳ ಮೂಲಕ ತೋರಿಸಲಾಗಿದೆ. ಬೆಕ್ಕಿಗೆ ಜ್ವರ ಬಂದರೆ ಏನು ಮಾಡಬೇಕು, ಹೇಗೆ ಹಿಡಿದುಕೊಳ್ಳಬೇಕು, ಲಾಲನೆ–ಪಾಲನೆ ಹೇಗೆ ಮಾಡಬೇಕು ಎಂಬುದರ ಕುರಿತು ಸೂಕ್ಷ್ಮ ಮಾಹಿತಿಯನ್ನೂ ನೀಡಲಾಗಿದೆ.
‘ಬೆಕ್ಕುಗಳ ಸಾಕಾಣಿಕೆಯಷ್ಟೇ ನನ್ನ ಉದ್ದೇಶವಲ್ಲ. ಅವುಗಳಲ್ಲಿ ಸುಮಾರು ಐವತ್ತು ತಳಿಗಳಿವೆ. ಆದರೆ ಜನರಿಗೆ ಅದರ ಅರಿವಿಲ್ಲ. ಶೋ ಗಾಗಿ ಸಾಕಾಣಿಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿದೆ. ಹೀಗಾಗಿ ಸಾಕಾಣಿಕೆಯ ಕುರಿತು ಅರಿವು ಮೂಡಿಸಿ, ಮಾಹಿತಿಯನ್ನೂ ನೀಡಿದ್ದೇವೆ’ ಎಂದು ಮ್ಯೂಸಿಯಂ ಬಗ್ಗೆ ವಿವರಿಸಿದರು ಶರತ್.
ವಾರಾಂತ್ಯಗಳಲ್ಲಿ ಪೋಷಕರು ಮಕ್ಕಳನ್ನು ಈ ಮ್ಯೂಸಿಯಂಗೆ ಕರೆದುಕೊಂಡು ಬರುತ್ತಿದ್ದಾರೆ. ಮಕ್ಕಳಿಗೆ ₹69, ವಯಸ್ಕರಿಗೆ ₹99 ಪ್ರವೇಶ ಶುಲ್ಕ ನಿಗದಿಯಾಗಿದೆ. ಬೆಕ್ಕಿನ ಮುಖ ಆಧಾರಿತ ಕಲಾಕೃತಿಗಳು, ಕಾರ್ಟೂನ್ ಪಾತ್ರಗಳು, ಹಾಗೂ ಶೈಕ್ಷಣಿಕ ಪ್ರದರ್ಶನಗಳು ಮಕ್ಕಳಲ್ಲಿ ಕುತೂಹಲ ಹುಟ್ಟಿಸುತ್ತಿವೆ.
ಭವಿಷ್ಯದಲ್ಲಿ ಬೆಕ್ಕುಗಳಿಗಾಗಿ ವಿಶೇಷ ಪಾರ್ಲರ್ ಆರಂಭಿಸುವ ಯೋಚನೆಯೂ ಶರತ್ ಅವರಿಗಿದೆ. ಪ್ರಸ್ತುತ ಬೆಕ್ಕುಗಳು ಸಂಪೂರ್ಣವಾಗಿ ಹೊಂದಿಕೊಂಡ ಬಳಿಕ ಇನ್ನಷ್ಟು ತಳಿಗಳನ್ನು ಪರಿಚಯಿಸುವ ಯೋಜನೆ ಇದೆ.
ಒಬ್ಬ ವ್ಯಕ್ತಿಯ ವೈಯಕ್ತಿಕ ದುಃಖದಿಂದ ಆರಂಭವಾದ ಈ ಪ್ರಯತ್ನ, ಇಂದು ಮೈಸೂರಿನ ಪ್ರವಾಸೋದ್ಯಮಕ್ಕೆ ಹೊಸ ಮೆರಗು ತುಂಬುತ್ತಿದೆ. ‘ಕೊಕೊ’ ಎಂಬ ಮುದ್ದು ಬೆಕ್ಕಿನ ನೆನಪಿನಲ್ಲಿ ಹುಟ್ಟಿದ ಈ ಮ್ಯೂಸಿಯಂ, ಬೆಕ್ಕುಗಳ ಮೇಲೆ ಪ್ರೀತಿ ಮಾತ್ರವಲ್ಲ; ಜವಾಬ್ದಾರಿಯ ಅರಿವನ್ನೂ ಮೂಡಿಸುತ್ತದೆ.
ನೀವು ಮೈಸೂರಿನ ಕಡೆಗೆ ಹೊರಟಿದ್ದರೆ ಈ ಅಪರೂಪದ ‘ಬೆಕ್ಕಿನ ಲೋಕ’ಕ್ಕೆ ಭೇಟಿ ನೀಡುವುದನ್ನು ಮರೆಯಬೇಡಿ. ಇಲ್ಲಿ ಮುದ್ದಾದ ಮರಿಗಳ ಆಟದ ಹಿಂದೆ, ಒಂದು ಭಾವನಾತ್ಮಕ ಕಥೆಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.