‘ಶೋಲೆ’ ಸಿನಿಮಾ ತೆರೆಕಂಡು ಆಗಸ್ಟ್ 15ಕ್ಕೆ 50 ವಸಂತಗಳಾಗಿವೆ. ಈಗ ಆ ಸಿನಿಮಾದ ಹೊಸ ಅವತರಣಿಕೆಯು ದೇಶದ ವಿವಿಧೆಡೆ ಪ್ರದರ್ಶಿತವಾಗುತ್ತಿದೆ. ಗಬ್ಬರ್ ಕ್ರೌರ್ಯ, ಠಾಕೂರ್ ಸೆಡವು, ಜೈ–ವೀರೂ ಸಾಹಸ, ದೇಸಿ ಹುಡುಗಿ ಬಸಂತಿಯ ಸೌಂದರ್ಯವನ್ನು ಮತ್ತೆ ಮತ್ತೆ ನೋಡುವಾಗ ರಾಮನಗರದ ಗುಡ್ಡದಲ್ಲಿ ಆ ಚಿತ್ರತಂಡ ಉಳಿಸಿರುವ ಹೆಜ್ಜೆ ಗುರುತುಗಳೂ ನೆನಪಾಗುತ್ತವೆ...
ತೆಲುಗು ಚಿತ್ರರಂಗದಲ್ಲಿ ‘ಪರುಚೂರಿ ಬ್ರದರ್ಸ್’ (ಪರುಚೂರಿ ವೆಂಕಟೇಶ್ವರ ರಾವ್, ಪರುಚೂರಿ ಗೋಪಾಲಕೃಷ್ಣ) ಎಂಬಿಬ್ಬರು ಸಿನಿಮಾ ಬರಹಗಾರರು ಬಗಲಿನಲ್ಲಿ ಚೀಲ ಹಾಕಿಕೊಂಡು ಸಿನಿಮೋತ್ಸವಗಳಿಗೆ ದಶಕಗಳ ಹಿಂದೆ ಎಡತಾಕುತ್ತಿದ್ದರು. ಅವರನ್ನು ಕಂಡ ಆಂಧ್ರ ಪ್ರದೇಶದ ಅನೇಕರು, ‘ಇವರು ಯಾವ್ಯಾವುದೋ ದೇಶಗಳ ಚಿತ್ರಕಥೆಗಳನ್ನು ಮೊದಲು ಎತ್ತಿಕೊಂಡು ಈ ಜೋಳಿಗೆಗೆ ಹಾಕಿಕೊಳ್ಳುತ್ತಾರೆ. ಆಮೇಲೆ ಅದಕ್ಕೆ ದೇಸಿ ಸೊಗಡನ್ನು ಕೊಟ್ಟು, ಹೊಸತೇ ಎನ್ನುವಂಥ ಚಿತ್ರಕಥೆಗಳನ್ನು ಕಟ್ಟುತ್ತಾರೆ’ ಎಂದು ತಮಾಷೆ ಮಾಡುತ್ತಿದ್ದರು. ಹಿಂದಿ ಚಿತ್ರರಂಗದಲ್ಲಿ ಸಲೀಂ–ಜಾವೆದ್ ಜೋಡಿಯ ಮನದ ಜೋಳಿಗೆಯಲ್ಲಿನ ಕಥೆಗಳ ಬಗೆಗೂ ಇಂಥವೇ ಆಸಕ್ತಿಕರವಾದ ವಿವರಗಳಿವೆ. ಸಲೀಂ ಎಂದರೆ ಸಲೀಂ ಖಾನ್ (ಸಲ್ಮಾನ್ ಖಾನ್ ತಂದೆ) ಎಂಬ ಹೆಸರಿನ ಕ್ಲುಪ್ತ ರೂಪ, ಜಾವೆದ್ ಎನ್ನುವುದು ಜಾವೆದ್ ಅಖ್ತರ್ ಎನ್ನುವ ನಾಮಬಲದ ಸಂಕ್ಷಿಪ್ತವೂ ಆಪ್ತವೂ ಆದ ಹೆಸರು. ಈ ಲೇಖಕರ ಜೋಡಿ ಬರೆದ ‘ಶೋಲೆ’ ಹಿಂದಿ ಸಿನಿಮಾ ತೆರೆಕಂಡು 50 ವಸಂತಗಳು ಉರುಳಿವೆ. ‘ಸೆವೆನ್ ಸಮುರಾಯ್’, ‘ಗಂಗಾ ಜಮುನಾ’, ‘ಮೇರಾ ಗಾಂವ್ ಮೇರಾ ದೇಶ್’ ತರಹದ ಹಿಂದಿ ಸಿನಿಮಾಗಳ ಸತ್ವವನ್ನೇ ಇಟ್ಟುಕೊಂಡೂ ‘ಶೋಲೆ’ ಚಿತ್ರಕಥೆಯನ್ನು ಅವರು ನೆಲದ ಕಥನವಾಗಿ ರೂಪಿಸಿದರು.
ಗಬ್ಬರ್ ಸಿಂಗ್ ಹೆಸರಿನ ದಡೂತಿ ಖಳನಾಯಕ, ಠಾಕೂರ್ ಬಲದೇವ್ ಸಿಂಗ್ ಎಂಬ ಮಿದುಮಾತಿನ ಪೊಲೀಸ್ ಅಧಿಕಾರಿ, ಉಡಾಳರಂತೆ ಕಾಣುವ ತುಡುಗು ಬುದ್ಧಿಯ ಉತ್ಸಾಹಿ ಯುವಕರಾದ ಜೈ ಹಾಗೂ ವೀರೂ, ಹಳ್ಳಿಗಾಡಿನಲ್ಲಿದ್ದೂ ತಾನೇ ದುಡಿಯುವ ಆತ್ಮವಿಶ್ವಾಸದ ಬನಿ ಬಸಂತಿ, ಪ್ರೇಮ ಪಲ್ಲವಿಸಿದರೂ ಗುಪ್ತಗಾಮಿನಿಯಾಗಿಯೇ ಅದನ್ನು ಕಾಣಿಸುವ ವಿಧವೆ ರಾಧಾ... ಹೀಗೆ ಸಲೀಂ–ಜಾವೆದ್ ಜೋಡಿ ಹೆಣೆದ ಪಾತ್ರಗಳು ಇಂದಿಗೂ ಪ್ರಸ್ತುತವಾಗಿವೆ.
ಲಾಗಾಯ್ತಿನಿಂದಲೂ ಯಶಸ್ವಿ ಜನಪ್ರಿಯ ಸಿನಿಮಾಗಳಿಗೆ ಒಂದು ಸೂತ್ರವಿದೆ. ‘ಕೆಜಿಎಫ್’, ‘ಕಾಂತಾರ’, ‘ಪುಷ್ಪ’ ಸಿನಿಮಾಗಳೂ ಈ ಸೂತ್ರಕ್ಕೆ ಹೊರತಾದವೇನೂ ಅಲ್ಲ. ನಾಟಕೀಯತೆ, ಭಾವುಕತೆ, ಸಾಹಸ ಇವುಗಳೇ ಆ ಸೂತ್ರದ ಪ್ರಧಾನ ಅಂಶಗಳು. ‘ಶೋಲೆ’ ಕೂಡ 70ರ ದಶಕದಲ್ಲೇ ಈ ಸೂತ್ರವನ್ನು ನೆಚ್ಚಿಕೊಂಡು, ಬಹುತಾರಾಗಣವನ್ನು ಇಟ್ಟುಕೊಂಡು ಸಿದ್ಧಗೊಂಡಿತ್ತು. ‘ದೀವಾರ್’ ಹಿಂದಿ ಚಿತ್ರದಲ್ಲಿ ತಾಯಿಯನ್ನು ಕೇಂದ್ರ ಪಾತ್ರವಾಗಿಸಿ ಬರವಣಿಗೆ ಮಾಡಿದ್ದ ಸಲೀಂ–ಜಾವೆದ್, ‘ಶೋಲೆ’ಯಲ್ಲಿ ಮದರ್ ಸೆಂಟಿಮೆಂಟ್ ಅನ್ನು ಪಕ್ಕಕ್ಕೆ ಇಟ್ಟರು. ಮಾಮೂಲಿ ನಾಯಕ–ಖಳನಾಯಕನ ಸೇಡಿನ ಕಥನವನ್ನು ಬದಿಗೆ ಸರಿಸಿ, ನಿವೃತ್ತ ಪೊಲೀಸ್ ಅಧಿಕಾರಿಯನ್ನು ಗಾಯಗೊಂಡ ಹುಲಿಯಂತಾಗಿಸಿದರು. ಎದುರಲ್ಲಿ ಚಿಕ್ಕಮಕ್ಕಳೂ ಹೆಸರು ಕೇಳಿದರೆ ಚೀರಬೇಕು ಅಂತಹ ಪ್ರತಿನಾಯಕನನ್ನು ಸೃಷ್ಟಿಸಿದರು. ಪೊಲೀಸ್ ವ್ಯವಸ್ಥೆಯಲ್ಲೇ ಇದ್ದು, ಕೈಗಳನ್ನು ಖೂಳನಿಂದ ಕಳೆದುಕೊಂಡು ಅಸಹಾಯಕನಾಗಿರುವ ಅಧಿಕಾರಿ ಆಮೇಲೆ ಆ ವ್ಯವಸ್ಥೆಯಿಂದ ಹೊರಗೇ ಮುಯ್ಯಿ ತೀರಿಸಿಕೊಳ್ಳುವ ವಸ್ತುವಿಷಯವನ್ನು ನಿರೂಪಿಸುತ್ತಾ ಹೋದರು. ಆ ಅಧಿಕಾರಿಗೆ ಜೈ ಹಾಗೂ ವೀರೂ ಎಂಬ ಯುವಕರೇ ದಾಳಗಳು. ಇವಿಷ್ಟರ ಮೇಲೆ ಆರ್.ಡಿ. ಬರ್ಮನ್ ಸಂಗೀತದ ಬೋನಸ್ಸು.
ನಮ್ಮವೇ ಬೆಟ್ಟಸಾಲು...
ಚಿತ್ರಕಥೆ ಪಕ್ಕಾ ಆದಮೇಲೆ ನಮ್ಮ ರಾಮನಗರದ ಬೆಟ್ಟಸಾಲನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡರು. ನಿರ್ದೇಶಕ ರಮೇಶ್ ಸಿಪ್ಪಿ ಸೃಷ್ಟಿಸಿದ ಸಿನಿಮಾದಲ್ಲಿನ ರಾಮಗಢ ಅಸಲಿಗೆ ಇದ್ದುದು ರಾಮದೇವರ ಬೆಟ್ಟದಲ್ಲಿ.
ಅಲ್ಲಿನ ನೀರಿನ ಟ್ಯಾಂಕ್ ಏರಿ ಧರ್ಮೇಂದ್ರ ಚೀರಿದ ಕ್ಷಣಗಳು ಚಿತ್ರೀಕರಣ ನಡೆದ ಈ ಊರಿನ ಕೆಲವರ ಚಿತ್ತಭಿತ್ತಿಯಲ್ಲಿ ಈಗಲೂ ಅಚ್ಚೊತ್ತಿದೆ.
ನಾಗರಿಕ ಸಮಾಜದಿಂದ ತುಸು ಹೊರಗೇ ಇರುವಂತಹ, ಗುಡ್ಡಗಾಡುಗಳು ಇರುವ ಭೂಪ್ರದೇಶ ಚಿತ್ರೀಕರಣಕ್ಕೆ ಬೇಕು ಎಂದು ರಮೇಶ್ ಸಿಪ್ಪಿ ಮೊದಲು ನಿರ್ಧರಿಸಿದರು. ಆ ಕಾಲಘಟ್ಟದಲ್ಲಿ ಪೂರ್ಣಪ್ರಮಾಣದಲ್ಲಿ ಹೊರಾಂಗಣ ಚಿತ್ರೀಕರಣ ಮಾಡುವುದು ದೊಡ್ಡ ರಿಸ್ಕ್ ಆಗಿತ್ತು. ಹವಾಮಾನ ವೈಪರೀತ್ಯಗಳನ್ನು ಎದುರಿಸಿ, ಸ್ಟುಡಿಯೊ ಸೆಟ್‌ಅಪ್‌ನಿಂದ ಹೊರಗೆ ಒಂದು ಇಡೀ ಸಿನಿಮಾ ಚಿತ್ರೀಕರಿಸುವುದು ಸುಲಭದ ಮಾತಾಗಿರಲಿಲ್ಲ. ಛಾಯಾಚಿತ್ರಗ್ರಹಣ ಮಾಡುವವರಿಗೂ ಅದು ತಲೆಬಿಸಿಯ ವ್ಯವಹಾರವೇ ಆಗಿತ್ತು. ಬಜೆಟ್ ದೃಷ್ಟಿಯಲ್ಲಿ ಅಷ್ಟೇ ಅಲ್ಲದೆ ಭೌತಿಕವಾಗಿ ಕೆಲಸ ಬೇಡುವ ಸಮಯ–ಶ್ರಮದ ಕಾರಣಕ್ಕೆ ಬಹುತೇಕರು ಇಂತಹ ರಿಸ್ಕ್‌ಗೆ ಕೈಹಾಕುತ್ತಿರಲಿಲ್ಲ. ರಮೇಶ್ ಸಿಪ್ಪಿ ಅದಕ್ಕೆ ಎದೆಗೊಟ್ಟರು. ಕಲಾ ನಿರ್ದೇಶಕ ರಾಮ್ ಯೆಡೇಕರ್ ಅವರೂ ಈ ಪ್ರದೇಶ ಗಬ್ಬರ್ ಸಿಂಗ್ ಅಡಗುದಾಣಕ್ಕೆ ಹೇಳಿ ಮಾಡಿಸಿದ್ದು ಎಂದು ಒಪ್ಪಿದರು. ರಾಮಗಢ ಎಂಬ ಕಲ್ಪಿತ ನಗರವನ್ನೇ ಅವರು ಸೆಟ್ ಹಾಕಿ ರೂಪಿಸಿದರು. ಎರಡು ವರ್ಷ ಅಲ್ಲಿ ಇಡೀ ಚಿತ್ರತಂಡ ಬೀಡುಬಿಟ್ಟಿತು. ಸಿನಿಮಾ ಚಿತ್ರೀಕರಣದಲ್ಲಿ ತೊಡಗುವವರು ತಂಗಲೆಂದೇ ‘ಸಿಪ್ಪಿ ಟೌನ್‌ಶಿಪ್’ ಕೂಡ ತಯಾರಾಗಿಬಿಟ್ಟಿತು. ಚಿತ್ರೀಕರಣವೆಂದ ಮೇಲೆ ಸ್ಥಳೀಯರ ಜೊತೆಗೆ ಬಾಂಧವ್ಯ ಬೆಳೆಯದೇ ಇದ್ದೀತೆ? ಸಹಜವಾಗಿಯೇ ರಾಮನಗರದ ಜನರಿಗೂ ‘ಶೋಲೆ’ ಸಿನಿಮಾಗೂ ಒಂದು ಸಾವಯವ ಸಂಬಂಧ ಏರ್ಪಟ್ಟಿತು. ಎಷ್ಟೋ ಜನರಿಗೆ ತಾತ್ಕಾಲಿಕವಾಗಿ ಉದ್ಯೋಗಗಳೂ ಸಿಕ್ಕವೆನ್ನಿ. ಸಿನಿಮಾದಲ್ಲಿ ಕಾಣುವ ಜೈಲು, ರೈಲ್ವೆ ಟ್ರ್ಯಾಕ್, ಸ್ಟೀಮ್ ಎಂಜಿನ್ ಎಲ್ಲವೂ ಸೆಟ್ ಹಾಕಿಯೇ ಚಿತ್ರೀಕರಿಸಿದ್ದು.
ಸಿನಿಮಾಟೊಗ್ರಾಫರ್ ದ್ವಾರಕಾ ದ್ವಿವೇಚ ಅವರಿಗೆ ಅದುವರೆಗೆ ಇಡೀ ಸಿನಿಮಾವನ್ನು ಹೊರಾಂಗಣದಲ್ಲಿ ಚಿತ್ರೀಕರಿಸಿದ ಅನುಭವವೇ ಇರಲಿಲ್ಲ. ಅವರಿಗೂ ಪ್ರಯೋಗದ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಯಿತು. ಎಲ್ಲವೂ ಕೂಡಿಬಂದಿದ್ದರಿಂದ ‘ಶೋಲೆ’ ಎಂಬ ಜನಪ್ರಿಯ ಕಲಾಕೃತಿ ರೂಪತಾಳಿತು.
ರಾಮನಗರದ ಬೆಟ್ಟಗಳಿರುವ ಪ್ರದೇಶದಲ್ಲಿ ಅದಕ್ಕೂ ಮೊದಲು ಕನ್ನಡ ಸಿನಿಮಾಗಳ ಚಿತ್ರೀಕರಣ ನಡೆದಿತ್ತು. 1960ರ ದಶಕದ ಕೊನೆಯಲ್ಲಿ ‘ಬೀದಿ ಬಸವಣ್ಣ’, ‘ಮನಸ್ಸಿದ್ದರೆ ಮಾರ್ಗ’ ಸಿನಿಮಾಗಳು ಅಲ್ಲೇ ಚಿತ್ರಿತಗೊಂಡಿದ್ದ ನೆನಪನ್ನು ರಾಮನಗರದ ರಾಮಯ್ಯ ಎಂಬುವವರು ಮೆಲುಕುಹಾಕಿದರು.
ಅಲ್ಲಿ ಚಿತ್ರೀಕರಣ ನಡೆಸಲು ಯೋಗ್ಯ ಸ್ಥಳವಿದೆ ಎನ್ನುವುದು ಕೆಲವರ ಬಾಯಿಂದ ಬಾಯಿಗೆ ಹರಿದು, ‘ಶೋಲೆ’ ಚಿತ್ರತಂಡದವರಿಗೆ ಗೊತ್ತಾಗಿರಬಹುದು. ಆಗ ರಾಮದೇವರ ಬೆಟ್ಟದ ಬಳಿ ದೊಡ್ಡ ಸೆಟ್ ಹಾಕಿದ್ದರು. ಊರಿನ ಅನೇಕರು ದನ–ಕುರಿಗಳನ್ನು ಹೊಡೆದುಕೊಂಡು ಅಲ್ಲಿಗೆ ಹೋಗುತ್ತಿದ್ದರು. ಎಲ್ಲರೂ ಜಾನುವಾರುಗಳನ್ನು ಮೇಯಿಸಲು ಕರೆದುಕೊಂಡು ಹೋಗುತ್ತಿರುವುದಾಗಿ ಹೇಳುವ ಕಾಲದಲ್ಲಿ ಅವರು ಚಿತ್ರೀಕರಣಕ್ಕೆ ಹೊಡೆದುಕೊಂಡು ಹೋಗುತ್ತಿರುವುದಾಗಿ ಹೇಳುತ್ತಿದ್ದರು. ಕಣ್ಣಾಡಿಸಿದಷ್ಟೂ ಕಡೆ ಟೆಂಟ್‌ಗಳು ಕಾಣುತ್ತಿದ್ದವು. ಬೆಟ್ಟದಿಂದ ಪಟ್ಟಣಕ್ಕೆ, ಪಟ್ಟಣದಿಂದ ಬೆಟ್ಟಕ್ಕೆ ಓಡಾಡುತ್ತಿದ್ದವರ ಸಂಖ್ಯೆಯೂ ದೊಡ್ಡದಿತ್ತು... ಹೀಗೆ ರಾಮಯ್ಯ ತುಸುವಷ್ಟೇ ನೆನಪನ್ನು ಜೀಕಿದರು. ಎಂಬತ್ತು ದಾಟಿದ ವಯಸ್ಸಿನ ಅವರಿಗೆ ಈಗ ಎಲ್ಲವೂ ಅಷ್ಟಾಗಿ ನೆನಪಿಲ್ಲ. ಆದರೆ, ‘ಶೋಲೆ’ ಸಿನಿಮಾವನ್ನು ಅವರು ಮೂರ್ನಾಲ್ಕು ಸಲ ನೋಡಿ, ಚಿತ್ರೀಕರಣದಲ್ಲಿ ನೋಡಿದ್ದಕ್ಕೂ ತೆರೆಮೇಲೆ ಕಾಣುವುದಕ್ಕೂ ಎಷ್ಟೊಂದು ವ್ಯತ್ಯಾಸವಿದೆ ಎಂದು ಚಕಿತಪಟ್ಟಿದ್ದನ್ನು ಹೇಳಿಕೊಂಡರು.
‘ಶೋಲೆ’ ಸಿನಿಮಾ ಸೆಟ್ ಹಾಕಿದ್ದ ಕಲಾ ನಿರ್ದೇಶಕ ರಾಮ್ ಯೆಡೇಕರ್ ಅವರಿಗೆ ಬಂಗಾಳ ಪತ್ರಕರ್ತರ ಸಂಘವು ಕೊಡುವ ಪ್ರತಿಷ್ಠಿತ ಪ್ರಶಸ್ತಿಯೊಂದು ಆ ಸಿನಿಮಾ ಕೆಲಸಕ್ಕಾಗಿ ಸಂದಿದ್ದು ಅವರು ಮಾಡಿದ್ದ ಕೆಲಸಕ್ಕೆ ಸಿಕ್ಕ ಬಹುಮುಖ್ಯ ಮನ್ನಣೆ. ‘ಶೋಲೆ’ಯಲ್ಲಿ ತುಡುಗು ಬುದ್ಧಿಯ ಯುವಕರಿದ್ದಾರೆ. ‘ಯೇ ಹಾತ್ ಹಮ್ಕೋ ದೇ ದೇ ಠಾಕೂರ್’ ಎನ್ನುವ ಪ್ರತಿನಾಯಕನ ಹರಿತ ಸಂಭಾಷಣೆ ಇದೆ.
ಗಾಜಿನ ಚೂರುಗಳ ಮೇಲೆ ಬಸಂತಿ ರಕ್ತ ಒಸರುವಾಗಲೂ ಕುಣಿಯುವ ಮೆಲೋಡ್ರಾಮಾವನ್ನು ನಗುನಗುತ್ತಲೇ ನೋಡಿದ್ದೇವೆ. ಎಲ್ಲರ ಮಧ್ಯೆ ಬದುಕಿನ ಸಂಧ್ಯಾಕಾಲದಲ್ಲಿ ಇರುವ ಠಾಕೂರ್ ಎಂಬ ತಣ್ಣಗಿನ ಪಾತ್ರ ಉಕ್ಕಿಸುವ ಸೇಡಿನ ತೀವ್ರವಾದ ಪಸೆ ಕಾಡುತ್ತದೆ. ವಿಧವಾ ವಿವಾಹಕ್ಕೆ ಈ ಸಮಾಜ ಒಪ್ಪೀತೆ ಎಂಬ ಸಣ್ಣ ಪ್ರಶ್ನೆಯೂ ಸಿನಿಮಾದಲ್ಲಿ ಬಂದು ಹೋಗುತ್ತದೆ. ಕೊಲೆ ನಡೆದ ಮರುಕ್ಷಣವೇ ಕಂಡ ‘ಮೆಹಬೂಬಾ ಮೆಹಬೂಬಾ’ ಎಂಬ ಆಶಾ ಭೋಂಸ್ಲೆ ಕಂಠದ ಲಯಬದ್ಧ ಐಟಂ ಗೀತೆ. ‘ಶೋಲೆ’ ಸಿನಿಮಾದಲ್ಲಿ ನಾಟಕೀಯತೆ, ಭಾವುಕತೆ, ಸಾಹಸ, ಮೆಲೋಡ್ರಾಮಾ ಎಲ್ಲವುಗಳ ಮಿಸಳಭಾಜಿ ಇಡುಕಿರಿದಿರುವುದು ಹೀಗೆ.
ರಮೇಶ್ ಸಿಪ್ಪಿ ಅವರ ತಂದೆ ಜಿ.ಪಿ. ಸಿಪ್ಪಿ ಆ ಕಾಲದಲ್ಲಿ ಎರಡು ಮೂರು ಕೋಟಿ ರೂಪಾಯಿ ಬಜೆಟ್ಟನ್ನು ಚಿತ್ರಕ್ಕೆ ವ್ಯಯಿಸಿದ್ದೇ ದೊಡ್ಡ ವಿಷಯ. ಠಾಕೂರ್ ಪಾತ್ರದಲ್ಲಿ ಸಂಜೀವ್ ಕುಮಾರ್ ನಿಯಂತ್ರಿತ ಅಭಿನಯ, ಜೈ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಖದರು, ದೇವ್ ಆಗಿ ಧರ್ಮೇಂದ್ರ ಫಾರ್ಮ್, ಹಳ್ಳಿಹುಡುಗಿ ಬಸಂತಿಯಾಗಿ ಹೇಮಾಮಾಲಿನಿ ತುಂಟ ಕಣ್ಣುಗಳು, ರಾಧೆಯಾಗಿ ಕಾಡುವ ಜಯಾ ಬಚ್ಚನ್...ಎಲ್ಲಕ್ಕೂ ಮಿಗಿಲಾಗಿ ಗಬ್ಬರ್ ಸಿಂಗ್ ಪಾತ್ರದಲ್ಲಿ ಮನಸೂರೆಗೊಂಡ ಅಮ್ಜದ್ ಖಾನ್. ಕಂಠ ಪರೀಕ್ಷೆ ಆದಮೇಲೆ ಈ ಪಾತ್ರಕ್ಕೆ ಅವರು ಸೂಕ್ತ ಹೌದೋ ಅಲ್ಲವೋ ಎಂಬ ಜಿಜ್ಞಾಸೆ ರಮೇಶ್ ಅವರಿಗೆ ಇತ್ತು. ಚಿತ್ರ ತೆರೆಕಂಡ ಮೇಲೆ ಆ ಪಾತ್ರ ದೊಡ್ಡ ಮಟ್ಟದಲ್ಲಿ ಕ್ಲಿಕ್ಆದದ್ದು ಅವರಿಗೇ ಪರಮಾಶ್ಚರ್ಯ.
‘ಶೋಲೆ’ ಚಿತ್ರದ ಬರವಣಿಗೆಯನ್ನು ಈಗಲೂ ಬಗೆದುನೋಡುವ ಸಿನಿಮಾ ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಅನುಕೂಲವಾಗಲೆಂದೇ ಈಗ ಚಿತ್ರದ ‘4ಕೆ ರಿಸ್ಟೋರೇಷನ್’ ಆಗಿದೆ. ಹೊಸಕಾಲದ ಚಿತ್ರಮಂದಿರಗಳ ತಾಂತ್ರಿಕ ಶ್ರೀಮಂತಿಕೆಗೆ ತಕ್ಕಂಥ ಗುಣಮಟ್ಟದಲ್ಲಿ ಸಿನಿಮಾ ನೋಡುವ ಅವಕಾಶ ಮತ್ತೆ ದೇಶದ ಹಲವೆಡೆ ಪ್ರೇಕ್ಷಕರಿಗೆ ಸಿಕ್ಕಿದೆ. ಲಂಡನ್ ಚಿತ್ರೋತ್ಸವದಲ್ಲಿ ‘ಶೋಲೆ’ ಚಿತ್ರದ ವಿಶೇಷ ಪ್ರದರ್ಶನಕ್ಕೆ ಅವಕಾಶ ದೊರೆತಿದೆ. ಅಷ್ಟೇ ಅಲ್ಲ, ಮೂಲ ಸಿನಿಮಾದಲ್ಲಿ ಕಟ್ ಮಾಡಲಾಗಿದ್ದ ಕ್ಲೈಮ್ಯಾಕ್ಸ್ ದೃಶ್ಯದ ಒಂದಂಶವನ್ನು ಮಾರ್ಪಾಟಾದ ಅವತರಣಿಕೆಯಲ್ಲಿ ಸೇರಿಸಲಾಗಿದೆ. ಗಬ್ಬರ್ ಸಿಂಗ್ ಅನ್ನು ಸ್ಪೈಕ್‌ಗಳಿರುವ ಬೂಟಿನಿಂದ ಠಾಕೂರ್ ತುಳಿದುಹಾಕುವ ಆರು ನಿಮಿಷ ಅವಧಿಯ ಸನ್ನಿವೇಶ ಮೊದಲಿಗೆ ಕಟ್ ಆಗಿತ್ತು. ಅದೇ ಈಗ ಮರುಸೇರ್ಪಡೆ ಆಗಿದೆ. ಹೊಸಕಾಲದ ಹಿಂಸಾವಿನೋದಪ್ರಿಯರಿಗೆ ಈ ಸನ್ನಿವೇಶ ಇಷ್ಟವಾಗಬಹುದು.
‘ಮೇಕಿಂಗ್ ಆಫ್ ಶೋಲೆ’ ಎಂಬ ಕಿರುಚಿತ್ರವನ್ನೂ ಸಿದ್ಧಪಡಿಸಲಾಗಿದ್ದು, ಒಟಿಟಿಗಳಲ್ಲಿ ಅದು ಬಿಡುಗಡೆಯಾಗಲಿದೆ.
ಭಾರತದ ವಿವಿಧೆಡೆ ಹೊಸ ಸ್ವರೂಪದ ‘ಶೋಲೆ’ ನೋಡುವ ಅವಕಾಶ ಸಿನಿಪ್ರಿಯರಿಗೆ ಸಿಗುತ್ತಿದೆ. ಹಾಕಿದ ಬಂಡವಾಳದ ಇಪ್ಪತ್ತು ಪಟ್ಟು ಹಣವನ್ನು ‘ಶೋಲೆ’ ಬಾಚಿಹಾಕಿ, ಭಾರತೀಯ ಚಿತ್ರರಂಗದ ಮೈಲಿಗಲ್ಲುಗಳಲ್ಲಿ ಒಂದೆನಿಸಿತ್ತು.
ರಾಮದೇವರ ಗುಡ್ಡದ ಶೂಟಿಂಗ್ ಸ್ಪಾಟ್‌ನಲ್ಲಿ ಅಡ್ಡಾಡುವ ಜನರು ‘ಇಲ್ಲೇ ಬಸಂತಿ ಕುಣಿದಿದ್ದು’ ಎಂದು ಕಣ್ಣರಳಿಸುವುದು ಸಿನಿಮಾ ಕೊಟ್ಟ ದೀರ್ಘಾವಧಿ ಸುಖಕ್ಕೆ ಇನ್ನೊಂದು ಉದಾಹರಣೆ. ‘ಯೇ ಹಾತ್ ಹಮ್ಕೋ ದೇ ದೇ ಠಾಕೂರ್’ ಎನ್ನುವ ಅಮ್ಜದ್ ಖಾನ್ ಕ್ರೌರ್ಯದ ವರ್ತನೆಯೇ ಈ ಕಾಲದ ಹಿಂಸಾವಿನೋದ ಸಿನಿಮಾಗಳ ಬೀಜಮಂತ್ರವೂ ಆಗಿದ್ದಿರಬೇಕು. ‘ಶೋಲೆ’ ಇಂತಹ ಹಲವು ಆಲೋಚನೆಗಳ ಟಿಸಿಲು ಮೂಡಿಸಲು ಕಾರಣವಾಗಿರುವುದೂ ದಿಟವೆನ್ನಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.