ADVERTISEMENT

ಸಿದ್ಧಾರೂಢ ಮಠದ ಕೈಲಾಸ ಮಂಟಪದಲ್ಲಿ ಗ್ಲಾಸ್‌ ಪೇಂಟಿಂಗ್‌ ಸೆಳೆತ

ಗೌರಮ್ಮ ಕಟ್ಟಿಮನಿ
Published 15 ಫೆಬ್ರುವರಿ 2026, 0:21 IST
Last Updated 15 ಫೆಬ್ರುವರಿ 2026, 0:21 IST
<div class="paragraphs"><p>ಹುಬ್ಬಳ್ಳಿಯ ಸಿದ್ಧಾರೂಢ ಮಠದ ಕೈಲಾಸ ಮಂಟಪ ಪೂಜಾ ಮಂಟಪದಲ್ಲಿ ಚಿನ್ನ ಹಾಗೂ ಬೆಳ್ಳಿಯ ತೆಳುವಾದ ಪದರಗಳಿಂದ ಓ ನಮಃ ಶಿವಾಯ, ಶಿವಾಯ ನಮಃ ಎಂದು ಬರೆದಿರುವುದು&nbsp;</p></div>

ಹುಬ್ಬಳ್ಳಿಯ ಸಿದ್ಧಾರೂಢ ಮಠದ ಕೈಲಾಸ ಮಂಟಪ ಪೂಜಾ ಮಂಟಪದಲ್ಲಿ ಚಿನ್ನ ಹಾಗೂ ಬೆಳ್ಳಿಯ ತೆಳುವಾದ ಪದರಗಳಿಂದ ಓ ನಮಃ ಶಿವಾಯ, ಶಿವಾಯ ನಮಃ ಎಂದು ಬರೆದಿರುವುದು 

   

ಹುಬ್ಬಳ್ಳಿಯ ಸಿದ್ಧಾರೂಢರ ಮಠದ ಆವರಣಕ್ಕೆ ಕಾಲಿಟ್ಟ ಕ್ಷಣದಿಂದಲೇ ಭಕ್ತಿಯ ಜೊತೆಗೆ ಕಣ್ಣುಗಳಿಗೂ ಹಬ್ಬ. ‘ಹುಬ್ಬಳ್ಳಿ ಎಂಬುದು ಕೈಲಾಸ, ಸಿದ್ಧಾರೂಢರೇ ಪರಮೇಶ’ ಎನ್ನುವ ಮಾತು ಇಲ್ಲಿ ಕೇವಲ ಭಾವನೆ ಮಾತ್ರವಲ್ಲ; ದೃಶ್ಯರೂಪದಲ್ಲಿ ಮೂಡಿಬಂದ ಅನುಭವ.

ಐತಿಹಾಸಿಕ ಕೈಲಾಸ ಮಂಟಪ ರಾಜಸ್ಥಾನ ಶೈಲಿಯ ಗ್ಲಾಸ್‌ ಪೇಂಟಿಂಗ್‌ ಅಲಂಕಾರದಿಂದ ಕಂಗೊಳಿಸುತ್ತಿದೆ. ಉತ್ತರ ಭಾರತದ ದೇವಾಲಯಗಳಲ್ಲಿ ಕಾಣುವ ‘ಮೀನಾಕರಿ’ ಕಲೆಯ ಸ್ಪರ್ಶ ಇಲ್ಲಿ ಪ್ರತಿಯೊಂದು ಗೋಡೆ, ಪ್ರತಿಯೊಂದು ಮೂಲೆಗೂ ಬೆಳಕು ತುಂಬಿದೆ. ‘ಮೀನಾ’ ಎಂದರೆ ಸ್ವರ್ಗ, ‘ಕರಿ’ ಎಂದರೆ ಸೃಷ್ಟಿ–ಅಕ್ಷರಶಃ ಸ್ವರ್ಗಸೌಂದರ್ಯವನ್ನು ಭೂಮಿಯ ಮೇಲೆ ಮೂಡಿಸುವ ಕಲೆಯಿದು.

ADVERTISEMENT

ರಾಜಸ್ಥಾನದಿಂದ ಕೈಲಾಸದವರೆಗೆ…

ಈ ಕನಸಿಗೆ ರೂಪ ಕೊಟ್ಟದ್ದು ಮಠದ ಅಂದಿನ ಚೇರ್ಮನ್ ಮಹೇಂದ್ರ ಸಿಂಘಿ ಅವರ ಕಲಾದೃಷ್ಟಿ. ಉತ್ತರ ಭಾರತದ ದೇವಾಲಯಗಳ ಗಾಜಿನ ವಿನ್ಯಾಸ ಅವರನ್ನು ಬಹುವಾಗಿ ಸೆಳೆದಿತ್ತು. ಅದೇ ಶೈಲಿಯನ್ನು ತಮ್ಮ ಕೈಲಾಸ ಮಂಟಪದಲ್ಲೂ ಅರಳಿಸಬೇಕು ಎಂದು ನಿರ್ಧರಿಸಿದರು. ಬಳಿಕ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಕಿಶನ್‌ಘರ್‌ಗೆ ತೆರಳಿದರು. ಅಲ್ಲೆಲ್ಲ ಹುಡುಕಾಡಿ ಐದು ಮಂದಿ ಪರಿಣತ ಕಲಾವಿದರನ್ನು ಹುಬ್ಬಳ್ಳಿಗೆ ಕರೆತಂದರು.

ಹುಬ್ಬಳ್ಳಿಯ ಸಿದ್ಧಾರೂಢ ಮಠದ ಕೈಲಾಸ ಮಂಟಪ ಪೂಜಾ ಮಂಟಪವನ್ನು ‘ಮೀನಾಕರಿ’ ಕಲೆಯಿಂದ ವಿನ್ಯಾಸ ಮಾಡಲಾಗಿದೆ

ಇದಕ್ಕಾಗಿ ಜೈಪುರದಿಂದಲೇ ಕಚ್ಚಾವಸ್ತುಗಳನ್ನು ತರಿಸಲಾಯಿತು. ಸುಮಾರು ಒಂಬತ್ತು ತಿಂಗಳು ನಡೆದ ಶ್ರಮ, ಸೂಕ್ಷ್ಮ ಕುಸರಿ ಮತ್ತು ಕಲಾತ್ಮಕ ತಾಳ್ಮೆಯ ಫಲವಾಗಿ ಈ ಗ್ಲಾಸ್‌ ಪೇಂಟಿಂಗ್‌ ಅದ್ಭುತವಾಗಿ ಜೀವ ತಳೆಯಿತು.

ಕಲೆಯ ಒಳನೋಟ

ಮೊದಲು ಆಯಿಲ್‌ ಪೇಂಟ್‌ನಿಂದ ಜ್ಯಾಮಿತೀಯ ಆಕೃತಿಗಳನ್ನು ಚಿತ್ರಿಸಲಾಯಿತು. ಅದರ ಮೇಲೆ ಪ್ಲಾಸ್ಟರ್ ಆಫ್ ಪ್ಯಾರಿಸ್‌ ಲೇಪಿಸಿ, ವಿನ್ಯಾಸಕ್ಕೆ ಅನುಗುಣವಾಗಿ ಬಣ್ಣ ಬಣ್ಣದ ಗಾಜಿನ ತುಣುಕುಗಳನ್ನು ನಿಖರವಾಗಿ ಕತ್ತರಿಸಿ ಜೋಡಿಸಲಾಯಿತು. ಚಿನ್ನ, ಬೆಳ್ಳಿ, ತಾಮ್ರದ ತೆಳುವಾದ ಪದರಗಳು ಮಂಟಪಕ್ಕೆ ಮೆರಗು ನೀಡಲಾಯಿತು.

ಹುಬ್ಬಳ್ಳಿಯ ಸಿದ್ಧಾರೂಢ ಮಠದ ಕೈಲಾಸ ಮಂಟಪ ಪೂಜಾ ಮಂಟಪದಲ್ಲಿ ಬಿಡಿಸಿರುವ  ‘ಮೀನಾಕರಿ’ ಕಲೆಯ ವಿನ್ಯಾಸ 

‘ಮೇಲ್ಭಾಗದಲ್ಲಿ ಬೆಳ್ಳಿಯ ಲೇಪನದ ಜ್ಯಾಮಿತೀಯ ವಿನ್ಯಾಸಗಳು ಹೊಳೆಯುತ್ತಾ, ಮಧ್ಯದಲ್ಲಿ ಅಳವಡಿಸಿರುವ ಸಿದ್ಧಾರೂಢ ಸ್ವಾಮಿ ಹಾಗೂ ಗುರುನಾಥ ಅಜ್ಜನ ಮೂರ್ತಿಗಳನ್ನು ಪ್ರತಿಬಿಂಬಿಸುತ್ತವೆ. ಸುತ್ತಲೂ ಆಲಂಕಾರಿಕ ಹೂಜಿ, ಬಾತುಕೋಳಿಗಳು, ಪಕ್ಷಿಗಳು ಹಾಗೂ ನಿಖರ ಜ್ಯಾಮಿತೀಯ ಆಕೃತಿಗಳು ಕಂಗೊಳಿಸುತ್ತವೆ. ಕನ್ನಡ ಹಾಗೂ ಹಿಂದಿಯಲ್ಲಿ ಚಿನ್ನ-ಬೆಳ್ಳಿಯ ಪದರಗಳಿಂದ ಬರೆಯಲಾದ ‘ಓಂ’ ಮಂತ್ರ, ಕಲೆಗೆ ಆಧ್ಯಾತ್ಮಿಕ ಸ್ಪರ್ಶವನ್ನು ನೀಡುತ್ತದೆ’ ಎಂದು ರಾಜಸ್ಥಾನದ ಕಿಶನಘರ್‌ನ ಜೆ.ಪಿ.ಆರ್ಟ್ಸ್‌ನ ಕಲಾವಿದ ಸೋಹನಲಾಲ್ ಕುಮಾವತ್‌ ಹೇಳುತ್ತಾರೆ.

ಬೆಳಕು, ಪ್ರತಿಬಿಂಬ ಮತ್ತು ಭಕ್ತಿ

ಬಾಗಿಲಿಲ್ಲದ ವಿಶಾಲ ಕೈಲಾಸ ಮಂಟಪದಲ್ಲಿ ಬೆಳಕು ಒಳಗೆ ಬಂದಾಗ, ಗಾಜಿನ ತುಣುಕುಗಳು ನೂರಾರು ಕಿರಣಗಳಾಗಿ ಚಿಮ್ಮುತ್ತವೆ. ಪ್ರತಿಯೊಂದು ತುಣುಕು ತನ್ನದೇ ಆದ ಕಥೆಯನ್ನು ಹೇಳುವಂತೆ ಭಾಸವಾಗುತ್ತದೆ. ಭಕ್ತರು, ಕಲಾಸಕ್ತರು ಮಂಟಪದೊಳಗೆ ನಿಂತ ಕ್ಷಣ, ಅವರ ಪ್ರತಿಬಿಂಬವೂ ಆ ಕಲೆಯ ಭಾಗವಾಗಿಬಿಡುತ್ತದೆ. ಭಕ್ತಿ ಮತ್ತು ಕಲೆ ಒಂದೇ ಚೌಕಟ್ಟಿನಲ್ಲಿ ಕಾಣಿಸುತ್ತವೆ.

1926ರಲ್ಲಿ ನಿರ್ಮಿತವಾದ ಕೈಲಾಸ ಮಂಟಪ, ಶತಮಾನದ ಸಂಭ್ರಮದಲ್ಲಿರುವ ಈ ಸಂದರ್ಭದಲ್ಲಿ ಹೊಸತನ್ನು ಪಡೆದಿದೆ. ಅಂದಾಜು ₹12 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಹೊಸ ವಿನ್ಯಾಸ ಪಡೆದ ಈ ಮಂಟಪವನ್ನು ಜುಲೈ 28, 2011 ರಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ನೈರುತ್ಯ ರೈಲ್ವೆ ವಲಯದ ಅಂದಿನ ಜನರಲ್ ಮ್ಯಾನೇಜರ್ ಕುಲದೀಪ ಚತುರ್ವೇದಿ ಅವರು ಉದ್ಘಾಟಿಸಿದರು ಎನ್ನುತ್ತಾರೆ ಮಠದ ಕಮಿಟಿಯ ಮಾಜಿ ಚೇರ್ಮನ್ ಮಹೇಂದ್ರ ಸಿಂಘಿ.

ಹುಬ್ಬಳ್ಳಿಯ ಸಿದ್ಧಾರೂಢ ಮಠದ ಕೈಲಾಸ ಮಂಟಪ ಪೂಜಾ ಮಂಟಪದಲ್ಲಿ ಬಿಡಿಸಿರುವ  ‘ಮೀನಾಕರಿ’ ಕಲೆಯ ವಿನ್ಯಾಸ 

ಇಂದು ಕೈಲಾಸ ಮಂಟಪ ಕೇವಲ ಪೂಜಾ ಸ್ಥಳವಲ್ಲ. ಅದು ಉತ್ತರ ಭಾರತದ ರಾಜಸ್ಥಾನಿ ಗ್ಲಾಸ್‌ ಪೇಂಟಿಂಗ್‌ ಕಲೆಯ ಸೌಂದರ್ಯ ಮತ್ತು ಉತ್ತರ ಕರ್ನಾಟಕದ ಭಕ್ತಿಯ ಸಂವೇದನೆ ಒಂದಾಗಿರುವ ಸಾಂಸ್ಕೃತಿಕ ಸೇತುವೆಯಾಗಿದೆ.

ಭಕ್ತರು ಇಲ್ಲಿ ದರ್ಶನಕ್ಕೆ ಬರುತ್ತಾರೆ. ಆದರೆ ಹಿಂತಿರುಗುವಾಗ, ಅವರ ಕಣ್ಣುಗಳಲ್ಲಿ ಹೊಳೆಯುವುದು ಕೇವಲ ಮೂರ್ತಿಯ ಪ್ರತಿಬಿಂಬವಲ್ಲ; ರಾಜಸ್ಥಾನದಿಂದ ಕೈಲಾಸದವರೆಗೆ ಪ್ರಯಾಣಿಸಿದ ಕಲೆಯ ಪ್ರಕಾಶವೂ ಆಗಿದೆ.

ಹುಬ್ಬಳ್ಳಿಯ ಸಿದ್ಧಾರೂಢ ಮಠದ ಕೈಲಾಸ ಮಂಟಪ ಪೂಜಾ ಮಂಟಪದಲ್ಲಿ ಬಿಡಿಸಿರುವ  ‘ಮೀನಾಕರಿ’ ಕಲೆಯ ವಿನ್ಯಾಸ 
ಹುಬ್ಬಳ್ಳಿಯ ಸಿದ್ಧಾರೂಢ ಮಠದ ಕೈಲಾಸ ಮಂಟಪ ಪೂಜಾ ಮಂಟಪದಲ್ಲಿ ಬಿಡಿಸಿರುವ  ‘ಮೀನಾಕರಿ’ ಕಲೆಯ ವಿನ್ಯಾಸ 
ಹುಬ್ಬಳ್ಳಿಯ ಸಿದ್ಧಾರೂಢ ಮಠದ ಕೈಲಾಸ ಮಂಟಪ ಪೂಜಾ ಮಂಟಪದಲ್ಲಿ ಬಿಡಿಸಿರುವ  ‘ಮೀನಾಕರಿ’ ಕಲೆಯ ವಿನ್ಯಾಸ 
ಹುಬ್ಬಳ್ಳಿಯ ಸಿದ್ಧಾರೂಢ ಮಠದ ಕೈಲಾಸ ಮಂಟಪ ಪೂಜಾ ಮಂಟಪದಲ್ಲಿ ಬಿಡಿಸಿರುವ  ‘ಮೀನಾಕರಿ’ ಕಲೆಯ ವಿನ್ಯಾಸ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.