ADVERTISEMENT

ಪಣಿಯನ್‌ ಹುಡುಗಿ ಪಿಎಚ್‌.ಡಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 0:05 IST
Last Updated 29 ಡಿಸೆಂಬರ್ 2024, 0:05 IST
ದಿವ್ಯಾ ಎಸ್‌.ಆರ್‌.
ದಿವ್ಯಾ ಎಸ್‌.ಆರ್‌.   

ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಬಾರದು ಎನ್ನುವ ಮಾತನ್ನು ನನಗೇ ನಾನು ಎಷ್ಟು ಸಾರಿ ಹೇಳಿಕೊಂಡಿದ್ದೇನೋ ಗೊತ್ತಿಲ್ಲ!. ನಾನು ಹೀಗೆ ಹೇಳಿಕೊಳ್ಳದೇ, ಅದನ್ನು ನಂಬದೇ ಹೋಗಿದ್ದರೆ ನಿಮಗೆ ನನ್ನ ಕತೆಯನ್ನು ಹೇಳಲು ಸಾಧ್ಯವಾಗುತ್ತಿರಲಿಲ್ಲ.

ನಾನು ‘ಪಣಿಯನ್‌’ ಎನ್ನುವ ಬುಡಕಟ್ಟು ಸಮುದಾಯದ ಹುಡುಗಿ. ಕರ್ನಾಟಕದಲ್ಲಿ ನಮ್ಮ ಸಮುದಾಯದ ಜನಸಂಖ್ಯೆ ಕೇವಲ 495! ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಸವಲತ್ತುಗಳನ್ನು ಹೊಂದಿರದ, ಅಸ್ಮಿತೆಗಾಗಿ ಅಂಗಲಾಚುತ್ತಿರುವ ತಬ್ಬಲಿ ಸಮುದಾಯ ನಮ್ಮದು.

ಮಲಯಾಳದಲ್ಲಿ ‘ಪಣಿಯನ್‌’ ಎಂದರೆ ಕೆಲಸಗಾರ ಎಂದರ್ಥ. ಜಮೀನ್ದಾರರ ಮನೆಯಲ್ಲಿ ಜೀತ ಮಾಡುತ್ತಿದ್ದರು. ಈಗ ಕೂಲಿ ಮಾಡುತ್ತಿದ್ದಾರೆ. ನನ್ನಪ್ಪ, ಅವ್ವ, ಅವರ ಪೂರ್ವಿಕರು ಇದೇ ಕೆಲಸ ಮಾಡುತ್ತಿದ್ದರು.

ADVERTISEMENT

ನನ್ನದು ಮೈಸೂರು ಜಿಲ್ಲೆ ಎಚ್‌.ಡಿ.ಕೋಟೆ ತಾಲ್ಲೂಕಿನ ಸೇಬಿನಕೊಲ್ಲಿ ಹಾಡಿ. ಇದು ಅಭಯಾರಣ್ಯದಲ್ಲಿದೆ. ಅಲ್ಲಿಂದ 6 ಕಿ.ಮೀ.ನಲ್ಲಿ ಮಚ್ಚೂರು ಇದೆ. ಅಲ್ಲಿನ ಸರ್ಕಾರಿ ಶಾಲೆಗೆ ನಾನು ಮತ್ತು ತಮ್ಮ ನಡೆದುಕೊಂಡು ಹೋಗುತ್ತಿದ್ದೆವು. ಹುಲಿ, ಆನೆ, ಇನ್ನಿತರ ಕಾಡುಪ್ರಾಣಿಗಳ ಭಯ ಕಾಡುತ್ತಲೇ ಇರುತ್ತಿತ್ತು. ಅಪ್ಪ ಕೂಲಿಗೆ ಹೋಗುವಾಗ ನಮ್ಮನ್ನು ಕರೆದುಕೊಂಡು ಹೋಗಿ ಶಾಲೆಗೆ ಬಿಡುತ್ತಿದ್ದರು. ಬರುವಾಗ ಅರ್ಧ ದಾರಿಗೆ ಅವ್ವ ಇಲ್ಲವೇ ಅಜ್ಜಿ ಬಂದು ನಿಂತಿರುತ್ತಿದ್ದರು.

ಮಚ್ಚೂರಿನ ಶಾಲೆ ಪಕ್ಕದಲ್ಲಿ ಅಂಗನವಾಡಿ ಇತ್ತು. ಅಲ್ಲಿ ಮಧ್ಯಾಹ್ನ ಮಕ್ಕಳಿಗೆ ಊಟ ಕೊಡುತ್ತಿದ್ದರು. ನಾನು ತಮ್ಮನನ್ನು ಕರೆದುಕೊಂಡು ಹೋಗಿ ನಮಗೂ ಕೊಡಬಹುದು ಎಂದು ಆಸೆಗಣ್ಣಿನಿಂದ ಕಾಯುತ್ತಾ ನಿಲ್ಲುತ್ತಿದ್ದೆ. ಆದರೆ ಕೊಡುತ್ತಲೇ ಇರಲಿಲ್ಲ. ಸ್ವಲ್ಪ ದಿನಗಳ ಬಳಿಕ ನಮ್ಮನ್ನೂ ಕರೆದು ತಿನ್ನಲು ಕೊಡಲು ಶುರು ಮಾಡಿದರು. ಹೀಗೆ ಅಂಗನವಾಡಿ ನಮ್ಮ ಹೊಟ್ಟೆಯನ್ನು ತುಂಬಿಸುತ್ತಿತ್ತು.

ನಮ್ಮ ಸಮುದಾಯದವರಿಗೆ ಹೊಟ್ಟೆ ತುಂಬಿಸಿಕೊಳ್ಳುವುದೇ ದೊಡ್ಡ ಕೆಲಸವಾಗಿತ್ತು. ಆದ್ದರಿಂದ ಮಕ್ಕಳ ಶಿಕ್ಷಣದ ಬಗೆಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ನನಗೆ ಓದು ಅಂದರೆ ಇಷ್ಟ. ಏಳನೇ ತರಗತಿಗೆ ಬಂದಾಗ ಪುಸ್ತಕ ಇತ್ಯಾದಿಗಳನ್ನು ಕೊಳ್ಳಲು ದುಡ್ಡು ಇರಲಿಲ್ಲ. ಆಗ ಓದು ಸಾಕು, ಮನೆಯಲ್ಲೇ ಇರು ಎಂದುಬಿಟ್ಟರು. ಅವರಿಗೆ ಹೊಟ್ಟೆ, ಬಟ್ಟೆಗೆ ಹೊಂದಿಸುವುದೇ ಕಷ್ಟವಾಗಿರುವಾಗ, ನನ್ನ ಓದಿಗೆ ದುಡ್ಡು ತರುವುದಾದರೂ ಹೇಗೆ? ಇದೇ ಗೊಂದಲ ಸ್ವಲ್ಪ ದಿನ ಮುಂದುವರಿಯಿತು. ಆಮೇಲೆ ಮೇಕೆಯನ್ನು ಮಾರಿ ದುಡ್ಡು ಹೊಂದಿಸಿದರು. ತುಂಬಾ ವರ್ಷ ಅವ್ವ, ನಾನು, ತಮ್ಮ, ತಂಗಿ ಹೊಟ್ಟೆ ತುಂಬ ಉಂಡು ಮಲಗಿದ್ದು ಗೊತ್ತೇ ಇಲ್ಲ. ಅಂದರೆ, ವರ್ಷದಲ್ಲಿ ಬಹುತೇಕ ದಿನಗಳು ಅರೆಹೊಟ್ಟೆ ಇಲ್ಲವೇ ತಣ್ಣೀರು ಬಟ್ಟೆ. ಸಿಕ್ಕ ಗೆಡ್ಡೆಗೆಣಸು ಬೇಯಿಸಿ ತಿಂದು ಮಲಗುತ್ತಿದ್ದೆವು.

ಬುಡಕಟ್ಟು ಸಮುದಾಯದವರಿಗೆ ಕುಡಿತವೇ ದೊಡ್ಡ ಶಾಪ. ನಮ್ಮಪ್ಪ ಕುಡಿತಕ್ಕೆ ದಾಸನಾಗಿದ್ದ. ಕೂಲಿ ದುಡ್ಡಲ್ಲಿ ಕುಡಿದು ಬರುತ್ತಿದ್ದ. ಬಂದವನು ಅವ್ವನೊಂದಿಗೆ ಜಗಳ ತೆಗೆಯುತ್ತಿದ್ದ. ಸಿಕ್ಕಸಿಕ್ಕಲ್ಲಿಗೆ ಹೊಡೆಯುತ್ತಿದ್ದ. ನಮಗೂ ಒದೆ ಬೀಳುತ್ತಿದ್ದವು. ನಾವು ಹೆದರಿ ಮೂಲೆ ಸೇರಿಬಿಡುತ್ತಿದ್ದೆವು. ಎಷ್ಟೋ ಸಾರಿ ಗುಡಿಸಲನ್ನು ಕಿತ್ತು ಬಿಸಾಡಿದ್ದ. ಅಪ್ಪ ಕುಡಿದು ಬಂದಾಗಿನ ರೌದ್ರಾವತಾರ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆದ್ದರಿಂದ ಕುಡಿಯುವವರನ್ನು ಕಂಡರೆ ನನಗೆ ವಿಪರೀತ ಸಿಟ್ಟು.

ಎಂದಿನಂತೆ ಅಪ್ಪ ನಿಲ್ಲಲೂ ಆಗದಷ್ಟು ಕುಡಿದು ಬಂದಿದ್ದ. ನನ್ನ ಪುಟ್ಟ ತಂಗಿ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯನ್ನು ತಂದು, ‘ಕುಡಿತೀಯಾ’ ಅಂಥ ಸಿಟ್ಟಿನಿಂದ ಬರೆ ಹಾಕಿಬಿಟ್ಟಳು!. ಆಮೇಲೆ ನಾನು ಧೈರ್ಯ ಮಾಡಿ ‘ನಮ್ಮನ್ನು ಎಲ್ಲರೂ ಕುಡುಕನ ಮಕ್ಕಳು ಅನ್ನುತ್ತಾರೆ, ನಿನಗೆ ಅದು ಇಷ್ಟನಾ?’ ಅಂತ ಕೇಳಿದ್ದೆ. ಅಪ್ಪನಿಗೆ ಏನನಿಸಿತೋ, ಆಮೇಲೆ ಬೀಡಿ ಸೇದುವುದು, ಕುಡಿಯುವುದನ್ನು ಬಿಟ್ಟರು! ನನ್ನ ಶಿಕ್ಷಣದ ಬಗೆಗೆ ಹೆಚ್ಚು ಕಾಳಜಿ ತೋರಿಸತೊಡಗಿದರು.

ನಾನು ಬಿ.ಎಡ್‌ ಅನ್ನು ಮೊದಲ ರ್‍ಯಾಂಕ್‌ನೊಂದಿಗೆ ಪೂರ್ಣಗೊಳಿಸಿದೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯೊಬ್ಬರು ಅಪ್ಪನಿಗೆ ಪರಿಚಯವಿದ್ದರು. ಅಪ್ಪ ಅವರಿಗೆ ವಿಷಯ ತಿಳಿಸಿದಾಗ, ಆನೆಮಾಳದ ಹಾಡಿಯ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡಲು ಅವಕಾಶ ಕೊಟ್ಟರು. ಹಾಡಿಯ ಪೋಷಕರ, ಮಕ್ಕಳ ಮನಸು ನನಗೆ ಚೆನ್ನಾಗಿ ಗೊತ್ತಿತ್ತು. ಆದ್ದರಿಂದ ನಾನೇ ಪ್ರತೀ ದಿನ ಹಾಡಿಗೆ ಹೋಗಿ ಮಲಗಿದ್ದ ಮಕ್ಕಳನ್ನು ಎಬ್ಬಿಸಿ, ಮುಖತೊಳೆಸಿ, ತಲೆಬಾಚಿ ರೆಡಿಮಾಡಿಕೊಂಡು ಜೊತೆಯಲ್ಲಿ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದೆ. ನನಗೆ ಹಸಿವು ಮತ್ತು ಅಕ್ಷರದ ಬೆಲೆ ಗೊತ್ತಿತ್ತು. ಆದ್ದರಿಂದ ನಮ್ಮ ಮನೆಯಲ್ಲಿ ಏನು ಇರುತ್ತಿತ್ತೋ ಅದನ್ನು ಬಾಕ್ಸ್‌ಗೆ ಹಾಕಿಕೊಂಡು ಹೋಗುತ್ತಿದ್ದೆ. ಅದನ್ನು ಮಕ್ಕಳಿಗೆ ತಿನಿಸುತ್ತಿದ್ದೆ. ಜೇನುಕುರುಬರ ಮಕ್ಕಳಿಗೆ ಅಕ್ಷರ ಕಲಿಸುವುದು ಕಷ್ಟ. ನಾನು ಅವರಲ್ಲಿ ಒಬ್ಬಳಾಗುತ್ತಿದ್ದೆ. ಅವರಿಂದ ಕತೆ ಹೇಳಿಸುತ್ತಿದ್ದೆ, ಹೇಳುತ್ತಿದ್ದೆ. ಹೊಳೆಯಲ್ಲಿ ಆಟವಾಡಿಸುತ್ತಿದ್ದೆ. ಪ್ರಕೃತಿಯಲ್ಲಿದ್ದ ಮಕ್ಕಳನ್ನು ಅದರೊಂದಿಗೇ ಸೇರಿಸಿಕೊಂಡು ಪಾಠ ಹೇಳಿಕೊಡಲು ಶುರು ಮಾಡಿದೆ. ಮಕ್ಕಳು ಬೇಗನೇ ಕಲಿಯಲು ಶುರು ಮಾಡಿದವು. ನಾನೇ ಹದಿನೈದು ಮಕ್ಕಳನ್ನು ಶಾಲೆಗೆ ಸೇರಿಸಿದೆ. ಅಲ್ಲಿನ ಪೋಷಕರು ‘ನೀನೊಬ್ಬಳೇ ಮಗಾ, ಮಕ್ಕಳನ್ನು ಪ್ರೀತಿ ಮಾಡೋಳು’ ಎಂದು ಹೇಳುತ್ತಿದ್ದರು. ಅಲ್ಲಿ ಆರು ತಿಂಗಳು ಅಷ್ಟೇ ಕೆಲಸ ಮಾಡಿದ್ದು.

ನನ್ನ ಕೆಲಸ ಮೆಚ್ಚಿದ ಅಧಿಕಾರಿ ಡಿ.ಬಿ.ಕುಪ್ಪೆಯ ಆಶ್ರಮ ಶಾಲೆಗೆ ನೇಮಕ ಮಾಡಿದರು. ಅಲ್ಲಿದ್ದ ಶಿಕ್ಷಕರಿಗೆ ಹಾಡಿಯ ಮಕ್ಕಳ ಮನಸು ಮತ್ತು ಭಾಷೆ ಅರ್ಥವಾಗುತ್ತಿರಲಿಲ್ಲ. ಆದರೆ, ನನಗೆ ಅದು ಸಹಜವಾಗಿತ್ತು. ಮಕ್ಕಳು ನನ್ನೊಂದಿಗೆ ಬೆರೆತರು, ನಾನು ಆಶ್ರಮ ಶಾಲೆಗೆ ಹೋಗುವ ಮುನ್ನ 50 ರಿಂದ 60 ಮಕ್ಕಳು ಶಾಲೆ ಬಿಟ್ಟಿದ್ದರು. ಶಾಲೆ ಬಿಟ್ಟ ಮಕ್ಕಳ ಮನೆಗೆ ಹೋಗಿ ‘ನಾನೂ ಹಾಡಿ ಮಗಳೇ’ ಎಂದು ಹೇಳಿ ಮನವೊಲಿಸಿ ಕರೆದುಕೊಂಡು ಬರುತ್ತಿದ್ದೆ. ದಿನಗಳು ಕಳೆದಂತೆ ಮಕ್ಕಳು ತಾವೇ ರೆಡಿಯಾಗಿ ನಮ್ಮ ಗುಡಿಸಲು ಮುಂದೆ ಬಂದುನಿಂತಿರುತ್ತಿದ್ದರು. ಇದು ನನಗೆ ಅತ್ಯಂತ ಖುಷಿಕೊಟ್ಟ ಕ್ಷಣಗಳು.

2017ರಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಎಂ.ಎ., ಪಿಎಚ್‌.ಡಿ ಮಾಡಲು ಹೋದೆ. ಸಮಾಜಶಾಸ್ತ್ರದಲ್ಲಿ ಎಂ.ಎ. ಮಾಡಿದೆ. ಬುಡಕಟ್ಟು ಅಧ್ಯಯನ ವಿಭಾಗದ ಪ್ರೊ. ಕೆ.ಎಂ.ಮೇತ್ರಿ ಅವರ ಮಾರ್ಗದರ್ಶನದಲ್ಲಿ ‘ಪಣಿಯನ್ ಬುಡಕಟ್ಟಿನ ಸಾಮಾಜಿಕ ಅಧ್ಯಯನ’ ವಿಷಯದಲ್ಲಿ ಪಿಎಚ್.ಡಿಗೆ ಮುಂದಾದೆ. ಪ್ರೋತ್ಸಾಹಧನ ತಿಂಗಳಿಗೆ ಹತ್ತು ಸಾವಿರ ಕೊಡಬೇಕಿತ್ತು. ಆದರೆ, ಮೂರು ವರ್ಷ ಕೊಡಲಿಲ್ಲ. ನನ್ನ ಕ್ಷೇತ್ರ ಕಾರ್ಯಕ್ಕಾಗಿ ಕೊಡಗಿಗೆ ಹೋಗಬೇಕಿತ್ತು. ಹಣ ಇಲ್ಲದೇ ತುಂಬಾ ತೊಂದರೆ ಆಗುತ್ತಿತ್ತು. ಕೆಲವೊಮ್ಮೆ ಗೈಡ್‌ ಸಹಾಯ ಮಾಡಿದರು. ಅಪ್ಪನಿಗೆ ‘ನಾನು ವಾಪಸ್‌ ಬಂದುಬಿಡುತ್ತೇನೆ. ಹಣದ ತೊಂದರೆ ಇದೆ’ ಎನ್ನುತ್ತಿದ್ದೆ. ಪ್ರೋತ್ಸಾಹಧನಕ್ಕಾಗಿ ವಿಶ್ವವಿದ್ಯಾಲಯದ ಎಸ್‌ಸಿ/ಎಸ್‌ಟಿ ವಿದ್ಯಾರ್ಥಿಗಳು ಧರಣಿ ಕುಳಿತೆವು. ಆಮೇಲೆ ಮೂರು ವರ್ಷದ ಹಣ ಒಟ್ಟಿಗೆ ಬಂದಿತು. ನನ್ನ ಪಿಎಚ್‌.ಡಿ ಕೆಲಸವೂ ಸರಾಗವಾಗಿ ಮುಗಿಯಿತು. ಹೀಗಾಗಿ ಪಣಿಯನ್‌ ಸಮುದಾಯದಲ್ಲಿ ಪಿಎಚ್‌.ಡಿ ಪಡೆದ ಮೊದಲಿಗಳಾದೆ! ಈಗ ರಾಯಚೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದೇನೆ.

ನನಗೆ ಬುಡಕಟ್ಟು ಸಮುದಾಯದ ಮಕ್ಕಳ ನೋವು, ಸಮಸ್ಯೆಗಳು ಅರ್ಥವಾಗುತ್ತವೆ. ಆದ್ದರಿಂದ ಓದಿನಲ್ಲಿ ಆಸಕ್ತಿ ತೋರಿಸುವವರ ಬೆನ್ನಿಗೆ ನಿಲ್ಲುತ್ತಿದ್ದೇನೆ. ಕೊಡಗಿನ ಚಂದನಕೆರೆ ಹಾಡಿಯಲ್ಲಿ ಏಳು ವಿದ್ಯಾರ್ಥಿನಿಯರು ಬಿ.ಎ. ಪದವಿ ಪಡೆದಿದ್ದಾರೆ. ಒಬ್ಬಳು ಡಿಎಡ್‌ ಮುಗಿಸಿ ಶಿಕ್ಷಕಿಯಾಗಿದ್ದಾಳೆ. ನಾನು ಮೊದಲೇ ಹೇಳಿದಂತೆ, ‘ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ತೆಗೆಯಬೇಡಿ’ ಎನ್ನುವ ಮಾತನ್ನು ಇವರಿಗೂ ಹೇಳುತ್ತಲೇ ಇರುತ್ತೇನೆ. ಏಕೆಂದರೆ, ಗುರಿ ತಲುಪಬೇಕು ಎಂದರೆ ನಮಗೆ ನಮ್ಮಲ್ಲಿ ನಂಬಿಕೆ ಇರಬೇಕು.

ಕೆಲವೊಮ್ಮೆ ನಾನು ನನಗೇ ‘ಒಂದು ವೇಳೆ ಶಿಕ್ಷಣವನ್ನೇ ಪಡೆಯದೇ ಹೋಗಿದ್ದರೆ ನನ್ನ ಬದುಕು ಹೇಗಿರುತ್ತಿತ್ತು?’ ಎಂದು ಪ್ರಶ್ನೆ ಕೇಳಿಕೊಳ್ಳುತ್ತೇನೆ. ನಿಜ ಹೇಳುತ್ತೇನೆ, ಕತ್ತಲೆ ಕೋಣೆಯಲ್ಲಿ ಬಿದ್ದಿರುತ್ತಿದ್ದೆ. ಶಿಕ್ಷಣ ನನ್ನಲ್ಲಿ ವಿವೇಕ, ವಿಮೋಚನೆ, ಜಗತ್ತನ್ನು ಅರಿಯುವ ಮತ್ತು ಸ್ವತಂತ್ರವಾಗಿ ಬದುಕುವ ಶಕ್ತಿಯನ್ನು ಕೊಟ್ಟಿದೆ. ಇದನ್ನೇ ನಾನು ನನ್ನಂಥವರಿಗೆ ಹೇಳುತ್ತಿರುವುದು.

ನಿರೂಪಣೆ: ಪ್ರಭಾ ಸ್ವಾಮಿ

ವಿದ್ಯಾರ್ಥಿಗಳೊಂದಿಗೆ ಚರ್ಚೆಯಲ್ಲಿ ದಿವ್ಯಾ ಎಸ್‌.ಆರ್‌.  ಚಿತ್ರಗಳು: ಶ್ರೀನಿವಾಸ್‌ ಇನಾಂದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.