ADVERTISEMENT

ಗಂಭೀರ ಶಾಸ್ತ್ರಕ್ಕೂ ಹಾಸ್ಯದ ಅಂಗಿ ಹಾಕಬಲ್ಲ ಅ.ರಾ. ಮಿತ್ರ

ಎಸ್.ಆರ್.ವಿಜಯಶಂಕರ
Published 23 ಫೆಬ್ರುವರಿ 2025, 0:10 IST
Last Updated 23 ಫೆಬ್ರುವರಿ 2025, 0:10 IST
ಅ.ರಾ. ಮಿತ್ರ
ಅ.ರಾ. ಮಿತ್ರ   

ಕೈಲಾಸಂ ಬಗ್ಗೆ ಬರೆದೊಂದು ಪುಸ್ತಕದಲ್ಲಿ ಅ.ರಾ. ಮಿತ್ರರು, ‘ನಿಂತಕಡೆ ಸಂತೆ ಸೇರಿಸಬಲ್ಲ ವ್ಯಕ್ತಿ’ ಕೈಲಾಸಂ ಎನ್ನುತ್ತಾರೆ. ಈ ಮಾತು ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ (ಅ.ರಾ.ಮಿತ್ರ) ಅವರ ಬಗೆಗೂ ಅಷ್ಟೇ ಸತ್ಯ. ಅವರು ಮಾತನಾಡುತ್ತಾರೆ ಎಂದರೆ ಸಭೆ ಕಿಕ್ಕಿರಿದು ತುಂಬಿರುತ್ತದೆ. ಅವರು ನಿಂತಲ್ಲಿ ನಾಲ್ಕಾರು ಜನ ಸುತ್ತಲೂ ಇರುತ್ತಾರೆ. ಸದಾ ನಗುಮುಖ ಮಾತ್ರವಲ್ಲ, ಮಿತ್ರರು ಮಾತನಾಡಿದರೆ ಕೇಳುವವರನ್ನು ನಗಿಸುವಂತಹ ಮನೋಭಾವ.

ಅವರನ್ನು ನಾನು ಮೊದಲು ನೋಡಿದ್ದು 1971ರಲ್ಲಿ. ಆಗ ಮಿತ್ರರು ಮಂಗಳೂರು ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಪುತ್ತೂರಿನಲ್ಲಿ ಸುಮನಸಾ ವಿಚಾರ ವೇದಿಕೆ ಏರ್ಪಡಿಸಿದ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂದು ಬಿಡುಗಡೆಯಾದ ನಾ. ಮೊಗಸಾಲೆ, ಯು.ಕೆ.ವಿ. ಆಚಾರ್ಯ ಹಾಗೂ ಜಿ.ಎಸ್. ಉಬರಡ್ಕ ಅವರ ಕವನ ಸಂಕಲನಗಳ ಕುರಿತಾಗಿ, ಬನ್ನಂಜೆ ಗೋವಿಂದಾಚಾರ್ಯರು ಮಾತನಾಡಿದರು. ಕವಿ ಸುಬ್ರಾಯ ಚೊಕ್ಕಾಡಿ ಸುಮನಸಾ ವೇದಿಕೆಯ ಪರವಾಗಿ ಕಾರ್ಯಕ್ರಮ ಏರ್ಪಡಿಸಿದ್ದರು. ಆಗ ಅ.ರಾ. ಮಿತ್ರರೂ ಸೇರಿ ಆ ಇಡೀ ಕೂಟ ನವ್ಯ ಸಾಹಿತಿಗಳು ಎಂದೇ ಪ್ರಸಿದ್ಧರಾಗಿದ್ದರು. ಆಗ ನಾನು ವಿಟ್ಲದಲ್ಲಿ ಹೈಸ್ಕೂಲು ಓದುತ್ತಿದ್ದೆ. ಮಿತ್ರ ಹಾಗೂ ಬನ್ನಂಜೆಯವರನ್ನು ಸಭೆಯಲ್ಲಿ ಕುಳಿತು ನೋಡಿ, ಅವರ ಮಾತುಗಳನ್ನು ಕೇಳಿ ಬರುವುದಕ್ಕಾಗಿ ಹೋಗಿದ್ದೆ.

ಅಂದು ಪುಸ್ತಕಗಳ ಬಗ್ಗೆ, ಸಾಹಿತ್ಯದ ಬಗ್ಗೆ ಮಿತ್ರ ಬಹಳ ಗಂಭೀರವಾಗಿಯೇ ಮಾತನಾಡಿದ್ದರು. ಆದರೆ ಆ ದಿನ ಅವರು ಹೇಳಿದ ಒಂದು ಜೋಕು ಇಂದಿಗೂ ನೆನಪಿದೆ. ಬದುಕಲ್ಲಿ ಒಂದು ಹೋಗಿ ಇನ್ನೊಂದಾಗುವ ವಿಚಿತ್ರಗಳಿಗೆ, ಅನಿರೀಕ್ಷಿತ ತಿರುವುಗಳಿಗೆ ಸಂಬಂಧಿಸಿದಂತೆ (‘ಹುಟ್ಟು ಅವಘಡ ನನಗೆ’ ಎಂಬ ಜಿ.ಎಸ್. ಉಬರಡ್ಕರ ಕವನದ ಒಂದು ಸಾಲನ್ನು ಎತ್ತಿಕೊಂಡು ಮಾತನಾಡುತ್ತಿದ್ದಾಗ ಹೇಳಿದ್ದು ಎಂದು ನೆನಪು.) ಹೇಳಿದ ಒಂದು ಮಾತಿಗೆ ಗಂಭೀರವಾಗಿದ್ದ ಸಭೆಯಲ್ಲಿ ನಗು ಆಸ್ಫೋಟಿಸಿದ ಪ್ರಸಂಗ: ‘ಯಾಕೋ ಅಳ್ತಾ ಇದ್ದೀ ಮಗೂ?’ ಎಂದು ಕೇಳಿದರಂತೆ. ‘ನಮ್ಮಪ್ಪ ಗೋಡೆಗೆ ಮೊಳೆ ಹೊಡೀತಾ ಸುತ್ತಿಗೆ ಏಟು ತಪ್ಪಿ ಕೈಗೆ ಬಿತ್ತು ಅದಕ್ಕೇ... ಊ್ಞ ಊ್ಞ ಊ್ಞ’ ಎಂದಿತ್ತು. ‘ಅಲ್ಲವೊ! ಮೊಳೆಗೆ ಹೊಡೆದೇಟು ಗುರಿ ತಪ್ಪಿ ನಿಮ್ಮಪ್ಪನ ಕೈಗೆ ಬಿದ್ದರೆ ನಗೋದು ಬಿಟ್ಟು ಅಳತಾರೇನೋ?’ ‘ನಕ್ಕೆ ಮೊದ್ಲು, ನಕ್ಕೆ ಮಾಮ, ನಕ್ಕೆ. ಗಟ್ಟಿಯಾಗೇ ನಕ್ಕೆ! ಅದಕ್ಕೆ ಈಗ ಅಳ್ತಾ ಇರೋದು.’

ADVERTISEMENT

ಸಭೆಯಲ್ಲಿ ನಗೆ ಬಡಲ್ಲನೆ ಚಿಮ್ಮಿದಾಗ, ಮಿತ್ರರು ‘ಇದು ನಾನು ಹೇಳಿದ್ದಲ್ಲ, ಬೇರೆಯವರು ಹೇಳಿದ್ದು’ ಎಂದರು. ಆ ನಗೆಯಲ್ಲಿ ಅದು ಯಾರು ಹೇಳಿದ್ದೆಂದು ಮಿತ್ರರು ಹೇಳಿದ್ದೆಂದು ನನಗೆ ಕೇಳಲಿಲ್ಲ. ಆ ಮೂಡ್‌ನಲ್ಲಿ ಅದು ಯಾರು ಹೇಳಿದ್ದೆಂದು ತಿಳಿದುಕೊಳ್ಳಬೇಕೆಂದೂ ಅನಿಸಲಿಲ್ಲ. ಆ ಮೇಲೆ ದಶಕಗಳ ನಂತರ ತಿಳಿಯಿತು. ಅ.ರಾ. ಮಿತ್ರರು ಬರೆದ ‘ಕೈಲಾಸಂ' ಪುಸ್ತಕದಲ್ಲಿ (ಬೆಂಗಳೂರು ವಿ.ವಿ. ಪ್ರಕಟಣೆ) ಕೊನೆಗೆ ‘ಕೈಲಾಸಂ ಜೋಕುಗಳು' ಎಂಬೊಂದು ವಿಭಾಗದಲ್ಲಿ ಮೊದಲನೆಯದಾಗಿ ಮೇಲೆ ಹೇಳಿದ ಜೋಕನ್ನು ‘ನಗಬೇಕೋ ಅಳಬೇಕೋ!' ಎಂಬ ತಲೆಕಟ್ಟು ಕೊಟ್ಟು ಹಾಕಿದ್ದರು.

ಮಿತ್ರರು ಹೇಳುವ ಅನೇಕ ಜೋಕುಗಳನ್ನು ಅವರು ಇದರ ಒರಿಜಿನಲ್ ರೈಟ್ಸ್ ನನ್ನದಲ್ಲ ಎನ್ನುತ್ತಿರುತ್ತಾರೆ. ಅವರ ಹಾಸ್ಯ ಎಷ್ಟೇ ಇರಲಿ, ಮೂಲತಃ ಅವರು ಶಾಸ್ತ್ರಜ್ಞರು. ಸ್ಕಾಲರ್ ಅನ್ನುತ್ತಾರಲ್ಲ, ಆ ರೀತಿಯ ಪಂಡಿತರು. ಅವರ ‘ಛಂದೋಮಿತ್ರ' ಅಥವಾ ‘ವಚನಕಾರರು ಮತ್ತು ಶಬ್ದಕಲ್ಪ' ಮೊದಲಾದ ಕೃತಿಗಳನ್ನಾಗಲಿ, ‘ಪ್ರೇಮನದಿಯ ದಡಗಳಲ್ಲಿ' ಎಂಬ ಪೌರಾಣಿಕ, ಚಾರಿತ್ರಿಕ ಪ್ರೇಮಿಗಳ ಬಗೆಗಿನ ಪುಸ್ತಕವನ್ನಾಗಲಿ (ಉದಾ: ಕಾದಂಬರಿ-ಚಂದ್ರಾಪೀಡ, ಯಮ-ಯಮಿ, ಸಂವರಣ-ತಪತಿ, ಈರಾಸ್-ಸೈಕಿ, ರೋಮಿಯೋ-ಜೂಲಿಯಟ್ ಇತ್ಯಾದಿ); ‘ಮಹಾಭಾರತದ ಪಾತ್ರ ಸಂಗತಿಗಳು' ಸಂಪುಟಗಳನ್ನಾಗಲಿ ಓದಿದವರಿಗೆ, ಅವರ ಪಾಂಡಿತ್ಯದ ಅರಿವಾಗದಿರದು. ಮೀಮಾಂಸಾಗ್ರಹಿಕೆ ಪಾಂಡಿತ್ಯದ ಮುಖ್ಯ ಲಕ್ಷಣಗಳಲ್ಲೊಂದು. ಒಂದು ಜ್ಞಾನಶಾಖೆಯ ತಲಸ್ಪರ್ಶಿ ತಾತ್ವಿಕ ಗ್ರಹಿಕೆಯನ್ನೂ ಸೂಚಿಸುವುದು ಸಾಹಿತ್ಯ ಮೀಮಾಂಸೆಯ ಕೆಲಸಗಳಲ್ಲೊಂದು. ಭರತ ಮುನಿಯೇ ಹಾಸ್ಯವನ್ನು ಶೃಂಗಾರವಾದೊಡನೆ ಉಲ್ಲೇಖಿಸುತ್ತಾನೆ. ಹಾಗಾಗಿ ಒಂದು ರೀತಿಯಲ್ಲಿ ಹಾಸ್ಯ ಶೃಂಗಾರದ ತಮ್ಮನೋ, ತಂಗಿಯೋ ಆಗಬೇಕು. ಹಾಸ್ಯ ಗಂಭೀರ ಶೃಂಗಾರದ ಬೆನ್ನನ್ನು ತೋರಿಸುತ್ತದೆ.

ಮಿತ್ರರ ಹಾಸ್ಯಕಲ್ಪನೆ ಬಹಳ ದೊಡ್ಡದು. ಅದೊಂದು ರಸಪ್ರಜ್ಞೆ; ಕಾರಂತರು, ಮಾಸ್ತಿ, ಕುವೆಂಪು, ಬೇಂದ್ರೆ ಮೊದಲಾದವರಿಗೆ ಇದ್ದ ಹಾಗೆ. ಆದರೆ ಜನರು ಬಿಡದೆ ಕಾಡಿ, ಹಾಸ್ಯೋತ್ಸವಗಳಲ್ಲಿ ಮಾತನಾಡಿಸಿ ಅವರ ಹಾಸ್ಯ ರಸಪ್ರಜ್ಞೆಯನ್ನು ಕೇವಲ ಹಾಸ್ಯಕ್ಕೆ ಅನೇಕ ಸಲ ಸೀಮಿತಗೊಳಿಸಿಬಿಟ್ಟರು.

ಕುಮಾರವ್ಯಾಸ ಪ್ರೊ. ಅ.ರಾ. ಮಿತ್ರರ ಅತಿ ಪ್ರೀತಿಪಾತ್ರ ಕವಿಗಳಲ್ಲೊಬ್ಬ. ಅವರು ಮಾಡಿದ ಗದುಗಿನ ಭಾರತದ ಗದ್ಯಾನುವಾದಕ್ಕೆ ‘ಕುಮಾರವ್ಯಾಸನ ಭಾರತ ಕಥಾಮಿತ್ರ' ಎಂದು ಹೆಸರು. ಕವಿಗಳಾದ ಎಚ್.ಎಸ್.ವಿ., ಎಲ್. ಗುಂಡಪ್ಪ ಸೇರಿ ಕೆಲವರು ಗದುಗಿನ ಭಾರತವನ್ನು ಕನ್ನಡ ಗದ್ಯಕ್ಕೆ ಪರಿವರ್ತಿಸಿದ್ದಾರೆ. ಎ.ಆರ್.ಕೃ. ಅವರ ಮೂಲಭಾರತ ಸಂಗ್ರಹವಾದ ‘ವಚನಭಾರತ'ವಂತೂ ಪ್ರಸಿದ್ಧವಾದುದೇ ಆಗಿದೆ. ಆದರೆ, ಕಥಾಮಿತ್ರಕ್ಕೆ ಅದರದ್ದೇ ಆದ ಭಾಷಾ ಸೊಗಸಿದೆ. ಕುಮಾರವ್ಯಾಸನ ಕಾವ್ಯದ ಮೂಲಪದಗಳೇ ಕನ್ನಡ ಗದ್ಯಕ್ಕೆ ಹೊಂದಿಕೊಳ್ಳುವಲ್ಲೆಲ್ಲಾ ಅದನ್ನೇ ಬಳಸಿ, ಕಥಾ ಸಂಚಾರಕ್ಕೆ ತಡೆಯಾಗುವಲ್ಲಿ ಮಾತ್ರ ಕಥಾಮಿತ್ರದಲ್ಲಿ ಸೊಗಸಾದ ಕನ್ನಡವನ್ನು ಬಳಸಿದ್ದಾರೆ. ವಿದ್ವಾನ್ ರಂಗನಾಥ ಶರ್ಮರು ಕೃತಿಯ ಪ್ರಸ್ತಾವನೆಯಲ್ಲಿ ಹೇಳಿದಂತೆ ಅ.ರಾ. ಮಿತ್ರರ ಕನ್ನಡ ವಾಕ್ಯರಚನೆ ಕನ್ನಡ ಜಾಯಮಾನಕ್ಕೆ ಅನುಗುಣವಾಗಿ ಬಂದಿದೆ. ಕಠಿಣ ಶಬ್ದಗಳ ಬಳಕೆ ಇಲ್ಲ. ತಮ್ಮ ಪ್ರೌಢಿಮೆಯನ್ನು ಮೆರೆಸಬೇಕೆಂಬ ಹಂಬಲವೂ ಇಲ್ಲ. ಮಹಾಭಾರತಕ್ಕೆ ಸಂಬಂಧಿಸಿದ ಕತೆಯನ್ನು ಎಷ್ಟು ಹೇಳಬೇಕೊ ಅಷ್ಟನ್ನೆ ಹಿತಮಿತ ವಾಕ್ಯಗಳಲ್ಲಿ ಎಲ್ಲ ದರ್ಜೆಯ ಓದುಗರಿಗೂ ಪ್ರಿಯವಾಗುವಂತೆ ತಿಳಿಸಿಕೊಡಬೇಕೆಂಬುದೇ ಅವರ ಧ್ಯೇಯವಾಗಿ ತೋರುತ್ತದೆ ಎಂದು ವಿದ್ವಾನ್ ರಂಗನಾಥ ಶರ್ಮರು ಅಡಕವಾಗಿ ಹೇಳಿದ್ದಾರೆ.

ಅ.ರಾ. ಮಿತ್ರರೊಳಗೆ ಬಹಳ ಗಂಭೀರವಾದ ಸಾಹಿತ್ಯ ಅಧ್ಯಯನಕಾರ, ಶಾಸ್ತ್ರ ಪಂಡಿತ, ಕನ್ನಡ, ತೆಲುಗು, ಸಂಸ್ಕೃತ, ಇಂಗ್ಲೀಷ್ ಭಾಷೆ-ಸಾಹಿತ್ಯ ಬಲ್ಲ ಕೋವಿದನೊಬ್ಬನಿದ್ದಾನೆ. ಅವರ ಹಾಸ್ಯ ಕೇವಲ ಒಂದು ಮುಖವಾಡ ಮಾತ್ರ ಅನಿಸುತ್ತದೆ. ಅವರ ಹಾಸ್ಯ ಪ್ರವೃತ್ತಿಯ ನೆರಳು ವಿದ್ವಾಂಸ ಅ.ರಾ. ಮಿತ್ರರ ಮೇಲೆ ಬಿದ್ದು ಅವರ ಮುಖವಾಡವನ್ನೇ ಹಲವರು ತಪ್ಪಾಗಿ ಅವರ ನಿಜಮುಖ ಎಂದು ತಿಳಿದಿರಬಹುದು.

ಈಗಲೂ ತಮ್ಮ ಇಳಿವಯಸ್ಸಲ್ಲೂ ಅವರ ಜೀವನೋತ್ಸಾಹ ಸದಾ ಸಕಾರಾತ್ಮಕ. ಅವರ ಬೆಲ್ಲ ಲೇಪನದ ಔಷಧ ಕನ್ನಡಕ್ಕೆ ಇನ್ನಷ್ಟು ಸಿಗುತ್ತಿರಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.