ADVERTISEMENT

ಬಾಲ ಹಿಸ್ಸಾರ್: ರಾಯಚೂರಿನ ಐತಿಹಾಸಿಕ ಕೋಟೆ

ಈರಣ್ಣ ಬೆಂಗಾಲಿ
Published 28 ಜೂನ್ 2025, 23:30 IST
Last Updated 28 ಜೂನ್ 2025, 23:30 IST
ಕೋಟೆ ಮೇಲಿರುವ ಕಟ್ಟಡ
ಕೋಟೆ ಮೇಲಿರುವ ಕಟ್ಟಡ   

‘ಕರ್ನಾಟಕ ಒಂದು, ಹಲವು ಜಗತ್ತುಗಳು’ ಎಂಬ ಮಾತಿದೆ. ಇದರಂತೆ ನಮ್ಮ ನಾಡಿನಲ್ಲಿ ನೋಡುವಂತಹ ಪ್ರೇಕ್ಷಣೀಯ ಸ್ಥಳಗಳು ಸಾಲು ಸಾಲು ಇವೆ. ಪ್ರತಿಯೊಂದು ಜಿಲ್ಲೆ ತನ್ನದೇ ಆದ ವೈಶಿಷ್ಟ್ಯದಿಂದ ಕೂಡಿದೆ. ಇದರಂತೆ ವಿಶೇಷವಾಗಿ ಕರ್ನಾಟಕದ ರಾಯಚೂರು ಜಿಲ್ಲೆಯು ವಿಭಿನ್ನತೆಯಿಂದ ಕೂಡಿದೆ. ಇದು ಕಲೆ, ಸಾಹಿತ್ಯ, ಸಂಸ್ಕೃತಿ, ಭೌಗೋಳಿಕವಾಗಿ ಅಲ್ಲದೆ ಐತಿಹಾಸಿಕವಾಗಿಯೂ ಗಮನ ಸೆಳೆಯುತ್ತಿದೆ.

ರಾಯಚೂರು ಜಿಲ್ಲೆಯ ಉತ್ತರಕ್ಕೆ ಕೃಷ್ಣಾ ಮತ್ತು ದಕ್ಷಿಣಕ್ಕೆ ತುಂಗಭದ್ರಾ ನದಿಗಳು ಹರಿಯುತ್ತಿವೆ. ಎರಡು ನದಿಗಳ ಮಧ್ಯ ಇರುವ ರಾಯಚೂರು ಜಿಲ್ಲೆಯು ಇರ್ದೊರೆ ನಾಡು, ಎಡೆದೊರೆ ನಾಡು ಮತ್ತು ದೋ ಅಬ್ ಪ್ರದೇಶವೆಂದು ಖ್ಯಾತಿಯನ್ನು ಪಡೆದಿದೆ. ವಿಶೇಷವಾಗಿ ರಾಯಚೂರಿನ ನೆಲದಲ್ಲಿ ಈಗಲೂ ಐತಿಹಾಸಿಕ ಕುರುಹುಗಳು ಹೆಜ್ಜೆ ಹೆಜ್ಜೆಗೆ ಸಿಗುತ್ತವೆ. ರಾಯಚೂರು ಇತಿಹಾಸದ ನೆಲೆ ಎಂದು ಸಾರಿ ಸಾರಿ ಹೇಳುತ್ತವೆ.

ರಾಯಚೂರು ನಗರದ ಬಸ್ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆಯೇ ಬೆಟ್ಟ ಕಾಣುತ್ತದೆ. ಇದನ್ನು ‘ಗುಬ್ಬೇರ ಬೆಟ್ಟ’ ಎಂದು ಕರೆಯುವರು. ಐತಿಹಾಸಿಕವಾದ ಈ ಬೆಟ್ಟದ ಮೇಲೊಂದು ಕಲ್ಲಿನಲ್ಲಿ ಮಾಡಿದ ಸ್ಮಾರಕ ಇದೆ. ಇದು ಕಾವಲು ಕೋಟೆಯಂತೆ ಇದ್ದು, ಬೆಟ್ಟದ ತುತ್ತ ತುದಿಯಲ್ಲಿ ಕೋಟೆ ಕಟ್ಟಿ, ಇದರ ಮೂಲಕ ಶತ್ರುಗಳ ಚಲನವಲನವನ್ನು ಗುರುತಿಸಿ ಸದೆ ಬಡೆಯುವ ವ್ಯವಸ್ಥೆಯನ್ನು ಹೊಂದಿದ್ದರು. ಬೆಟ್ಟದ ಮೇಲಿನ ಈ ಕಟ್ಟಡವನ್ನು ‘ಬಾಲ ಹಿಸ್ಸಾರ್’ ಎಂದು ಕರೆಯಲಾಗುತ್ತದೆ. ಬಾಲ ಹಿಸ್ಸಾರ್ ಎಂದರೆ ಎತ್ತರದ ಕೋಟೆ ಎಂದರ್ಥ.

ADVERTISEMENT

ಗುಬ್ಬೇರ ಬೆಟ್ಟ ಹತ್ತಲು ಎರಡು ಕಡೆ ಮೆಟ್ಟಿಗಳಿದ್ದು, ಬೆಟ್ಟ ಹತ್ತುವಾಗ ಎರಡು ದ್ವಾರಗಳು ಕಾಣಸಿಗುತ್ತವೆ. ಮೊದಲ ದ್ವಾರವು ಉತ್ತರಕ್ಕೆ ಮುಖ ಮಾಡಿದೆ. ಎರಡನೆಯ ದ್ವಾರವು ದಕ್ಷಿಣಕ್ಕೆ ಮುಖ ಮಾಡಿದೆ. ಬೆಟ್ಟದ ಮೇಲೆ ಶಿಥಿಲಗೊಂಡ ಕೋಟೆ, ಬೃಹತ್ ತೋಪು, ಇಸ್ಲಾಂ ಶೈಲಿಯ ಕಟ್ಟಡ, ಚೌಕಾಕಾರದ ದೊಡ್ಡ ಕಟ್ಟೆ, ಮಂಟಪದ ಅವಶೇಷಗಳಿವೆ, ಹಾಗೆಯೇ ಐದು ಗೋರಿಗಳಿವೆ.

ಬೆಟ್ಟದ ಮೇಲಿನ ಇತಿಹಾಸದ ಕುರುಹುಗಳ ಕುರಿತು ವಿವರವಾಗಿ ಹೇಳಬೇಕೆಂದರೆ ಬೆಟ್ಟದ ಮೇಲೆ ದಕ್ಷಿಣಕ್ಕೆ ಇರುವ ಮುಖ್ಯ ಕಟ್ಟಡಕ್ಕೆ ಕಮಾನುಗಳಿವೆ. ಇದರ ಛಾವಣಿ ಗುಮ್ಮಟ ಆಕಾರದಲ್ಲಿದೆ. ಕಟ್ಟಡದ ಒಳಗೆ ಉತ್ತರಕ್ಕೆ ಮೂರು ಕಮಾನುಗಳಲ್ಲಿ, ಮೂರು ಕಿಂಡಿಗಳಿವೆ. ಇವುಗಳ ಮೂಲಕ ವೈರಿಗಳನ್ನು ಹತ್ತಿಕ್ಕಲು ಸಾಧ್ಯವಾಗುತ್ತಿತ್ತು. ಕಟ್ಟಡದ ಇತರ ಭಾಗಗಳಲ್ಲಿಯೂ ಕಿಂಡಿಗಳಿದ್ದು ಅವುಗಳನ್ನು ಇಂದಿನವರು ಮುಚ್ಚಿದ್ದಾರೆ. ಈ ಮುಖ್ಯ ಕಟ್ಟಡದ ಬಲಗಡೆ ಚಿಕ್ಕ ಮಸೀದಿಯಂತಹ ಕಟ್ಟಡವಿದ್ದು ಇದಕ್ಕೆ ಮಿನಾರುಗಳಿದ್ದು, ಇದು ಕೂಡ ಶಿಥಿಲಾವಸ್ಥೆಯಲ್ಲಿದೆ. ಅದೇ ರೀತಿ ಮುಖ್ಯ ಕಟ್ಟಡದ ಎಡಗಡೆ ನಾಲ್ಕು ಕಲ್ಲಿನ ಸ್ತಂಭಗಳ ಮಂಟಪವಿದೆ. ಇದು ದೇವಾಲಯದ ಕುರುಹನ್ನು ಸೂಚಿಸುತ್ತದೆ ಅಥವಾ ಇವುಗಳನ್ನು ಯಾವುದಾದರೂ ದೇವಾಲಯದಿಂದ ಇಲ್ಲಿಗೆ ತಂದಿರಬೇಕು. ಇದಕ್ಕೆ ಗಾರೆಯ ಛಾವಣಿಯಿದ್ದು, ಹೂ, ಬಳ್ಳಿಗಳ ಚಿತ್ತಾರವನ್ನು ಬಿಡಿಸಲಾಗಿದೆ. ಅಪೂರ್ಣವಾಗಿ ಕೆತ್ತಿದ ಕುಳಿತ ಬಸವಣ್ಣನ ಶಿಲ್ಪವು ಮುಖ್ಯ ಕಟ್ಟಡದ ಕಮಾನುಗಳ ಕಿಂಡಿಯ ಮೂಲಕ ನೋಡಿದರೆ ಬೆಟ್ಟದ ಕಲ್ಲುಗಳ ಮಧ್ಯೆ ಇರುವುದನ್ನು ಕಾಣಬಹುದು.

ಗುಬ್ಬೇರ ಬೆಟ್ಟದ ಮೇಲಿನ ಐತಿಹಾಸಿಕ ಕೋಟೆ

ಮುಖ್ಯ ಕಟ್ಟಡದ ಮುಂದೆಯೇ ಚೌಕಾಕಾರದ ದೊಡ್ಡ ಕಟ್ಟೆಯೊಂದು ಇದೆ. ಇದು ಆಗ ಕೊಳವಾಗಿತ್ತೆಂದು ಊಹಿಸಲಾಗಿದೆ. ಈ ಕಟ್ಟೆಯ ಮುಂದೆ ಮೂವ್ವತ್ತೆರಡು ಅಡಿ ಸುತ್ತಳತೆಯ ವೃತ್ತಾಕಾರದ ಕಟ್ಟೆಯಿದ್ದು, ಈ ಕಟ್ಟೆಯ ಮಧ್ಯೆ ಜನರ ಗಮನ ಸೆಳೆಯುವ ಬೃಹದಾಕಾರದ ತೋಪು ಇದೆ. ಆಗ ತೋಪು 360 ಡಿಗ್ರಿಯಲ್ಲಿ ತಿರುಗಿ ಶತ್ರುಗಳ ಸಂಹಾರ ಮಾಡಲು ನೆರವಾಗುತ್ತಿತ್ತು. ಈಗ ಇದು ಒಂದುಕಡೆ ಬಿದ್ದಿದೆ. ಇದು ಇಪ್ಪತ್ತು ಅಡಿಯ ಉದ್ದವಿದ್ದು, ಮುಂದೆ ಐದು ಇಂಚು ಮತ್ತು ಹಿಂದೆ ನಾಲ್ಕು ಅಡಿ ಸುತ್ತಳತೆ ಇದ್ದು, ಟನ್ ಗಟ್ಟಲೆ ಭಾರವಿದೆ. ಇದನ್ನು ಅದ್ಹೇಗೆ ಬೆಟ್ಟದ ತುದಿಗೆ ತಂದರು ಎಂಬುದು ಗಮನಾರ್ಹ ಸಂಗತಿಯಾಗಿದೆ.

ಇದೇ ಗುಬ್ಬೇರ ಬೆಟ್ಟದ ಪಶ್ಚಿಮಕ್ಕೆ ಐದು ಗೋರಿಗಳಿವೆ. ಈ ಗೋರಿಗಳು ಪಂಚ ಕನ್ಯೆಯರಾಗಿದ್ದು, ಇದು ಪಾಂಚ ಬೀಬಿ ಪಹಾಡ ಎಂದು ಕೆಲವರು ಕರೆದರೆ, ಮತ್ತೆ ಕೆಲವರು ಇದನ್ನು ಪಂಚಲಿಂಗೇಶ್ವರ ದೇವಾಲಯ ಎಂದು ಕರೆಯುವರು. ಗುಬ್ಬೇರ ಬೆಟ್ಟದ ಸ್ಮಾರಕಗಳು ಶಿಥಿಲಾವಸ್ಥೆಯಲ್ಲಿದ್ದು, ಇವುಗಳನ್ನು ಉಳಿಸುವ ಕಾರ್ಯವಾಗಬೇಕಿದೆ. ಐತಿಹಾಸಿಕ ಗುಬ್ಬೇರ ಬೆಟ್ಟವನ್ನು ಸುಲಭವಾಗಿ ಹತ್ತಲು ಖಾಸ ಬಾವಿಯ ಎದುರುಗಡೆ ಮೆಟ್ಟಿಲುಗಳಿವೆ. ಅದೇ ರೀತಿ ಗಂಗಾ ನಿವಾಸದ ಎದುರಿಗೆ ಮೆಟ್ಟಿಲುಗಳಿದ್ದು, ಗುಬ್ಬೇರ ಬೆಟ್ಟ ಹತ್ತಿ ಅಲ್ಲಿನ ಐತಿಹಾಸಿಕ ಕುರುಹುಗಳನ್ನು ನೋಡಬಹುದು. ಬೆಟ್ಟದ ಮೇಲಿಂದ ರಾಯಚೂರು ನಗರದ ವಿಹಂಗಮ ನೋಟ ಮನಮೋಹಕವಾಗಿರುತ್ತದೆ. ದೂರದ ಶಕ್ತಿನಗರದ ವಿದ್ಯುತ್ ಚಿಮಣಿಗಳು, ಪುಟ್ಟದಾಗಿ ಕಾಣುವ ಖಾಸಬಾವಿ, ಮಾವಿನಕರೆ, ಜಿಲ್ಲಾ ಕ್ರೀಡಾಂಗಣ, ನಗರದ ಲಕ್ಷಾಂತರ ಮನೆಗಳ ಹರಡಿರುವಿಕೆ, ದೂರದ ಸಾಲು ಸಾಲು ಬೆಟ್ಟ, ನಿಸರ್ಗವನ್ನು ನೋಡುವುದೇ ಚೆಂದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.