ADVERTISEMENT

ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ: ಶ್ರೀ ಶ್ರೀ ರವಿಶಂಕರ ಸಂಕ್ರಾಂತಿ ಸಂದೇಶ

ಶ್ರೀ ಶ್ರೀ ರವಿಶಂಕರ್
Published 15 ಜನವರಿ 2026, 4:00 IST
Last Updated 15 ಜನವರಿ 2026, 4:00 IST
ಶ್ರೀ ಶ್ರೀ ರವಿಶಂಕರ ಗುರೂಜಿ
ಶ್ರೀ ಶ್ರೀ ರವಿಶಂಕರ ಗುರೂಜಿ   

ನಮ್ಮ ಪ್ರತಿಯೊಂದು ಹಬ್ಬ ಹರಿದಿನಗಳ ಹಿಂದೆಯೂ ಜೀವನಕ್ಕೆ ಮಾರ್ಗದರ್ಶಕವಾದ ಒಂದು ತತ್ವ ಇರುತ್ತದೆ. ಜನವರಿ ತಿಂಗಳಿನಲ್ಲಿ ದೇಶದಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸುತ್ತೇವೆ. ಈ ದಿನ, ‘ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ’ ಎಂದು ಹೇಳುತ್ತೇವೆ. ಎಳ್ಳು ಮತ್ತು ಬೆಲ್ಲ ಏನನ್ನು ಸೂಚಿಸುತ್ತವೆ? ಎಳ್ಳು ಅತ್ಯಂತ ಚಿಕ್ಕ, ಕ್ಷುದ್ರವೆನ್ನಿಸುವ ಕಾಳು. ಇದು ಅಕಿಂಚನತ್ವವನ್ನು ಸೂಚಿಸುತ್ತದೆ. ಅಕಿಂಚನತ್ವ ಎಂದರೆ ನಾನೊಬ್ಬ ಯಕಶ್ಚಿತ್ ವ್ಯಕ್ತಿ, ನನ್ನ ಜೀವನ, ನನ್ನ ಸಾಧನೆ ಎಲ್ಲವೂ ಎಳ್ಳು ಕಾಳಿನಷ್ಟು ಅಲ್ಪ ಎನ್ನುವ ಭಾವ. ಹೀಗೆ ಭಾವಿಸಿಕೊಂಡಾಗ ನಮ್ಮಲ್ಲಿ ಅಹಂಕಾರ ಉಂಟಾಗುವುದಿಲ್ಲ. ಸಹಜತೆ, ಸರಳತೆ ನಮ್ಮಲ್ಲಿ ತುಂಬಿ ತುಳುಕುತ್ತದೆ.

ಅಕಿಂಚನತ್ವದಿಂದ ಮನಸ್ಸಿನ ಭಾರ ಕಳೆಯುತ್ತದೆ. ಬೇರೆಯವರಿಂದ ನಿರೀಕ್ಷಿಸುವುದೂ ಮಾಯವಾಗುತ್ತದೆ. ಮನಸ್ಸು ಹಗುರಾಗಿ ನಮ್ಮಲ್ಲಿ ಪ್ರೀತಿ, ವಿಶ್ವಾಸ, ಸಹಜತೆ ಎಲ್ಲವೂ ಮೂಡುತ್ತವೆ.

ಬೆಲ್ಲದಂತೆ ನಮ್ಮ ಮಾತು ಸಿಹಿಯಾಗಿರಬೇಕು. ಕಹಿಯಿಂದ ಕಹಿ ಬೆಳೆಯುತ್ತದೆ. ನಾವು ಆಡುವ ಮಧುರವಾದ ಮಾತುಗಳೇ ನಮ್ಮ ಬದುಕನ್ನು ಪ್ರತಿಬಿಂಬಿಸುತ್ತವೆ.  ‘ಮಾತಿನಿಂ ನಗೆನುಡಿಯು, ಮಾತಿನಿಂ ಹಗೆ ಹೊಲೆಯು, ಮಾತಿನಿಂ ಸರ್ವ ಸಂಪದವು ಲೋಕಕ್ಕೆ, ಮಾತೇ ಮಾಣಿಕವು – ಸರ್ವಜ್ಞ’ ಎಂಬ ಸರ್ವಜ್ಞನ ವಚನವೇ ಇದೆ. ನಮ್ಮ ಮಾತು ಮಧುರವಾಗಿರಬೇಕು, ಕೇಳುವವರ ಮನಸ್ಸಿಗೆ ಇಂಪಾಗಿರಬೇಕು, ಸಮಾಧಾನ ಕೊಡುವಂತಿರಬೇಕು.

ADVERTISEMENT

ಕೆಲವೊಮ್ಮ ಕಟುವಾಗಿಯೂ ಮಾತನಾಡಬೇಕಾಗುತ್ತದೆ, ಹಾಗೆಂದು ಯಾವಾಗಲೂ ಕಟುವಾಗಿದ್ದರೆ ಕೆಲಸ ನಡೆಯುವುದಿಲ್ಲ. ಆದುದರಿಂದ ಸಂಕ್ರಾಂತಿಗೆ ಎಳ್ಳುಬೆಲ್ಲ, ಯುಗಾದಿಗೆ ಬೇವುಬೆಲ್ಲ. ಬದುಕಿನಲ್ಲಿ ಎಲ್ಲವೂ ಇರಬೇಕು. ಅಕಿಂಚನತ್ವದಿಂದ ಬೇರೆಯವರ ಕಟುಟೀಕೆಗಳನ್ನೂ ಸಹಿಸಿಕೊಳ್ಳುವುದು ಸಾಧ್ಯವಾಗುತ್ತದೆ. ನಾನೆಷ್ಟರವನು? ದೇವರಿದ್ದಾನೆ, ಅವನು ನೋಡುತ್ತಿದ್ದಾನೆ ಎಂಬ ಧೈರ್ಯ ಮನಸ್ಸಿನಲ್ಲಿ ಬರುತ್ತದೆ. ನಾವು ಇತರರಿಂದ ಏನನ್ನೂ ಅಪೇಕ್ಷಿಸದಿದ್ದಾಗ ನಮ್ಮ ಸುಖ, ಸಂತೋಷ, ಆನಂದಗಳನ್ನು ಯಾರೂ ಕುಗ್ಗಿಸಲಾರರು. ನಮ್ಮ ಪ್ರಸನ್ನತೆಯನ್ನು ಹಾಳುಮಾಡಲು ಯಾರಿಗೂ ಸಾಧ್ಯವಾಗುವುದಿಲ್ಲ. ಹಾಗಿದ್ದಾಗ ನಮ್ಮ ಬದುಕಿನ ಮಾಧುರ್ಯ ಎಲ್ಲ ಕಡೆಯೂ ವ್ಯಾಪ್ತವಾಗುತ್ತದೆ. ಇದು ಸಂಕ್ರಾಂತಿಯ ದಿನ ನಮ್ಮ ಸಂಕಲ್ಪವಾಗಬೇಕು.

ಸಂಕ್ರಾಂತಿಯ ಆಚರಣೆಯಲ್ಲಿ ಕಬ್ಬಿಗೂ ಪ್ರಾಶಸ್ತ್ಯವಿದೆ.‌ ಕಬ್ಬು ಹೊರಗಿನಿಂದ ಗಟ್ಟಿಯಾಗಿದ್ದರೂ ಒಳಗೆ ಮಧುರವಾಗಿರುತ್ತದೆ. ಕಬ್ಬು ತನ್ನಲ್ಲಿ ಸಿಹಿಯನ್ನು ತುಂಬಿಕೊಳ್ಳುತ್ತಾ ಎತ್ತರೆತ್ತರಕ್ಕೆ ಬೆಳೆಯುತ್ತದೆ. ನಾವೂ ಕೂಡಾ ಜೀವನದಲ್ಲಿ ಕಹಿಯನ್ನು ಕಳೆದುಕೊಂಡು ಸಿಹಿಯನ್ನು ತುಂಬಿಕೊಂಡು ಎತ್ತರೆತ್ತರಕ್ಕೆ ಬೆಳೆಯಬೇಕು.

ವೈಜ್ಞಾನಿಕವಾಗಿ ಯುಗಯುಗಗಳಿಂದಲೂ ಜನರು ಸೂರ್ಯನನ್ನು ಆರಾಧಿಸುತ್ತಿದ್ದಾರೆ. ಸೂರ್ಯನಿಲ್ಲದೆ ಬದುಕಿಲ್ಲ. ಇಂದು ನಮ್ಮ ಭೂಮಿಯನ್ನು ಮುಂದಿನ ಪೀಳಿಗೆಗಳಿಗಾಗಿ ಉಳಿಸಿಕೊಳ್ಳಬೇಕಾಗಿದೆ. ಭೂಮಿಯ ಮೇಲಿನ ಹಸಿರನ್ನು ಉಳಿಸಿಕೊಳ್ಳಲು ಸೌರಶಕ್ತಿಯ ಬಳಕೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಮಕರ ಸಂಕ್ರಾಂತಿ, ಪೊಂಗಲ್‌, ಬಿಹು, ಲೋಲಿ ಮುಂತಾದ ಹಬ್ಬಗಳ ಆಚರಣೆಗಳ ಮೂಲಕ ಸೂರ್ಯನ ಶಕ್ತಿಯನ್ನು ಆವಾಹಿಸಿಕೊಂಡು ನಮ್ಮ ಬದುಕನ್ನು ಬೆಳಗಿಸೋಣ. 

ಮಕರ ಸಂಕ್ರಾಂತಿ ಅಥವಾ ಸುಗ್ಗಿಯ ಹಬ್ಬವು ಉತ್ಸಾಹವನ್ನು ತುಂಬುವ ಹಬ್ಬವೂ ಆಗಿದೆ. ಈ ಹಬ್ಬದ ಸಮಯದಲ್ಲಿ ಹಂಚುವ ಎಳ್ಳಿನಲ್ಲಿ ಕ್ಯಾಲ್ಷಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಇದು ಹಾಲಿನಲ್ಲಿರುವ ಕ್ಯಾಲ್ಸಿಯಂ ಪ್ರಮಾಣಕ್ಕಿಂತ ಅಧಿಕ ಎಂದು ಹೇಳುತ್ತಾರೆ.

ಬೇಸಿಗೆ ಕಾಲಿಡುವ ಮೊದಲು ಚಳಿಗಾಲದ ಕೊನೆಯ ಈ ಮೂರು ನಾಲ್ಕು ದಿನಗಳ ಸೂರ್ಯನ ಬೆಳಕು ದೇಹಕ್ಕೆ ಅಗತ್ಯವಾದ ‘ಡಿ’ ಜೀವಸತ್ವವನ್ನು ಕೊಡಲು ಶಕ್ತವಾಗಿದೆ. ಎಳ್ಳಿನಲ್ಲಿರುವ ಕ್ಯಾಲ್ಸಿಯಂ ಮತ್ತು ಯಥೇಚ್ಛವಾದ ಸೂರ್ಯನ ಬೆಳಕಿನಿಂದ ನಮ್ಮಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ದೇಹದಲ್ಲಿ ವಿಟಮಿನ್‌ ‘ಡಿ’ ಪ್ರಮಾಣ ಹೆಚ್ಚಾಗುತ್ತದೆ.  

ಸಂಕ್ರಾಂತಿಯ ದಿನ ನಾವು ಎಳ್ಳು ಬೆಲ್ಲವನ್ನು ಹಂಚುವ ಮೂಲಕ, ‘ನಮ್ಮ ಜೀವನ ಕಬ್ಬಿನ ಹಾಗಿರಬೇಕು. ನಮ್ಮ ಶರೀರ ಕಬ್ಬಿನಂತೆ ಕಾಂತಿಯುಕ್ತವಾಗಿರಬೇಕು, ಗಟ್ಟಿಯಾಗಿರಬೇಕು. ಆದರೆ, ಒಳಗಿನ ಮನಸ್ಸು ಕಬ್ಬಿನ ರಸದಂತೆ ಮಧುರವಾಗಿರಬೇಕು’ ಎಂಬ ಸಂಕಲ್ಪವನ್ನು ತೆಗೆದುಕೊಳ್ಳೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.