ADVERTISEMENT

ರಂಗಭೂಮಿ | ಡಾರ್ಕ್ ಕಾಮಿಡಿಯ ನಗೆಬಿಲ್ಲು

ಸೂಪರ್‌ ಸಂಸಾರ, ಸಕ್ರಿ ತಿಂದ ಶಾಣ್ಯಾ ಸಂಸಾರದೊಳಗಿನ ನಗಿಬುಗ್ಗಿ

ಎಸ್.ರಶ್ಮಿ
Published 6 ಮೇ 2023, 22:34 IST
Last Updated 6 ಮೇ 2023, 22:34 IST
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ಆಯೋಜಿಸಿದ್ದ ಕೃಷ್ಣಮೂರ್ತಿ ಗಾಂವ್ಕರ್‌ ನಿರ್ದೇಶನದ 'ಸಕ್ಕರೆ ತಿಂದ ಶಾಣ್ಯಾ' ನಾಟಕದ ದೃಶ್ಯ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ಆಯೋಜಿಸಿದ್ದ ಕೃಷ್ಣಮೂರ್ತಿ ಗಾಂವ್ಕರ್‌ ನಿರ್ದೇಶನದ 'ಸಕ್ಕರೆ ತಿಂದ ಶಾಣ್ಯಾ' ನಾಟಕದ ದೃಶ್ಯ   

ಯಶವಂತ ಸರದೇಶಪಾಂಡೆ ಅನುವಾದಿಸಿ, ನಿರ್ದೇಶಿಸಿರುವ ‘ಸೂಪರ್ ಸಂಸಾರ’, ಸರದೇಶಪಾಂಡೆ ಅನುವಾದಿಸಿ, ಕೃಷ್ಣಮೂರ್ತಿ ಗಾಂವ್ಕರ್‌ ನಿರ್ದೇಶಿಸಿರುವ ‘ಸಕ್ಕರೆ ತಿಂದ ಶಾಣ್ಯಾ’ ನಾಟಕಗಳು ಉತ್ತರ ಕರ್ನಾಟಕದ ಆಡುಭಾಷೆಯೊಂದಿಗೆ ಪ್ರೇಕ್ಷಕರನ್ನು ನಗಿಸುತ್ತವೆ.

ಹಗಲುಗುರುಡು, ಇರುಳುಗುುರಡು ಯಾವ ಕುರುಡಿದ್ರೇನು, ಕನಸುಗಳಿಗೇನೂ ಕೊರತೆ ಇರೂದಿಲ್ಲ. ಜಾಣಗಿವುಡು, ಪೂರ್ಣ ಕಿವುಡು, ಯಾವುದಾದರೇನು ಮನಸಿನ ಮಾತುಗಳಿಗೆ ಕಿವಿ ಬೇಕಾಗಿಲ್ಲ. ಸಹಜ ಮರೆವು, ಮರೆಗುಳಿತನ, ಜಾಣ ಮರೆವು ಯಾವುದಾದರೇನು, ಸಾಂಗತ್ಯದಲ್ಲಿ ಎಲ್ಲವೂ ಸುಖಕರವೇ.

ಹಿಂಗ ತಮ್ಮ ತಮ್ಮ ಕೊರತೆಗಳನ್ನಿಟ್ಕೊಂಡೂ ಬದುಕನ್ನು ಸುಂದರಗೊಳಿಸಿಕೊಂಡಿರುವ ಕಥನವೇ ‘ಸೂಪರ್ ಸಂಸಾರ’. ಏಳು ಪಾತ್ರಗಳ ಈ ನಾಟಕದ ಅಡಿಬರಹ ನಗೆಯ ಕಾಮನಬಿಲ್ಲು. ನಾಟಕ ಮುಗಿಯುವುದರಲ್ಲಿ ನಾವೆಲ್ಲ ಬಿದ್ದು ಬೆಂಡಾಗಿ ನಗುವುದರಲ್ಲಿ ದೇಹವೂ ಕಾಮನಬಿಲ್ಲಿನಂತೆ ಮಣಿದಿರುತ್ತದೆ.

ADVERTISEMENT

ಎರಡು ಸಂಸಾರಗಳ ನಡುವಿನ ಕತೆ. ಕಿವುಡು ದಾದಾನ ಕುಟುಂಬದಲ್ಲಿ, ಇರುಳುಗುರುಡಿರುವ ಯುವಕ, ಮಾತನಾಡುವಾಗ ಉಗ್ಗುವ ಸಹೋದರ, ಎಲ್ಲ ಸರಿ ಇರುವ ಅತ್ತಿಗೆ; ಸಂವಹನಕ್ಕಾಗಿ ಪರಸ್ಪರ ಅವಲಂಬಿಸಬೇಕಿರುವುದು ಅತ್ಯಗತ್ಯ. ಈ ಅವಲಂಬನೆಯೇ ಇವರನ್ನು ಕೂಡಿ ಬಾಳುವಂತೆ ಮಾಡಿದೆ.

ಎದುರು ಮನೆಯಲ್ಲಿರುವ ಕನಸುಕಂಗಳ ಚೆಲುವೆಯದ್ದು ಇನ್ನೊಂದು ಕುಟುಂಬ. ಅರಳು ಕಣ್ಣಿದ್ದರೂ ಹಗಲಿನಲ್ಲಿ ಏನೂ ಉಪಯೋಗವಿಲ್ಲ.  ಹಗಲುಗುರುಡು. ಮರೆಗುಳಿ ಅಪ್ಪ, ಇವರಿಬ್ಬರ ನಡುವೆ ಸಮನ್ವಯ ಸಾಧಿಸುವ ಮನೆಯ ಯಜಮಾನ್ತಿ. 

ತಮ್ಮ ಸಂಗಾತಿಯ ಕೊರತೆಗಳನ್ನು ಅರಿತ ನಂತರವೂ ಸಂಸಾರ ಸುಖಕರವಾಗಿ ಸಾಗಿಸಿಕೊಂಡು ಬಂದ ಗುಟ್ಟು ಹೇಳುತ್ತಲೇ ಪ್ರೇಕ್ಷಕರು ಹನಿಗಣ್ಣಾಗುವಂತೆ ಮಾಡುತ್ತಾರೆ. 

ಮರೆವನ್ನು ಮರೆಮಾಚಲು ಅಹಂಕಾರದ ಪರದೆ ಹೊದೆಯುವುದು, ಕಿವುಡುತನದಿಂದ ಕಾಡುವ ಕೀಳರಿಮೆ ಹೋಗಿಸಲು ಪ್ರತಿಸಲವೂ ’ನಾನು ಹೇಳೂದೇನಂದ್ರ..‘ ಎಂದು ಆರಂಭಿಸುವ ಮಾತು, ಮರೆಗುಳಿ ಗಂಡ, ಮಗಳ ನಡುವೆ ಸಿಡುಕುವಂತಾದ ಗೃಹಿಣಿ, ಸಂಯಮವನ್ನೇ ಹೊದ್ದು ತಂದ ಇನ್ನೊಂದು ಕುಟುಂಬದ ಯಜಮಾನ್ತಿಯ ನಡುವಿನ ಜಗಳ ಇವೆಲ್ಲವೂ ನಗೆಬುಗ್ಗೆ ಹುಟ್ಟಿಸುತ್ತವೆ. ಆದರೆ ನಕ್ಕ ನಂತರವೂ ಮನೆಗೆ ಹೋಗುವಾಗ, ನಾವೂ ಎಷ್ಟೆಲ್ಲ ಸನ್ನಿವೇಶಗಳಲ್ಲಿ ಜಾಣಮರೆವು, ಜಾಣಕಿವುಡುತನ ಪ್ರದರ್ಶಿಸಿರ್ತೀವಿ? ಮತ್ತೆ ಎಲ್ಲೆಲ್ಲಿ ಇವುಗಳನ್ನು ಬಳಸಿಕೊಳ್ಳಬಹುದಿತ್ತು ಅನ್ನುವ ಪಾಠವನ್ನೂ ನೀಡುತ್ತವೆ.

ಮುಂಬೈ ಮೂಲದ ಕಲಾವಿದ ಸಂತೋಷ ಪವಾರ್‌ ಅವರ ರಚನೆಯನ್ನು ಕನ್ನಡಕ್ಕೆ ಅನುವಾದಿಸಿ, ರಂಗಭೂಮಿಗೆ ನಿರ್ದೇಶಿಸಿದ್ದು ಯಶವಂತ ಸರದೇಶಪಾಂಡೆ ಅವರು. ಗುರು ಇನ್‌ಸ್ಟಿಟ್ಯೂಟ್‌ ತಂಡ ಈ ನಾಟಕವನ್ನು ಪ್ರಸ್ತುತಪಡಿಸಿದೆ. ಕಿವುಡು ದಾದಾನ ಪಾತ್ರದಲ್ಲಿ ತಮ್ಮ ಅಮಾಯಕ ನಗೆಯಿಂದಲೇ ಪ್ರೇಕ್ಷಕರು ಬಿದ್ದುಬಿದ್ದು ನಗುವಂತೆ ಮಾಡುತ್ತಾರೆ. ಶಿಲ್ಪಾ ಪಾಂಡೆ, ಪೂಜಾ ಜಹಗೀರದಾರ ಸಹಜ ನಟನೆಯಿಂದಾಗಿ ನಮ್ಮ ಮನೆಯ ಸಾಲಿನಲ್ಲಿಯೇ ಇರುವ ಕುಟುಂಬಗಳಿವು ಎಂಬ ಭಾವನೆ ಮೂಡಿಸುತ್ತಾರೆ. ಪ್ರದೀಪ ಮುಧೋಳ, ಕೃಷ್ಣಮೂರ್ತಿ ಗಾಂವ್ಕರ್‌, ರವಿ ಕುಲಕರ್ಣಿ ಇವರೆಲ್ಲರ ನಟನೆಯೂ ಅಷ್ಟೇ ಸಹಜವಾಗಿ ಮೂಡಿಬಂದಿದ್ದು, ಲೈಟುಗಳು ಆನ್‌, ಆಫ್‌ ಆದಾಗಲೇ ದೃಶ್ಯದಿಂದ ಪ್ರೇಕ್ಷಕರು ಆಚೆ ಬಂದಂತಾಗುತ್ತದೆ. 

ಇನ್ನೊಂದು ಕಹಿನಗೆಯೊಂದಿಗೆ ಬರುವ ’ಸಕ್ಕರೆ ತಿಂದ ಶಾಣ್ಯಾ‘ ನಾಟಕವನ್ನು ದಾವಣಗೆರೆಯ ವೃತ್ತಿರಂಗಭೂಮಿ ರಂಗಾಯಣ ಪ್ರಸ್ತುತಪಡಿಸಿದೆ. ಕನ್ನಡದ ಜಾಯಮಾನಕ್ಕೆ ಹೊಸತು ಎನ್ನುವಂಥ ಡಾರ್ಕ್‌ ಕಾಮಿಡಿಯನ್ನು ರಂಗರೂಪಕ್ಕೆ ತಂದಿದ್ದಾರೆ. ಕಾಂಡೋಮ್‌ ಬಳಕೆಯ ದೃಶ್ಯವನ್ನೂ ನಗೆಯ ವಸ್ತುವಾಗಿಸಿ, ಸ್ವಾತಂತ್ರ್ಯ ಮತ್ತು ಸ್ವೇಚ್ಛೆಯ ನಡುವಿನ ಗೆರೆಯನ್ನು ಸ್ಪಷ್ಟವಾಗಿ ಎಳೆಯುತ್ತಾರೆ. ಪ್ರಸ್ತುತ ಸಮಾಜದ ಯುವಕ–ಯುವತಿಯರ ತಲ್ಲಣವನ್ನು ನಾಟಕ ಬಿಡಿಸಿಡುತ್ತದೆ. ಜೊತೆಗೆ ಒಂದು ಕಾಲದ ಮೌಲ್ಯ, ಈ ಕಾಲದವರ ಆಯ್ಕೆ ಇವೆರಡರ ನಡುವಿನ ಸಂಘರ್ಷದಲ್ಲಿ ಹೆತ್ತವರು ಬಳಲುವ ಸ್ಥಿತಿಯನ್ನೂ ಎದುರಿಗಿಡುತ್ತದೆ.

ಎರಡೂ ನಾಟಕಗಳ ಜೀವಾಳ, ಉತ್ತರ ಕರ್ನಾಟಕದ ಆಡುಭಾಷೆ. ಕರಾರುವಾಕ್ಕಾಗಿ ಹೇಳಬೇಕೆಂದರೆ, ಧಾರವಾಡದ ಮಾಳಮಡ್ಡಿಯ ನುಡಿ. ಈ ಭಾಷೆಯಿಂದಾಗಿಯೇ ಯಾವುದೂ ಅಸಭ್ಯ ಎನಿಸದಷ್ಟು ಸಹಜವಾಗಿ ಮೂಡಿಬಂದಿವೆ. 

ವಿದ್ಯಾಸಾಗರ ಅಧ್ಯಾಪಕ ಅವರ ಮೂಲ ನಾಟಕವನ್ನು ಯಶವಂತ ಸರದೇಶಪಾಂಡೆ ಭಾವಾನುವಾದ ಮಾಡಿದ್ದಾರೆ. ನಿರ್ದೇಶನ ಕೃಷ್ಣಮೂರ್ತಿ ಗಾಂವ್ಕರ್‌ ಅವರದ್ದು. ಮನೆ ಯಜಮಾನನ ಪಾತ್ರದಲ್ಲಿ ಕೃಷ್ಣಮೂರ್ತಿ ಗಾಂವ್ಕರ್‌ ಜೀವ ತುಂಬುತ್ತಾರೆ. ಹೆಂಡತಿಯ ಪಾತ್ರದಲ್ಲಿ ಪೂಜಾ ಜಹಗೀರದಾರ ಗಮನ ಸೆಳೆಯುತ್ತಾರೆ.

ಎರಡೂ ನಾಟಕಗಳಿಗೆ ಕಲಾವಿದ ನಾಗರಾಜ ಪಾಟೀಲ ಬೆಳಕಿನ ವ್ಯವಸ್ಥೆ ನೋಡಿಕೊಂಡರೆ ತಂತ್ರಜ್ಞನಾಗಿ ಜೀವನ್‌ ಫರ್ನಾಂಡಿಸ್‌ ಜೀವ ತುಂಬಿದ್ದಾರೆ.  

ಹೊಟ್ಟೆ ತುಂಬ ನಕ್ಕು, ಕಣ್ಣಪಸೆ, ಮುಂಗೈಯಿಂದ ಒರೆಸಿಕೊಂಡು, ಹಗುರವಾಗಿ ಆಚೆ ಬರುವ ನಿರೀಕ್ಷೆಯಂತೂ ಸುಳ್ಳಾಗದು. 

‘ಸೂಪರ್ ಸಂಸಾರ’ದ ನಾಟಕದ ದೃಶ್ಯವೊಂದರಲ್ಲಿ ಪಾತ್ರಧಾರಿಗಳಾದ ಯಶವಂತ ಸರದೇಶಪಾಂಡೆ ಶಿಲ್ಪಾ ಪಾಂಡೆ ಕಿಟ್ಟಿ ಗಾಂವ್ಕರ್ ಶೋಭಾ ಜೋಶಿ ರವಿ ಕುಲಕರ್ಣಿ (ಕುಳಿತವರು) ಪ್ರದೀಪ ಮುಧೋಳ ಹಾಗೂ ಪೂಜಾಮಣಿ ಜಹಗೀರದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.