ಸುಶೀಲಾ ನಾಡ
ಕೊರಗರು ಹುಟ್ಟಿರುವುದೇ ಕೊರಗುವುದಕ್ಕಾಗಿ ಎನ್ನುವಂತೆ ಸಮಾಜ ಮಾಡಿದ ಗಾಯಗಳು ಇನ್ನೂ ವಾಸಿಯಾಗಿಲ್ಲ. ಆದರೆ ಇದೇ ಸಮುದಾಯದ ಸುಶೀಲಾ ಮಾತ್ರ ಧೈರ್ಯವಾಗಿ ನಿಂತು ಅನಿಷ್ಟ ಪದ್ಧತಿ ವಿರುದ್ಧ ಹೋರಾಡಿ, ಹಸನಾದ ಬದುಕಿನ ಕನಸಿಗೆ ರೆಕ್ಕೆ ಕಟ್ಟಿದ್ದಾರೆ.
ಸುಶೀಲಾ ನಾಡ ಬಾಲ್ಯದಲ್ಲಿ ಅನುಭವಿಸಿದ ಜಾತಿ ತಾರತಮ್ಯ ಮತ್ತು ಕಿರುಕುಳವು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಯೋಜಿಸಲಾಗುವ ಸಾಂಪ್ರದಾಯಿಕ ಕಂಬಳದೊಂದಿಗೆ ತಳುಕುಹಾಕಿಕೊಂಡಿದೆ. ಬಾಲ್ಯದಲ್ಲಿ ಅವರು ಕುಂದಾಪುರ ತಾಲ್ಲೂಕಿನಲ್ಲಿರುವ ನಾಡದಲ್ಲಿ ನಡೆಯುವ ವಾರ್ಷಿಕ ಕಂಬಳ ಓಟಕ್ಕೆ ತಮ್ಮ ಕುಟುಂಬದೊಂದಿಗೆ ಹೋಗುತ್ತಿದ್ದರು.
ಕರಾವಳಿಯಲ್ಲಿ ಆ ಸಮಯದಲ್ಲಿ ‘ಅಜಲು’ ಪದ್ಧತಿ ಚಾಲ್ತಿಯಲ್ಲಿತ್ತು. ಅಸ್ಪೃಶ್ಯತೆ ಸೇರಿ ಹಲವು ಕಟ್ಟಲೆಗಳನ್ನು ವಿಧಿಸುವ ಮೂಲಕ ಕೊರಗ ಬುಡಕಟ್ಟು ಸಮುದಾಯದವರನ್ನು ನಿಕೃಷ್ಟವಾಗಿ ನಡೆಸಿಕೊಳ್ಳುವ ಪದ್ಧತಿ ಇದಾಗಿತ್ತು.
‘ಕೊರಗ ಸಮುದಾಯದವರು ‘ಪನಿ ಕುಲ್ಲುನು’ (ತುಳು ಭಾಷೆಯಲ್ಲಿ ಇಬ್ಬನಿಯಲ್ಲಿ ಕುಳಿತುಕೊಳ್ಳುವುದು) ಎಂಬ ಸಂಪ್ರದಾಯವನ್ನು ಆಚರಿಸಬೇಕಿತ್ತು. ಕಂಬಳಕ್ಕೂ ಮೊದಲು ಕೊರೆಯುವ ಚಳಿಯಲ್ಲಿಯೇ ಇಡೀ ರಾತ್ರಿ ಕಂಬಳದ ಗದ್ದೆಯನ್ನು ಕಾಯಬೇಕಿತ್ತು. ಕಂಬಳ ಕಾರ್ಯಕ್ರಮಗಳಲ್ಲಿ ಕೊರಗ ಸಮುದಾಯದವರು ವಂಶಪಾರಂಪರ್ಯವಾಗಿ ಈ ಕಾರ್ಯ ಮಾಡಲೇಬೇಕಿತ್ತು, ಬೇರೆ ದಾರಿಯೇ ಇರಲಿಲ್ಲ’ ಎಂದು ಸುಶೀಲಾ ಆ ದಿನಗಳನ್ನು ನೆನಪಿಸಿಕೊಂಡರು.
ಕಂಬಳವು ಪ್ರತಿಷ್ಠಿತ ಸ್ಪರ್ಧೆಯಾದ್ದರಿಂದ ಕೆಸರುಗದ್ದೆಯನ್ನು ಯಾರಾದರೂ ಹಾಳು ಮಾಡಬಹುದು ಎಂಬ ಕಾರಣಕ್ಕಾಗಿ ಈ ರೀತಿ ಕಾಯುವ ವ್ಯವಸ್ಥೆ ಇತ್ತು. ಕೋಣಗಳಿಗೆ ಗದ್ದೆಯು ಸುರಕ್ಷಿತವೇ ಎಂದು ಪರಿಶೀಲಿಸಲು ಮತ್ತು ಕಂಬಳದ ಗದ್ದೆಯಲ್ಲಿ ಗಾಜಿನ ಚೂರುಗಳು ಅಥವಾ ಕಲ್ಲುಗಳು ಇವೆಯೇ ಎಂದು ಪರೀಕ್ಷಿಸಲು ಸ್ಪರ್ಧೆ ನಡೆಯುವ ಒಂದೆರಡು ತಾಸುಗಳ ಮೊದಲು ಕಂಬಳ ಗದ್ದೆಯಲ್ಲಿ ಬರಿಗಾಲಲ್ಲಿ ಕೊರಗರು ಓಡಬೇಕಿತ್ತು. 1990ರಲ್ಲಿ ಈ ಪದ್ಧತಿಯನ್ನು ಅವರ ಊರಲ್ಲಿ ನಿಲ್ಲಿಸಲಾಯಿತು. ಆದರೆ ಹಲವು ರೀತಿಯ ‘ಅಜಲು’ ಪದ್ಧತಿಗಳು ಈಗಲೂ ಚಾಲ್ತಿಯಲ್ಲಿವೆ ಎನ್ನುತ್ತಾರೆ 45 ವರ್ಷ ವಯಸ್ಸಿನ ಸುಶೀಲಾ.
ಸುಶೀಲಾ ಏಳನೇ ವಯಸ್ಸಿನಲ್ಲಿಯೇ ಇಂಥ ತಾರತಮ್ಯಗಳನ್ನು ಗಮನಿಸಲು ಆರಂಭಿಸಿದ್ದರು. 12ನೇ ವಯಸ್ಸಿನಲ್ಲಿ ಒಮ್ಮೆ ಗ್ರಾಮದ ಪ್ರಬಲ ವರ್ಗದ ವ್ಯಕ್ತಿಯೊಬ್ಬರು ಕಾಯಿ ಗೆರಟೆಯಲ್ಲಿ ಕುಡಿಯುವ ನೀರು ನೀಡಿದ್ದರು. ಇದೊಂದು ಅಸ್ಪೃಶ್ಯತೆ ಆಚರಣೆ ಎಂದು ತಿಳಿದ ಸುಶೀಲಾ ಬಾಯಾರಿದ್ದರೂ ನೀರು ಕುಡಿಯದೆ ವಾಪಸ್ ಬಂದಿದ್ದರು.
2011ರ ಜನಗಣತಿಯ ಪ್ರಕಾರ ಸುಮಾರು 16,000 ಜನಸಂಖ್ಯೆಯನ್ನು ಹೊಂದಿರುವ ಈ ಸಮುದಾಯವು ಉಡುಪಿ, ದಕ್ಷಿಣ ಕನ್ನಡ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಹರಡಿಕೊಂಡಿದೆ.
ಕೊರಗರನ್ನು ಅಮಾನವೀಯವಾಗಿ ನಡೆಸಿಕೊಳ್ಳುವ ಸುಮಾರು 60 ‘ಅಜಲು’ ಪದ್ಧತಿಗಳಿವೆ. ಆದರೆ ಕರ್ನಾಟಕ ಕೊರಗರ (ಅಜಲು ಪದ್ಧತಿ ನಿಷೇಧ) ಕಾಯ್ದೆ–2000 ಜಾರಿಗೆ ಬರುವವರೆಗೂ ಇವುಗಳನ್ನು ಬಹಿರಂಗವಾಗಿ ಆಚರಿಸಲಾಗುತ್ತಿತ್ತು. ಆದರೆ ಅಜಲು ನಿಷೇಧವಾಗಿ ಎರಡೂವರೆ ದಶಕಗಳ ನಂತರವೂ ಬಹುಪಾಲು ಕೊರಗರು ಗುಲಾಮಗಿರಿ, ಸಾಮಾಜಿಕ ಪ್ರತ್ಯೇಕತೆ ಮತ್ತು ತಾರತಮ್ಯದ ಸರಪಳಿಗಳಿಂದ ಮುಕ್ತರಾಗಲು ಇನ್ನೂ ಹೆಣಗಾಡುತ್ತಿದ್ದಾರೆ.
ಕೊರಗರು ಘನತೆಯ ಜೀವನವನ್ನು ನಡೆಸಲು ಅನುವು ಮಾಡಿಕೊಡಲು 1998ರಲ್ಲಿ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ ಎಂಬ ರಾಜ್ಯ ಒಕ್ಕೂಟವನ್ನು ರಚಿಸಲಾಯಿತು. ಪರಿಣಾಮವಾಗಿ ಜಾತಿ ತಾರತಮ್ಯ, ಹಿಂಸಾಚಾರದ ಘಟನೆಗಳು ಗಣನೀಯವಾಗಿ ಕಡಿಮೆಯಾಗಿವೆ. ಆದರೆ ಅಜಲುಗಳನ್ನು ರಹಸ್ಯವಾಗಿ ಆಚರಿಸುವ ಹಲವು ನಿದರ್ಶನಗಳಿವೆ.
ಇತ್ತೀಚೆಗೆ ಪ್ರಬಲ ವರ್ಗದ ಕುಟುಂಬವೊಂದು ವೃದ್ಧ ಕೊರಗ ದಂಪತಿಯನ್ನು ಪಂಚಮ ದಾನ ಮಾಡುವಂತೆ ಒತ್ತಾಯಿಸಿತ್ತು. ಪ್ರಬಲ ವರ್ಗದ ಕುಟುಂಬಗಳಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಅವರ ಕೂದಲು ಮತ್ತು ಉಗುರುಗಳನ್ನು ಆಹಾರದೊಂದಿಗೆ ಬೆರೆಸಿ ಅದನ್ನು ಕೊರಗ ವ್ಯಕ್ತಿಗೆ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ರೋಗದಿಂದ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ. ಈ ಅನಿಷ್ಟ ಪದ್ಧತಿಗೆ ಕೊನೆ ಹಾಡಲು ದಿನವೂ ಹೋರಾಟ ನಡೆಸುತ್ತಿದ್ದೇವೆ ಎನ್ನುತ್ತಾರೆ ಸುಶೀಲಾ.
ತಮ್ಮ ಹಳ್ಳಿಯಲ್ಲಿ ಕೈಯಿಂದ ಮಲಗುಂಡಿ ಸ್ವಚ್ಛ ಮಾಡುವ ಪದ್ಧತಿ ವಿರುದ್ಧ ಏಕಾಂಗಿಯಾಗಿ ಹೋರಾಟ ನಡೆಸಿ ಈ ಅಮಾನವೀಯ ಪದ್ಧತಿಗೆ ಕೊನೆ ಹಾಡಿದರು. ದಶಕದ ಹಿಂದೆ, ತನ್ನ ಕುಟುಂಬದ ಸದಸ್ಯರು ಶ್ರೀಮಂತ ಕುಟುಂಬದ ಮನೆಯ ಮಲಗುಂಡಿ ಸ್ವಚ್ಛತೆಯಲ್ಲಿ ತೊಡಗಿದ್ದರು ಎಂದು ಕೇಳಿದ ಸುಶೀಲಾ ಪೊಲೀಸರಿಗೆ ದೂರು ನೀಡಿದರು. ಈ ಪ್ರಕರಣವು ಮುಚ್ಚಿಹೋಗಿದ್ದರೂ, ಒಳಚರಂಡಿ, ಶೌಚಗುಂಡಿಗಳ ಸ್ವಚ್ಛತೆಗೆ ಪಂಚಾಯಿತಿಯು ಯಂತ್ರಗಳನ್ನು ಖರೀದಿಸುವವರೆಗೂ ಪಟ್ಟು ಹಿಡಿದು ಸಾಧಿಸಿದರು.
1994ರಲ್ಲಿ ಕೊರಗ ಸಮುದಾಯದ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಅಧ್ಯಯನಕ್ಕಾಗಿ ರಚನೆಯಾದ ಮಹಮ್ಮದ್ ಪೀರ್ ಸಮಿತಿಯು ಪ್ರತಿ ಕುಟುಂಬಕ್ಕೆ 2.5 ಎಕರೆ ಮಂಜೂರು ಮಾಡಲು ಶಿಫಾರಸು ಮಾಡಿತ್ತು. ಶಿಫಾರಸು ಮಾಡಿ ಮೂರು ದಶಕಗಳು ಕಳೆದರೂ ಭೂಮಿಯ ಹಕ್ಕು ವಿವಾದಾಸ್ಪದವಾಗಿಯೇ ಉಳಿದಿದೆ. ಸುಶೀಲಾ ಅವರ ನಿರಂತರ ಹೋರಾಟಕ್ಕೆ ಇದೂ ಪ್ರಮುಖ ಕಾರಣವಾಗಿದೆ. ‘ಉಡುಪಿ ಜಿಲ್ಲೆಯಲ್ಲಿ ಮಂಜೂರಾದ 400 ಎಕರೆ ಜಮೀನಿನ ಪೈಕಿ 100 ಎಕರೆ ಮಾತ್ರ ಕೃಷಿಗೆ ಯೋಗ್ಯವಾಗಿದೆ. ಹಲವು ಪ್ರದೇಶಗಳಲ್ಲಿ ಭೂಮಿ ವಾಸಕ್ಕೂ ಯೋಗ್ಯವಾಗಿಲ್ಲ’ ಎಂದು ಅವರು ಹೇಳುತ್ತಾರೆ.
ಮೂಲ್ಕಿ ತಾಲ್ಲೂಕಿನಲ್ಲಿ 30 ಕುಟುಂಬಗಳಿಗೆ ಮಂಜೂರಾಗಿದ್ದ ಜಮೀನು ಭೂಕುಸಿತ ಪೀಡಿತ ಪ್ರದೇಶದಲ್ಲಿತ್ತು. ಪರ್ಯಾಯ ಜಮೀನು ಮಂಜೂರು ಮಾಡುವಂತೆ ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಫಲ ಸಿಗದ ಕಾರಣ ಸುಶೀಲಾ ಮತ್ತು ಅವರ ತಂಡ ಸರ್ಕಾರಿ ಭೂಮಿಯನ್ನು ಸಾಂಕೇತಿಕವಾಗಿ ಒತ್ತುವರಿ ಮಾಡಿತ್ತು. ಬಳಿಕ ಎಚ್ಚೆತ್ತ ತಾಲ್ಲೂಕು ಆಡಳಿತ ಕೊರಗ ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ಪರ್ಯಾಯ ಜಮೀನು ಮಂಜೂರು ಮಾಡಿದೆ.
1998ರಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕೆಲಸ ಪಡೆದ ಸುಶೀಲಾ ಅಂಗನವಾಡಿಯಲ್ಲಿ ಉದ್ಯೋಗ ಪಡೆದ ಮೊದಲ ಕೊರಗ ಮಹಿಳೆಯರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ‘ನಾನು ಉದ್ಯೋಗಕ್ಕೆ ಸೇರುವವರೆಗೂ ಕೊರಗ ಮಕ್ಕಳು ಅಂಗನವಾಡಿಗೆ ದಾಖಲಾಗುತ್ತಿರಲಿಲ್ಲ. ಈಗ ಅಂಗನವಾಡಿ ಕೇಂದ್ರವು ಸಮುದಾಯದ ಕಲಿಕಾ ಕೇಂದ್ರವಾಗಿ ಪರಿವರ್ತನೆಯಾಗಿದೆ’ ಎಂದು ಹೇಳುವಾಗ ಸುಶೀಲಾ ಅವರ ಮುಖದಲ್ಲಿ ಹೆಮ್ಮೆಯ ಭಾವ ಕಾಣುತ್ತಿತ್ತು.
ಒಕ್ಕೂಟದ ಸದಸ್ಯರು ಸಂಘಟನೆಯಲ್ಲಿ ಸುಶೀಲಾ ಅವರ ಕ್ಷಿಪ್ರ ಬೆಳವಣಿಗೆಗೆ ಸಾಕ್ಷಿಯಾಗಿದ್ದಾರೆ. ಸುಶೀಲಾ ಎರಡನೇ ಅವಧಿಗೆ ಒಕ್ಕೂಟದ ಅಧ್ಯಕ್ಷೆಯಾಗಿರುವುದು ಅವರ ಸಾಮರ್ಥ್ಯ ಮತ್ತು ಒಕ್ಕೂಟದ ಸದಸ್ಯರಿಗೆ ಅವರ ಮೇಲೆ ಇರುವ ನಂಬಿಕೆಯನ್ನು ಪ್ರತಿಫಲಿಸುತ್ತದೆ.
‘ಅನಾದಿಕಾಲದಿಂದ ಸಮುದಾಯವು ಶೋಷಣೆಗೆ ಒಳಗಾಗಿರುವುದರಿಂದ ಸಮುದಾಯದ ಜನರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಪರಿಣಾಮ ಅವರಲ್ಲಿ ಕ್ಷಯ, ಚರ್ಮರೋಗಗಳಂತಹ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿವೆ. ಹೀಗಾಗಿ ಕೊರಗ ಸಮುದಾಯದ ಆರೋಗ್ಯ ಮತ್ತು ಜೀವನಮಟ್ಟ ಸುಧಾರಣೆಗಾಗಿ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಸುಶೀಲಾ ಶ್ರಮ ವಹಿಸುತ್ತಿದ್ದಾರೆ’ ಎಂದು ಉಡುಪಿಯ ಬುಡಕಟ್ಟು ಜನರ ಕಲ್ಯಾಣ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ನಾರಾಯಣಸ್ವಾಮಿ ಎಂ. ತಿಳಿಸಿದರು.
ಕೊರಗರ ಸಾಂಪ್ರದಾಯಿಕ ಉದ್ಯೋಗವಾದ ಬುಟ್ಟಿ ನೇಯ್ಗೆಗಾಗಿ ಸ್ಥಾಪನೆಯಾದ ಸಹಕಾರಿ ಸಂಘವನ್ನು ಪುನರುಜ್ಜೀವನಗೊಳಿಸಲು ಸುಶೀಲಾ ಸತತ ಪ್ರಯತ್ನ ಮಾಡುತ್ತಿದ್ದಾರೆ. ‘ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಚ್ಚಾ ವಸ್ತುಗಳನ್ನು ಬೆಳೆಯಲು ಸಮುದಾಯವನ್ನು ಪ್ರೋತ್ಸಾಹಿಸುತ್ತಿದ್ದೇವೆ’ ಎಂದು ಅವರು ಹೇಳುತ್ತಾರೆ.
ಕೊರಗ ಸಮುದಾಯವು ಒಂದು ಮಹತ್ವದ ಘಟ್ಟದಲ್ಲಿರುವಾಗ, ಸಮುದಾಯದ ಜನರಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮತ್ತು ಅವರ ಅಸ್ಮಿತೆಯನ್ನು ಹಾಗೆಯೇ ಉಳಿಸಿಕೊಳ್ಳಲು ಸುಶೀಲಾ ಕಾರ್ಯೋನ್ಮುಖರಾಗಿದ್ದಾರೆ. ಇದನ್ನು ಸಾಧಿಸಲು ಪ್ರತಿರೋಧ ಮತ್ತು ಸಬಲೀಕರಣ ಎಂಬ ಪಥಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಅನುವಾದ: ಕೀರ್ತಿಕುಮಾರಿ ಎಂ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.