ಭಾರತೀಯ ಚಿತ್ರರಂಗಕ್ಕೆ ಕನ್ನಡ ಸಿನಿಮಾ ನೀಡಿದ ಅಪೂರ್ವ ಕೊಡುಗೆಗಳಲ್ಲೊಂದು, 1958ರಲ್ಲಿ ತೆರೆಕಂಡ ‘ಸ್ಕೂಲ್ ಮಾಸ್ಟರ್.’ ಬಿ.ಆರ್. ಪಂತುಲು ನಿರ್ದೇಶನದ ಈ ಸಿನಿಮಾದ ಎರಡು ಗೀತೆಗಳು ಮೂರ್ನಾಲ್ಕು ದಶಕಗಳ ಕಾಲ ಶಾಲಾಪರಿಸರದಲ್ಲಿ ಪ್ರಸಿದ್ಧವಾಗಿದ್ದವು. ಮೊದಲನೆಯದು, ಕೆ. ಪ್ರಭಾಕರ ಶಾಸ್ತ್ರಿ ವಿರಚಿತ ‘ಬನ್ನಿರೈ ಬನ್ನಿರೈ ಗುರುಸೇವೆಯೆ ನಮ್ಮ ಸರ್ವೋದಯ, ಗುರುಮನೆಯೆ ನಮ್ಮೂರ ದೇವಾಲಯ.’ ಎರಡನೆಯದು, ಅನೇಕ ಶಾಲೆಗಳಲ್ಲಿ ಪ್ರಾರ್ಥನಾಗೀತೆಯಾಗಿದ್ದ ಸೋಸಲೆ ಅಯ್ಯಾ ಶಾಸ್ತ್ರಿಗಳ ‘ಸ್ವಾಮಿದೇವನೆ ಲೋಕಪಾಲನೆ’ ರಚನೆ.
‘ಸ್ಕೂಲ್ ಮಾಸ್ಟರ್’ ಸಿನಿಮಾದ ಗೀತೆಗಳು ಹೊಸ ತಲೆಮಾರಿನ ಬಹುತೇಕರಿಗೆ ಪರಿಚಿತ ಇಲ್ಲದಿರಬಹುದು. ಆದರೆ, ಆ ಗೀತೆಗಳ ಆಶಯ ಇಂದಿನ ವಿದ್ಯಾರ್ಥಿಗಳಲ್ಲೂ ಇದೆ ಎನ್ನುವುದಕ್ಕೆ, ಪತ್ರಿಕೆಗಳಲ್ಲಿ ಆಗಾಗ ಪ್ರಕಟಗೊಳ್ಳುವ ಹಳೆಯ ವಿದ್ಯಾರ್ಥಿಗಳ ಸಮ್ಮಿಲನದ ಫಲಶ್ರುತಿಯ ವರದಿಗಳು ನಿದರ್ಶನದಂತಿವೆ. ಹತ್ತಾರು ವರ್ಷಗಳ ನಂತರ ಹಳೆಯ ವಿದ್ಯಾರ್ಥಿಗಳು ಒಟ್ಟಿಗೆ ಸೇರಿ ಸಂಭ್ರಮಿಸುವ, ಗುರುವಂದನೆ ನಡೆಸುವ, ತಾವು ಕಲಿತ ಶಾಲೆಗಳಿಗೆ ಕೊಡುಗೆ ನೀಡುವ ವಿದ್ಯಮಾನಗಳು ನಾಡಿನ ಬೇರೆ ಬೇರೆ ಕಡೆಗಳಲ್ಲಿ ನಡೆಯುತ್ತಿವೆ. ಶಿಕ್ಷಣ ವಹಿವಾಟಿನ ರೂಪ ತಾಳಿ, ಗುರು–ಶಿಷ್ಯರ ನಡುವಣ ಸಂಬಂಧ ಆರ್ದ್ರತೆ ಕಳೆದುಕೊಂಡಿದೆ ಎನ್ನುವ ದೂರು ದುಮ್ಮಾನವನ್ನು ಸುಳ್ಳು ಮಾಡುವಂತೆ ಬೆಂಗಳೂರಿನ ಬಡಾವಣೆಯೊಂದರ ಶಾಲೆಯಿಂದ ಹಿಡಿದು ಕಲ್ಯಾಣ ಕರ್ನಾಟಕದ ಹಳ್ಳಿಯೊಂದರ ಪುಟ್ಟ ಶಾಲೆಯವರೆಗೂ ಹಳೆಯ ವಿದ್ಯಾರ್ಥಿಗಳ ಸಮಾವೇಶ–ಸಮ್ಮಿಲನಗಳು ನಡೆಯುತ್ತಲೇ ಇವೆ.
ಸರ್ಕಾರಿ ಶಾಲೆಗಳ ಮಕ್ಕಳಿಗೆ ತಮಗೆ ಅಕ್ಷರಜ್ಞಾನ ನೀಡಿದ ವಿದ್ಯಾಸಂಸ್ಥೆಗಳ ಬಗ್ಗೆ ವಿಶೇಷ ಅಕ್ಕರೆ. ಶಾಲೆಯ ನೆನಪುಗಳನ್ನು ಹುಡುಕಿಕೊಂಡು ಹೋಗುವವರಲ್ಲಿ ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಹೆಚ್ಚು. ಪ್ರವೇಶಕ್ಕೆ ದೊಡ್ಡ ಮೊತ್ತದ ಹಣ ಪಡೆಯುವ ಖಾಸಗಿ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳ ಮನಸ್ಸಿನಲ್ಲಿ ನೆನಪಿನ ನವಿಲುಗರಿಗಳನ್ನು ಉಳಿಸುವುದು ತೀರಾ ಕಡಿಮೆ;ನೆನಪುಗಳಿದ್ದರೂ, ಅವು ತೀರಾ ಸೀಮಿತ. ಖಾಸಗಿ ವಿದ್ಯಾಸಂಸ್ಥೆಗಳ ಜೊತೆಗಿನ ನಂಟು ‘ಕೊಡು ಕೊಳು’ ರೂಪದಲ್ಲಿರುವುದೇ ಹೆಚ್ಚು. ಆ ಕಾರಣದಿಂದಲೇ ಧೈರ್ಯವಾಗಿ ಹೇಳಬಹುದು, ಸರ್ಕಾರಿ ಶಾಲೆಗಳ ಸಂಬಂಜ ದೊಡ್ಡದು ಕನಾ!
ಸರ್ಕಾರಿ ಶಾಲೆಗಳ ಜೊತೆಗಿನ ನಂಟೆಂದರೆ ಅದು ಗುರುಗಳೊಂದಿಗಿನ ಸಂಬಂಧವೂ ಹೌದು. ನಮ್ಮ ಎದೆಯಂಗಳವನ್ನು ತೇವ ಮಾಡಿಕೊಂಡರೆ ಶಿಕ್ಷಕರ ಜಂಬೂಸವಾರಿಯೇ ಜೀವಗೊಂಡಂತಾಗುತ್ತದೆ. ಬಂಕಾಪುರದ ರನ್ನಮಯ್ಯನನ್ನು ಎದೆಗೆ ಬೀಳಿಸಿದ ಮೇಷ್ಟ್ರು, ಎದೆಗಿಳಿಯದ ಇಂಗ್ಲಿಷನ್ನು ಕಂಠಪಾಠದ ಮೂಲಕ ಗಂಟಲಿಗೆ ತುರುಕಿದ ಮೇಡಂ, ಮುಂಗಾರುಮಳೆಯಂತೆ ಎದೆಯಲ್ಲಿ ಉಳಿದುಹೋದ ಸಮಾಜಶಾಸ್ತ್ರದ ಶಿಕ್ಷಕ, ಭಿನ್ನರಾಶಿಯನ್ನು ಭಿನ್ನಭಾವ ತೋರದೆ ಕಲಿಸಿದ ಲೆಕ್ಕದಮೇಷ್ಟ್ರು, ಸಮವಸ್ತ್ರ ತೊಡದೆ ಬಂದುದಕ್ಕಾಗಿ ಹುಣಸೆ ಬರಲಲ್ಲಿ ಮೊಳಕಾಲುಗಳ ಮೇಲೆ ಚಿತ್ತಾರ ಮೂಡಿಸಿದ ಪೀಟಿ ಟೀಚರ್‍ರು... ಎಂದುರೋ ಮಹಾನುಭಾವುಲು...
ಹರಿಶ್ಚಂದ್ರ ನೃಪಾಲ ರಾಜ್ಯತ್ಯಾಗ ಮಾಡುವಾಗ, ಪ್ರಜಾಸಮೂಹ ಶೋಕಿಸುತ್ತದೆ. ಅಯೋಧ್ಯೆಯ ಪ್ರಜೆಗಳ ದುಃಖವನ್ನು ಕಂಡು, ‘ಪುರದ ಪುಣ್ಯಂ ಪುರುಷರೂಪಿಂದೆ ಪೋಗುತಿದೆ’ ಎನ್ನುತ್ತಾನೆ ‘ಹರಿಶ್ಚಂದ್ರ ಕಾವ್ಯ’ದ ರಾಘವಾಂಕ. ಆ ಮಾತು ಸರ್ಕಾರಿ ಶಾಲೆಗಳಲ್ಲಿ ಆಗಾಗ ಜೀವಗೊಳ್ಳುತ್ತಿರುತ್ತದೆ. ಇಷ್ಟದ ಶಿಕ್ಷಕನೋ ಶಿಕ್ಷಕಿಯೋ ವರ್ಗವಾಗಿ ಹೋದಾಗ, ‘ಶಾಲೆಯ ಪುಣ್ಯ ಗುರುವಿನ ರೂಪದಲಿ ಹೋಗುತಿದೆ’ ಎಂಬಂತೆ ಮಕ್ಕಳು ಕಣ್ಣೀರಿಡುವ ವಿಸ್ಮಯಗಳು ಮೊಬೈಲ್ ಕಾಲಘಟ್ಟದಲ್ಲೂ ಘಟಿಸುತ್ತಿವೆ. ‘ಪುರದ ಪುಣ್ಯ’ದ ರೂಪದಲ್ಲಿ ಕಂಡ ವರ್ಗವಾದ ಗುರುವನ್ನು ತಮ್ಮೂರಿನ ಶಾಲೆಯಲ್ಲಿಯೇ ಉಳಿಸಿಕೊಳ್ಳಲು ಗ್ರಾಮಸ್ಥರು ಧ್ವನಿಯೆತ್ತಿದ ನಿದರ್ಶನಗಳೂ ಇವೆ. ಕಾಲ ಯಾವುದಾದರೇನು, ಗುರುವಿನ ಗುರುತ್ವ ನಿಚ್ಚಂ ಪೊಸತು.
ನಾಡಿನ ಯಾವುದಾದರೂ ಭಾಗದ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಕಲರವ ಆಗಾಗ ಅನುರಣನಗೊಳ್ಳುತ್ತಿರುತ್ತದೆ. ಶಾಲೆ ಕಾಲೇಜಿನ ನಂತರ ಬದುಕಿನ ದಾರಿಗಳು ಕವಲೊಡೆಯುತ್ತಿದ್ದವು. ಹಾಗಾಗಿ, ವಿದ್ಯಾಭ್ಯಾಸದ ನಂತರವೂ ಸ್ನೇಹ ಮುಂದುವರೆಯುವುದು ಸುಲಭವಾಗಿರಲಿಲ್ಲ. ಆ ತೊಡಕು ಈಗಿಲ್ಲ. ಅಂಗೈಯಲ್ಲಿನ ಮೊಬೈಲ್ ಫೋನ್‌ಗಳ ತರಂಗಗಳು ವಿಶ್ವವ್ಯಾಪಿ ಆಗಿರುವಾಗ, ಕಳೆದುಹೋದ ಸ್ನೇಹದ ತಂತುಗಳು ಕೂಡಿಕೊಳ್ಳುವುದು ಸುಲಭವಾಗಿದೆ. ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಂಗಳೆಲ್ಲ ಸ್ನೇಹಿತರನ್ನು ಒಗ್ಗೂಡಿಸುವ ಚಾವಡಿಗಳಾಗಿವೆ. ಸಾಮಾಜಿಕ ಜಾಲತಾಣಗಳ ಮೂಲಕ ಹಳೆಯ ವಿದ್ಯಾರ್ಥಿಗಳು ಒಗ್ಗೂಡಿದಾಗ ನಂಟು ಕೂಡಬಹುದು; ನಂಟಿನ ಅಂಟು ಬಲವಾಗಬೇಕಲ್ಲ? ಆ ಅಂಟಿಗೆ ಬಲ ತರುವುದು ಶಾಲೆಯ ನೆನಪುಗಳು.
ಫೇಸ್‌ಬುಕ್ ಇಲ್ಲವೇ ವಾಟ್ಸ್‌ಆ್ಯಪ್ ಗುಂಪುಗಳ ಸ್ನೇಹಕೂಟದ ಮುಂದಿನ ನಡೆಯೇ, ಎಲ್ಲರೂ ಒಂದೆಡೆ ಸೇರಿ ಸಂಭ್ರಮಿಸುವುದು. ಅಂಥ ಸಂಭ್ರಮಕ್ಕೆ ಶಾಲಾಕಾಲೇಜುಗಳು ವೇದಿಕೆಯಾಗುತ್ತವೆ. ‘ಸ್ನೇಹಕೂಟ’, ‘ಸಮ್ಮಿಲನ’, ‘ಸಮಾವೇಶ’ – ಹೆಸರು ಬೇರೆಯಾದರೂ ಉದ್ದೇಶ ಒಂದೇ: ಬಾಲ್ಯದ ನೆನಪುಗಳನ್ನು ವರ್ತಮಾನದಲ್ಲಿ ಹಸಿರಾಗಿಸುವುದು.
ಹಳೆಯ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಗುರುಗಳೇ ಕೇಂದ್ರಬಿಂದು. ಗುರು–ಶಿಷ್ಯರ ಸಮ್ಮಿಲನದ ಭಾವತೀವ್ರತೆಯನ್ನು ಹಿಡಿದಿಡುವುದು ಸುಲಭವಲ್ಲ. ಶಾಲಾಕಟ್ಟಡದಂತೆ ಗುರುಗಳೂ ಈಗ ದಣಿದಿದ್ದಾರೆ. ಕಟ್ಟಡದ ಮಾಸಲು ಬಣ್ಣ ಹಾಗೂ ಗೋಡೆಗಳಲ್ಲಿನ ಬಿರುಕು ಗೆರೆಗಳಂತೆ, ಮೇಷ್ಟ್ರ ತಲೆಗೂದಲು ಬೆಳ್ಳಗಾಗಿದೆ, ಮುಖದಲ್ಲಿ ಸುಕ್ಕುಗಳು ಮೂಡಿವೆ. ಮಕ್ಕಳ ರೂಪಾಂತರ ಮತ್ತೂ ದೊಡ್ಡದು. ಸಿಂಬಳ ಸುರಿಸುತ್ತಿದ್ದ ‘ಗೊಣ್ಣೆಸುರುಕ’ ಈಗ ವೈದ್ಯ. ನೆತ್ತಿಗೆ ಸದಾ ಮೆತ್ತಿಕೊಂಡಿರುತ್ತಿದ್ದ ಹರಳೆಣ್ಣೆ ಮುಖದಲ್ಲೂ ಜಿನುಗಿ, ‘ಜಿಡ್ಡಮ್ಮ’ ಎಂದು ಸಹಪಾಠಿಗಳಿಂದ ಕರೆಸಿಕೊಳ್ಳುತ್ತಿದ್ದ ನಾಗವೇಣಿಯೀಗ ಭೌತಶಾಸ್ತ್ರದ ಉಪನ್ಯಾಸಕಿ. ಕೆಲಸಕ್ಕೆ ಬಾರದವರು ಎಂದು ಶಿಕ್ಷಕರ ಬಿರುನುಡಿಗಳಿಗೆ ಗುರಿಯಾಗಿದ್ದ ಹಾಗೂ ಸೀಮೆಸುಣ್ಣ, ರೂಲುದೊಣ್ಣೆ, ಕಟ್ಟಿಗೆಯ ಅಳತೆಪಟ್ಟಿಗಳಿಗೆ ಗುರಿಯಾಗುತ್ತಿದ್ದ ಅವನು ಇವನು ಅವಳು ಇವಳು ಏನೆಲ್ಲಾ ಆಗಿದ್ದಾರೆ... ಪೊಲೀಸ್, ಶುಶ್ರೂಷಕಿ, ಕಾಲ್‌ಸೆಂಟರ್ ಉದ್ಯೋಗಿ, ಎಂಜಿನಿಯರ್... ರಾಜಕಾರಣದ ಪೋಷಾಕು ತೊಟ್ಟ ವ್ಯಕ್ತಿಯೂ ಅಲ್ಲಿದ್ದಾನೆ. ಕೊರಳು ಬೆರಳುಗಳನ್ನು ಚಿನ್ನದಿಂದ ಸಿಂಗರಿಸಿಕೊಂಡ ರಿಯಲ್ ಎಸ್ಟೇಟ್ ಉದ್ಯಮಿಯೂ ಇದ್ದಾನೆ. ಪುಟ್ಟ ಶಾಲೆಯೊಂದರ ಬಿತ್ತುಗಳು ದೇಶವನ್ನೂ ದಾಟಿ ಎಲ್ಲೆಲ್ಲೋ ಚಿಗುರಾಗಿ ಹೂವಾಗಿ ಹಣ್ಣಾಗಿ ನಳನಳಿಸುತ್ತಿವೆ...
ತೆನೆ ತೂಗಿ ನಿಂತ ಫಸಲನ್ನು ನೋಡಿ ಕಣ್ಣುಗಳಲ್ಲಿ ಕಾಮನಬಿಲ್ಲು ತುಂಬಿಕೊಳ್ಳುವ ರೈತನ ಪರಿಸ್ಥಿತಿ ಶಿಕ್ಷಕರದು. ತಾವು ಅಕ್ಷರ ತಿದ್ದಿಸಿದ ಮಕ್ಕಳು, ತಮ್ಮ ನಿರೀಕ್ಷೆಗಳೆಲ್ಲವನ್ನೂ ಮೀರಿ ಏನೆಲ್ಲಾ ಆಗಿರುವ ಕ್ಷಣ ಕಣ್ಣೆದುರು ಸಾಕ್ಷಾತ್ಕಾರ
ಗೊಳ್ಳುವುದಿದೆಯಲ್ಲ, ಅದಕ್ಕಿಂತಲೂ ಮಿಗಿಲಾದ ಅಮೃತಗಳಿಗೆ ಗುರುವಿನ ಬಾಳಿನಲ್ಲಿ ಬರುವುದು ಸಾಧ್ಯವಿದೆಯೇ?
ಈಗ, ಏನೆಲ್ಲ ಪೋಷಾಕುಗಳಲ್ಲಿ ನಿಂತಿದ್ದರೂ, ಆ ಪೋಷಾಕುಗಳ ಹಿಂದಿರುವುದು ಅದೇ ಮಕ್ಕಳು. ಅದೇ ಗೌರವ, ಅದೇ ವಿನಯ ಹಾಗೂ ಗುರುಗಳ ಬಗ್ಗೆ ಪ್ರಯತ್ನಪೂರ್ವಕವಾಗಿ ಆವಾಹಿಸಿಕೊಂಡ ಅಂದಿನ ಭಯ.
ಸಿಹಿಮಾತು, ಸಿಹಿಯುಣಿಸು, ಆ ಕ್ಷಣ ಎಲ್ಲವೂ ಸಿಹಿ. ಅದು ಗುರುಗಳಿಗೆ ಮಣಿಯುವ ಸಮಯ. ಉಡುಗೊರೆ ನೀಡಿ ಗೌರವಿಸುವ ಕ್ಷಣ.
ಗುರುಗಳಿಗೆ ಗೌರವ ಸಂದರಷ್ಟೇ ಸಾಕೆ? ತಾವು ಕಲಿತ ಶಾಲೆಯ ಕಟ್ಟಡ ಜೀರ್ಣವಾಗಿದೆ. ಆ ಕಟ್ಟಡಗಳಲ್ಲೇ ಪುಟ್ಟ ಪುಟ್ಟ ಮಕ್ಕಳ ಕನಸುಗಳಿಗೆ ಕಾವು ದೊರೆಯುತ್ತಿದೆ. ಶಾಲೆಗೆ ಹೊಸ ರೂಪು ನೀಡುವ ಸಂಕಲ್ಪ ಹಳೆಯ ವಿದ್ಯಾರ್ಥಿ
ಗಳಲ್ಲಿ ರೂಪುಗೊಳ್ಳುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ‘ಬನ್ನಿರೈ ಬನ್ನಿರೈ...’ ಎಂದು ಪಂತುಲು ಮೇಷ್ಟ್ರ ಶಿಷ್ಯವೃಂದ ಒಂದಾಗಿ ಗುರುಮನೆಯನ್ನು ಕಟ್ಟಿಕೊಟ್ಟಂತೆ, ವರ್ತಮಾನದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಹೊಸ ರೂಪು ಪಡೆಯುತ್ತಿರುವ ಶಾಲೆಗಳೂ ಇವೆ. ಹೀಗೆ, ಹಳೆಯ ವಿದ್ಯಾರ್ಥಿಗಳಿಂದ ಹೊಸ ಸ್ವರೂಪ ಪಡೆದ ಶಾಲೆಗಳ ಕಥನಗಳನ್ನು ಯಾರಿಗಾದರೂ ಸಂಕಲಿಸುವುದು ಸಾಧ್ಯವಾದರೆ, ಆ ಕಥನ ಗುರು–ಶಿಷ್ಯ ಪರಂಪರೆಯ ಅಪೂರ್ವ ಕಥನವಾಗುವುದರ ಜೊತೆಗೆ, ಕರ್ನಾಟಕದ ಸರ್ಕಾರಿ ಶಾಲೆಗಳ ಅಧ್ಯಯನವೂ ಆದೀತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.