ಹೆಚ್ಚು ಶಿಕ್ಷಣ ಪಡೆಯದ, ಹೊಲ–ಮನೆ ಕೆಲಸಗಳಲ್ಲೇ ನಿರತರಾಗಿದ್ದ 14 ಮಹಿಳೆಯರು ಸೇರಿ ಕಟ್ಟಿದ ಸಂಘವೊಂದು ಇದೀಗ ವಿಶ್ವಮಟ್ಟದ ಹಿರಿಮೆಗೆ ಪಾತ್ರವಾಗಿದೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ತೀರ್ಥ ಎಂಬ ಪುಟ್ಟ ಗ್ರಾಮದ ಈ ಮಹಿಳೆಯರು ಪರಿಶ್ರಮ, ಬದ್ಧತೆಯಿಂದ ನಡೆಸುತ್ತಿರುವ ನೈಸರ್ಗಿಕ ಕೃಷಿ ಹಾಗೂ ಪರಿಸರ ಪ್ರೇಮವನ್ನು ಪಸರಿಸುವ ಕಾಯಕಕ್ಕೆ ವಿಶ್ವಸಂಸ್ಥೆಯ ಮನ್ನಣೆ ದೊರೆತಿದೆ.
‘ಸಹಜ ಸಮೃದ್ಧ’ ಸಂಸ್ಥೆಯ ಮಾರ್ಗದರ್ಶನದಲ್ಗಿ 2018ರಲ್ಲಿ ಸ್ಥಾಪನೆಯಾದದ್ದು ‘ಬೀಬಿ ಫಾತಿಮಾ ಮಹಿಳಾ ಸಂಘ’. ಸಿರಿಧಾನ್ಯ ಪುನರುತ್ಥಾನದಲ್ಲಿ ಗುರುತರ ಪಾತ್ರ ನಿರ್ವಹಿಸಿದ್ದಕ್ಕಾಗಿ 2025ರ ವಿಶ್ವಸಂಸ್ಥೆ ಅಭಿವೃದ್ಧಿ ಕಾರ್ಯಕ್ರಮದ (ಯುಎನ್‍ಡಿಪಿ) ‘ಈಕ್ವೇಟರ್ ಇನಿಷಿಯೇಟಿವ್’ ಪ್ರಶಸ್ತಿಗೆ ಸಂಘ ಭಾಜನವಾಗಿದೆ.
ಕುಂದಗೋಳ, ಶಿಗ್ಗಾವಿ ಭಾಗದಲ್ಲಿ ಈ ಮೊದಲು ಹತ್ತಿ, ಭತ್ತ, ಮೆಕ್ಕೆಜೋಳವನ್ನು ಹೆಚ್ಚಾಗಿ ಬೆಳೆಯಲಾಗುತ್ತಿತ್ತು. ಸಿರಿಧಾನ್ಯ ಬೆಳೆಯುವಂತೆ ಸಂಘದ ಸದಸ್ಯರು ಅರಿವು ಮೂಡಿಸಲು ಮುಂದಾದಾಗ ಬಹುತೇಕರು ಒಪ್ಪಲಿಲ್ಲ. ಸತತ ಪ್ರಯತ್ನದ ಫಲವಾಗಿ ಇದೀಗ ಈ ಭಾಗದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಸಿರಿಧಾನ್ಯ ನಳನಳಿಸುತ್ತಿದೆ. ರೈತರು ಉತ್ತಮ ಆದಾಯ ಗಳಿಸುವಂತಾಗಿದೆ.
‘ಸಿರಿಧಾನ್ಯ ಬೆಳೆಯಲು ಹೆಚ್ಚು ಖರ್ಚು ಮಾಡಬೇಕಿಲ್ಲ. ಜಾನುವಾರುಗಳಿಗೆ ಮೇವು ಸಹ ಸಿಗುತ್ತದೆ. ಸಂಘದ್ದೇ ಸಂಸ್ಕರಣಾ ಘಟಕ ಇರುವುದರಿಂದ, ಸಿರಿಧಾನ್ಯಗಳ ಅಕ್ಕಿ ಮಾಡುತ್ತೇವೆ. ದೇವಧಾನ್ಯ ರೈತ ಉತ್ಪಾದಕ ಸಂಘದ ಮೂಲಕ ಮಾರುಕಟ್ಟೆಯನ್ನೂ ಸೃಷ್ಟಿಸಿಕೊಂಡಿದ್ದೇವೆ. ಸಾವಯವ ಮಳಿಗೆ, ಮೇಳಗಳಲ್ಲಿ ಬಿತ್ತನೆ ಬೀಜಗಳೊಂದಿಗೆ, ಸಿರಿಧಾನ್ಯಗಳ ರೊಟ್ಟಿ, ಪುಡಿ, ಮಾಲ್ಟ್ ತಯಾರಿಸಿ ಮಾರಾಟ ಮಾಡುತ್ತೇವೆ’ ಎನ್ನುತ್ತಾರೆ ಸಂಘದ ಅಧ್ಯಕ್ಷೆ ಬೀಬಿಜಾನ್ ಮೌಲಾಸಾಬ್ ಹಳೇಮನಿ.
‘ನಮ್ಮ ಘಟಕಕ್ಕೆ ದಕ್ಷಿಣ ಆಫ್ರಿಕಾ, ಅಮೆರಿಕ, ಸ್ವಿಟ್ಜರ್‌ಲೆಂಡ್, ಜರ್ಮನಿಯ ಪ್ರತಿನಿಧಿಗಳು ಭೇಟಿ ನೀಡಿ, ಮೆಚ್ಚುಗೆ ಸೂಚಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಹಕಾರ ಸಂಘ ಸ್ಥಾಪಿಸಿ, ಹೆಚ್ಚಿನ ಸಂಘಟನೆಗಳನ್ನು ನಮ್ಮೊಂದಿಗೆ ಸೇರಿಸಿಕೊಳ್ಳುವ ಆಲೋಚನೆ ಇದೆ. ಸಂಸ್ಕರಣಾ ಕೇಂದ್ರದಲ್ಲಿ ಎಲಿವೇಟರ್ ವ್ಯವಸ್ಥೆ ಆಗಬೇಕಿದೆ. ಬೀಜ ಬ್ಯಾಂಕ್‌ಗೆ ಸರ್ಕಾರ ಜಾಗ ನೀಡಿ, ಶಾಶ್ವತ ವ್ಯವಸ್ಥೆ ಕಲ್ಪಿಸಬೇಕಿದೆ’ ಎಂಬ ಬೇಡಿಕೆಯನ್ನು ಅವರು ಮುಂದಿಡುತ್ತಾರೆ.
ಪ್ರಶಸ್ತಿ ಕುರಿತು...
ಜೀವವೈವಿಧ್ಯ ಸಂರಕ್ಷಣಾ ಕ್ಷೇತ್ರದ ನೊಬೆಲ್ ಪುರಸ್ಕಾರ ಎಂದೇ ‘ಈಕ್ವೇಟರ್ ಇನಿಷಿಯೇಟಿವ್’ ಪ್ರಶಸ್ತಿಯನ್ನು ಪರಿಗಣಿಸಲಾಗುತ್ತದೆ. ‘ನಿಸರ್ಗ ಆಧಾರಿತ ತಾಪಮಾನ ನಿಯಂತ್ರಣಕ್ಕೆ ಮಹಿಳೆ ಹಾಗೂ ಯುವಜನರ ನಾಯಕತ್ವ’ ಎಂಬ ವಿಷಯ ಆಧರಿಸಿ ಈ ವರ್ಷದ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ನಡೆಯಿತು. 103 ದೇಶಗಳ ಸುಮಾರು 700 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಪ್ರಶಸ್ತಿಯು 10000 ಅಮೆರಿಕನ್ ಡಾಲರ್ (ಸುಮಾರು ₹ 8.5 ಲಕ್ಷ) ನಗದು ಬಹುಮಾನ ಒಳಗೊಂಡಿದೆ.
ವಿಶೇಷ ನಿಯಮ...
2020ರಲ್ಲಿ ಸ್ಥಾಪನೆಯಾದ ದೇಸಿ ಬೀಜ ಬ್ಯಾಂಕ್ ಮೂಲಕ ಸಿರಿಧಾನ್ಯದೊಂದಿಗೆ ವಿವಿಧ ಕಾಳು ತರಕಾರಿಯ 300 ವಿಧದ ಬಿತ್ತನೆ ಬೀಜಗಳನ್ನು ಸಂಘದ ವತಿಯಿಂದ ಆಸಕ್ತ ರೈತರಿಗೆ ವಿತರಿಸಲಾಗುತ್ತಿದೆ. ಅಪರೂಪದ ಧಾನ್ಯಗಳನ್ನು ಸಂಗ್ರಹಿಸಲಾಗಿದೆ. ಸಿರಿಧಾನ್ಯ ಬೆಳೆ ಉತ್ತೇಜಿಸಲು ಒಂದು ಎಕರೆಗಾಗುವಷ್ಟು ಬಿತ್ತನೆ ಬೀಜಗಳಿರುವ ಕಿಟ್‌ಗಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ. ಆನಂತರ ಒಂದು ಪೊಟ್ಟಣ ಬೀಜ ಖರೀದಿಸಿದರೆ ಅದಕ್ಕೆ ಪ್ರತಿಯಾಗಿ ಉತ್ತಮ ಫಸಲು ಬಂದ ನಂತರ ಬೀಜದ ಎರಡು ಪೊಟ್ಟಣ ನೀಡಬೇಕೆಂಬುದು ಬೀಜ ಬ್ಯಾಂಕ್‌ನ ನಿಯಮ.
ಗ್ರಾಮೀಣ ಮಟ್ಟದ ಸಂಘವು ನಮ್ಮ ಸಂಸ್ಥೆಯ ನೆರವು ಪಡೆದು ವಿಶ್ವಮಟ್ಟದಲ್ಲಿ ಸಾಧನೆ ಮಾಡಿರುವುದು ಹೆಮ್ಮೆ ತರಿಸಿದೆ. ಅಕ್ಟೋಬರ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡುವ ಮಾಹಿತಿ ದೊರೆತಿದೆ.ಜಿ. ಕೃಷ್ಣ ಪ್ರಸಾದ್ ನಿರ್ದೇಶಕ ಸಹಜ ಸಮೃದ್ಧ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.