ADVERTISEMENT

ಇತಿಹಾಸ ಪುಟ ಸೇರುತ್ತಿರುವ 'ವಾಡೆ'ಗಳು

ಇಮಾಮ್‌ಹುಸೇನ್‌ ಗೂಡುನವರ
Published 8 ನವೆಂಬರ್ 2025, 23:32 IST
Last Updated 8 ನವೆಂಬರ್ 2025, 23:32 IST
<div class="paragraphs"><p>ಸವದತ್ತಿ ತಾಲ್ಲೂಕಿನ ಶಿರಸಂಗಿಯ ವಾಡೆ&nbsp; &nbsp; </p></div>

ಸವದತ್ತಿ ತಾಲ್ಲೂಕಿನ ಶಿರಸಂಗಿಯ ವಾಡೆ   

   

ಪ್ರಜಾವಾಣಿ ಚಿತ್ರ: ಇಮಾಮ್‌ಹುಸೇನ್‌ ಗೂಡುನವರ

ಉತ್ತರ ಕರ್ನಾಟಕದಲ್ಲಿ ಕೋಟೆಗಳಿಗೆ ವಾಡೆಗಳು ಎಂದು ಹೇಳುತ್ತಾರೆ. ಈ ಭಾಗದ ಹಳ್ಳಿಗಳಲ್ಲಿ ವಾಡೆಗಳು ಕಾಣಸಿಗುತ್ತವೆ. ಹಿಂದೊಮ್ಮೆ ರಾಜವೈಭೋಗ ಕಂಡಿರುವ ಈ ದೈತ್ಯ ಕಟ್ಟಡಗಳು ಈಗ ಹೆಚ್ಚು ಕಡಿಮೆ ಇತಿಹಾಸದ ಪುಟ ಸೇರಿವೆ. ವಾಡೆಗಳು ನಮ್ಮ ನೆಲದ ಶ್ರೀಮಂತ ಸಂಸ್ಕೃತಿ ಹಾಗೂ ಆಡಳಿತ ಶಿಸ್ತಿನ ಕುರುಹುಗಳು.

ADVERTISEMENT

ಇಂಥ ವಾಡೆಗಳ ಸ್ಥಿತಿಗತಿ ಅರಿಯಲು ಹೊರಟು ನಿಂತಾಗ ಮೊದಲು ತಲುಪಿದ್ದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶಿರಸಂಗಿಗೆ. ಹೊರಗೆ ಜೀಕುವ ಮಳೆ. ಒಮ್ಮೆ ಧೋ... ಎಂದು ಸುರಿದರೆ, ಮತ್ತೊಮ್ಮೆ ವಿರಾಮ. ಈ ವೇಳೆ ಲಿಂಗರಾಜರ ವಾಡೆಗೆ ಹೋದರೆ ಅಚ್ಚರಿ. ಒಂದು ಕಾಲಕ್ಕೆ ರಾಜವೈಭವದಿಂದ ಮೆರೆದಿದ್ದ ವಾಡೆ ಸೊರಗಿತ್ತು. ವಾಡೆಯ ಬೃಹತ್‌ ಗೋಡೆ ಕುಸಿದಿದ್ದರೆ, ವಿವಿಧ ಸಾಮಗ್ರಿಗಳು ಬೇಕಾಬಿಟ್ಟಿಯಾಗಿ ಬಿದ್ದಿದ್ದವು. ಮುಖ್ಯ ಕಟ್ಟಡವೂ ಶಿಥಿಲ ಹಂತ ತಲುಪಿತ್ತು. ಅಲ್ಲಿಗೆ ಬಂದಿದ್ದ ಇಬ್ಬರು ಪ್ರವಾಸಿಗರು, ‘ಶ್ರೀಮಂತಿಕೆಯಿಂದ ಕೂಡಿದ್ದ ವಾಡೆಗೆ ಇಂಥ ಪರಿಸ್ಥಿತಿ ಬಂದಿದೆಯಲ್ಲ’ ಎಂದು ಬೇಸರದಿಂದ ಆಡಿದ ಮಾತು ಕಿವಿಗೆ ಬಿತ್ತು.

ಇದು ಈ ವಾಡೆಯೊಂದರ ಕಥೆಯಷ್ಟೇ ಅಲ್ಲ; ಕೆಲವನ್ನಷ್ಟೇ ಬಿಟ್ಟರೆ ಜಿಲ್ಲೆಯ ಬಹುತೇಕ ವಾಡೆಗಳಲ್ಲಿ ಇದೇ ಚಿತ್ರಣ ಕಂಡುಬರುತ್ತದೆ.

ಬೆಳಗಾವಿ ಜಿಲ್ಲೆಯಲ್ಲಿ ಐವತ್ತಕ್ಕೂ ಅಧಿಕ ವಾಡೆಗಳಿದ್ದವು. ಪ್ರತಿಷ್ಠಿತರು, ಆಡಳಿತಗಾರರು ಮತ್ತು ರಾಜಮನೆತನದವರು ವಾಸಕ್ಕಾಗಿ ಹಾಗೂ ಆಡಳಿತಕ್ಕಾಗಿ ಬಳಸುತ್ತಿದ್ದ ಭವ್ಯ ಕಟ್ಟಡ ಇವಾಗಿದ್ದವು.

ವಾಡೆಯೊಳಗೆ ಮುಖ್ಯ ಕಟ್ಟಡ ಇರುತ್ತಿತ್ತು. ಅದರ ಹೆಬ್ಬಾಗಿಲು ಮಜಬೂತ್‌ ಆಗಿರುತ್ತಿತ್ತು. ದೀರ್ಘ ಬಾಳಿಕೆ ಬರುವಂಥ ಕೆತ್ತನೆಗಳು, ಆಯಾ ಅರಸೊತ್ತಿಗೆ ಮತ್ತು ವಂಶಕ್ಕೆ ಸಂಬಂಧಿಸಿದ ಚಿತ್ರಗಳು, ಲಾಂಛನಗಳನ್ನು ಕಾಣಬಹುದು. ಇದಲ್ಲದೇ ಭವ್ಯ ಪಡಸಾಲೆ, ಅದರಲ್ಲಿ ಸಾರ್ವಜನಿಕರೊಂದಿಗೆ ಸಂವಾದ ಮಾಡಲು ಕಟ್ಟೆ. ಪಡಸಾಲೆಯ ಒಂದುಬದಿ ಕೋಣೆಯಲ್ಲಿ ಶಸ್ತ್ರಾಗಾರ, ಮತ್ತೊಂದು ಕೋಣೆಯಲ್ಲಿ ಖಜಾನೆ ಇರುತ್ತಿತ್ತು.

ವಾಸ್ತುಶಿಲ್ಪ ದೃಷ್ಟಿಯಿಂದ ಶ್ರೀಮಂತವಾಗಿದ್ದ ವಾಡೆಗಳು ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗೆ ಸಾಕ್ಷಿಯಾಗುತ್ತಿದ್ದವು. ವಿವಿಧ ಚಲನಚಿತ್ರಗಳು, ಕಿರುಚಿತ್ರಗಳ ಚಿತ್ರೀಕರಣಕ್ಕೆ ವೇದಿಕೆ ಕಲ್ಪಿಸಿದ್ದವು. 

ಬೆಳಗಾವಿ, ಕಾಕತಿ, ಸವದತ್ತಿ, ಸವದತ್ತಿ ತಾಲ್ಲೂಕಿನ ಶಿರಸಂಗಿ, ಚಚಡಿ, ಯರಗಟ್ಟಿ ತಾಲ್ಲೂಕಿನ ತಲ್ಲೂರ, ಚನ್ನಮ್ಮನ ಕಿತ್ತೂರು ತಾಲ್ಲೂಕಿನ ತುರಮರಿ, ರಾಮದುರ್ಗ, ಕಾಗವಾಡ, ನಿಪ್ಪಾಣಿ, ನಿಪ್ಪಾಣಿ ತಾಲ್ಲೂಕಿನ ಸೌಂದಲಗಾ, ಬೇಡಕಿಹಾಳ, ಬೆನ್ನಾಡಿ, ಚಿಕ್ಕೋಡಿ, ಚಿಕ್ಕೋಡಿ ತಾಲ್ಲೂಕಿನ ಅಂಕಲಿ, ನನದಿ, ರಾಯಬಾಗ, ರಾಯಬಾಗ ತಾಲ್ಲೂಕಿನ ಚಿಂಚಲಿ ಮೊದಲಾದ ಗ್ರಾಮಗಳಲ್ಲಿ ವಾಡೆ ಇದ್ದವು.

ವಿವಿಧ ಉದ್ದೇಶಕ್ಕೆ ಬಳಕೆ

‘ವಾಡೆಗಳನ್ನು ವಿವಿಧ ಉದ್ದೇಶಕ್ಕೆ ನಿರ್ಮಿಸಲಾಗುತ್ತಿತ್ತು. ಸೈನ್ಯದ ಉದ್ದೇಶಕ್ಕಾಗಿ ಕಟ್ಟಿದ ವಾಡೆಗಳಲ್ಲಿ ತರಬೇತಿ ನೀಡುವ ಜತೆಗೆ, ಶಸ್ತ್ರಾಸ್ತ್ರಗಳನ್ನು ಇರಿಸಲಾಗುತ್ತಿತ್ತು. ರಾಜರ ಆಡಳಿತ, ತೆರಿಗೆ ಸಂಗ್ರಹಕ್ಕಾಗಿ ವಾಡೆಗಳನ್ನು ಕಟ್ಟಲಾಗಿತ್ತು. ಹವ್ಯಾಸಕ್ಕಾಗಿ ಮತ್ತು ಬೇಟೆಗಾಗಿ ಬಂದಾಗ ವಾಸವಿರಲೆಂದೂ ಕೆಲವರು ವಾಡೆ ಕಟ್ಟಿಸಿದ್ದರು’ ಎಂದು ಸಂಶೋಧಕ ಗುರುಪಾದ ಮರಿಗುದ್ದಿ ಹೇಳುತ್ತಾರೆ.

ಬೆಳಗಾವಿ ಜಿಲ್ಲೆಯಲ್ಲಿದ್ದ ಲಿಂಗಾಯತರು, ಮರಾಠರು ಮತ್ತು ಜೈನರ ವಾಡೆಗಳು ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಕೇಂದ್ರಗಳಾಗಿದ್ದವು. ಇಪ್ಪತ್ತು ವರ್ಷಗಳ ಹಿಂದೆ ಮರಿಗುದ್ದಿ ಅವರು ಅಧ್ಯಯನ ಕೈಗೊಂಡಾಗ, ಹಲವು ವಾಡೆಗಳು ಸುಸ್ಥಿತಿಯಲ್ಲೇ ಇದ್ದವು. ನಂತರ ಅವುಗಳ ಸಂರಕ್ಷಣೆ ಆಗಲಿಲ್ಲ. ಈಗ ರಾಜಮನೆತನದವರು ವಾಸವಿರುವ ಕೆಲವಷ್ಟೇ ಸುಸ್ಥಿತಿಯಲ್ಲಿವೆ. ಉಳಿದವು ಅವನತಿಯತ್ತ ಸಾಗಿವೆ. ಪುರಾತನ ಕಾಲದ ಕಟ್ಟಡದ ಒಂದೊಂದೇ ಅವಶೇಷ ಕಳಚಿಬೀಳುತ್ತಿವೆ. ಇದನ್ನು ಅವರು ಬೇಸರದಿಂದಲೇ ಹೇಳುತ್ತಾರೆ.

‘ಶಿರಸಂಗಿಯ ಲಿಂಗರಾಜರು ತಮ್ಮ ಇಡೀ ಆಸ್ತಿಯನ್ನೇ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ದಾನ ಮಾಡಿದ್ದಾರೆ. ಅವರು ವಾಸಿಸುತ್ತಿದ್ದ ವಾಡೆ ದುಃಸ್ಥಿತಿಗೆ ತಲುಪಿದ್ದು ಬೇಸರ ತರಿಸುವಂಥದ್ದು. ಸವದತ್ತಿ ಕೋಟೆಯೊಳಗಿನ ವಾಡೆ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವೇನಿಲ್ಲ’ ಎಂದು ಸಾಹಿತಿ ಯ.ರು.ಪಾಟೀಲ ನೋವಿನಿಂದ ಹೇಳುತ್ತಾರೆ.

‘ಲಿಂಗರಾಜರ ವಾಡೆ ಭವ್ಯ ಅರಮನೆಯಂತಿತ್ತು. ಈ ಭಾಗದಲ್ಲಿ ಶ್ರೀಮಂತಿಕೆಯಿಂದ ಮೆರೆದಿತ್ತು. ಈಗ ಕಟ್ಟಡವೆಲ್ಲ ಹಾಳಾಗಿದೆ. ಗೋಡೆ ಬಿದ್ದಿದೆ. ಮಳೆಯಿಂದಾಗಿ ಕಟ್ಟಡದ ಅವಶೇಷಗಳು ಹಾಳಾಗಿವೆ. ಇಲ್ಲಿ ಸಣ್ಣಪುಟ್ಟ ದುರಸ್ತಿ ಕೈಗೊಂಡರೆ ಸಾಲದು. ಇಡೀ ಕಟ್ಟಡವನ್ನೇ ಮರುನಿರ್ಮಾಣ ಮಾಡಬೇಕು’ ಎನ್ನುತ್ತಾರೆ ಲಿಂಗರಾಜ ದೇಸಾಯಿ ಆಸ್ತಿ ಸಂರಕ್ಷಣಾ ಸಮಿತಿ ಅಧ್ಯಕ್ಷ ಬಸವಪ್ರಭು ಅಣ್ಣಿಗೇರಿ.

ಕತ್ತಲಾದ ನಂತರ ಮೋಜು–ಮಸ್ತಿ

ಛತ್ರಪತಿ ಶಾಹೂ ಮಹಾರಾಜರು ತಮ್ಮ ಕುಟುಂಬದೊಂದಿಗೆ ಬೇಸಿಗೆ ರಜೆ ಕಳೆಯಲು ರಾಯಬಾಗ ಹೊರವಲಯದಲ್ಲಿ ನಿರ್ಮಿಸಿದ ರಾಜವಾಡೆ ಅದ್ಭುತವಾಗಿದೆ. ಆದರೆ, ವಾಡೆಯ ಗೋಡೆ ಬಿರುಕು ಬಿಟ್ಟಿದ್ದು, ಕಿಟಕಿ, ಬಾಗಿಲುಗಳೆಲ್ಲ ಮುರಿದಿವೆ. ಕತ್ತಲಾಗುತ್ತಿದ್ದಂತೆ ಕೆಲವರು ವಾಡೆಯ ಆವರಣ ಪ್ರವೇಶಿಸಿ ಮೋಜು–ಮಸ್ತಿ ಮಾಡುತ್ತಿದ್ದಾರೆ. ಅಕ್ರಮ ಚಟುವಟಿಕೆ ನಿರಾತಂಕವಾಗಿ ನಡೆಯುತ್ತಿವೆ ಎಂಬ ಆರೋಪವೂ ಇದೆ.

ಸವದತ್ತಿ ತಾಲ್ಲೂಕಿನ ಶಿರಸಂಗಿಯ ವಾಡೆಯ ಹೊರಗೋಡೆ ಬಿದ್ದಿರುವುದು     

‘ರಾಯಬಾಗದ ರಾಜವಾಡೆಗೆ ಪ್ರವಾಸಿಗರನ್ನು ಸೆಳೆಯುವ ಶಕ್ತಿ ಇದೆ. ರಾಜಮನೆತನದವರು ಮತ್ತು ಸರ್ಕಾರ ಇದರ ಅಭಿವೃದ್ಧಿಗೆ ಬೆಳಕು ಚೆಲ್ಲಬೇಕು. ವಾಡೆಯಲ್ಲಿನ ಅಕ್ರಮ ಚಟುವಟಿಕೆ ತಡೆಯಬೇಕು’ ಎಂದು ಒತ್ತಾಯಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ಸಾಗರ ಜಂಡೆನ್ನವರ.

ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ್ದು ವೀರರಾಣಿ ಕಿತ್ತೂರು ಚನ್ನಮ್ಮ. ಇವರ ಹುಟ್ಟೂರಾದ ಬೆಳಗಾವಿ ತಾಲ್ಲೂಕಿನ ಕಾಕತಿಯಲ್ಲಿನ ವಾಡೆ ಸಂಪೂರ್ಣ ನಾಶವಾಗಿದೆ.

‘ಕಾಕತಿ ವಾಡೆಯಲ್ಲಿ ಚನ್ನಮ್ಮನ ವಂಶಸ್ಥರು ವಾಸವಿದ್ದರು. ಮೊದಲಿನಂತೆ ಅದನ್ನು ಕಟ್ಟಿ, ಅದರಲ್ಲಿ ಮ್ಯೂಸಿಯಂ ನಿರ್ಮಿಸಿ ಚನ್ನಮ್ಮನ ಇತಿಹಾಸವನ್ನು ಜನರಿಗೆ ತಿಳಿಸುವ ಕೆಲಸವಾಗಬೇಕಿದೆ’ ಎಂಬುದು ವೀರರಾಣಿ ಕಿತ್ತೂರು ಚನ್ನಮ್ಮ ವಿಜಯೋತ್ಸವ ಮತ್ತು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಿವನಗೌಡ ಪಾಟೀಲ ಆಗ್ರಹ.

ನೂರೊಂದು ಬಾಗಿಲ ವಾಡೆ

ತುರಮರಿಯಲ್ಲಿ ಮೂರೂವರೆ ಶತಮಾನದ ಹಿಂದೆ ನಿರ್ಮಿಸಿದ್ದ ನೂರೊಂದು ಬಾಗಿಲುಗಳ ವಾಡೆ ಇದೆ. ಇಲ್ಲಿ ನಟ ಶಂಕರನಾಗ್‌ ಅಭಿನಯದ ‘ಒಂದಾನೊಂದು ಕಾಲದಲ್ಲಿ’ ಚಿತ್ರೀಕರಣವಾಗಿತ್ತು. ‘ಸಂಗ್ಯಾ–ಬಾಳ್ಯಾ’ ಚಿತ್ರವೂ ಚಿತ್ರೀಕರಣಗೊಂಡಿತ್ತು. ಇಡೀ ನಾಡಿನ ಸಿನಿಪ್ರಿಯರನ್ನು ವಾಡೆಯ ಸೊಬಗು ಸೆಳೆದಿತ್ತು.

ರಾಯಬಾಗ ಹೊರವಲಯದಲ್ಲಿನ ರಾಜವಾಡೆ  ಚಿತ್ರ: ಆನಂದ ಮನ್ನಿಕೇರಿ

‘ಕಲೆ ಉಳಿಸಬೇಕು. ಕಲಾವಿದರನ್ನು ಪ್ರೋತ್ಸಾಹಿಸಬೇಕೆಂಬ ಉದ್ದೇಶದಿಂದ ಎರಡೂ ಚಿತ್ರಗಳ ಚಿತ್ರೀಕರಣಕ್ಕಾಗಿ ಉಚಿತವಾಗಿ ವಾಡೆ ನೀಡಿದ್ದೆವು. ಇಲ್ಲಿ ಚಿತ್ರೀಕರಣವಾದ ಎರಡೂ ಚಿತ್ರಗಳು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನವಾಗಿವೆ. ಈಗ ಹಾಳಾಗಿರುವ ವಾಡೆ ಅಭಿವೃದ್ಧಿಗೆ ಚಿಂತನೆ ನಡೆಸಿದ್ದೇವೆ’ ಎಂದು ವಾರಸುದಾರರಾದ ಬಸವರಾಜ ಚಿಂತಾಮಣಿಗೌಡರ ಪಾಟೀಲ ಹೇಳುತ್ತಾರೆ.

‘ಪ್ರಜಾಪ್ರಭುತ್ವ ವ್ಯವಸ್ಥೆಗೂ ಮುನ್ನ, ವಾಡೆಗಳು ಜನರಿಗೆ ಉತ್ತಮ ಆಡಳಿತ ನೀಡಿದ್ದವು. ಅವು ಖಾಸಗಿಯವರಿಗೆ ಸೇರಿದ್ದರೂ ನಾಡಿಗೆ ಅಪಾರ ಕೊಡುಗೆ ಕೊಟ್ಟಿವೆ. ಪ್ರಜೆಗಳ ಹಿತರಕ್ಷಣೆ ಮಾಡಿವೆ. ಸರ್ಕಾರದಿಂದ ಅವುಗಳ ರಕ್ಷಣೆ ಬಹಳ ಮುಖ್ಯವಾಗಿದೆ’ ಎಂದು ಚನ್ನಮ್ಮನ ಕಿತ್ತೂರಿನ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಹೇಳುತ್ತಾರೆ.

ವಾಡೆಗಳು ಕೇವಲ ಕಟ್ಟಡಗಳಲ್ಲ, ಅವು ನಮ್ಮ ಇತಿಹಾಸದ ಕುರುಹುಗಳು, ಅಪೂರ್ವ ವಾಸ್ತುಶಿಲ್ಪದ ಮಾದರಿಗಳು. ಅವುಗಳನ್ನು ಉಳಿಸಿಕೊಳ್ಳುವುದು ತುಂಬಾ ಮುಖ್ಯ. 

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಬೇಡಿಕಿಹಾಳದ ವಾಡೆ ದುಃಸ್ಥಿತಿ ತಲುಪಿರುವುದು ಚಿತ್ರ: ಚಂದ್ರಶೇಖರ ಚಿನಕೇಕರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.