ADVERTISEMENT

World Father's Day | ಅಪ್ಪಂದಿರ ದಿನದ ಇತಿಹಾಸದ ಬಗ್ಗೆ ಅರಿಯಿರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಜೂನ್ 2023, 5:26 IST
Last Updated 18 ಜೂನ್ 2023, 5:26 IST
fathers day logo
fathers day logo   

ಭಾರತದಂತಹ ದೇಶದಲ್ಲಿ ಮಾತೃತ್ವಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ. ತಾಯಿಯನ್ನು ಮೊದಲ ಗುರು, ದೇವರು ಹೀಗೆ ಅನೇಕ ಪದಗಳಲ್ಲಿ ವಿವರಿಸಲಾಗುತ್ತದೆ. ಪ್ರತಿ ವರ್ಷ ಮೇ ಎರಡನೇ ಭಾನುವಾರದಂದು 'ವಿಶ್ವ ಅಮ್ಮಂದಿರ ದಿನ'ವೆಂದು ಆಚರಿಸಲಾಗುತ್ತದೆ. ತಾಯಿಯಷ್ಟೇ ಕುಟುಂಬದ ಜವಾಬ್ದಾರಿ ಹೊರುವ ತಂದೆಗೂ ಪ್ರಾಮುಖ್ಯತೆ ನೀಡಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಜೂನ್‌ ಮೂರನೇ ಭಾನುವಾರ 'ವಿಶ್ವ ಅಪ್ಪಂದಿರ ದಿನ'ವನ್ನು ಆಚರಿಸಲಾಗುತ್ತದೆ.

'ಅಪ್ಪಂದಿರ ದಿನ'ವನ್ನು ಮೊದಲ ಬಾರಿಗೆ 19 ಜೂನ್‌ 1910ರಲ್ಲಿ ಅಮೆರಿಕದ ವಾಷಿಂಗ್ಟನ್‌ನಲ್ಲಿ ಆಚರಿಸಲಾಗಿತ್ತು. 1916ರಲ್ಲಿ ಅಮೆರಿಕ ಅಧ್ಯಕ್ಷ ವುಡ್ರೋ ವಿಲ್ಸನ್ ತಂದೆಯ ಸೇವೆಗಳನ್ನು ಸ್ಮರಿಸಿ ಎಲ್ಲ ತಂದೆಯಂದಿರಿಗೂ ಶುಭಾಶಯ ತಿಳಿಸುತ್ತಾರೆ. 1966ರಲ್ಲಿ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಜೂನ್ ಮೂರನೇ ಭಾನುವಾರವನ್ನು 'ವಿಶ್ವ ಅಪ್ಪಂದಿರ ದಿನ'ವೆಂದು ಘೋಷಣೆ ಮಾಡಿ ಸಹಿ ಹಾಕುವ ಮೂಲಕ ಅಧಿಕೃತವಾಗಿ 'ಅಪ್ಪಂದಿರ ದಿನ'ವನ್ನು ಚಾಲ್ತಿಗೆ ತರುತ್ತಾರೆ.

ಇತಿಹಾಸ

ADVERTISEMENT

ಮೊದಲಿಗೆ 1908ರ ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ‘ಮೊನೊಂಗಾ ಗಣಿ ದುರಂತ‘ದಲ್ಲಿ ಸಾವಿಗೀಡಾದ ಅಪ್ಪಂದಿರ ಸೇವೆಗಳನ್ನು ಗೌರವಿಸಲು 'ಅಪ್ಪಂದಿರ ದಿನ' ಎಂದು ಆಚರಿಸಲಾಗುತ್ತಿತ್ತು. ಆ ದಿನ ದುರಂತದಲ್ಲಿ ಸತ್ತ ಅಪ್ಪಂದಿರ ಸೇವೆಗಳನ್ನು ಸ್ಮರಿಸಲಾಗುತಿತ್ತು. ಆದರೆ ಅದು ಅಲ್ಲಿಗೆ ಮಾತ್ರ ಸೀಮಿತವಾಗಿತ್ತು. ಅಪ್ಪಂದಿರ ದಿನಕ್ಕೆ ನಿಜವಾದ ಅರ್ಥ ಕೊಟ್ಟವರಲ್ಲಿ ಸೋನೋರಾ ಲೂಯಿಸ್ ಸ್ಮಾರ್ಟ್ ಒಬ್ಬರಾಗಿದ್ದಾರೆ.

ಸೋನೋರಾ 1882ರಲ್ಲಿ ಅಮೆರಿಕದ ಅರ್ಕಾನ್ಸಾಸ್‌ ಎಂಬಲ್ಲಿ ಜನಿಸುತ್ತಾರೆ. ಸೋನೋರಾ ಏಳು ವರ್ಷದವಳಾಗಿದ್ದಾಗ ಇವರ ಕುಟುಂಬ ಪೂರ್ವ ಸ್ಪೋಕೇನ್‌ಗೆ ಸ್ಥಳಾಂತರಗೊಳ್ಳುತ್ತದೆ. 16 ವರ್ಷ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಸೋನೋರಾ ಇಡೀ ಕುಟುಂಬದ ಜವಾಬ್ದಾರಿ ಹೊರುತ್ತಾಳೆ. ಸೋನೋರಾಗೆ ಐದು ಜನ ಸಹೋದರರಿದ್ದು ಅವರ ಕುಟುಂಬಕ್ಕೆ ಆಸರೆಯಾಗಿ ಸೋನೋರಾ ತಂದೆ ವಿಲಿಯಂ ಜಾಕ್ಸನ್ ಸ್ಮಾರ್ಟ್‌ ನಿಲ್ಲುತ್ತಾರೆ.

ತಾಯಂದಿರ ಸೇವೆ ಕುರಿತು ಚರ್ಚ್‌ವೊಂದರಲ್ಲಿ ಉಪದೇಶ ಕೇಳಿದ ನಂತರ ಸೋನೋರಾಗೆ ಪಿತೃತ್ವಕ್ಕೂ ಮನ್ನಣೆ ಸಿಗುವ ಅಗತ್ಯವಿದೆ ಎಂದೆನಿಸುತ್ತದೆ. ತಕ್ಷಣ ಸ್ಪೋಕೇನ್‌ನ ಸಚಿವಾಲಯವನ್ನು ಸಂಪರ್ಕಿಸಿ ಈ ವಿಷಯದ ಬಗ್ಗೆ ಚರ್ಚಿಸುತ್ತಾಳೆ. ತನ್ನ ತಂದೆ ಹುಟ್ಟಿದ ದಿನಾಂಕ ಜೂನ್‌ 5ರಂದು ತಂದೆಯ ದಿನವನ್ನಾಗಿ ಆಚರಿಸುವಂತೆ ಸೂಚಿಸುತ್ತಾರೆ. ತದನಂತರ ಜೂನ್‌ ಮೂರನೇ ಭಾನುವಾರ ಅಪ್ಪಂದಿರ ದಿನ ಆಚರಿಸಲಾಗುತ್ತದೆ.

ಅಮ್ಮಂದಿರ ದಿನಕ್ಕಿರುವಷ್ಟು ಜನಪ್ರಿಯತೆ ಅಪ್ಪಂದಿರ ದಿನಕ್ಕಿಲ್ಲ

ಇತ್ತೀಚೆಗೆ 'ಅಪ್ಪಂದಿರ ದಿನ'ವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಮೊದಲೆಲ್ಲ ಅಪ್ಪಂದಿರ ದಿನ ಆಚರಣೆಯಲ್ಲಿದ್ದರೂ ಅಮ್ಮಂದಿರ ದಿನದಷ್ಟು ಜನಪ್ರಿಯತೆ ಗಳಿಸಿರಲಿಲ್ಲ. ಭಾರತೀಯ ಸಮಾಜದಲ್ಲಿ ತಾಯಿ ಹೆಚ್ಚು ಪ್ರಾಮುಖ್ಯತೆ ಪಡೆದಿರುವುದಕ್ಕೆ ಇದಕ್ಕೆ ಕಾರಣ ಎನ್ನಲಾಗುತ್ತದೆ. ಅಲ್ಲದೇ ಹೂಗುಚ್ಛ, ಉಡುಗೊರೆ ಸ್ವೀಕರಿಸುವಲ್ಲಿ ಅಪ್ಪಂದಿರರಿಗೆ(ಪುರಷರಿಗೆ) ಆಸಕ್ತಿ ಕಡಿಮೆಯಿರುವುದು ಕೂಡ ಒಂದು ಕಾರಣವಾಗಿದೆ. ಈಗೀಗ ಮಕ್ಕಳು ಪ್ರೀತಿಯ ಅಪ್ಪನ ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಾಕಿಕೊಳ್ಳುವ ಮೂಲಕ ತಂದೆಯ ಸೇವೆಯನ್ನು ಸ್ಮರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.