ADVERTISEMENT

ಅಂತರರಾಷ್ಟ್ರೀಯ ಫ್ರೆಂಡ್‌ಶಿಪ್‌ ದಿನ: ಸ್ನೇಹದ ಕೊಂಡಿ ಬೆಸೆದ ಕೋವಿಡ್‌

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 19:30 IST
Last Updated 29 ಜುಲೈ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಗರಗಳಲ್ಲಿ ಒಂದೇ ಫ್ಲ್ಯಾಟ್‌, ಕೊಠಡಿ ಹಂಚಿಕೊಂಡವರ ಸ್ನೇಹ ಈ ಕೊರೊನಾ ಕಾಲದಲ್ಲಿ ಇನ್ನಷ್ಟು ಅರಳಿದೆ. ಪರಸ್ಪರ ಸಹಾಯಹಸ್ತ ಚಾಚುತ್ತ ಸ್ನೇಹಕ್ಕೆ ಹೊಸ ಪರಿಭಾಷೆ ಬರೆಯುತ್ತಿದ್ದಾರೆ.

‘ನೀ ನಿವತ್ತು ಡೊಲ್ಗೋನಾ ಕಾಫಿ ಮಾಡಿಕೊಂಡಿಲ್ಲ, ಅಲ್ವೇ? ನಾನು ಮಾಡಿಕೊಡಲೇ?’ ಶೃತಿ ಕೇಳಿದಾಗ ಆಕೆಯ ಫ್ಲ್ಯಾಟ್‌ಮೇಟ್‌ ಅನುವಿಗೆ ಅಚ್ಚರಿ. ಅರೆ, ಈಕೆ ತನ್ನ ದಿನಚರಿಯನ್ನು ಗಮನಿಸುತ್ತಿದ್ದಾಳೆ ಎಂದರೆ ಇನ್ನಷ್ಟು ಹತ್ತಿರವಾಗುತ್ತಿದ್ದಾಳೆ ಎಂದೇ ಅರ್ಥವಲ್ಲವೇ!

ಅನು ಸುಮಾರು ಒಂದು ವರ್ಷದಿಂದ ಇತರ ಇಬ್ಬರು ಹುಡುಗಿಯರ ಜೊತೆ ಬೆಂಗಳೂರಿನ ಫ್ಲ್ಯಾಟ್‌ ಒಂದರಲ್ಲಿ ವಾಸಿಸುತ್ತಿದ್ದರೂ ಮಾತುಕತೆ ಲೋಕಾಭಿರಾಮವಾಗಿ ನಡೆಯುತ್ತಿತ್ತೇ ಹೊರತು ಅಂತಹ ಸೌಹಾರ್ದವೇನೂ ಇರಲಿಲ್ಲ. ಎಲ್ಲರಿಗೂ ಸೇರಿದ ಅಡುಗೆ ಮನೆಯಲ್ಲಿ ತಮಗೆ ಬೇಕಾದ್ದನ್ನು ಮಾಡಿಕೊಂಡು ತಿನ್ನುವುದು ಇಲ್ಲ ಕಚೇರಿಯಿಂದ ಬರುವಾಗಲೇ ಊಟ ಕಟ್ಟಿಸಿಕೊಂಡು ಬರುವುದು.. ಹೀಗೆ ಒಟ್ಟಿಗೇ ವಾಸಿಸುತ್ತಿದ್ದರೂ ತಮ್ಮ ‘ಸ್ಪೇಸ್‌’ ಕಾಪಾಡಿಕೊಂಡಿದ್ದರು.

ADVERTISEMENT

ಆದರೆ ಕೋವಿಡ್‌ ಎನ್ನುವುದು ಮೂವರ ಮಧ್ಯೆ ಅಪ್ಪಟ ಸ್ನೇಹವನ್ನು ಬೆಸುಗೆ ಹಾಕಿಬಿಟ್ಟಿದೆ. ಮನೆಯಿಂದಲೇ ಕಚೇರಿ ಕೆಲಸ ಮಾಡುವ ಮೂವರೂ ಈಗ ಯಾರಿಗೆ ಯಾವ ತರಕಾರಿ ಇಷ್ಟ, ಯಾರಿಗೆ ಕಾಫಿಗೆ ಸಕ್ಕರೆ ಬೇಡ, ಯಾರು ಏನು ಮುಟ್ಟಿದರೂ ಸ್ಯಾನಿಟೈಜರ್‌ ಬಳಸುತ್ತಾರೆ.. ಎಂಬುದನ್ನು ಪರಸ್ಪರ ಅರ್ಥ ಮಾಡಿಕೊಂಡಿದ್ದಾರೆ. ಯಾಕೋ ತಲೆನೋವು ಎಂದು ಒಬ್ಬರು ಗೊಣಗಿದರೂ ಸಾಕು, ಉಳಿದ ಇಬ್ಬರು ಬಿಸಿಬಿಸಿ ಕಾಫಿ, ಸಾರಿಡಾನ್‌ ಮಾತ್ರೆ ಹಿಡಿದು ಕಕ್ಕುಲತೆ ತೋರಿಸುವವರೇ. ಲಾಕ್‌ಡೌನ್‌ ಸಂದರ್ಭದಲ್ಲಿ ಒಟ್ಟಿಗೇ ಇರುವ ನಿರ್ಧಾರ ಮಾಡಿದ್ದ ಮೂವರೂ ಈಗ ಬೇರೆ ಹೋಗುವ ಮಾತೇ ಆಡುತ್ತಿಲ್ಲ. ಕುಳಿತಲ್ಲೇ ಕಾಫಿ– ತಿಂಡಿ ಪೂರೈಕೆ, ಬಕೆಟ್‌ನಲ್ಲಿ ನೆನೆ ಹಾಕಿದ ಇನ್ನೊಬ್ಬಳ ಬಟ್ಟೆಯನ್ನು ತನ್ನದರ ಜೊತೆಗೇ ಒಗೆದುಕೊಳ್ಳುವ ಪರಿ ಕೇವಲ ಸ್ನೇಹವನ್ನಲ್ಲ, ಕುಟುಂಬದ ಆತ್ಮೀಯತೆಯನ್ನೂ ಒದಗಿಸಿದೆ.

ಬದಲಾದ ಸಂಬಂಧದ ರೇಖೆ

ಕೇವಲ ಫ್ಲ್ಯಾಟ್‌ಮೇಟ್ಸ್‌, ಸ್ನೇಹಿತರು ಎಂದುಕೊಂಡಿದ್ದವರ ಸಂಬಂಧದ ರೇಖೆಯನ್ನೇ ಈ ಕೋವಿಡ್‌ ಬಿಕ್ಕಟ್ಟು ಎನ್ನುವುದು ಬದಲಾಯಿಸಿಬಿಟ್ಟಿದೆ. ಶಿವಮೊಗ್ಗದಲ್ಲಿ 1ಬಿಎಚ್‌ಕೆ ಮನೆಯಲ್ಲಿ ಸ್ನೇಹಿತನ ಜೊತೆಗಿರುವ ಮಂಜುನಾಥ್‌ ಜೋಶಿಗೆ ಕೂಡ ಇದೊಂದು ಕಲಿಕಾ ಸಮಯವಿದ್ದಂತೆ. ಕಳೆದ ಒಂದೂವರೆ ವರ್ಷದಿಂದ ಒಂದೇ ಸೂರಿನಡಿ ಇದ್ದರೂ ಅಲ್ಲಿ ಸ್ನೇಹವಿತ್ತೇ ಹೊರತು ಆತ್ಮೀಯತೆ ಇರಲಿಲ್ಲ. ಜೊತೆಗೆ ತಿನ್ನುವ ಆಹಾರದಲ್ಲೂ ವ್ಯತ್ಯಾಸ. ಆದರೆ ಈಗ 3–4 ತಿಂಗಳಿಂದ ಸ್ನೇಹದ ಸೇತು ಇನ್ನಷ್ಟು ಗಟ್ಟಿಯಾಗಿದೆ.

ಕೆಲವೊಮ್ಮೆ ಆತನ ಸಂಬಂಧಿಕರು ಬಂದರೂ ತನ್ನ ನೆಂಟರೇ ಎಂದುಕೊಂಡು ಹೊಂದಿಕೊಂಡು ಹೋಗುವ ಸ್ವಭಾವ ರೂಢಿಸಿಕೊಂಡಿದ್ದಾರೆ ಬ್ಯಾಂಕ್‌ ಉದ್ಯೋಗಿಯಾದ ಮಂಜುನಾಥ್‌.

‘ಪ್ರತಿ ದಿನವೂ ಒಂದು ರೀತಿಯ ಹೊಸ ಕಲಿಕೆ ಇದ್ದೇ ಇರುತ್ತದೆ. ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆ ಇದ್ದರೂ ಪರಸ್ಪರ ಅರಿಯುವ ಅವಕಾಶ ಸಿಕ್ಕಿದ್ದು ಈಗಲೇ. ಬೇರೆಯವರ ಆಯ್ಕೆ, ಆಕಾಂಕ್ಷೆಯನ್ನು ಗೌರವಿಸುವುದನ್ನು ಈ ಕೊರೊನಾ ಕಾಲ ಕಲಿಸಿದೆ. ಈ ಕಷ್ಟದ ದಿನಗಳು ಶೀಘ್ರವೇ ಕಳೆದು ಹೋಗಬಹುದು. ಆದರೆ ಈ ಹೊಸ ಅನುಬಂಧ ಬಹುಶಃ ಬದುಕಿನುದ್ದಕ್ಕೂ ಇರುವಂಥದ್ದು’ ಎನ್ನುತ್ತಾರೆ ಮಂಜುನಾಥ್‌.

ಹಾಗೆಯೇ ವಿಭಿನ್ನ ಸಿದ್ಧಾಂತ, ರಾಜಕೀಯ ಒಲವು ಇರುವವರು ಈ ಹಿಂದೆ ಆಗಾಗ ವಾದ–ವಿವಾದ, ವೈಮನಸ್ಸು ಮೂಡಿಸಿಕೊಂಡವರು ಅನಿವಾರ್ಯವೆಂಬಂತೆ ಒಂದೇ ಸೂರು ಹಂಚಿಕೊಂಡವರು ಕೂಡ ಈಗ ಅದನ್ನೆಲ್ಲ ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಿರುವುದು ಒಳ್ಳೆಯ ಬೆಳವಣಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.