
ನೆಲೆಯೇ ಇಲ್ಲದ ಅಲೆಮಾರಿಗಳ ಜೀವನಗಾಥೆ ಎಂಬುದು ರೋಚಕ ಮತ್ತು ಮನನೀಯವಾದದ್ದು. ಉಡಲು ಬಟ್ಟೆ ಇಲ್ಲದ, ತೊಡಲು ಕುಪ್ಪಸವಿಲ್ಲದ, ಬಹಿರ್ದೆಸೆಗೆ ಸ್ಥಳವಿಲ್ಲದ, ಊರವರ ದೃಷ್ಟಿಯಲ್ಲಿ ಪರದೇಶಿಗಳಂತೆ ರಸ್ತೆ ಪಕ್ಕದಲ್ಲಿ, ಪಾಳು ಬಿದ್ದ ಜಾಗದಲ್ಲಿ, ಕೊಳಚೆ ಪ್ರದೇಶಗಳಲ್ಲಿ ಜೀವನ ಸಾಗಿಸುತ್ತಿರುವ ಅಲೆಮಾರಿಗಳು ಭಿಕ್ಷೆಬೇಡಿ ಬದುಕುವ ಸ್ಥಿತಿಯಲ್ಲಿದ್ದಾರೆ. ಇಂತಹ ಸಮುದಾಯ ಮತ್ತು ಅವರ ಬವಣೆಗಳ ಕುರಿತು ಮಲ್ಲಿಕಾರ್ಜುನ ಬಿ. ಮಾನ್ಪಡೆ ಕೃತಿಯೊಂದನ್ನು ರಚಿಸಿದ್ದಾರೆ.
‘ಅಸ್ಮಿತೆಯ ಹುಡುಕಾಟ’ ಎಂಬ ಈ ಕೃತಿಯಲ್ಲಿ 40 ಸಮುದಾಯಗಳ ಕುರಿತು ಬೆಳಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಇದರಲ್ಲಿ ಪರಿಶಿಷ್ಟ ಜಾತಿಯ ಅಲೆಮಾರಿ ಸಮುದಾಯಗಳಾದ ಬುಡ್ಡಜಂಗಮ, ಚೆನ್ನದಾಸರ್, ದಕ್ಕಲಿಗ, ಡೊಂಬರ, ಗಂಟಿಚೋರ, ಗೊಡ್ಡ, ಗೋಸಂಗಿ, ಹಳ್ಳೇರ್ ಸೇರಿದಂತೆ ಇತರ 18 ಸಮುದಾಯಗಳು, ಪರಿಶಿಷ್ಟ ಪಂಗಡಕ್ಕೆ ಸೇರಿದ ಚೆಂಚು, ಡುಂಗ್ರಿ ಗರಾಸಿಯ, ಹಕ್ಕಿಪಿಕ್ಕಿ ಸಮುದಾಯಗಳು, ಹಿಂದುಳಿದ ವರ್ಗಕ್ಕೆ ಸೇರಿದ ಬಾಜಿಗರ್, ಬೈಲ್ ಪತ್ತಾರ್, ಚಪ್ಪರಬಂದ್, ಧನಗರ್ ಗೌಳಿ ಇತರ ಸಮುದಾಯಗಳ ಕುರಿತು ಈ ಕೃತಿಯಲ್ಲಿ ದಾಖಲಿಸಿದ್ದಾರೆ.
ಬ್ರಿಟಿಷರು ಕಾಡು ಕಡಿದು ಕೈಗಾರಿಕೆಗಳು, ರಸ್ತೆಗಳನ್ನು ನಿರ್ಮಿಸುವುದಕ್ಕೆ ಅಲೆಮಾರಿ, ಆದಿವಾಸಿಗಳು ಪ್ರತಿರೋಧ ಒಡ್ಡುತ್ತಿದ್ದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುದೊಡ್ಡ ಕೊಡುಗೆ ನೀಡಿರುವ ಅಲೆಮಾರಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖಪಾತ್ರ ವಹಿಸಿದ್ದನ್ನು ಇಲ್ಲಿ ದಾಖಲಿಸಲಾಗಿದೆ. ಬ್ರಿಟಿಷ್‌ರ ಆಳ್ವಿಕೆಯಲ್ಲಿ ಅಪರಾಧಿ ಬುಡಕಟ್ಟು ಎಂಬ ಹಣೆಪಟ್ಟಿ ಹೊತ್ತಿದ್ದ ಇವರಿಗೆ ನಂತರದಲ್ಲಿ ರಚಿಸಲಾದ ಕಾನೂನುಗಳ ಕುರಿತು, ಸ್ವಾತಂತ್ರ ಭಾರತದಲ್ಲಿ ಅಲೆಮಾರಿ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಜಾರಿಗೆ ತಂದಿರುವ ಯೋಜನೆಗಳನ್ನೂ ಲೇಖಕರು ಇಲ್ಲಿ ದಾಖಲಿಸಿದ್ದಾರೆ.
ಬುಡಕಟ್ಟು ಸಮುದಾಯಗಳ ಆಚಾರ, ವಿಚಾರ, ಜೀವನ ಕ್ರಮಗಳ ಕುರಿತು ಸಚಿತ್ರ ಸಹಿತ ಮಾಹಿತಿ ದಾಖಲಿಸಿದ್ದಾರೆ. ಕಲೆ, ಸಾಹಿತ್ಯ, ಸಂಗೀತ ಹಾಗೂ ಸಂಸ್ಕೃತಿಗೆ ಈ ಸಮುದಾಯಗಳು ನೀಡಿರುವ ಕೊಡುಗೆಯೂ ದಾಖಲಾಗಿದೆ. ಅಲೆಮಾರಿ ಸಮುದಾಯಗಳ ಚಿಂತಕ ಜಿ.ಮಾಧವರಾವ್ ಅವರ ಕುರಿತೂ ಲೇಖಕರು ದಾಖಲಿಸಿದ್ದಾರೆ. ಕೃತಿಯಲ್ಲಿ ಬುಡಕಟ್ಟು ಸಮುದಾಯದ ಅಸ್ಮಿತೆಯನ್ನು ಗುರುತಿಸುವ ಪ್ರಯತ್ನ ಮಾಡಲಾಗಿದೆ. ಒಂದರ್ಥದಲ್ಲಿ ಸಂಶೋಧಕರಿಗೆ ಇದು ಆಕರ ಗ್ರಂಥವಾಗಿದೆ.
ಅಸ್ಮಿತೆಯ ಹುಡುಕಾಟ
ಲೇ: ಡಾ. ಮಲ್ಲಿಕಾರ್ಜುನ ಬಿ. ಮಾನ್ಪಡೆ
ಪ್ರ: ವಿಸ್ತರಣೆ ಹಾಗೂ ಸಲಹಾ ಕೇಂದ್ರ, ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
ಪು: 308
ಬೆ: ₹350
ಫೋ: 99162 02298
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.