ADVERTISEMENT

ಮೊದಲ ಓದು: ಚಳವಳಿಯ ಚಲನೆಗೆ ನೂರಾರು ಹಾಡುಗಳು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 20:22 IST
Last Updated 1 ನವೆಂಬರ್ 2025, 20:22 IST
ಬೆಂಕಿಯ ಮಳೆ
ಬೆಂಕಿಯ ಮಳೆ   

ಸಿದ್ದಲಿಂಗಯ್ಯ ಅವರು ಅಂಬೇಡ್ಕರ್‌ ಕುರಿತು ರಚಿಸಿದ ‘ನಾಡನಡುವಿನಿಂದ ಸಿಡಿದ ನೋವಿನ ಕೂಗೆ’ ಕವಿತೆಯ ‘ಜಾತಿಯನ್ನು ಹೂತುಬಿಡಲು ಲಕ್ಷ ಲಕ್ಷ ಜನರನು/ ಕಟ್ಟಿ ಕ್ರಿಯಾರಂಗಕ್ಕಿಳಿದ ಸ್ವಾಭಿಮಾನ ಸಮುದ್ರ’ ಎಂಬ ಚರಣದಂತೆ ಜನ ಚಳವಳಿಯಲ್ಲಿ ಮೊಳಗುವ 305 ಹಾಡುಗಳು ‘ಬೆಂಕಿಯ ಮಳೆ’ ಸಂಗ್ರಹದಲ್ಲಿವೆ. ‘ಕಟ್ಟುತ್ತೇವ ನಾವು ಕಟ್ಟುತ್ತೇವ ನಾವು ಕಟ್ಟೆ ಕಟ್ಟುತ್ತೇವ’ ಸತೀಶ್ ಕುಲಕರ್ಣಿ ಅವರ ರಚನೆಯ ಜನಪ್ರಿಯ ಗೀತೆಯೂ ಇದರಲ್ಲಿದೆ. ಈ ಕವನದೊಳಗಣ ಆಶಯದಂತೆ ಈ ನೆಲದ ಹಾಡು ಬರೆಯಲು ಮೆರವಣಿಗೆ ಹೊರಟ ಸಂಘಟಿತ ಜನರ ಕೊರಳ ದನಿಗಳೇ ಹಾಡ ಹೂವಾಗಿ, ಕ್ರಾಂತಿಯ ಕಿಡಿಯಾಗಿ ಇಲ್ಲಿ ಕಾಣುತ್ತಿವೆ.

ವಿದ್ಯಾರ್ಥಿ, ದಲಿತ, ರೈತ ಮತ್ತು ಮಹಿಳಾ ಚಳವಳಿಯ ಕರುಳ ನೋವಿಗೆ ಇಲ್ಲಿನ ಹಾಡುಗಳು ಸ್ಫೂರ್ತಿಯ ಸೆಲೆಯಾಗಿವೆ. ಬುದ್ಧ, ಅಂಬೇಡ್ಕರ್‌, ಗಾಂಧೀಜಿ, ಬಿ. ಕೃಷ್ಣಪ್ಪ, ಜಗಜೀವನ್‌ ರಾಂ, ಕಾರ್ಲ್ ಮಾರ್ಕ್ಸ್‌, ಲೆನಿನ್‌ ಅವರ ಚಿಂತನೆಯ ಮಿಂಚು ಇಲ್ಲಿನ ಕಾವ್ಯಗಳಲ್ಲಿ ಹೊಳೆಯುತ್ತದೆ. ಸಿ. ದಾನಪ್ಪ ನಿಲೋಗಲ್‌, ಕೆ.ಬಿ. ಸಿದ್ದಯ್ಯ, ಕೋಟಿಗಾನಹಳ್ಳಿ ರಾಮಯ್ಯ, ಗೊಲ್ಲಹಳ್ಳಿ ಶಿವಪ್ರಸಾದ್‌, ಅಂಬಣ್ಣ ಅರೋಲಿಕರ್‌, ಗದ್ದರ್, ಇಂದೂಧರ ಹೊನ್ನಾಪುರ, ಆರ್‌. ಮಾನಸಯ್ಯ, ಚೆನ್ನಣ್ಣ ವಾಲೀಕಾರ, ಸಿದ್ದನಗೌಡ ಪಾಟೀಲ್‌, ಸಿದ್ದಲಿಂಗಯ್ಯ, ಮಲ್ಲಿಕಾ ಘಂಟಿ, ಬಿ.ಎಂ. ಪುಟ್ಟಯ್ಯ ಅವರ ರಚನೆಗಳು ಸೇರಿದಂತೆ ಎಲೆಮರೆಯ ಕಾಯಿಯಂತಿರುವ ಕೆಲವು ಸಾಮಾಜಿಕ ಕಾರ್ಯಕರ್ತರು, ಚಳವಳಿಯ ಒಡನಾಡಿಗಳು ಬರೆದ ಹಾಡುಗಳು ಇದರಲ್ಲಿವೆ.

ಹೋರಾಟದ ಹಾದಿಯಲ್ಲಿ ಆಧುನಿಕ ಜನಪದ ಕಾವ್ಯವೂ ಹುಟ್ಟಿದೆ ಎನ್ನುವುದಕ್ಕೆ ಸಂಕಲಿತ ಕೃತಿಯ ಕೆಲವು ಹಾಡುಗಳು ಸಾಕ್ಷಿಯಾಗುತ್ತವೆ. ಇಲ್ಲಿನ ಕೆಲವು ಕವಿತೆಗಳು ಸಮುದಾಯದೊಳಗೇ ಉದಯಿಸಿವೆ. ಅನ್ಯಭಾಷೆಯ ಕವಿತೆಗಳು ಭಾಷಾಂತರಗೊಂಡು ನಾಡಿನ ಹೋರಾಟವನ್ನು ಬಲಪಡಿಸಿದ ಹಾಡುಗಳೂ ಇವೆ. ಇಲ್ಲಿನ ಕೆಲವು ಹಾಡು ಕರಾಳತೆಯ ಅನ್ಯಾಯವನ್ನು ಬಿಂಬಿಸುವ ಸಂದರ್ಭದಲ್ಲಿ ಧ್ವನ್ಯಾರ್ಥ ಆದ್ಯತೆಯಲ್ಲ ಎನ್ನುವುದನ್ನೂ ತೋರಿಸುತ್ತವೆ. ವಾಚ್ಯವಾದರೂ ಮುಚ್ಚಿದ ಎದೆಯ ಕದವನ್ನು ತಟ್ಟುತ್ತಿವೆ ಎಂದು ಅನ್ನಿಸುತ್ತದೆ. ಕನ್ನಡದ ಲಯಬದ್ಧತೆಯ ಜೊತೆ ಜನಪ್ರಿಯ ರಾಗದ ಅನುಕರಣೆಯಿಂದ ಕೆಲ ಹಾಡುಗಳು ಹುಟ್ಟಿವೆ. ಬಹುತೇಕ ಹಾಡುಗಳು ಅತ್ಯಂತ ಜನಪ್ರಿಯ ಆಗಿದ್ದರೂ ಲೇಖಕರು ಯಾರು ಎಂಬುದು ಗೊತ್ತಿರುವುದಿಲ್ಲ. ಅಂತಹ ಲೇಖಕರನ್ನೂ ಸಂಪಾದಕ ಬಿ.ಎಂ. ಪುಟ್ಟಯ್ಯ ಈ ಸಂಕಲನದಲ್ಲಿ ಗುರುತಿಸಿದ್ದಾರೆ. 

ADVERTISEMENT

ಬೆಂಕಿಯ ಮಳೆ

ಸಂ: ಬಿ.ಎಂ. ಪುಟ್ಟಯ್ಯ

ಪ್ರ: ಅನುಭವ ಪ್ರಕಾಶನ

ಮೊ: 7892779957

Cut-off box - ಬೆಂಕಿಯ ಮಳೆ ಸಂ: ಬಿ.ಎಂ. ಪುಟ್ಟಯ್ಯ ಪ್ರ: ಅನುಭವ ಪ್ರಕಾಶನ ಮೊ: 7892779957

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.