
ಎಂದಿಗೂ ಎಂದೆಂದಿಗೂ ಕುತೂಹಲ ಉಳಿಸುವ ವಿಷಯವೆಂದರೆ ಸಾವು! ಇದನ್ನು ಮಕ್ಕಳಿಗೆ ತಿಳಿಹೇಳುವುದು ಹೇಗೆ? ಎಳೆ ಜೀವದ ತಂಗಿಯೊಂದು ಕಾಣೆಯಾದಾಗ ಆ ಮಗುವಿಗೆ ಏನೆಲ್ಲ ಅನಿಸಬಹುದು? ಹೇಗೆಲ್ಲ ತನ್ನ ತಂಗಿಯನ್ನು ನೆನಪಿಸಿಕೊಳ್ಳುತ್ತದೆ, ನೆನಪುಗಳು ಉಳಿದಿವೆ. ತಂಗಿ ಅಳಿದಿದ್ದಾಳೆ, ಆದರೆ ಅವಳನ್ನೂ ತನ್ನ ನೆನಪುಗಳಲ್ಲಿ ಉಳಿಸಿಕೊಳ್ಳುವುದು ಹೇಗೆ? ಮಗುವಿಗೆ ಅರ್ಥವಾಗುವಂಥ ಚಿತ್ರ, ಕಥನ ‘ಬೂ..! ನನ್ನ ತಂಗಿ ಇಲ್ಲವಾದಾಗ’ ಪುಸ್ತಕ ಉತ್ತರಿಸುತ್ತದೆ. ಆಗಾಗ ಕಣ್ಣಪಸೆ ಮೂಡಿ, ಅಕ್ಷರ ಮಂಜಾಗಬಹುದು. ಆದರೆ ಮನಸು ತಿಳಿಯಾಗಿಸುತ್ತದೆ. ಮಕ್ಕಳಿಗಷ್ಟೇ ಅಲ್ಲ, ದೊಡ್ಡವರಿಗೂ ಕಣ್ತೆರೆಸುವ ಪುಸ್ತಕ.
ಈ ಧಾವಂತದ ಬದುಕಿನಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳೂ ಭಿನ್ನವಾಗಿವೆ. ಅಮ್ಮನಿಗೆ ಇದ್ದಕ್ಕಿದ್ದಂತೆ ಕ್ಯಾನ್ಸರ್ ಆಗಿರುವುದು ತಿಳಿದು ಬಂದರೆ, ಕ್ಯಾನ್ಸರ್‌ಪೀಡಿತ ಅಮ್ಮ, ಚಿಕಿತ್ಸೆಯ ನಂತರ ಮನೆಗೆ ಬಂದಾಗ ಕೃಶ ದೇಹ, ಕೇಶವಿಲ್ಲದ ತಲೆ ನೋಡಿದಾಗ ಆ ಮಗುವಿಗೆ ಏನೆನ್ನಿಸಬಹುದು? ಹೇಗೆ ಒಪ್ಪಿಕೊಳ್ಳಬಹುದು, ಮಗುವಿನ ಮನಸಿನಲಿ ಮೂಡುವ ಪ್ರಶ್ನೆಗಳೇನು? ತಾನೇ ಉತ್ತರ ಕಂಡುಕೊಳ್ಳುವುದು ಹೇಗೆ? ಇದೂ ಮಕ್ಕಳಿಗೆ ಈ ಬದುಕನ್ನು ಹೇಳುವುದಷ್ಟೇ ಅಲ್ಲ, ಹೆತ್ತವರಿಗೂ ಮಕ್ಕಳನ್ನು ಇಂಥ ಸಂದರ್ಭದಲ್ಲಿ ನಿಭಾಯಿಸುವುದು ಹೇಳಿಕೊಡುತ್ತದೆ. ‘ಅಮ್ಮ ಮತ್ತು ನಾನು’ ಪುಸ್ತಕ. ಓದುವಾಗ ಕಣ್ಣಪೊರೆ ಮೂಡುವಂತೆ ಕಣ್ಣೀರು ಬರಬಹುದು. ಕೆನ್ನೆಯಿಂದ ಉರುಳಲೂಬಹುದು.
ಹುಷಾರಿಲ್ಲದ ಅಪ್ಪನಿಗಾಗಿ ತನ್ನ ಮನೆಯಿಂದಾಚೆ ಬಂದು, ಮೀನು ಮಾರುಕಟ್ಟೆಗೆ ಹೋಗಿ, ಮೀನು ಕೊಂಡು ಅಜ್ಜಿಯಿಂದ ಸಾರು ಮಾಡಿಸಿಕೊಂಡು ಮನೆಗೆ ಬರುತ್ತದೆ ಮಗು. ಉದ್ದಕ್ಕೂ ಚಿತ್ರಗಳಿಗಿಂತ ಸದ್ದುಗಳನ್ನೇ ವಿವರಿಸುತ್ತ ಹೋಗುವ ಆನಂದ, ಮನೆಗೆ ಬಂದಾಗ ತಂದೆ ಗಾಬರಿಯಾಗಿ ಕೇಳುತ್ತಾರೆ, ‘ನಿನಗೆ ತೊಂದರೆಯೇ..’ ಅಲ್ಲಿ ತಿಳಿಯುತ್ತದೆ, ಅಷ್ಟು ಹೊತ್ತೂ ಹೆಜ್ಜೆಗಳ ಲೆಕ್ಕದಲ್ಲಿ ದಾರಿ ಸವೆಸಿದ ಮಗುವಿಗೆ ಕಣ್ಣಿಲ್ಲ ಎಂಬುದು. ಕರುಳಿನ ಕಣ್ಣು ತೆರೆದಂತೆ ಅಪ್ಪನಿಗಾಗಿ ಮಿಡಿವ ಮಗ ಅಪ್ಪನ ಇಷ್ಟದ ಸಾರು ತರುತ್ತಾನೆ. ಸಾರು ಕಾಯುವ ಹೊಗೆಯಲ್ಲಿ ಈ ಅಪ್ಪ ಮಗನ ಚಿತ್ರ ಮೂಡುವಂತಾಗುತ್ತದೆ. ‘ಮೀನು ಸಾರು’ ಪುಸ್ತಕದಲ್ಲಿ.
ಈ ಜೆನ್ ಅಲ್ಪಾಗಳು, ಜೆನ್ ಝೀಯಂತೆ, ಮಿಲೆನಿಯಲ್‌ಗಳಂತೆಯೇ ತಾವೇ ಎಲ್ಲದರಲ್ಲಿಯೂ ಮುಂದು ಎಂಬ ಭಾವ ಹೊಂದಿದ್ದಾರೆ. ತಮ್ಮಜ್ಜ, ಅಜ್ಜಿ ಈ ಕಾಲಕ್ಕೆ ಸೇರಿದವರಲ್ಲ ಎಂಬ ಅಸಡ್ಡೆಯೂ ಇದೆ. ಆದರೆ ಅಜ್ಜ ಅಜ್ಜಿಯ ಮಮಕಾರದ ಮುಂದೆ ಈ ಅಹಂಕಾರ ಅದೆಷ್ಟು ಹೊತ್ತು ಉಳಿದೀತು? ಅಹಂಕಾರ ಅಡಗಿಸಿ ಆದರ ಮೂಡಿಸುವ ಕತೆ ‘ಶಾಲೆಯಲ್ಲಿ ನನ್ನಜ್ಜ’.
ಅಯ್ಯೋ ಕಕ್ಕ.. ಮುಖ ಸಿಂಡರಿಸಿ ಓದಲು ಆರಂಭಿಸಿದರೂ ಹುಬ್ಬೇರುತ್ತವೆ. ಎಲ್ಲ ಪ್ರಾಣಿಗಳ ಕಕ್ಕ ಬಗ್ಗೆ ಈ ಪುಸ್ತಕದ ಚಿತ್ರಗಳು ವಿವರ ನೀಡುತ್ತವೆ. ಆನೆ ಲದ್ದಿಯಿಂದ ಹಿಡಿದು, ಕೀಟದ ತ್ಯಾಜ್ಯದವರೆಗೂ ಆಸಕ್ತಿಕರ ಅಂಶಗಳು ಈ ಪುಸ್ತಕದಲ್ಲಿವೆ.
ಬೀಜ ಪ್ರಸಾರ ಹೇಗೆ ಆಗುತ್ತದೆ? ವಿಜ್ಞಾನದ ತರಗತಿಯಲ್ಲಿ ಕಲಿತಿದ್ದರೂ, ಕಲಿಯುವಂತಿದ್ದರೂ ಈ ಪುಸ್ತಕ ಸರಳವಾಗಿ ತಿಳಿಸುತ್ತದೆ. ಯಾವ ಬೀಜ ಪ್ರಸರಣ ಹೇಗೆ ಆಗುತ್ತದೆ ಅಂಥ. ಎಲ್ಲೋ ಹುಟ್ಟಿ, ಗಾಳಿ ಜೊತೆಗೆ ಪಯಣಿಸುತ್ತ, ಮತ್ತೆಲ್ಲೋ ಮಣ್ಣಿಗೆ ಸೇರಿ ಮತ್ತೆ ಮರವಾಗುವ ಸೃಷ್ಟಿಸೋಜಿಗ ‘ಬೀಜದ ಪಯಣ’ ಪುಸ್ತಕದಲ್ಲಿದೆ.
ಅಪ್ಪುಕುಟ್ಟನನ್ನು ತೂಗುವುದು ಹೇಗೆ? ತುಟಿಯಂಚಿನಲ್ಲಿ ನಗೆ ಅರಳಿಸುತ್ತಲೇ ಮುಂದಕ್ಕೋಡುವ ಈ ಪುಸ್ತಕದಲ್ಲಿ ಪುಟ್ಟ ಮಗುವೊಂದು ಆನೆ ತೂಗುವ ತಂತ್ರವನ್ನು ಹೇಳಿಕೊಡುವ ಆಸಕ್ತಿಕರ ಕಥನವಿದೆ.
ಮಕ್ಕಳ ಲೋಕದ ಹಲವಾರು ಪ್ರಶ್ನೆಗಳಿಗೆ ಇಲ್ಲಿ ಮನಮುಟ್ಟುವ ತಾರ್ಕಿಕ ಮತ್ತು ವೈಜ್ಞಾನಿಕ ವಿವರಗಳಿವೆ. ಕಟ್‌ಪೀಸ್ ಕುಮಾರ, ಬಕೆಟ್ಟಿನಲ್ಲಿ ಸಮುದ್ರ, ಚಿಟ್ಟೆ, ನದಿಯ ಹುಲಿ, ಆದಿಲ್ ಮಾತಾಡಿದರೆ ಪದಗಳು ಕುಣಿಯುತ್ತವೆ.. ಮುಂತಾದ ಪುಸ್ತಕಗಳೂ ಈ ಪುಸ್ತಕ ಗುಚ್ಛದಲ್ಲಿವೆ.
ಮಕ್ಕಳಿಗಾಗಿ ಅಷ್ಟೇ ಅಲ್ಲ, ದೊಡ್ಡವರೂ ಮಕ್ಕಳಾಗಿ ಆನಂದಿಸಲು, ಮಕ್ಕಳನ್ನೂ ದೊಡ್ಡವರಂತೆಯೇ ಎಂದು ಪರಿಗಣಿಸಿ, ಅವರೊಂದಿಗೆ ಅವರ ಲೋಕದಲ್ಲಿ ವಿಹರಿಸಲು, ಚಂದದ ಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತಲೇ ವಿರಮಿಸಲು, ಈ ಪುಸ್ತಕಗಳು ಸಹಾಯ ಮಾಡುತ್ತವೆ.
ಮಕ್ಕಳ ಪುಸ್ತಕಗಳು
ಲೇ: ವಿವಿಧ ಲೇಖಕರು
ಪ್ರ: ಬಹುರೂಪಿ
ಸಂ: 7019182729
ಪುಸ್ತಕದ ಹೆಸರು: ಕೊಬ್ಬಿದ ಹುಡುಗ ಬಡಕಲು ಕತ್ತೆ (ಏಕಾಂಕ ಮಕ್ಕಳ ನಾಟಕ)
ಲೇಖಕರು: ಎಚ್.ಎಸ್. ಗೋಪಾಲರಾವ್
ಪ್ರಕಾಶನ: ಅಭಿನವ ಮಾಹಿತಿಗೆ 9448804905
ಬೆಲೆ: ₹ 35
ಎಚ್‌ಎಸ್ ಗೋಪಾಲರಾವ್ ನೆನಪಿನ ಪುಸ್ತಕಮಾಲೆಯಲ್ಲಿ ಈ ಏಕಾಂಕ ನಾಟಕವನ್ನು ಪ್ರಕಟಿಸಲಾಗಿದೆ. ಮಕ್ಕಳ ಈ ಏಕಾಂಕ ನಾಟಕ ಶಾಲೆಗಳಲ್ಲಿ ಪ್ರಯೋಗ ಮಾಡಲು ಹೇಳಿ ಮಾಡಿಸಿದಂತಿದೆ. ಮಕ್ಕಳಲ್ಲಿ ಯಾವ ಭೇದ ಭಾವ ಇಲ್ಲದೇ ಬೆಳೆಸಲು, ಮೇಲರಿಮೆ–ಕೀಳರಿಮೆ ಇಲ್ಲದಂತೆ ಬೆಳೆಯಲು ಬೇಕಿರುವ ಧಾತು ಈ ನಾಟಕದಲ್ಲಿದೆ. ಸಹಬಾಳ್ವೆ, ಸಹಜೀವನ ಸಾಮರಸ್ಯವನ್ನು ಸರಳವಾಗಿಯೇ ಹೇಳಬಹುದು ಎಂಬುದು ನಾಟಕದ ಮೂಲ ಮಂತ್ರವಾಗಿದೆ.