ADVERTISEMENT

ಮೊದಲ ಓದು | ದ್ವೇಷ ಬಿಟ್ಟು ದೇಶ ಕಟ್ಟು: ದೇಶ ಕಟ್ಟುವ ಆಶಯ ಹೊತ್ತು...

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 22:15 IST
Last Updated 5 ನವೆಂಬರ್ 2022, 22:15 IST
ದ್ವೇಷ ಬಿಟ್ಟು ದೇಶ ಕಟ್ಟು
ದ್ವೇಷ ಬಿಟ್ಟು ದೇಶ ಕಟ್ಟು   

ಸರ್ವಜನಾಂಗದ ಶಾಂತಿಯ ತೋಟವಾದ ನಮ್ಮ ನಾಡು ಈಗ ಧರ್ಮದ್ವೇಷದ ಕಿಚ್ಚಿಗೆ ಬೆಂದಿದೆ. ದ್ವೇಷದ ಕಿಡಿ ಎಲ್ಲೆಡೆ ಹರಡುತ್ತಿದ್ದಾಗ ಆ ಕಿಡಿಯನ್ನು ಸೌಹಾರ್ದದ ಸಿಂಚನದಿಂದ ನಂದಿಸುವ ಕೆಲಸವನ್ನು ಹಲವು ಸಂಘಟನೆಗಳು ಮಾಡಿದ್ದವು. ಈ ನಡೆಯಲ್ಲಿ ನಾಡಿನ ಪ್ರಗತಿಪರ ಸಂಘಟನೆಗಳು ಬೆಂಗಳೂರಿನಲ್ಲಿ ‘ಸೌಹಾರ್ದ ಸಂಸ್ಕೃತಿ ಸಮಾವೇಶ’ ಆಯೋಜಿಸಿದ್ದವು. ಈ ಸಮಾವೇಶದಲ್ಲಿ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಮಾಡಿದ ಆಶಯ ಭಾಷಣವೇ ಈಗ ಈ ಕಿರುಹೊತ್ತಿಗೆ ರೂಪ ತಾಳಿದೆ.

ಸಮಾವೇಶದ ದಿನವೇ ಭಾಷಣದ ಕಿರು ಹೊತ್ತಿಗೆ ಮುದ್ರಣಗೊಂಡು ಪೂರ್ತಿ ಮಾರಾಟವಾಗಿದ್ದವು. ಕೃತಿಗೆ ಬೇಡಿಕೆ ಬಂದ ಕಾರಣ ಇದೀಗ ಮರುಮುದ್ರಿಸಲಾಗಿದೆ. ಸಮಾವೇಶದಲ್ಲಿ ಬರಗೂರು ಅವರು ಮಾಡಿದ್ದ ಮೌಖಿಕ ಭಾಷಣದಲ್ಲಿದ್ದ ಕೆಲವು ಹೊಸ ಅಂಶಗಳು, ಅವುಗಳ ವಿಸ್ತರಣೆ ಎರಡನೇ ಮುದ್ರಣದ ಸೇರ್ಪಡೆ.

ಏರಿಕೆಯಾಗುತ್ತಿರುವ ಧರ್ಮದ್ವೇಷದ ಘಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ,‘ಯಾವುದೇ ಧರ್ಮಕ್ಕೆ ಸೇರಿದ ಬಹುಸಂಖ್ಯಾತರು ಇಂತಹ ದ್ವೇಷ ಇಷ್ಟಪಡುವುದಿಲ್ಲ. ಆಯಾ ಧರ್ಮಗಳ ‘ಸಣ್ಣ ಸಂಖ್ಯಾತರು’ ಬಹುಸಂಖ್ಯಾತರಲ್ಲೂ ಭೀತಿ ಹುಟ್ಟಿಸುವಂತೆ ವರ್ತಿಸುತ್ತಿರುವುದರಿಂದ ಆಗುತ್ತಿರುವ ಅನಾಹುತ ಆತಂಕಕಾರಿ’ ಎನ್ನುತ್ತಾರೆ ಬರಗೂರರು. ‘ಸಣ್ಣ ಸಂಖ್ಯಾತರು’ ಎನ್ನುವುದು ಕಿಡಿಗೇಡಿಗಳು ಅಥವಾ ಕೀಳುಮನಃಸ್ಥಿತಿಯವರನ್ನು ಉಲ್ಲೇಖಿಸಲು ಬರಗೂರು ಅವರು ಹುಟ್ಟುಹಾಕಿದ ಪರ್ಯಾಯ ಪದದಂತೆ ತೋರುತ್ತದೆ. ಇದೇ ರೀತಿ ಪಕ್ಷಗಳ ಮತಬೇಟೆಯ ಪ್ರವೃತ್ತಿಯನ್ನು ‘ಮತೋತ್ಪಾದನೆ’, ಸಾಮ್ರಾಜ್ಯಶಾಹಿ ಮನೋವೃತ್ತಿಯ ಫಲವಾದ ‘ಯುದ್ಧೋತ್ಪಾದನೆ’ಯಂಥ ಹಲವು ಪದ ಪ್ರಯೋಗಗಳನ್ನು ಅವರಿಲ್ಲಿ ಮಾಡಿದ್ದಾರೆ.

ADVERTISEMENT

ಕದಡಿದ ವಾತಾವರಣವನ್ನು ತಿಳಿಗೊಳಿಸುವ ಹೊಣೆ ಧರ್ಮಗುರುಗಳು ಹಾಗೂ ಸಂವಿಧಾನ ತಜ್ಞರ ಮೇಲೆ ಎಷ್ಟಿದೆ ಎನ್ನುವುದನ್ನು ಇಲ್ಲಿ ಸ್ಥೂಲವಾಗಿ ವಿವರಿಸಿದ್ದಾರೆ. ಇವರಷ್ಟೇ ಅಲ್ಲದೆ, ಸಾಮಾನ್ಯರ ಸಾಮಾಜಿಕ ಜವಾಬ್ದಾರಿಯನ್ನೂ ಸೂಕ್ಷ್ಮವಾಗಿ ಹೇಳಿದ್ದಾರೆ. ಧರ್ಮ ಮತ್ತು ದೇವರನ್ನು ರಾಜಕೀಯ ವಿಚಾರಧಾರೆಗಳ ಭಾಗವಾಗಿಸುತ್ತಿರುವ ‘ಸಣ್ಣ ಸಂಖ್ಯಾತರ’ನ್ನೂ ಕುಟುಕಿರುವ ಬರಗೂರು ಅವರು, ಸಮಾನತೆಯ ಸಮಾಜ ನಿರ್ಮಾಣದ ಆಶಯವನ್ನು ಮುನ್ನೆಲೆಗೆ ತರುವ ಅಗತ್ಯವನ್ನು ಇಲ್ಲಿ ಬಿಚ್ಚಿಟ್ಟಿದ್ದಾರೆ.

ಅಂತ್ಯದಲ್ಲಿ ಹಲವು ಸರಣಿ ಪ್ರಶ್ನೆಗಳನ್ನು ಒಡ್ಡುತ್ತಾ, ವಿವೇಕದ ಉತ್ತರವನ್ನೂ ನೀಡುತ್ತಾ, ‘ಜಾತಿಯೆಂಬುದು ಜೈಲಾಗಬಾರದು; ಧರ್ಮವೆಂಬುದು ದ್ವೇಷ ದ್ವೀಪವಾಗಬಾರದು. ಜಾತಿಮತ ಧರ್ಮಗಳು ದುಷ್ಟಶಕ್ತಿಗಳ ದಾಳವಾಗಬಾರದು; ಮುಗ್ಧ ಜನರನ್ನು ದಾಳವಾಗಿಸಲೂ ಬಾರದು; ಸಮಾನತೆ ಮತ್ತು ಸೌಹಾರ್ದಗಳ ಸ್ಪಂದನವಾಗಬೇಕು; ನಂದನವಾಗಬೇಕು. ಆಯಾ ಧರ್ಮಗಳ ಹಾದಿ ತಪ್ಪಿಸುವ ಎಲ್ಲ ಧರ್ಮಗಳ ಮೂಲಭೂತವಾದಿಗಳನ್ನು ವಿರೋಧಿಸಬೇಕು. ‘ದ್ವೇಷ ಬಿಟ್ಟು ದೇಶ ಕಟ್ಟು’ ಎನ್ನುವುದು ನಮ್ಮೆಲ್ಲರ ಕರುಳ ಕರೆಯಾಗಬೇಕು’ ಎನ್ನುತ್ತಾರೆ ಬರಗೂರರು. ಸದಾ ಜನಪರ ಚಿಂತನೆಯ ಅವರ ಹೃದಯ ನಾಡಿನ ಒಳಿತಿಗಾಗಿ ಹೇಗೆ ಮಿಡಿಯುತ್ತಿದೆ ಎನ್ನುವುದರ ಕುರುಹುಗಳು ಪುಟ, ಪುಟದಲ್ಲೂ ಇವೆ. ಪುಟ್ಟ ಕೃತಿಯನ್ನು ಓದಿ ಮುಗಿಸಿದಾಗ ಸದ್ಯದ ಬಹುತೇಕ ಬಿಕ್ಕಟ್ಟುಗಳಿಗೆ ಇಲ್ಲಿ ಪರಿಹಾರವಿದೆ ಎನಿಸದಿರದು.

ಕೃತಿ: ದ್ವೇಷ ಬಿಟ್ಟು ದೇಶ ಕಟ್ಟು

ಲೇ: ಬರಗೂರು ರಾಮಚಂದ್ರಪ್ಪ

ಪ್ರ: ಜನ ಪ್ರಕಾಶನ, ಬೆಂಗಳೂರು

ಸಂ: 9632329955

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.