ADVERTISEMENT

ಪುಸ್ತಕ ವಿಮರ್ಶೆ | ನಿಘಂಟಿನ ಹೊರಗೆ ಕಿಟೆಲ್‌ ಸಾಹಿತ್ಯ ಗಂಟು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 19:30 IST
Last Updated 26 ನವೆಂಬರ್ 2022, 19:30 IST
ಫರ್ಡಿನೆಂಡ್‌ ಕಿಟೆಲ್‌ ವಾಚಿಕೆ
ಫರ್ಡಿನೆಂಡ್‌ ಕಿಟೆಲ್‌ ವಾಚಿಕೆ   

ಕೃತಿ: ಫರ್ಡಿನೆಂಡ್‌ ಕಿಟೆಲ್‌ ವಾಚಿಕೆ
ಸಂಪಾದಕರು: ಪ್ರೊ.ಎ.ವಿ.ನಾವಡ
ಪ್ರ: ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಸಂ: www.kuvempubhashabharathi.org

ವಸಾಹತುಶಾಹಿ ಆಳ್ವಿಕೆಯ ಸಂದರ್ಭದಲ್ಲಿ ಮಿಷನರಿ ಕೆಲಸಗಳಿಗಾಗಿ ಬಂದ ಯುರೋಪಿಯರಲ್ಲಿನ ಕೆಲವರು ಭಾರತದ ಸಂಸ್ಕೃತಿಯ ಬಹುತ್ವ, ಇಲ್ಲಿನ ಭಾಷೆಗಳಿಗೆ ಆಕರ್ಷಿತರಾಗಿದ್ದರು. ಭಾಷೆಗಳನ್ನು ಕಲಿಯುವುದು, ಅರ್ಥ ಮಾಡಿಕೊಳ್ಳುವುದು ಅವರಿಗೆ ವ್ಯಾವಹಾರಿಕವಾಗಿಯೂ ಅಗತ್ಯವಾಗಿತ್ತು. ಇಂತಹ ಕೆಲವರಲ್ಲಿ ಭಾರತೀಯ ಭಾಷೆಗಳಿಂದ ನಿಜವಾಗಿಯೂ ಆಕರ್ಷಿಸಲ್ಪಟ್ಟವರಲ್ಲಿ ರೆವರೆಂಡ್‌ ಫರ್ಡಿನಾಂಡ್‌ ಕಿಟೆಲ್ ಒಬ್ಬರು. ಕಿಟೆಲ್‌ ಎಂದಾಕ್ಷಣ ಕನ್ನಡಿಗರಿಗೆ ನೆನಪಾಗುವುದು ನಿಘಂಟು.

ಇದಕ್ಕೆ ಕಾರಣವಿದೆ. ಕಿಟೆಲ್‌ ಅವರ ಇತರೆ ಕೆಲಸಗಳಿಗಿಂತ ನಿಘಂಟಿಗೆ ಹೆಚ್ಚು ಪ್ರಚಾರ ಸಿಕ್ಕಿತ್ತು. ಆದರೆ ಕಿಟೆಲ್‌ ಅವರು ನಿಘಂಟು ರಚಿಸುವ ಕಾರ್ಯ ಮಾತ್ರ ಮಾಡಿದುದಲ್ಲ.ಛಂದೋಬದ್ಧ ಪದ್ಯಗಳನ್ನು ಬರೆದಿರುವ ಅವರು ಕಾವ್ಯ ರಚನೆಯಲ್ಲೂ ಸಿದ್ಧಹಸ್ತರಾಗಿದ್ದರು. ಗ್ರಂಥ ಸಂಪಾದನೆ, ವ್ಯಾಕರಣ ಗ್ರಂಥ ಹಾಗೂ ಪಠ್ಯಪುಸ್ತಕ ರಚನೆಯಲ್ಲೂ ತೊಡಗಿಸಿಕೊಂಡಿದ್ದರು. ಅನುವಾದದ ಕೃಷಿ ಜೊತೆಗೆ ಧಾರ್ಮಿಕ ಸಾಹಿತ್ಯದಲ್ಲೂ ಕಿಟೆಲ್‌ ಛಾಪು ಮೂಡಿಸಿದ್ದರು. ಈ ಅಂಶಗಳನ್ನು ದಾಖಲೆಗಳ ಸಹಿತ ನೀಡುವ ಕೃತಿಯೇ ಇದು. ಮಿಷನರಿಗಳು ಮಾಡಿದ ಕನ್ನಡದ ಕೆಲಸದ ಬಗ್ಗೆ ಸಂಶೋಧನೆಯಲ್ಲಿ ನಿರತರಾಗಿರುವ ಎ.ವಿ. ನಾವಡ ಅವರು, ಮಂಗಳೂರಿನ ಬಾಸೆಲ್‌ ಮಿಷನ್‌ನ ಕೆ.ಟಿ.ಸಿ ಗ್ರಂಥಾಲಯ ಹಾಗೂ ಮತ್ತಿತರ ಕಡೆಗಳಲ್ಲಿ ಲಭ್ಯವಿರುವ ದಾಖಲೆಗಳನ್ನು ತೆಗೆದು ಸಂಪಾದಿಸಿ ಸಂಕಲಿಸಿ ಈ ಕೃತಿಯಲ್ಲಿ ನೀಡಿದ್ದಾರೆ. ಕಿಟೆಲ್‌ ಅವರ ಕನ್ನಡ ಪಠ್ಯಪುಸ್ತಕದ ಆಶಯ, ಶಬ್ದಮಣಿದರ್ಪಣವನ್ನು ಆಕರವಾಗಿಟ್ಟುಕೊಂಡು ಕಿಟೆಲ್‌ ಅವರು ರಚಿಸಿದ ವ್ಯಾಕರಣಗ್ರಂಥ, ಅವರ ರಚನೆಯ ಬಿಡಿಕವಿತೆಗಳ ಮಾಹಿತಿ ಹಾಗೂ ಸಂಗ್ರಹ ಇಲ್ಲಿದೆ.

ADVERTISEMENT

‘A Grammar of the Kannada Language’ ಎಂಬ ಬೃಹತ್‌ ಗ್ರಂಥ ಪ್ರಕಟವಾಗಿ ಮಂಗಳೂರಿನಿಂದ ಜರ್ಮನಿಗೆ ತಲುಪುವಷ್ಟರಲ್ಲಿ ಕಿಟೆಲ್‌ ಅವರಿಗೆ ಸಂಪೂರ್ಣ ಕುರುಡು ಆವರಿಸಿತ್ತು. ತಾನು ತೀರಿಕೊಳ್ಳುವ ಮುನ್ನಾದಿನ ಸಂಜೆ ಆ ಪುಸ್ತಕವನ್ನು ಕೈಯಲ್ಲಿ ಎತ್ತಿಕೊಂಡು ಅದರ ಸ್ಪರ್ಶಸುಖವನ್ನು ಅನುಭವಿಸಿ ಕಣ್ಣೀರು ಸುರಿಸಿದ್ದರಂತೆ’ ಹೀಗೆ ಪ್ರಸ್ತಾವನೆಯಲ್ಲಿ ಉಲ್ಲೇಖವಾಗಿರುವ ಈ ಅಂಶ ಕನ್ನಡದ ಮೇಲೆ ಕಿಟೆಲ್‌ ಅವರಿಗಿದ್ದ ಆಸಕ್ತಿಯನ್ನು ತೋರುತ್ತದೆ. ಕ್ರೈಸ್ತ ಸುವಾರ್ತಾ ಪ್ರಚಾರಕ್ಕಾಗಿ ಭಾರತಕ್ಕೆ ಬಂದಿದ್ದರೂ, ದ್ರಾವಿಡ ಭಾಷಾವಲಯದಲ್ಲಿ ಕನ್ನಡದ ಕೆಲಸ ತೀವ್ರವಾಗಿ ಜರುಗಬೇಕೆನ್ನುವ ಕಿಟೆಲ್‌ ಅವರ ಇರಾದೆ ಪ್ರಸ್ತುತ ಕಾಲದ ತಿಳಿವಳಿಕೆಯಾಗಬೇಕು ಎನ್ನುವುದು ಕಿಟೆಲ್‌ ವಾಚಿಕೆ ಸಿದ್ಧಪಡಿಸಿರುವುದರ ಹಿಂದಿನ ಉದ್ದೇಶವಾಗಿದೆ. ಕಿಟೆಲ್‌ ಅವರ ಮತ್ತಷ್ಟು ಕೃತಿಗಳು ಕನ್ನಡಿಗರ ಕೈಗೆ, ಕಣ್ಣಿಗೆ ದಕ್ಕಬೇಕು ಎನ್ನುವುದು ಒಟ್ಟು ಕೃತಿಯ ಆಶಯವಾಗಿದೆ. ನಾವಡರ ಶ್ರಮವೂ ಇಲ್ಲಿ ಎದ್ದು ಕಾಣುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.