
ಒಂದು ತೇಗದ ಕುರ್ಚಿ
‘ಒಂದು ತೇಗದ ಕುರ್ಚಿ’ ಸಿದ್ದು ಸತ್ಯಣ್ಣವರ ಮೊದಲ ಕಥಾ ಸಂಕಲನ.
ಕಥಾ ಸಂಕಲನದ ಶೀರ್ಷಿಕೆಯಾಗಿರುವ ‘ಒಂದು ತೇಗದ ಕುರ್ಚಿ’ಯು ಗ್ರಾಮೀಣ ಭಾಗದ ದಲಿತ ಯುವಕನೊಬ್ಬನು ಶೋಷಣೆಯನ್ನು ವಿರೋಧಿಸುವ ಪ್ರತಿರೂಪದಂತಿದೆ. ಜಮೀನ್ದಾರನ ಬಳಿಯಿದ್ದ ತೇಗದ ಕುರ್ಚಿಯು ಇಲ್ಲಿ ಸಾಮಾಜಿಕ ಅಸಮಾನತೆಯ ರೂಪಕದಂತೆ ಬಳಕೆಯಾಗಿದೆ.
‘ಒಂದು ತೇಗದ ಕುರ್ಚಿ’ ಹಾಗೂ ‘ರಾಮನ ತ್ರಾಸು’ ಕಥೆಗಳು ಒಂದೇ ರೀತಿಯ ವಸ್ತುವಿನಂತೆ ತೋರುತ್ತವೆ. ‘ಒಂದು ತೇಗದ ಕುರ್ಚಿ’ಯಲ್ಲಿ ದಲಿತ ಯುವಕನೊಬ್ಬ ಪತ್ರಕರ್ತನಾಗಿ, ಜಮೀನ್ದಾರನ ವಿರುದ್ಧ ನಿಂತರೆ, ‘ರಾಮನ ತ್ರಾಸು’ ಕಥೆಯಲ್ಲಿ ಪೊಲೀಸ್ ಪೇದೆಯಾಗಿ ನೌಕರಿ ಸೇರಿದ್ದ ರಾಮ, ಮೇಲ್ಜಾತಿಯ ಸಿದ್ದಯ್ಯನ ದಬ್ಬಾಳಿಕೆಯನ್ನು ವಿರೋಧಿಸುವ ಧ್ವನಿಯಿದೆ. ಎರಡೂ ಕಥೆಗಳು ಕೂಡ ಅಂತ್ಯದಲ್ಲಿ ಓದುಗನ ಮನ ತಾಕುತ್ತವೆ.
ಹತ್ಯೆ, ಮಂಜವ್ವ, ಸೂರೀಕೆರೆ ಕಥೆಗಳು ಜಾತಿ ಸಂಘರ್ಷದ ನೆಲೆಗಟ್ಟಿನಲ್ಲಿವೆ. ಮನದ ಮರ, ಹಂದಿ ಗೊಂಬೆ ಕಥೆಗಳು ಬದಲಾಗುತ್ತಿರುವ ಕಾಲಘಟ್ಟದ ಸ್ಥಿತ್ಯಂತರದ ಕಥಾವಸ್ತುವಿನಿಂದ ಕೂಡಿವೆ.
ಈ ಕಥಾ ಸಂಕಲನದ ಬಹುತೇಕ ಕಥೆಗಳು ಜಾತಿ ಜಾತಿಗಳ ನಡುವಿನ ಸಂಘರ್ಷವನ್ನು ಕಥಾವಸ್ತುವನ್ನಾಗಿಸಿದ್ದು, ಗ್ರಾಮೀಣ ಭಾಗದ ಹಿನ್ನೆಲೆಯನ್ನು ಹೊಂದಿವೆ. ಈ ಕಥೆಗಳಲ್ಲಿ ಬಳಸಿರುವ ಗದಗ ಭಾಗದ ಭಾಷೆ, ಪದ ಬಳಕೆಯು ಕಥೆಗಳಿಗೆ ಜೀವ ತಂದಿದೆ.
ಇಲ್ಲಿನ ಕಥೆಗಳು ಸಾಮಾಜಿಕ ಕಳಕಳಿಯನ್ನು ಹೊಂದಿವೆ. ಜಾತಿ ಪದ್ಧತಿಯನ್ನು ವಿರೋಧಿಸುತ್ತಾ, ಮಾನವೀಯತೆಯನ್ನು ಪ್ರತಿಪಾದಿಸುತ್ತವೆ.
ಲೇ : ಸಿದ್ದು ಸತ್ಯಣ್ಣವರ
ಪ್ರ: ಅಮೂಲ್ಯ ಪುಸ್ತಕ
ಸಂ: 9448676770
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.